ಸರ್ಕಾರಿ ಕಚೇರಿಗಳು, ಗಾರ್ಮೆಂಟ್ಸ್, ಬಹುರಾಷ್ಟ್ರೀಯ ಕಂಪನಿಗಳು, ಐಟಿ ಮತ್ತು ಇತರ ಖಾಸಗಿ ಕೈಗಾರಿಕೆಗಳು ಸೇರಿ ಎಲ್ಲಾ ವಲಯಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಪ್ರತಿ ತಿಂಗಳು ಒಂದು ದಿನದ ವೇತನ ಸಹಿತ ಮುಟ್ಟಿನ ರಜೆ ನೀಡುವ ರಾಜ್ಯ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ಮಂಗಳವಾರ (ಡಿಸೆಂಬರ್ 9) ಮಧ್ಯಂತರ ತಡೆ ನೀಡಿದೆ.
ಬೆಂಗಳೂರು ಹೋಟೆಲ್ ಸಂಘದ ಕೋರಿಕೆಯಂತೆ ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆ 2025ರ ನವೆಂಬರ್ 20ರಂದು ಹೊರಡಿಸಿರುವ ಅಧಿಸೂಚನೆಗೆ ತಡೆ ನೀಡಲಾಗಿದೆ. ರಾಜ್ಯ ಸರ್ಕಾರ ತಡೆಯಾಜ್ಞೆ ತೆರವಿಗೆ ಅರ್ಜಿ ಸಲ್ಲಿಸುವ ಸ್ವಾತಂತ್ರ್ಯ ಹೊಂದಿದೆ ಎಂದು ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರ ಏಕಸದಸ್ಯ ಪೀಠ ಹೇಳಿದೆ.
ಅಲ್ಲದೇ, ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆಗೆ ಪೀಠ ನೋಟಿಸ್ ಜಾರಿಗೊಳಿಸಿದ್ದು, ಆಕ್ಷೇಪಣೆ ಸಲ್ಲಿಸಲು ಸೂಚಿಸಿದೆ. ಮುಂದಿನ ವಿಚಾರಣೆಯನ್ನು ಹೈಕೋರ್ಟ್‌ನ ಚಳಿಗಾಲದ ರಜೆ ಮುಗಿದ ಬಳಿಕ ನಿಗದಿಪಡಿಸಲು ನಿರ್ದೇಶಿಸಿದೆ.
ವಿಚಾರಣೆ ವೇಳೆ ಹೋಟೆಲ್ ಸಂಘದ ಪರ ವಾದ ಮಂಡಿಸಿದ ವಕೀಲ ಬಿ ಕೆ ಪ್ರಶಾಂತ್, “ಕಾರ್ಮಿಕ ಇಲಾಖೆಯು 18 ರಿಂದ 52 ವಯೋಮಾನದ ಮಹಿಳಾ ಉದ್ಯೋಗಿಗಳಿಗೆ ಮಾಸಿಕ ಒಂದು ದಿನದ ಋತುಚಕ್ರದ ರಜೆ ನೀಡುವುದನ್ನು ಕಡ್ಡಾಯಗೊಳಿಸಿದೆ. 1948ರ ಕಾರ್ಖಾನೆ ಕಾಯ್ದೆ, 1961ರ ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸ್ಥಾಪನೆ ಕಾಯ್ದೆ, 1951ರ ಪ್ಲಾಂಟೇಶನ್ ಕಾರ್ಮಿಕ ಕಾಯ್ದೆ, 1966ರ ಬೀಡಿ ಮತ್ತು ಸಿಗಾರ್ ಕಾರ್ಮಿಕರ ಕಾಯ್ದೆ ಮತ್ತು 1961ರ ಮೋಟಾರ್ ಸಾರಿಗೆ ಕಾರ್ಮಿಕರ ಕಾಯ್ದೆಯಡಿ ಬರುವ ಸಂಸ್ಥೆಗಳಿಗೆ ಅನ್ವಯಿಸುವಂತೆ ಈ ಕಾರ್ಯಕಾರಿ ಆದೇಶ ಹೊರಡಿಸಲಾಗಿದೆ” ಎಂದರು.
