ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಆಯೋಜಿಸಿದ್ದ ಸತ್ಸಂಗ ಪ್ರಾರ್ಥನಾ ಸಭೆಯಲ್ಲಿ ಕಾಲ್ತುಳಿತ ಸಂಭವಿಸಿ 121 ಜನರು ಸಾವನ್ನಪ್ಪಿದ ಪ್ರಕರಣದಲ್ಲಿ ಸ್ವಯಂಘೋಷಿತ ದೇವಮಾನವ ಸೂರಜ್ ಪಾಲ್ ಅಲಿಯಾಸ್ ಭೋಲೆ ಬಾಬಾಗೆ ತನಿಖಾ ಆಯೋಗ ಕ್ಲೀನ್ ಚಿಟ್ ನೀಡಿದೆ ಎಂದು ವರದಿಯಾಗಿದೆ.
ಪ್ರಕರಣದ ತನಿಖೆಗೆ ನೇಮಿಸಿದ್ದ ಆಯೋಗವು ತನ್ನ ತನಿಖೆಯನ್ನು ಪೂರ್ಣಗೊಳಿಸಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಗುರುವಾರ (ಫೆ.20) ನಡೆದ ಸಚಿವ ಸಂಪುಟ ಸಭೆಯಲ್ಲಿ ನ್ಯಾಯಾಂಗ ಆಯೋಗದ ವರದಿಯನ್ನು ಅನುಮೋದಿಸಲಾಗಿದೆ. ವರದಿಯನ್ನು ಪ್ರಸ್ತುತ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ಸರ್ಕಾರ ಮಂಡಿಸುವ ಸಾಧ್ಯತೆ ಇದೆ.
ವರದಿಗಳ ಪ್ರಕಾರ, ನ್ಯಾಯಾಂಗ ಆಯೋಗವು ಸೂರಜ್ ಪಾಲ್ ಅಲಿಯಾಸ್ ಬೋಲೆ ಬಾಬಾಗೆ ಕ್ಲೀನ್ ಚಿಟ್ ನೀಡಿದೆ. ಆದರೆ, ಘಟನೆಯ ಹಿಂದಿನ ಸಂಭಾವ್ಯ ಪಿತೂರಿಯ ಬಗ್ಗೆ ಇನ್ನೂ ಅನಿಶ್ಚಿತತೆ ಉಳಿದಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಆದೇಶ ಮೇರೆಗೆ ಜುಲೈ 3, 2024 ರಂದು ಮೂವರು ಸದಸ್ಯರ ನ್ಯಾಯಾಂಗ ಆಯೋಗವನ್ನು ಕಾಲ್ತುಳಿತ ಘಟನೆಯ ತನಿಖೆಗಾಗಿ ರಚಿಸಲಾಗಿತ್ತು.
ಅಲಹಾಬಾದ್ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ಬ್ರಿಜೇಶ್ ಕುಮಾರ್ ಶ್ರೀವಾಸ್ತವ ನೇತೃತ್ವದ ಸಮಿತಿಯಲ್ಲಿ ಮಾಜಿ ಐಎಎಸ್ ಅಧಿಕಾರಿ ಹೇಮಂತ್ ರಾವ್ ಮತ್ತು ಮಾಜಿ ಐಪಿಎಸ್ ಅಧಿಕಾರಿ ಭವೇಶ್ ಕುಮಾರ್ ಸಿಂಗ್ ಇದ್ದರು. ತನಿಖೆಗೆ ಆರಂಭದಲ್ಲಿ ಎರಡು ತಿಂಗಳುಗಳ ಕಾಲಾವಕಾಶ ನೀಡಲಾಗಿತ್ತು, ಆದರೆ ನಂತರ ಗಡುವನ್ನು ವಿಸ್ತರಿಸಲಾಗಿತ್ತು.
