ಸೂಕ್ತ ಆಧಾರವಿಲ್ಲದೆ ದ್ವೇಷ ಹುಟ್ಟಿಸುವ ವರದಿ ಪ್ರಕಟಿಸಿದ ಆರೋಪದ ಮೇಲೆ ವಿಜಯ ಕರ್ನಾಟಕ ದಿನಪತ್ರಿಕೆಯ ಸಂಪಾದಕರ ವಿರುದ್ಧ ಪಿಸಿಐ (ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ) ಐದು ಸಾವಿರ ರೂಗಳ ಜಾಮೀನಿನ ವಾರೆಂಟ್ (ಬೇಯ್ಲಬಲ್ ವಾರೆಂಟ್) ಹೊರಡಿಸಲಾಗಿದೆ ಎಂದು ದ್ವೇಷದ ಮಾತುಗಳ ವಿರುದ್ಧ ಜನಾಂದೋಲನ ಹೇಳಿಕೆಯಲ್ಲಿ ತಿಳಿಸಿದೆ.
2020ರ ಮಾರ್ಚ್ 28ರಂದು “ಸತ್ತವರೆಲ್ಲ ಒಂದೇ ಸಮುದಾಯದವರು – ಈಗಲೂ ಪ್ರಾರ್ಥನೆಯ ಹೆಸರಿನಲ್ಲಿ ಗುಂಪು ಸೇರುವುದೇಕೆ” ಎಂಬ ಶೀರ್ಷಿಕೆಯಡಿಯಲ್ಲಿ ವಿಜಯ ಕರ್ನಾಟಕ ಪತ್ರಿಕೆ ವರದಿ ಪ್ರಕಟಿಸಿತ್ತು. ಯಾವುದೇ ಆಧಾರವಿಲ್ಲದೆ ಕೊರೊನಾ ಸೋಂಕು ಹರಡಲು ಮುಸ್ಲಿಂ ಸಮುದಾಯವೇ ಕಾರಣ ಎಂದು ವರದಿಯಲ್ಲಿ ನಿರೂಪಿಸಲಾಗಿತ್ತು. ಸಾಂಕ್ರಾಮಿಕ ಭಯದ ಸಮಯದಲ್ಲಿ ಇಂತಹ ವರದಿಗಳೇ ಸಮುದಾಯದ ಮೇಲೆ ದೌರ್ಜನ್ಯ ನಡೆಸಲು ಕಾರಣವಾಗಿವೆ ಎಂದು ಆರೋಪಿಸಿ ದ್ವೇಷದ ಮಾತುಗಳ ವಿರುದ್ಧ ಜನಾಂದೋಲನ ಪಿಸಿಐ ಬಳಿ ದೂರು ದಾಖಲಿಸಿತ್ತು.
PCI issues warrant for arrest of Vijaya Karnataka editor https://t.co/oDpdmB2MAR
— geeta seshu (@geetaseshu) March 10, 2021
ಪಿಸಿಐ ಮಾಧ್ಯಮಗಳನ್ನು ನಿಯಂತ್ರಿಸುವ ಕಾನೂನುಬದ್ಧ ಸಂಸ್ಥೆಯಾಗಿದೆ. ಅದರ “ನಾರ್ಮ್ಸ್ ಆಫ್ ಜರ್ನಲಿಸ್ಟಿಕ್ ಕಂಡ್ಕಕ್ಟ್ 2019” ಅನ್ನು ಮೇಲಿನ ವರದಿ ಉಲ್ಲಂಘಿಸಿದೆ ಎಂಬ ಆಧಾರದಲ್ಲಿ ನಡೆಸುತ್ತಿರುವ ವಿಚಾರಣೆಗೆ ಹಾಜರಾಗುವಂತೆ ವಿಜಯ ಕರ್ನಾಟಕ ಪತ್ರಿಕೆಗೆ ಎರಡು ಬಾರಿ ಸಮನ್ಸ್ ಹೊರಡಿಸಲಾಗಿತ್ತು. ಆದರೆ ಎರಡು ವಿಚಾರಣೆಗೆ ವಿಜಯ ಕರ್ನಾಟಕ ಪತ್ರಿಕೆಯ ವತಿಯಿಂದ ಯಾವುದೇ ಪ್ರತಿನಿಧಿಗಳು ಹಾಜರಾಗದ ಕಾರಣ ವಾರೆಂಟ್ ಹೊರಡಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಆಧಾರವಿಲ್ಲದ ವರದಿಗಳನ್ನು ಪ್ರಕಟಿಸುವ ಮೂಲಕ ದ್ವೇಷ ಉಂಟುಮಾಡುವುದಕ್ಕೆ ಪತ್ರಿಕೆ ಕಾರಣವಾಗಿದೆ. ಹಾಗಾಗಿ ವಿಚಾರಣೆ ನಡೆಸಿ ವಿಜಯ ಕರ್ನಾಟಕ ಪತ್ರಿಕೆಯ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಪತ್ರಿಕೆಯು ಬಹಿರಂಗ ಕ್ಷಮೆ ಕೇಳಬೇಕೆಂದು ನಾವು ಒತ್ತಾಯಿಸುತ್ತೇವೆ. ಅಲ್ಲದೇ ಪಿಸಿಐನಂತಹ ಸಂಸ್ಥೆಯ ವಿಚಾರಣೆಗೆ ಹಾಜರಾಗದೇ ಇರುವುದು ಪತ್ರಿಕೆಗೆ ಶೋಭೆ ತರುವುದಿಲ್ಲ. ಸ್ವತಃ ಕಾನೂನು ಉಲ್ಲಂಘಿಸುವ ಮೂಲಕ ಓದುಗರಿಗೆ ಅದು ಕೆಟ್ಟ ಸಂದೇಶವನ್ನು ನೀಡುತ್ತಿದೆ ಎಂದು ದ್ವೇಷದ ಮಾತುಗಳ ವಿರುದ್ಧ ಜನಾಂದೋಲನ ಅಸಮಾಧಾನ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಹಿಂಸೆಯ ಮಾತುಗಳನ್ನಾಡಿದ ಹರಿಯಾಣ ಗೃಹ ಸಚಿವರ ವಿರುದ್ಧ ಕ್ರಮ ಕೈಗೊಳ್ಳಿ: ಬೆಂಗಳೂರಿನಲ್ಲಿ ದೂರು ದಾಖಲು


