ಮೊನ್ನೆ ಡಿಸೆಂಬರ್ 16 ರಂದು ಮಾಜಿ ಮುಖ್ಯಮಂತ್ರಿ ಜೆಡಿಎಸ್ ನಾಯಕ ಎಚ್.ಡಿ ಕುಮಾರಸ್ವಾಮಿಯವರು ತಮ್ಮ 62 ನೇ ಜನ್ಮದಿನವನ್ನು ಸರಳವಾಗಿ ಆಚರಿಸಿಕೊಂಡರು. ಸಾಮಾನ್ಯವಾಗಿ ಗಣ್ಯ ವ್ಯಕ್ತಿಗಳ ಹುಟ್ಟುಹಬ್ಬವಿದ್ದಾಗ ಪಕ್ಷಬೇಧ ಮರೆತು ಎಲ್ಲರೂ ಅಭಿನಂದನೆ ಸಲ್ಲಿಸುವುದು ವಾಡಿಕೆ. ಆದರೆ ಈ ಬಾರಿಯ ಕುಮಾರಸ್ವಾಮಿಯವರ ಜನ್ಮದಿನಕ್ಕೆ ಯಾರು ಯಾರು ಅಭಿನಂದನೆ ಸಲ್ಲಿಸಿದರು ಮತ್ತು ಯಾರು ಯಾರು ಅಭಿನಂದನೆ ಹೇಳಲಿಲ್ಲ ಎನ್ನುವುದನ್ನು ಗಮನಿಸಿದರೆ ವಾಡಿಕೆ ಮೀರಿ ಮತ್ತೇನೂ ನಡೆಯುತ್ತಿದೆ ಅನಿಸದೇ ಇರಲಾರದು.
ಈ ಬಾರಿಯ ಕುಮಾರಸ್ವಾಮಿಯವರ ಜನ್ಮದಿನಕ್ಕೆ ಕಾಂಗ್ರೆಸ್ ನಾಯಕರ್ಯಾರೂ ಅಭಿನಂದನೆ ಸಲ್ಲಿಸಿಲ್ಲ. ಜೆಡಿಎಸ್‌ನ ಕೆಲವರು ಮಾತ್ರ ಅಭಿನಂದಿಸಿದರೆ ಬಿಜೆಪಿ ವತಿಯಿಂದ ಪ್ರಧಾನಿ ನರೇಂದ್ರ ಮೋದಿಯಿಂದ ಹಿಡಿದು ರಾಜ್ಯದ ಬಹುತೇಕ ಸಚಿವರು, ಶಾಸಕರು ಮತ್ತು ಸಂಸದರು ಅಭಿನಂದನೆ ಸಲ್ಲಿಸಿದ್ದಾರೆ. ಅಷ್ಟು ಮಾತ್ರವಲ್ಲದೆ, ಹೊರರಾಜ್ಯದ ಬಿಜೆಪಿ ಸಂಸದರು, ಬಿಜೆಪಿ ನಾಯಕರು ಸಹ ಮೊದಲ ಬಾರಿಗೆ ಕುಮಾರಸ್ವಾಮಿಯವರಿಗೆ ಅಭಿನಂದನೆ ಸಲ್ಲಿಸಿದ್ದಾರೆ ಎಂದರೆ ಏನರ್ಥ? ಸರಿ ಯಾರು ಯಾರು ಅಭಿನಂದಿಸಿದ್ದಾರೆ ಮೊದಲು ನೋಡಿ ಬಿಡೋಣ.
