ಠಾಣೆಗೆ ನುಗ್ಗಿ ಪೊಲೀಸರಿಗೆ ಬೆದರಿಕೆ ಹಾಕಿದ್ದಲ್ಲದೆ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿಯ ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರನ್ನು ಶುಕ್ರವಾರ (ಮೇ 31) ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಪೊಲೀಸರಿಗೆ ಬೆದರಿಕೆ ಹಾಕಿದ ಸಂಬಂಧ ತಮ್ಮ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಹರೀಶ್ ಪೂಂಜಾ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ಏಕಸದಸ್ಯ ಪೀಠ, ಪೂಂಜಾ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಪೂಂಜಾ ಪರ ವಾದ ಮಂಡಿಸಿದ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರು “ಪಕ್ಷದ ಕಾರ್ಯಕರ್ತ ಶಶಿರಾಜ್ ಶೆಟ್ಟಿ ವಿರುದ್ಧ ಎಫ್‌ಐಆರ್ ದಾಖಲಿಸದೇ ಬೆಳ್ತಂಗಡಿ ಪೊಲೀಸರು ಕರೆದೊಯ್ದಿದ್ದರು. ಶಶಿರಾಜ್ ಪತ್ನಿಯ ಕೋರಿಕೆ ಮೇರೆಗೆ ಮೇ 19ರ ರಾತ್ರಿ ಪೂಂಜಾ ಪೊಲೀಸ್ ಠಾಣೆಗೆ ಹೋಗಿದ್ದರು. ಯಾವ ಆಧಾರದ ಮೇಲೆ ಶಶಿರಾಜ್ ಅವರನ್ನು ಬಂಧಿಸಿದ್ದೀರಿ? ಎಫ್‌ಐಆರ್ ಹಾಕಿದ್ದೀರಾ? ಎಂದು ಕೇಳಿದ್ದರು. ಈ ಸಂದರ್ಭದಲ್ಲಿ ಸೂಕ್ತ ಪ್ರತಿಕ್ರಿಯೆ ಬಾರದ ಹಿನ್ನೆಲೆ ಪೂಂಜಾ ಏರುಧ್ವನಿಯಲ್ಲಿ ಮಾತನಾಡಿರಬಹುದು. ಇದಕ್ಕಾಗಿ, ಪೂಂಜಾ ವಿರುದ್ಧ ಐಪಿಸಿ ಸೆಕ್ಷನ್ 353 ಮತ್ತು 504ರ ಅಡಿ ಪ್ರಕರಣ ದಾಖಲಿಸಲಾಗಿದೆ” ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, “ಶಾಸಕ, ಸಚಿವರು ಪೊಲೀಸ್ ಠಾಣೆಗೆ ಹೋದರೆ ಪೊಲೀಸರು ಹೇಗೆ ಕೆಲಸ ಮಾಡಬೇಕು?” ಎಂದು ಪ್ರಶ್ನಿಸಿದೆ.
ಈ ವೇಳೆ ಪ್ರತಿಕ್ರಿಯಿಸಿದ ನಾವದಗಿ ಅವರು “ಗ್ರಾಮೀಣ ಪ್ರದೇಶದಲ್ಲಿ ಎಫ್‌ಐಆರ್ ದಾಖಲಿಸದೇ ಯಾರನ್ನಾದರೂ ಪೊಲೀಸರು ವಶಕ್ಕೆ ಪಡೆದರೆ ಮೊದಲು ಶಾಸಕರನ್ನು ಸಂಪರ್ಕಿಸಲಾಗುತ್ತದೆ. ಕಾನೂನು ಬಾಹಿರವಾಗಿ ತನ್ನ ಕ್ಷೇತ್ರದಲ್ಲಿ ಏನಾದರೂ ನಡೆದರೆ ಅದನ್ನು ಪರಿಶೀಲಿಸಲು ಶಾಸಕರು ಮುಕ್ತರಾಗಿರುತ್ತಾರೆ. ಅದರಲ್ಲೂ ಎಫ್‌ಐಆರ್ ದಾಖಲಾಗದೇ ಯಾರನ್ನಾದರೂ ಪೊಲೀಸರು ಕರೆದೊಯ್ದರೆ ಅದನ್ನು ಅವರು ಪರಿಶೀಲಿಸಬಹುದು” ಎಂದಿದ್ದಾರೆ.
ಆಗ ಪೀಠವು “ಎಫ್‌ಐಆರ್ ಆದ ತಕ್ಷಣ ಶಾಸಕರು ಠಾಣೆಯಲ್ಲಿ ಹೋಗಿ ಕುಳಿತರೆ ಪೊಲೀಸ್ ಅಧಿಕಾರಿ ಹೇಗೆ ಕೆಲಸ ಮಾಡಬೇಕು? ಇಂಥ ಸಂದರ್ಭದಲ್ಲಿ ಶಾಸಕರು ಪೊಲೀಸ್ ಠಾಣೆಗೆ ಹೋಗಬಹುದು ಎಂಬ ಸಂಬಂಧದ ಒಂದೇ ಒಂದು ಐತಿಹ್ಯ ಹೊಂದಿರುವ ತೀರ್ಪು ತೋರಿಸಿ” ಎಂದಿದೆ.
