ಕಾಲೇಜು ವಿದ್ಯಾರ್ಥಿನಿಯಾಗಿದ್ದ ದಲಿತ ಯುವತಿಯೊಬ್ಬಳು ತಾನು ಓದಿದ ಸಂಸ್ಥೆಯಲ್ಲಿ ಶುಲ್ಕ ಪಾವತಿಸದ ಕಾರಣಕ್ಕೆ ಎದುರಿಸಿದ ಮಾನಸಿಕ ತೊಂದರೆ ಮತ್ತು ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಆರೋಪದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
22ರ ಹರೆಯದ ಯುವತಿಯು ಬಾಕಿ ಶುಲ್ಕವನ್ನು ಪಾವತಿಸುವಂತೆ ಒತ್ತಡದಿಂದ ಬಳಲುತ್ತಿದ್ದಳು. ಕಾಲೇಜು ಆಡಳಿತ ಆಕೆಗೆ ಕಿರುಕುಳ ನೀಡಿದೆ ಎಂದು ಕುಟುಂಬ ಆರೋಪಿಸಿದೆ. ಆಕೆ ಭಿವಾನಿ ಜಿಲ್ಲೆಯ ಖಾಸಗಿ ಮಹಿಳಾ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಎ ವಿದ್ಯಾರ್ಥಿನಿಯಾಗಿದ್ದರು.
ಡಿಸೆಂಬರ್ 24ರ ರಾತ್ರಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ತನ್ನ ಮಗಳು ಈ ತಿಂಗಳು ಐದನೇ ಸೆಮಿಸ್ಟರ್ ಪರೀಕ್ಷೆಗೆ ಹಾಜರಾಗಬೇಕಾಗಿತ್ತು. ಆದರೆ, ಶುಲ್ಕ ಬಾಕಿ ಇರುವ ಕಾರಣ ಕಾಲೇಜು ಆಡಳಿತ ಅದಕ್ಕೆ ಅವಕಾಶ ನೀಡಲಿಲ್ಲ ಎಂದು ಆಕೆಯ ತಂದೆ ಜಗದೀಶ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕೆಲವು ಆರ್ಥಿಕ ಅಡಚಣೆಗಳಿಂದಾಗಿ ಸಮಯಕ್ಕೆ ಸರಿಯಾಗಿ ಶುಲ್ಕವನ್ನು ಪಾವತಿಸಲು ಸಾಧ್ಯವಾಗಲಿಲ್ಲ. ಕಾಲೇಜು ಪ್ರಾಂಶುಪಾಲರು ಮತ್ತು ಕೆಲವರು ಆಕೆಗೆ ಕಿರುಕುಳ ನೀಡಿದ್ದಾರೆ. ನನ್ನ ಮಗಳಿಗೆ ನ್ಯಾಯ ಬೇಕು ಎಂದರು.
ಲೋಹರು ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಜಿತೇಂದರ್, “ತನಿಖೆಯ ಸಮಯದಲ್ಲಿ ಹಲವು ಕೋನಗಳು ಬೆಳಕಿಗೆ ಬಂದಿವೆ. ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ತನಿಖೆ ನಡೆಯುತ್ತಿದೆ. ನಾವು ತನಿಖೆ ನಡೆಸುತ್ತಿದ್ದೇವೆ. ಯಾವುದೇ ಡೆತ್ ನೋಟ್ ಕಂಡುಬಂದಿಲ್ಲ, ಪೋಸ್ಟ್‌ಮಾರ್ಟಂ ವರದಿಯೂ ಬಾಕಿ ಇದೆ” ಎಂದು ಹೇಳಿದರು.
ಆಕೆಯ ಕುಟುಂಬದ ದೂರಿನ ಮೇರೆಗೆ, ಬಿಎನ್‌ಎಸ್ ಸೆಕ್ಷನ್ 108 ರ ಅಡಿಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣವನ್ನು ದಾಖಲಿಸಲಾಗಿದೆ. ಮುಂದಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹರ್ಯಾಣದಲ್ಲಿ ದಲಿತ ಬಾಲಕಿಯೊಬ್ಬಳು ಪರೀಕ್ಷಾ ಶುಲ್ಕ ಕಟ್ಟಲಾಗದೆ ಆತ್ಮಹತ್ಯೆ ಮಾಡಿಕೊಂಡಿರುವುದು ಬೇಸರದ ಸಂಗತಿ ಎಂದು ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೆವಾಲಾ ಹೇಳಿದ್ದಾರೆ.
“ಈ ಘಟನೆಯು ದುಃಖ ಮಾತ್ರವಲ್ಲ, ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ. ಸಂತ್ರಸ್ತೆಯ ಕುಟುಂಬಕ್ಕೆ ನ್ಯಾಯ ಸಿಗಬೇಕು ಮತ್ತು ಈ ಪ್ರಕರಣವನ್ನು ಕೂಲಂಕುಷವಾಗಿ ತನಿಖೆ ಮಾಡಬೇಕು” ಎಂದು ಸುರ್ಜೆವಾಲಾ ಮಂಗಳವಾರ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಯುವತಿಯ ಸಾವಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹರಿಯಾಣದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಕ್ರಿಶನ್ ಕುಮಾರ್ ಬೇಡಿ ಮಂಗಳವಾರ ಹೇಳಿದ್ದಾರೆ. ಎಫ್‌ಐಆರ್ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಲು ಪೊಲೀಸರು ಶ್ರಮಿಸುತ್ತಿದ್ದಾರೆ ಎಂದರು. ಸಂತ್ರಸ್ತೆ ಕುಟುಂಬದೊಂದಿಗೆ ಸರ್ಕಾರ ನಿಂತಿದೆ ಎಂದು ಬೇಡಿ ಹೇಳಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು, ಈ ವಿಚಾರದಲ್ಲಿ ರಾಜಕೀಯ ಮಾಡದಂತೆ ಕಾಂಗ್ರೆಸ್‌ಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ; ಬಿಜೆಪಿ ಆಡಳಿತದ ರಾಜ್ಯಗಳು ದಲಿತ ದೌರ್ಜನ್ಯ ಪ್ರಯೋಗಶಾಲೆಗಳಾಗಿ ಮಾರ್ಪಟ್ಟಿವೆ: ಕುಮಾರಿ ಸೆಲ್ಜಾ