ಜಿಲ್ಲಾಡಳಿತ ಸತ್ಸಂಗ ಕಾರ್ಯಕ್ರಮಕ್ಕೆ ಅನುಮತಿ ನೀಡುವ ವೇಳೆ ವಿಧಿಸಿದ್ದ ಷರತ್ತುಗಳನ್ನು
ಆಯೋಜಕರು ಪಾಲಿಸಿದ್ದಾರೆಯೇ, ಅಧಿಕಾರಿಗಳು ತೆಗೆದುಕೊಂಡ ಜನಸಂದಣಿ ನಿರ್ವಹಣಾ ಕ್ರಮಗಳು ಮತ್ತು ದುರಂತದ ಹಿಂದಿನ ಯೋಜಿತ ಪಿತೂರಿಯ ಸಾಧ್ಯತೆಯ ಮೇಲೆ ಕೇಂದ್ರೀಕರಿಸಿ ನ್ಯಾಯಾಂಗ ಆಯೋಗ ತನಿಖೆ ನಡೆಸಿದೆ.
ಆಯೋಗದ ವರದಿಯು ಕಾಲ್ತುಳಿತ ದುರಂತದ ಕಾರಣಗಳು, ದುರಂತ ನಡೆದ ಸಂದರ್ಭ, ಆಗ ಅಧಿಕಾರಿಗಳು, ಕಾರ್ಯಕ್ರಮ ಆಯೋಜಕರು ವಹಿಸಿದ್ದ ಪಾತ್ರ ಮತ್ತು ಭವಿಷ್ಯದಲ್ಲಿ ಇಂತಹ ದುರಂತಗಳನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಕುರಿತ ಶಿಫಾಸ್ಸುಗಳನ್ನು ಒಳಗೊಂಡಿದೆ ಎಂದು Jagran.com ವರದಿ ತಿಳಿಸಿದೆ.
ಆಯೋಗವು ಕಳೆದ ಜುಲೈ 5 ರಂದು ಹತ್ರಾಸ್‌ನಲ್ಲಿ ಸ್ಥಳದಲ್ಲೇ ಪರಿಶೀಲನೆ ನಡೆಸಿ, ಎರಡು ದಿನಗಳ ಕಾಲ ವಾಸ್ತವ್ಯ ಹೂಡಿ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಪ್ರತ್ಯಕ್ಷದರ್ಶಿಗಳು, ಸಂತ್ರಸ್ತರ ಕುಟುಂಬಸ್ಥರು ಮತ್ತು ಅಕ್ಟೋಬರ್ 10, 2024 ರಂದು ಭಾಷಣ ಮಾಡಿದ್ದ ಸೂರಜ್ ಪಾಲ್ ಅವರಂತಹ ಪ್ರಮುಖ ವ್ಯಕ್ತಿಗಳು ಸೇರಿದಂತೆ 1,500 ಕ್ಕೂ ಹೆಚ್ಚು ಜನರ ಹೇಳಿಕೆಗಳನ್ನು ದಾಖಲಿಸಿದೆ.
ಸತ್ಸಂಗ ಕಾರ್ಯಕ್ರಮದಲ್ಲಿ ಜುಲೈ 2, 2024ರಂದು ಸಂಭವಿಸಿದ್ದ ಕಾಲ್ತುಳಿತದಲ್ಲಿ ಹೆಚ್ಚಿನವರು ಮಹಿಳೆಯರು ಸೇರಿದಂತೆ 121 ಜನರು ಸಾವನ್ನಪ್ಪಿದ್ದರು ಮತ್ತು ಹಲವಾರು ಜನರು ಗಾಯಗೊಂಡಿದ್ದರು.
ಅಸ್ಸಾಂ | ಸಂಸದನಿಗೆ ಬ್ಯಾಟ್‌ನಿಂದ ಹಲ್ಲೆ : ಸರ್ಕಾರಿ ಯೋಜಿತ ಕೃತ್ಯ ಎಂದ ಕಾಂಗ್ರೆಸ್ ; ವಿಧಾನಸಭೆಯಲ್ಲಿ ಕೋಲಾಹಲ


