ನವದೆಹಲಿ: 2024ರ ಡಿಸೆಂಬರ್ ನಲ್ಲಿ ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಅವರ ವಿರುದ್ಧ ಆಂತರಿಕ ತನಿಖೆಯನ್ನು ಪ್ರಾರಂಭಿಸದ ಸುಪ್ರೀಂ ಕೋರ್ಟ್ ನಿರ್ಧಾರದ ಬಗ್ಗೆ ಅಖಿಲ ಭಾರತ ನ್ಯಾಯವಾದಿಗಳ ಸಂಘ (ಎಐಎಲ್‌ಎಜೆ) ಕಳವಳ ವ್ಯಕ್ತಪಡಿಸಿದೆ.
ರಾಜ್ಯಸಭಾ ಸಚಿವಾಲಯವು ಈ ವಿಷಯದಲ್ಲಿ ವಿಶೇಷ ನ್ಯಾಯವ್ಯಾಪ್ತಿಯನ್ನು ಪ್ರತಿಪಾದಿಸಿ ನ್ಯಾಯಮೂರ್ತಿ ಯಾದವ್ ವಿರುದ್ಧದ ತನಿಖೆಯನ್ನು ಸುಪ್ರೀಂ ಕೋರ್ಟ್ ಸ್ಥಗಿತಗೊಳಿಸಿದೆ ಎಂದು ವರದಿಗಳು ಸೂಚಿಸಿದ ನಂತರ ಅಖಿಲ ಭಾರತ ನ್ಯಾಯವಾದಿಗಳ ಸಂಘ (ಎಐಎಲ್‌ಎಜೆ) ಶುಕ್ರವಾರದಂದು ಖಂಡಿಸಿವೆ.
ದ್ವೇಷ ಭಾಷಣವು ಭ್ರಾತೃತ್ವದ ವಿರುದ್ಧವಾಗಿದೆ ಮತ್ತು ನ್ಯಾಯಾಂಗವು ತನ್ನ ಶ್ರೇಣಿಯೊಳಗೆ ಅದನ್ನು ಸಹಿಸಬಾರದು ಎಂದು ಎಐಎಲ್‌ಎಜೆ ಹೇಳಿಕೆಯಲ್ಲಿ ಹೇಳಲಾಗಿದೆ.
ನ್ಯಾಯಾಲಯದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ “ಏಕರೂಪ ನಾಗರಿಕ ಸಂಹಿತೆಯ ಸಾಂವಿಧಾನಿಕ ಅಗತ್ಯ”ದ ಕುರಿತು ಮಾತನಾಡಿದ ನ್ಯಾಯಮೂರ್ತಿ ಯಾದವ್, ಇಸ್ಲಾಮೋಫೋಬಿಕ್ ಹೇಳಿಕೆಗಳನ್ನು ನೀಡಿದ ಆರೋಪ ಹೊರಿಸಲಾಗಿತ್ತು. ಸುಪ್ರೀಂ ಕೋರ್ಟ್ ಕೊಲಿಜಿಯಂ ಅವರಿಗೆ ಕ್ಷಮೆಯಾಚಿಸಲು ಸೂಚಿಸಿದೆ ಎಂದು ವರದಿಯಾಗಿದೆ. ಆದರೆ ಅವರು ಕ್ಷಮೆಯಾಚನೆಗೆ ನಿರಾಕರಿಸಿದ್ದಾರೆ ಮತ್ತು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಇತರರಿಂದ ರಾಜಕೀಯ ಬೆಂಬಲ ಇದೆ ಹೇಳಿಕೆಯಲ್ಲಿ ಆರೋಪಿಸಲಾಗಿದೆ.
2024ರ ಡಿಸೆಂಬರ್ 13ರಂದು ಸಲ್ಲಿಸಲಾದ ದೋಷಾರೋಪಣೆ ಪ್ರಸ್ತಾವನೆಯನ್ನು ಅಂಗೀಕರಿಸದಿದ್ದಕ್ಕಾಗಿ ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಕರ್ ಅವರನ್ನು ಎಐಎಲ್‌ಎಜೆ ಟೀಕಿಸಿದೆ ಮತ್ತು ಸಂಸತ್ತು ನ್ಯಾಯಾಧೀಶರನ್ನು ರಕ್ಷಿಸುತ್ತಿದೆ ಎಂದು ಆರೋಪಿಸಿದೆ. ಆಂತರಿಕ ನ್ಯಾಯಾಂಗ ತನಿಖಾ ಪ್ರಕ್ರಿಯೆಯು ದೋಷಾರೋಪಣೆಗಿಂತ ಭಿನ್ನವಾಗಿದೆ ಮತ್ತು ಸ್ವತಂತ್ರವಾಗಿ ಮುಂದುವರಿಯಬೇಕಿತ್ತು ಎಂದು ಎಐಎಲ್‌ಎಜೆ ವಾದಿಸಿದೆ.
ಇದು ಕೇವಲ ವಿಳಂಬದ ಪ್ರಶ್ನೆಯಲ್ಲ, ಆದರೆ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಅವರನ್ನು ರಕ್ಷಿಸುವ ಕ್ರಿಯೆಯಾಗಿದೆ ಎಂದು ಸಂಘವು ಹೇಳಿಕೆಯಲ್ಲಿ ತಿಳಿಸಿದೆ. ಈ ವಿಳಂಬವು ವಿಭಜಕ ಮನಸ್ಥಿತಿ ಹೊಂದಿರುವ ಇತರ ನ್ಯಾಯಾಧೀಶರನ್ನು ಇದೇ ರೀತಿ ವರ್ತಿಸಲು ಪ್ರೇರೇಪಿಸಬಹುದು ಎಂದು ಸಂಘವು ಹೇಳಿಕೆಯಲ್ಲಿ ತಿಳಿಸಿದೆ.
ಈ ಬಿಕ್ಕಟ್ಟನ್ನು “ಪ್ರಜ್ಞಾಪೂರ್ವಕವಾದುದ್ದು” ಎಂದು ಕರೆದ ಎಐಎಲ್‌ಎಜೆ, ತನಿಖೆ ಮುಗಿಯುವವರೆಗೆ ನ್ಯಾಯಮೂರ್ತಿ ಯಾದವ್ ಅವರ ನ್ಯಾಯಾಂಗ ಮತ್ತು ಆಡಳಿತಾತ್ಮಕ ಜವಾಬ್ದಾರಿಗಳನ್ನು ತಕ್ಷಣವೇ ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದೆ. ನ್ಯಾಯಾಧೀಶರಿಂದ ಬೇಷರತ್ತಾದ ಸಾರ್ವಜನಿಕ ಕ್ಷಮೆಯಾಚನೆಗಾಗಿ ಸಂಘವು ತನ್ನ ಕರೆಯನ್ನು ಹೇಳಿಕೆಯಲ್ಲಿ ಪುನರುಚ್ಚರಿಸಿದೆ.
ನ್ಯಾಯಾಂಗದ ಸ್ವಾತಂತ್ರ್ಯ ಮತ್ತು ಅದರ ನಿಷ್ಪಕ್ಷಪಾತತೆಯ ಬಗ್ಗೆ ಸಾರ್ವಜನಿಕ ನಂಬಿಕೆ ಅಪಾಯದಲ್ಲಿದೆ ಎಂದು ಸಂಘವು ಎಚ್ಚರಿಸಿದೆ.


