| ನಾನುಗೌರಿ ಡೆಸ್ಕ್ |
ಹರ್ಯಾಣ ಕಾಂಗ್ರೆಸ್ ವಕ್ತಾರ ವಿಕಾಸ್ ಚೌಧರಿ ಮೇಲೆ ಫರಿದಾಬಾದ್ ಮಾರುಕಟ್ಟೆ ಬಳಿ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಇಂದು ಬೆಳಿಗ್ಗೆ ವಿಕಾಸ್ ರವರು ದಿನನಿತ್ಯದಂತೆ ಜಿಮ್ ಮುಗಿಸಿ ಮರಳುತ್ತಿದ್ದಾಗ ಅವರ ಕಾರಿನ ಮೇಲೆ ಗುಂಡಿನ ಮಳೆಗರೆದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ವಿಕಾಸ್ ಅವರನ್ನು ಆಸ್ಪತ್ರೆಗೆ ಸಾಗಿಸಲಾದರೂ ಅವರು ಮೃತಪಟ್ಟಿದ್ದಾರೆ.
ಫರಿದಾಬಾದ್‍ನ ಸೆಕ್ಟರ್ 9 ರಲ್ಲಿನ ಮಾರುಕಟ್ಟೆ ಬಳಿ ಘಟನೆ ನಡೆದಿದ್ದು, ಫರಿದಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳದಲ್ಲಿನ ಸಿಸಿಟಿವಿ ಕ್ಯಾಮರಗಳ ಆಧಾರದಲ್ಲಿ ಹತ್ಯೆಕೋರರನ್ನು ಬಂಧಿಸಲು ಪ್ರಯತ್ನ ಮುಂದುವರೆಸಿದ್ದಾರೆ.

ವಿಕಾಸ್ ಪ್ರತಿನಿತ್ಯ ಜಿಮ್‍ಗೆ ತೆರಳುತ್ತಿದ್ದರು. ಇದನ್ನು ಹತ್ಯೆಕೋರರು ಗ್ರಹಿಸಿದ್ದು ಅವರ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದರು. ಎಂದಿನಂತೆ ಇಂದು ಜಿಮ್ ಮುಗಿಸಿ ಕಾರಿನಲ್ಲಿ ಕುಳಿತಿದ್ದಾಗ ಅವರ ಮೇಲೆ 8-10 ಬಾರಿ ಗುಂಡು ಹಾರಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಹರ್ಯಾಣದಲ್ಲಿ ಕೆಲವೇ ತಿಂಗಳುಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು ಆ ಹಿನ್ನೆಲೆಯಲ್ಲಿಯೇ ಹತ್ಯೆ ಮಾಡಲಾಗಿದೆ ಎಂಬ ಮಾತುಗಳು ಕೇಳಿಬಂದಿವೆ.


