ದೆಹಲಿಗೆ ಪಾದಯಾತ್ರೆ ನಡೆಸುತ್ತಿರುವ ರೈತರ ಮೇಲೆ ಹರಿಯಾಣದ ಶಂಭು ಗಡಿಯಲ್ಲಿ ಇಂದು (ಡಿ.14) ಪೊಲೀಸರು ಮತ್ತೊಮ್ಮೆ ಅಶ್ರುವಾಯು ಸಿಡಿಸಿ, ಜಲಫಿರಂಗಿ ಪ್ರಯೋಗಿಸಿದ್ದಾರೆ.
ಇಂದು ಮಧ್ಯಾಹ್ನ 12 ಗಂಟೆಗೆ ಪಂಜಾಬ್-ಹರಿಯಾಣ ಗಡಿ ಶಂಭು ಪ್ರದೇಶದ ಪ್ರತಿಭಟನಾ ಸ್ಥಳದಿಂದ 101 ರೈತರು ದೆಹಲಿಯತ್ತ ಕಾಲ್ನಡಿಗೆ ಜಾಥಾ ನಡೆಸಲು ಮುಂದಾದರು. ರೈತರು ಗಡಿ ದಾಟದಂತೆ ಹರಿಯಾಣ ಪೊಲೀಸರು ಹಾಕಿರುವ ಬ್ಯಾರಿಕೇಡ್‌ಗಳನ್ನು ಬೇಧಿಸಿ ಮುನ್ನುಗ್ಗು ಯತ್ನಿಸಿದರು. ವೇಳೆ ಪೊಲೀಸರು ಅವರ ಮೇಲೆ ಬಲ ಪ್ರಯೋಗಿಸಿದ್ದಾರೆ.
ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವ ಕಾನೂನಾತ್ಮಕ ಖಾತರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕೇಂದ್ರದ ಸರ್ಕಾರದ ಮೇಲೆ ಒತ್ತಡದ ಹೇರಲು ರೈತರು ಕಳೆದ ಫೆಬ್ರವರಿಯಿಂದ ಶಂಭು ಗಡಿಯಲ್ಲಿ ಪ್ರತಿಭಟಿಸುತ್ತಿದ್ದಾರೆ. ಅವರು ಗಡಿದಾಟಿ ದೆಹಲಿ ಪ್ರವೇಶಿಸಲು ಹರಿಯಾಣ ಪೊಲೀಸರು ಅವಕಾಶ ನೀಡುತ್ತಿಲ್ಲ. ಹಾಗಾಗಿ, ಇಂದು ಮೂರನೇ ಬಾರಿಗೆ ರೈತರು ತಡೆಯನ್ನು ಬೇಧಿಸಿ ಮುನ್ನಗ್ಗಲು ಯತ್ನಿಸಿದ್ದಾರೆ.
ಈ ಹಿಂದೆ ಡಿಸೆಂಬರ್ 6 ಮತ್ತು 8ರಂದು ರೈತರು ದೆಹಲಿಗೆ ಪಾದಯಾತ್ರೆ ನಡೆಸಲು ಮುಂದಾಗಿದ್ದರು. ಆಗ ಹರಿಯಾಣದ ಭದ್ರತಾ ಸಿಬ್ಬಂದಿ ಅವಕಾಶ ನೀಡಿರಲಿಲ್ಲ. ಇದರಿಂದ ರೈತರು ಮತ್ತು ಪೊಲೀಸರ ನಡುವೆ ಸಂಘರ್ಷ ಏರ್ಪಟ್ಟು ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು.
ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ (ಕೆಎಂಎಂ) ಬ್ಯಾನರ್ ಅಡಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಮೂರು ಕೃಷಿ ಕಾನೂನುಗಳ ವಿರುದ್ದದ ಸುದೀರ್ಘ ಹೋರಾಟದ ಬಳಿಕ ರೈತರು ಮತ್ತೊಂದು ಹೋರಾಟ ಕೈಗೊಂಡಿದ್ದಾರೆ.
ತಮ್ಮ ಸಮಸ್ಯೆಗಳನ್ನು ಬಗೆಹರಿಸಲು ತಮ್ಮೊಂದಿಗೆ ಮಾತುಕತೆ ನಡೆಸುವಂತೆ ರೈತರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ರೈತರ ಪ್ರತಿಭಟನೆ ತಡೆಯಲು ಹರಿಯಾಣದ ಅಂಬಾಲಾ ಜಿಲ್ಲಾಡಳಿತ ಈಗಾಗಲೇ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್) ಯ ಸೆಕ್ಷನ್ 163 ರ ಅಡಿಯಲ್ಲಿ ಜಿಲ್ಲೆಯಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಜನರ ಕಾನೂನುಬಾಹಿರ ಸಭೆ ನಡೆಸುವುದನ್ನು ನಿಷೇಧಿಸಿ ಆದೇಶ ಹೊರಡಿಸಿದೆ.
ಹರಿಯಾಣ ಸರ್ಕಾರ ಅಂಬಾಲಾದ 12 ಹಳ್ಳಿಗಳಲ್ಲಿ ಮೊಬೈಲ್ ಇಂಟರ್ನೆಟ್ ಮತ್ತು ಬೃಹತ್ ಎಸ್‌ಎಂಎಸ್ ಸೇವೆಗಳನ್ನು ಡಿಸೆಂಬರ್ 17 ರವರೆಗೆ ಸ್ಥಗಿತಗೊಳಿಸಿದೆ.
