ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ದಾಖಲಿಸಿ ಸರ್ಕಾರ ರಚಿಸಲು ಬಿಜೆಪಿ ಅಣಿಯಾಗುತ್ತಿದ್ದಂತೆ, ಇಬ್ಬರು ಪಕ್ಷೇತರು ಶಾಸಕರು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ನಿನ್ನೆ (ಅ.8) ಪ್ರಕಟಗೊಂಡ ವಿಧಾನಸಭೆ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ 48 ಸ್ಥಾನಗಳನ್ನು ಪಡೆದಿತ್ತು. ಇದೀಗ ಇಬ್ಬರು ಪಕ್ಷೇತರರ ಪಕ್ಷ ಸೇರ್ಪಡೆ ಮೂಲಕ ಶಾಸಕ ಸಂಖ್ಯೆ 50ಕ್ಕೆ ಏರಿಕೆಯಾಗಿದೆ.
ಸ್ವತಂತ್ರ ಶಾಸಕರಾದ ದೇವೆಂದರ್ ಕಾಡ್ಯನ್ ಮತ್ತು ರಾಜೇಶ್ ಜೂನ್ ಅವರು ಕೇಂದ್ರ ಸಚಿವ ಮತ್ತು ಹರಿಯಾಣ ಬಿಜೆಪಿ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಅವರ ನಿವಾಸದಲ್ಲಿ ರಾಜ್ಯ ಬಿಜೆಪಿ ಮುಖ್ಯಸ್ಥ ಮೋಹನ್ ಲಾಲ್ ಬಡೋಲಿ ಅವರ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ ಎಂದು ವರದಿಯಾಗಿದೆ.
ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿದ್ದ ದೇವೆಂದರ್ ಕಾಡ್ಯನ್, ಸ್ವತಂತ್ರವಾಗಿ ಸ್ಪರ್ಧಿಸಿ ಗೆಲುವನ್ನು ಸಾಧಿಸಿದ್ದಾರೆ. ಸ್ವತಂತ್ರ ಅಭ್ಯರ್ಥಿಯಾಗಿದ್ದ ರಾಜೇಶ್ ಜೂನ್ ಬಹದ್ದೂರ್‌ಗಢದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿದ್ದರು.
ಹರಿಯಾಣ ವಿಧಾನಸಭೆಯಲ್ಲಿ ಒಟ್ಟು 90 ಸ್ಥಾನಗಳಿವೆ. ಸರ್ಕಾರ ರಚಿಸಲು 46 ಸ್ಥಾನಗಳನ್ನು ಗೆಲ್ಲಬೇಕಿತ್ತು. ಆದರೆ, ಬಿಜೆಪಿ ಎರಡು ಸ್ಥಾನಗಳನ್ನು ಹೆಚ್ಚೇ ಗೆದ್ದು ಸ್ಪಷ್ಟ ಬಹುಮತ ಪಡೆದಿತ್ತು. ಇದೀಗ ಇನ್ನಿಬ್ಬರು ಶಾಸಕರ ಬೆಂಬಲದೊಂದಿಗೆ ಬಿಜೆಪಿಗೆ ಇನ್ನಷ್ಟು ಬಲ ಬಂದಿದೆ.
ಇದನ್ನೂ ಓದಿ : ಹರಿಯಾಣದ ಅನಿರೀಕ್ಷಿತ ಫಲಿತಾಂಶಗಳನ್ನು ವಿಶ್ಲೇಷಿಸುತ್ತಿದ್ದೇವೆ: ರಾಹುಲ್ ಗಾಂಧಿ