ಮುಂದುವರಿದು, “ಆದರೆ, ಈ ಎಲ್ಲಾ ಕಾಯ್ದೆಗಳು ಈಗಾಲೇ ಸಮಗ್ರ ರಜೆ ನೀತಿಯನ್ನು ಹೊಂದಿವೆ. ಕಾರ್ಖಾನೆ ಕಾಯ್ದೆ ಪ್ರಕಾರ 20 ದಿನಗಳ ದುಡಿಮೆಗೆ ಒಂದು ಗಳಿಕೆ ರಜೆ ನೀಡಲು ಅವಕಾಶ ಕಲ್ಪಿಸಲಾಗಿದೆ. ಈ ಮೂಲಕ ವರ್ಷಕ್ಕೆ 18 ರಜೆ ನೀಡಲಾಗುತ್ತಿದೆ. ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳು 18 ದಿನಗಳ ಗಳಿಕೆ ರಜೆಯ ಜೊತೆಗೆ 12 ದಿನ ಅನಾರೋಗ್ಯದ ರಜೆ ನೀಡುತ್ತಿವೆ. ಇದರ ಜೊತೆಗೆ 12 ಸಾಮಾನ್ಯ ರಜೆಯೂ (ಕ್ಯಾಷುವಲ್ ಲೀವ್) ಇದೆ. ಆದರೆ, ಯಾವುದೇ ರಾಜ್ಯ ಅಥವಾ ಕೇಂದ್ರ ಸರ್ಕಾರದ ಕಾಯ್ದೆಯಲ್ಲಿ ಋತುಚಕ್ರದ ರಜೆ ಕಡ್ಡಾಯಗೊಳಿಸಿಲ್ಲ” ಎಂದು ತಿಳಿಸಿದರು.
“ಋತುಚಕ್ರದ ರಜೆ ನೀಡಲು ಕಾಯ್ದೆಯ ಯಾವುದೇ ನಿಬಂಧನೆಯಲ್ಲೂ ಅವಕಾಶವಿಲ್ಲ. ಯಾವ ಅಧಿಕಾರದ ಅಡಿ ಸರ್ಕಾರ ಅಧಿಸೂಚನೆ ಹೊರಡಿಸಿದೆ ಎಂಬುವುದು ಅಧಿಸೂಚನೆಯಲ್ಲಿ ಉಲ್ಲೇಖವಾಗಿಲ್ಲ” ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, “ಅಧಿಸೂಚನೆ ಹೊರಡಿಸುವಾಗ ರಾಜ್ಯ ಸರ್ಕಾರವು ಸಂಬಂಧಿತ ಸಂಸ್ಥೆಗಳ ಜೊತೆ ಸಭೆ ನಡೆಸಿದೆಯೇ? ಅವುಗಳಿಂದ ಆಕ್ಷೇಪಣೆ ಸ್ವೀಕರಿಸಿದೆಯೇ?” ಎಂದು ಪ್ರಶ್ನಿಸಿತು. ಇದಕ್ಕೆ ಪ್ರಶಾಂತ್ ಅವರು ‘ಇಲ್ಲ’ ಎಂದು ಉತ್ತರಿಸಿದರು.
ಈ ನಡುವೆ, ಬೇರೆ ಯಾವುದೇ ವಕೀಲರಿಗೆ ವಾದ ಮಂಡಿಸಲು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ ಪೀಠ, ಸರ್ಕಾರದ ಅಧಿಸೂಚನೆಗೆ ತಡೆ ನೀಡಿ, ವಿಚಾರಣೆಯನ್ನು ಮುಂದೂಡಿತು.