ರೈತ ಸಂಘಟನೆಗಳು ರಾಷ್ಟ್ರ ರಾಜಧಾನಿಯ ಆಡಳಿತದಿಂದ ಅನುಮತಿ ಪಡೆದ ನಂತರವೇ ದೆಹಲಿಗೆ ಮೆರವಣಿಗೆ ನಡೆಸಬಹುದು ಎಂದು ಅಂಬಾಲಾ ಪೊಲೀಸರು ಈ ಹಿಂದೆ ತಿಳಿಸಿದ್ದರು.
ಇವೆಲ್ಲದದ ನಡುವೆ, ಖಾನೌರಿ ಗಡಿಯಲ್ಲಿ ರೈತ ಮುಖಂಡ ಜಗಜಿತ್ ಸಿಂಗ್ ದಲ್ಲೆವಾಲ್ ಅವರು ನಡೆಸುತ್ತಿರುವ ಆಮರಣಾಂತ ಉಪವಾಸ ಸತ್ಯಾಗ್ರಹ ಇಂದಿಗೆ (ಶನಿವಾರ) 19 ನೇ ದಿನಕ್ಕೆ ಕಾಲಿಟ್ಟಿದೆ.
ದೀರ್ಘಕಾಲದ ಉಪವಾಸದಿಂದಾಗಿ ಅವರು ದುರ್ಬಲರಾಗಿದ್ದಾರೆ ಎಂದಿರುವ ವೈದ್ಯರು, ಈಗಾಗಲೇ ಆಸ್ಪತ್ರೆಗೆ ದಾಖಲಿಸಲು ಶಿಫಾರಸು ಮಾಡಿದ್ದಾರೆ.
ಪ್ರತಿಭಟನಾನಿರತ ರೈತರು ದಲ್ಲೆವಾಲ್ ಸುತ್ತಲೂ ಭದ್ರತಾ ವೃತ್ತ ರಚಿಸಿದ್ದಾರೆ. ಇದರಿಂದಾಗಿ ಸರ್ಕಾರದ ಅಧಿಕಾರಿಗಳು ಅವರನ್ನು ಪ್ರತಿಭಟನಾ ಸ್ಥಳದಿಂದ ಕರೆದೊಯ್ಯಲು ಸಾಧ್ಯವಾಗುತ್ತಿಲ್ಲ.
ನವೆಂಬರ್ 26ರಂದು ಆಮರಣಾಂತ ಉಪವಾಸ ಆರಂಭಿಸುವ ಕೆಲವೇ ಗಂಟೆಗಳ ಮೊದಲು, ಪಂಜಾಬ್ ಪೊಲೀಸರು ದಲ್ಲೆವಾಲ್ ಅವರನ್ನು ಖಾನೌರಿ ಗಡಿಯಿಂದ ಬಲವಂತವಾಗಿ ಕರೆದೊಯ್ದಿದ್ದರು.
ಶುಕ್ರವಾರ(ಡಿ.13) ಎಸ್‌ಕೆಎಂ ನಾಯಕ ರಾಕೇಶ್ ಟಿಕಾಯತ್ ದಲ್ಲೆವಾಲ್ ಅವರನ್ನು ಭೇಟಿ ಮಾಡಿದ್ದು, ‘ಜಂಟಿ ಹೋರಾಟ’ಕ್ಕಾಗಿ ರೈತರ ಗುಂಪುಗಳ ಏಕತೆಗೆ ಕರೆ ನೀಡಿದ್ದಾರೆ.
ಬೆಳೆಗಳಿಗೆ ಎಂಎಸ್‌ಪಿ ನೀಡುವ ಕಾನೂನು ಖಾತರಿ, ಸಾಲ ಮನ್ನಾ, ರೈತರು ಮತ್ತು ಕೃಷಿ ಕಾರ್ಮಿಕರಿಗೆ ಪಿಂಚಣಿ, ವಿದ್ಯುತ್ ದರದಲ್ಲಿ ಹೆಚ್ಚಳ ಮಾಡಬಾರದು, ಪೊಲೀಸ್ ಪ್ರಕರಣಗಳನ್ನು ಹಿಂಪಡೆಯಬೇಕು ಮತ್ತು 2021 ರ ಲಖಿಂಪುರ ಖೇರಿ ಹಿಂಸಾಚಾರದ ಸಂತ್ರಸ್ತರಿಗೆ ‘ನ್ಯಾಯ’ ಒದಗಿಸಬೇಕು ಎಂಬುವುದು ಪ್ರತಿಭಟನಾ ನಿರತ ರೈತರ ಪ್ರಮುಖ ಬೇಡಿಕೆಗಳಾಗಿವೆ.
2013ರ ಭೂಸ್ವಾಧೀನ ಕಾಯ್ದೆಯ ಮರುಸ್ಥಾಪನೆ ಮತ್ತು 2020-21ರ ಹಿಂದಿನ ಆಂದೋಲನದ ವೇಳೆ ಮೃತಪಟ್ಟ ರೈತರ ಕುಟುಂಬಗಳಿಗೆ ಪರಿಹಾರ ನೀಡುವುದು ಪ್ರತಿಭಟನಾ ನಿರತ ರೈತರ ಬೇಡಿಕೆಗಳಲ್ಲಿ ಸೇರಿವೆ.
ಇದನ್ನೂ ಓದಿ : ದೇಶ ವಿಭಜನೆಗೆ ಕಾರಣ ವಿ.ಡಿ. ಸಾವರ್ಕರ್ ಹೊರತು ಜಿನ್ನಾ ಅಲ್ಲ – ಡಿಎಂಕೆ ಸಂಸದ ಎ. ರಾಜಾ


