ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ಕೇಂದ್ರ ಸಚಿವನ ಮಗ ರೈತರ ಮೇಲೆ ಕಾರು ಹರಿಸಿ ನಾಲ್ವರನ್ನು ಕೊಂದ ಘಟನೆಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಉತ್ತರ ಪ್ರದೇಶದಲ್ಲಿ ಬೃಹತ್ ಪ್ರತಿಭಟನೆಗಳು ಜರುಗುತ್ತಿದ್ದು, ಇದೇ ಸಂದರ್ಭದಲ್ಲಿ ಇಂದು ರಾಜ್ಯದ ಲಕ್ನೋಗೆ ಪ್ರಧಾನೀ ಮೋದಿಯವರು ಭೇಟಿ ನೀಡುತ್ತಿದ್ದಾರೆ. ಲಖಿಂಪುರ್‌ಗೆ ಹೊರಟು ಕಳೆದೊಂದು ದಿನದಿಂದ ಬಂಧನದಲ್ಲಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಮೋದಿ ವಿರುದ್ಧ ಕಿಡಿಕಾರಿದ್ದಾರೆ.
“ಪ್ರಧಾನಿ ಮೋದಿಯವರೆ, ನೀವು ಆಜಾದಿ ಅಮೃತ್ ಮಹೋತ್ಸವಕ್ಕಾಗಿ ಲಕ್ನೋಗೆ ಬರುತ್ತಿದ್ದೀರಿ ಎಂದು ನಾನು ಕೇಳಿದೆ. ನೀವು ಈ ವಿಡಿಯೋವನ್ನು ನೋಡಿದ್ದೀರಾ?” ಎಂದು ಪ್ರಿಯಾಂಕ ಗಾಂಧಿ ವೈರಲ್ ವಿಡಿಯೋವೊಂದನ್ನು ತಮ್ಮ ಮೊಬೈಲ್‌ನಿಂದ ಪ್ರದರ್ಶಿಸಿದ್ದಾರೆ. ವಿಡಿಯೋದಲ್ಲಿ ಘೋಷಣೆ ಕೂಗುತ್ತಾ ಹೊರಟಿದ್ದ ರೈತರ ಗುಂಪಿನ ಮೇಲೆ ಹಿಂದಿನಿಂದ ಎಸ್‌ಯುವಿಯೊಂದು ಉದ್ದೇಶಪೂರ್ವಕವಾಗಿ ನುಗ್ಗುತ್ತಿದೆ. ರೈತರು ಚಲ್ಲಾಪಿಲ್ಲಿಯಾಗುತ್ತಾರೆ. ಕೆಲ ರೈತರ ಮೇಲೆ ನೇರವಾಗಿ ಕಾರು ಹರಿದಿದೆ. ಇದು ಕೇಂದ್ರ ಸಚಿವನ ಕಾರೆಂದು ರೈತರು ಆರೋಪಿಸಿದ್ದಾರೆ.
“ರೈತರ ಮೇಲೆ ಕಾರು ಹರಿಸಿ ಕೊಂದ ಈ ಮನುಷ್ಯನನ್ನು ಏಕೆ ಇನ್ನೂ ಬಂಧಿಸಲಾಗಿಲ್ಲ? ಲಖಿಂಪುರ್ ಖೇರಿಗೆ ಭೇಟಿ ನೀಡಲು ಬಯಸುವ ನಮ್ಮಂತಹ ನಾಯಕರನ್ನು ಯಾವುದೇ ಎಫ್‌ಐಆರ್ ಅಥವಾ ಆದೇಶವಿಲ್ಲದೆ ಬಂಧಿಸಲಾಗಿದೆ? ಈ ಮನುಷ್ಯ ಏಕೆ ಮುಕ್ತನಾಗಿದ್ದಾನೆ ಎಂದು ತಿಳಿಯಲು ನಾನು ಬಯಸುತ್ತೇನೆ? ಎಂದು ಪ್ರಿಯಾಂಕ ಗಾಂಧಿ ವಿಡಿಯೋದಲ್ಲಿ ಹೇಳಿದ್ದಾರೆ.
