ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಕಡಕೋಳದಲ್ಲಿ ಮುಸ್ಲಿಂ ಮುಖಂಡರ ಮನೆಗಳಿಗೆ ಕಲ್ಲು ತೂರಾಟ ನಡೆಸಿ ಹಾನಿಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 32 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ವಿಜಯಪುರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ರೈತರ ಜಮೀನನ್ನು ವಕ್ಫ್ ಬೋರ್ಡ್ ಕಿತ್ತುಕೊಳ್ಳುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿರು ನಡುವೆ ಬುಧವಾರ (ಅ.30) ಕಡಕೋಳ ಗ್ರಾಮದಲ್ಲಿ ಮುಸ್ಲಿಂ ಮುಖಂಡರ ಮನೆಗಳನ್ನು ಗುರಿಯಾಗಿಸಿ ದುಷ್ಕರ್ಮಿಗಳು ಕಲ್ಲು ತೂರಿದ್ದರು. ಅಲ್ಲದೆ, ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ತಕ್ಷಣ ಕಡಕೋಳ ಗ್ರಾಮಕ್ಕೆ ಹೋಗಿ ಜನರನ್ನು ಚದುರಿಸಿದ್ದರು. ಪ್ರಸ್ತುತ ಗ್ರಾಮದಲ್ಲಿ ಬಿಗುವಿನ ವಾತಾವರಣವಿದ್ದು, ಮುಂಜಾಗೃತ ಕ್ರಮವಾಗಿ ಪೊಲೀಸರನ್ನು ನಿಯೋಜಿಸಲಾಗಿದೆ.
ಕಲ್ಲು ತೂರಾಟ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಾಲಕರು ಸೇರಿದಂತೆ 32 ಮಂದಿಯನ್ನು ಬಂಧಿಸಿದ್ದಾರೆ ಎಂದು ಎಸ್ಪಿ ಅಂಶುಕುಮಾರ್ ತಿಳಿಸಿದ್ದಾರೆ.
ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಕಡಕೋಳ ಗ್ರಾಮದ ಮೊಹಮ್ಮದ್ ರಾಫಿ ಎಂಬವರ ಮನೆಗೆ ಪ್ರಮುಖವಾಗಿ ಕಲ್ಲು ತೂರಾಟ ನಡೆಸಲಾಗಿದೆ. ಇದರಿಂದ ರಾಫಿ ಸೇರಿದಂತೆ ಮನೆಯಲ್ಲಿದ್ದ ಐದು ಮಂದಿ ಗಾಯಗೊಂಡಿದ್ದಾರೆ. ರಾಫಿ ಅವರ ಮನೆ ಮುಂದೆ ನಿಲ್ಲಿಸಲಾಗಿದ್ದ ದ್ವಿಚಕ್ರ ವಾಹನಕ್ಕೆ ಬೆಂಕಿ ಹಚ್ಚಲಾಗಿದೆ.
ರಾಫಿ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಉಳಿದವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಮನೆಗಳನ್ನು ತೊರೆದ ಮುಸ್ಲಿಂ ಕುಟುಂಬಗಳು, ಬಂಧಿತರ ಬಿಡುಗಡೆ?
ಕಡಕೋಳ ಗ್ರಾಮದಲ್ಲಿ ಗಲಾಟೆಯ ಬಳಿಕ ಗ್ರಾಮದ 70ಕ್ಕೂ ಅಧಿಕ ಮುಸ್ಲಿಂ ಕುಟುಂಬಗಳು ಮನೆಗಳನ್ನು ತೊರೆದಿವೆ ಎಂದು ಈದಿನ.ಕಾಂ ಗ್ರೌಂಡ್ ರಿಪೋರ್ಟ್ ಹೇಳಿದೆ. ಅಲ್ಲದೆ, ರಾಜಿ ಸಂಧಾನದ ಮೂಲಕ ಬಂಧಿತರನ್ನು ಬಿಡುಗಡೆಗೊಳಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆದರೆ, ಈ ಬಗ್ಗೆ ಪೊಲೀಸರು ಖಚಿತಪಡಿಸಿಲ್ಲ ಎಂದಿದೆ.
ಇದನ್ನೂ ಓದಿ : ಬಾಬರಿ ಮಸೀದಿ ಒಡೆದು ಕಟ್ಟಿರುವ ರಾಮ ಮಂದಿರದ ಮೂರ್ತಿಯ ಶಿಲ್ಪಿಗೂ ರಾಜ್ಯೋತ್ಸವ ಪ್ರಶಸ್ತಿ!