ಕೇರಳ, ಒಡಿಶಾ, ಬಿಹಾರ ಮತ್ತು ಸಿಕ್ಕಿಂ ರಾಜ್ಯಗಳ ಇರುವಂತೆ ಮಹಿಳಾ ಉದ್ಯೋಗಿಗಳಿಗೆ ವೇತನ ಸಹಿತ ಮುಟ್ಟಿನ ರಜೆ ನೀಡುವ ಆದೇಶಕ್ಕೆ 2025ರ ಅಕ್ಟೋಬರ್ 9ರಂದು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ನವೆಂಬರ್ 12ರಂದು ರಾಜ್ಯ ಸರ್ಕಾರ ಈ ಕುರಿತು ಅಧಿಸೂಚನೆ ಹೊರಡಿಸಿದೆ.
ಸರ್ಕಾರವು ಪಾಲುದಾರರಿಂದ ಅಭಿಪ್ರಾಯಗಳನ್ನು ಕೇಳುವ ಯಾವುದೇ ಸೂಚನೆಯನ್ನು ನೀಡಿಲ್ಲವಾದ್ದರಿಂದ, ಅಧಿಸೂಚನೆಯು ನೈಸರ್ಗಿಕ ನ್ಯಾಯಕ್ಕೆ ವಿರುದ್ಧವಾಗಿದೆ ಎಂದು ಹೋಟೆಲ್ ಸಂಘವು ಹೈಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ಹೇಳಿದೆ. ಈ ಕಾನೂನುಗಳು (ಮೇಲೆ ಉಲ್ಲೇಖಿಸಿದ ವಿವಿಧ ಕಾಯ್ದೆಗಳು) ಸರ್ಕಾರ ಈ ರೀತಿ ರಜೆಯನ್ನು (ಮುಟ್ಟಿನ ರಜೆ) ಕಡ್ಡಾಯಗೊಳಿಸುವ ಆದೇಶವನ್ನು ಹೊರಡಿಸಲು ಅನುವು ಮಾಡಿಕೊಡುವ ನಿಬಂಧನೆಗಳನ್ನು ಹೊಂದಿಲ್ಲ. ಆದ್ದರಿಂದ ಸರ್ಕಾರ ಅಂತಹ ಕಾರ್ಯಕಾರಿ ಆದೇಶವನ್ನು ಹೊರಡಿಸಲು ಸಾಧ್ಯವಿಲ್ಲ ಎಂದು ವಾದಿಸಿದೆ.
ಈ ರೀತಿಯ ರಜೆ ನೀಡುವುದು ಉದ್ಯೋಗದಾತರ ಸ್ವತಂತ್ರ ಅಧಿಕಾರಕ್ಕೆ ಸಂಬಂಧಿಸಿದೆ. ಇದನ್ನು ಸಂಸ್ಥೆಗಳ ಮಾನವ ಸಂಪನ್ಮೂಲ ವಿಭಾಗ (ಹೆಚ್‌ಆರ್) ನಿರ್ಧರಿಸುತ್ತದೆ. ಹಾಗಾಗಿ, ಸರ್ಕಾರ ಇಂತಹ ಆಡಳಿತಾತ್ಮಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ಅಲ್ಲದೆ, ಮಹಿಳೆಯರಿಗೆ ಅತ್ಯಧಿಕ ಉದ್ಯೋಗ ನೀಡುವ ಸರ್ಕಾರವೇ ತನ್ನ ಉದ್ಯೋಗಿಗಳಿಗೆ ಮಾಸಿಕ ಮುಟ್ಟಿನ ರಜೆಗಳನ್ನು ನೀಡಿಲ್ಲ. ಹೀಗಿರುವಾಗ, ಸರ್ಕಾರದ ಅಧಿಸೂಚನೆ ತಾರತಮ್ಯದಿಂದ ಕೂಡಿದೆ ಮತ್ತು ಮನಬಂದಂತೆ ಹೊರಡಿಸಿದಂತೆ ಕಾಣುತ್ತಿದೆ ಎಂದು ಹೋಟೆಲ್ ಸಂಘ ಹೇಳಿದೆ.


