ಪ್ರವಾದಿ ಮುಹಮ್ಮದ್ ಮತ್ತು ಕುರಾನ್ ಕುರಿತು ಅವಹೇಳಕಾರಿ ಹೇಳಿಕೆ ನೀಡಿದ ಯತಿ ನರಸಿಂಗಾನಂದ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ನರಸಿಂಗಾನಂದ ಹೇಳಿಕೆ ವಿರುದ್ದ ಶುಕ್ರವಾರ ರಾತ್ರಿ ಉತ್ತರ ಪ್ರದೇಶದ ಹಲವು ನಗರಗಳಲ್ಲಿ ಪ್ರತಿಭಟನೆ ನಡೆದಿದೆ. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ. ಬುಲಂದ್‌ಶಹರ್ ಪಟ್ಟಣದಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಗೆ ಸಂಬಂಧಿಸಿದಂತೆ ಎಂಟು ಜನರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಉತ್ತರ ಪ್ರದೇಶದ ಗಾಝಿಯಾಬಾದ್‌ನ ಪ್ರಸಿದ್ಧ ದಾಸ್ನಾ ದೇವಿ ದೇವಾಲಯದ ಮುಖ್ಯಸ್ಥನಾಗಿರುವ ನರಸಿಂಗಾನಂದ ವಿರುದ್ದ ದ್ವೇಷ ಭಾಷಣ ಆರೋಪದ ಮೇಲೆ ಶುಕ್ರವಾರ (ಅ.4) ಪ್ರಕರಣ ದಾಖಲಾಗಿತ್ತು.
ಗಾಝಿಯಾಬಾದ್‌ನ ಲೋಹಿಯಾ ನಗರದ ಹಿಂದಿ ಭವನದಲ್ಲಿ ಸೆಪ್ಟೆಂಬರ್ 29 ರಂದು ನಡೆದ ಕಾರ್ಯಕ್ರಮವೊಂದರಲ್ಲಿ ದ್ವೇಷ ಭಾಷಣ ಮಾಡಿ ಮುಸ್ಲಿಂ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದ ಆರೋಪ ಅವರ ಮೇಲಿದೆ.
ದ್ವೇಷ ಭಾಷಣಗಳಿಗೆ ಸಂಬಂಧಪಟ್ಟಂತೆ ನರಸಿಂಗಾನಂದ ವಿರುದ್ದ ಈಗಾಗಲೇ ಮೂರು ಪ್ರಕರಣಗಳು ದಾಖಲಾಗಿವೆ.
ಈ ಹಿಂದೆ 2022ರಲ್ಲಿ ದ್ವೇಷ ಭಾಷಣ ಮಾಡಿದದ್ದಕ್ಕಾಗಿ ನರಸಿಂಗಾನಂದ ಅವರನ್ನು ಬಂಧಿಸಲಾಗಿತ್ತು. ಡಿಸೆಂಬರ್ 2021ರಲ್ಲಿ, ಹರಿದ್ವಾರದಲ್ಲಿ ನಡೆದ ‘ಧರ್ಮ ಸಂಸದ್’ ನಲ್ಲಿ ನಡೆದ ಸಭೆಯಲ್ಲಿ ಹಿಂದೂಗಳಿಗೆ ಬೆದರಿಕೆಯಿರುವ ಸಾಧ್ಯತೆಯಿರುವುದರಿಂದ ಮುಸ್ಲಿಮರ ವಿರುದ್ಧ ಹೆಚ್ಚು ಪರಿಣಾಮಕಾರಿಯಾಗಿರುವ ಶಸ್ತ್ರಾಸ್ತ್ರಗಳೊಂದಿಗೆ ಸಜ್ಜಾಗಿರುವಂತೆ ಕರೆ ನೀಡಿದ್ದರು.
ಈ ಬಾರಿ ಪ್ರವಾದಿ ವಿರುದ್ದ ನೀಡಿದ್ದ ಅವಹೇಳನಕಾರಿ ಹೇಳಿಕೆ ಮುಸ್ಲಿಮರ ಆಕ್ರೋಶಕ್ಕೆ ಕಾರಣವಾಗಿತ್ತು. ಪ್ರಮುಖ ಮುಸ್ಲಿಂ ನಾಯಕರು ಮತ್ತು ಸಂಸದ ಅಸಾದುದ್ದೀನ್ ಓವೈಸಿ ಸೇರಿದಂತೆ ಅನೇಕರು ನರಸಿಂಗಾನಂದ ವಿರುದ್ದ ಕ್ರಮಕ್ಕೆ ಒತ್ತಾಯಿಸಿದ್ದರು.
ಇದನ್ನೂ ಓದಿ : ಮಾಲೆಗಾಂವ್ ಪ್ರಕರಣ: ‘ಸಿಮಿ’ ಸ್ಫೋಟ ನಡೆಸಿರಬಹುದು ಎಂದು ಆರೋಪಿಸಿದ ಪ್ರಜ್ಞಾ ಠಾಕೂರ್ ಪರ ವಕೀಲ