— Priyanka Gandhi Vadra (@priyankagandhi) October 5, 2021
ಕೇಂದ್ರ ಸಚಿವ ಅಜಯ್ ಮಿಶ್ರಾರವರನ್ನು ಏಕೆ ಇನ್ನು ಸಂಪುಟದಿಂದ ವಜಾ ಮಾಡಿಲ್ಲ? ರೈತರನ್ನು ಕೊಂದ ಕಾರು ಅವರದೇ ಆಗಿದೆ ಎಂದು ರೈತರು ಆರೋಪಿಸಿದ್ದಾರೆ. ಅವರ ಮಗ ಆಶಿಶ್ ಮಿಶ್ರಾ ಕಾರು ಹರಿಸಿ ನಾಲ್ವರು ರೈತರನ್ನು ಕೊಂದಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೋದಿಯವರೆ ಇಂದು ನೀವು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದೀರಿ. ನೆನಪಿರಲಿ ರೈತರಿಂದಲೇ ಈ ಸ್ವಾತಂತ್ರ್ಯ ನಮಗೆ ತಲುಪಿದ್ದು. ಇಂದಿಗೂ ರೈತರ ಮಕ್ಕಳು ಗಡಿಯಲ್ಲಿ ಕಾಯುತ್ತಿದ್ದಾರೆ. ನಮ್ಮ ರೈತರು ವರ್ಷದಿಂದಲೂ ಹೋರಾಟ ನಡೆಸುತ್ತಿದ್ದರೆ ನೀವು ಅವರನ್ನು ನಿರ್ಲಕ್ಷಿಸಿದ್ದೀರಿ ಎಂದು ಪ್ರಿಯಾಂಕ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೀವು ಇಂದು ಲಖಿಂಪುರ್‌ಗೆ ಬಂದು ರೈತರ ನೋವನ್ನು ಅರ್ಥಮಾಡಿಕೊಳ್ಳಬೇಕೆಂದು ನಾನು ಒತ್ತಾಯಿಸಿತ್ತೇನೆ. ಈ ದೇಶದ ಆತ್ಮವಾದ ರೈತರನ್ನು ರಕ್ಷಿಸುವುದು ನಿಮ್ಮ ಕರ್ತವ್ಯವಾಗಿದೆ ಎಂದು ಅವರು ಆಗ್ರಹಿಸಿದ್ದಾರೆ.
ಸೋಮವಾರ ಮುಂಜಾನೆ ಹತ್ಯೆಯಾದ ರೈತ ಕುಟುಂಬಗಳ ಭೇಟಿಗೆ ಹೊರಟಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿಯವರನ್ನು ಸೀತಾಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ವೇಳೆ ತೀವ್ರ ಮಾತಿನ ಚಕಮಕಿ ನಡೆದಿತ್ತು. ನಂತರ ಅವರನ್ನು ಗೆಸ್ಟ್ ಹೌಸ್ ಒಂದರಲ್ಲಿ ಬಂಧಿಯಾಗಿಡಲಾಗಿದ್ದು, ಅಲ್ಲಿ ಅವರು ಕಸ ಗುಡಿಸಿ ಸ್ವಚ್ಛಗೊಳಿಸುವ ವಿಡಿಯೋ ಸಹ ವೈರಲ್ ಆಗಿತ್ತು.
ಇದನ್ನೂ ಓದಿ: ರೈತರ ಮೇಲೆ ಕಾರು ಹರಿಸುತ್ತಿರುವ ಎರಡು ವಿಡಿಯೋ ವೈರಲ್: ಜಾಲತಾಣಗಳಲ್ಲಿ ಭುಗಿಲೆದ್ದ ಆಕ್ರೋಶ