“ನಾಳೆ ಪೊಲೀಸರು ಭಯೋತ್ಪಾದಕನೊಬ್ಬನನ್ನು ಬಂಧಿಸುತ್ತಾರೆ. ಒಬ್ಬ ಮಹಿಳೆ ಬಂದು ನನ್ನ ಗಂಡನನ್ನು ಬಂಧಿಸಿದ್ದಾರೆ ಠಾಣೆಗೆ ಹೋಗೋಣ ಬನ್ನಿ ಎಂದರೆ ಹೋಗುತ್ತೀರಾ?” ಎಂದು ಖಾರವಾಗಿ ಪ್ರಶ್ನಿಸಿದೆ.
“ನಿಮಗೆ ಸಮಸ್ಯೆಯಾದರೆ ಪರಿಹಾರಕ್ಕೆ ಮಾನವ ಹಕ್ಕುಗಳ ಆಯೋಗ ಇದೆ. ಅಲ್ಲಿಗೆ ಮನವಿ ನೀಡಬಹುದು. ನೀವ್ಯಾರು (ಪೂಂಜಾ) ಠಾಣೆಗೆ ಹೋಗಲು? ಶಶಿರಾಜ್ ಬಂಧನ ಅಕ್ರಮವಾಗಿದ್ದರೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಬೇಕಿತ್ತು” ಎಂದು ಕಿಡಿಕಾರಿದೆ.
ವಿಚಾರಣೆಯ ವೇಳೆ ನಾವದಗಿ ಅವರು “ಪೊಲೀಸರೇ ದೂರು ಕೊಟ್ಟು ಅವರೇ ತನಿಖೆ ನಡೆಸುತ್ತಿದ್ದಾರೆ. ಪೂಂಜಾ ಪೊಲೀಸರ ಬಗ್ಗೆ ಏನೋ ಅಂದಿದ್ದಾರೆ ಎಂಬುವುದು ಆರೋಪ. ಅದನ್ನು ಅವರೇ ತನಿಖೆ ನಡೆಸುತ್ತಿದ್ದಾರೆ. ಸಬ್ ಇನ್‌ಸ್ಪೆಕ್ಟರ್ ದೂರು ನೀಡಿದ್ದಾರೆ. ಅವರೇ ದೂರು ನೀಡಿ ಅವರೇ ತನಿಖೆ ನಡೆಸಲಾಗದು” ಎಂದು ಹೇಳಿದ್ದಾರೆ.
ನಾವದಗಿ ವಾದಕ್ಕೆ ಆಕ್ಷೇಪಿಸಿದ ಹೆಚ್ಚುವರಿ ಸರ್ಕಾರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಅವರು “ಪೊಲೀಸರ ನಿಂದನೆ ಪ್ರಕರಣವನ್ನು ಪುತ್ತೂರು ಠಾಣೆಯ ಸರ್ಕಲ್ ಇನ್‌ಸ್ಪೆಕ್ಟರ್ ತನಿಖೆ ನಡೆಸಿ, ಸಂಬಂಧಿತ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ನ್ಯಾಯಾಲಯ ಸಂಜ್ಞೇ ಪರಿಗಣಿಸಿದೆ” ಎಂದು ಪೀಠಕ್ಕೆ ವಿವರಿಸಿದ್ದಾರೆ.
ಅಂತಿಮವಾಗಿ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ ನ್ಯಾಯಾಲಯವು ಆಕ್ಷೇಪಣೆ ಸಲ್ಲಿಸಲು ಸೂಚಿಸಿ, ವಿಚಾರಣೆಯನ್ನು ಮುಂದಿನ ಶುಕ್ರವಾರಕ್ಕೆ ಮುಂದೂಡಿದೆ. ಈ ನಡುವೆ, ಪೂಂಜಾ ವಿರುದ್ಧ ಯಾವುದೇ ಕ್ರಮಕೈಗೊಳ್ಳದಂತೆ ಸಾವಧಾನದಿಂದ ಇರಬೇಕು ಎಂದು ರಾಜ್ಯ ಸರ್ಕಾರಕ್ಕೆ ಮೌಖಿಕವಾಗಿ ಆದೇಶಿಸಿದೆ.
ಇದನ್ನೂ ಓದಿ : ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನದಿಂದ ಶಾಂತ್ ತಿಮ್ಮಯ್ಯ ವಜಾ