Thank you for your wishes Hon'ble Prime Minister Shri. @narendramodi avare. https://t.co/ic5QCoTq3f
— H D Kumaraswamy (@hd_kumaraswamy) December 16, 2020
ಬಿಜೆಪಿ ಪಕ್ಷವು 2018ರ ಮೇ ತಿಂಗಳಿನಿಂದ 2020ರ ಅಕ್ಟೋಬರ್‌ವರೆಗೂ ಕುಮಾರಸ್ವಾಮಿಯವರನ್ನು ಟೀಕಿಸುತ್ತಲೆ ಇದೆ. ಹಲವು ವಿಚಾರಗಳಿಗೆ ಟ್ರೋಲ್ ಮಾಡುತ್ತಲೆ ಇದೆ. ಅದೇ ಬಿಜೆಪಿ ಪಕ್ಷದ ವತಿಯಿಂದ ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿಗಳಾದ ಸದಾನಂದ ಗೌಡ, ಜಗದೀಶ್ ಶೆಟ್ಟರ್, ಉಪಮುಖ್ಯಮಂತ್ರಿಗಳಾದ ಡಾ.ಅಶ್ವಥ್ ನಾರಾಯಣ್, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ರಾಜ್ಯ ಸಚಿವರಾದ ಡಾ.ಕೆ ಸುಧಾಕರ್, ಬಿ.ಶ್ರೀರಾಮುಲು, ಬಸವರಾಜ ಬೊಮ್ಮಾಯಿ, ಸಿ.ಟಿ ರವಿ ಟ್ವೀಟ್ ಮೂಲಕ ಶುಭ ಹಾರೈಸಿದ್ದಾರೆ. ನಂತರ ಸಂಸದರಾದ ಪ್ರತಾಪ್ ಸಿಂಹ, ಶೋಭಾ ಕರಂದ್ಲಾಚೆ, ಪಿ.ಸಿ ಮೋಹನ್, ಬಿ.ವೈ ರಾಘವೇಂದ್ರ, ಶಶಿಕಲಾ ಜೊಲ್ಲೆ ಅಭಿನಂದನೆ ತಿಳಿಸಿದ್ದಾರೆ.


ವಿಶೇಷವೆಂದರೆ ರಾಜಸ್ಥಾನದ ರಾಜ್‌ಸಮಂದ್‌ನ ಬಿಜೆಪಿ ಸಂಸದರಾದ ದಿಯಾ ಕುಮಾರಿ, ಹರಿಯಾಣದ ಬಿಜೆಪಿ ಸಂಸದ ಸಂಜಯ್ ಭಾಟಿಯಾ ಮತ್ತು ಮಹಾರಾಷ್ಟ್ರದ ಬಿಜೆಪಿ ರಾಜ್ಯಸಭಾ ಸದಸ್ಯ ಸುರೇಶ್ ಪ್ರಭುರವರು ಸಹ ಕರ್ನಾಟಕ ಮಾಜಿ ಸಿಎಂಗೆ ಟ್ವೀಟ್ ಮೂಲಕ ಶುಭ ಹಾರೈಸಿರುವುದು ಅಚ್ಚರಿ ಮೂಡಿಸಿದೆ.

ಇನ್ನು ಜೆಡಿಎಸ್ ವತಿಯಿಂದ ಎಚ್.ಡಿ ರೇವಣ್ಣ, ಸಿ.ಎಸ್ ಪುಟ್ಟರಾಜು, ಬಂಡೆಪ್ಪ ಕಾಶೆಂಪೂರ್, ಪ್ರಜ್ವಲ್ ರೇವಣ್ಣ, ನಿಖಿಲ್ ಕುಮಾರಸ್ವಾಮಿ, ಸಾ.ರ ಮಹೇಶ್, ವೈಎಸ್‌ವಿ ದತ್ತ, ಡಿ.ಸಿ ಗೌರಿಶಂಕರ್, ಆರ್ ಮಂಜುನಾಥ್ ಟ್ವೀಟ್ ಮೂಲಕ ಶುಭಹಾರೈಸಿದ್ದಾರೆ. ಆದರೆ ಒಂದು ವರ್ಷ ಜೆಡಿಎಸ್ ಜೊತೆ ಮೈತ್ರಿ ಸರ್ಕಾರ ನಡೆಸಿದ್ದ ಕಾಂಗ್ರೆಸ್‌ನ ಯಾವೊಬ್ಬ ಮುಖಂಡರು ಟ್ವೀಟ್ ಮೂಲಕ ಶುಭಾಶಯ ತಿಳಿಸಿಲ್ಲ.
ಇನ್ನು ತಮಗೆ ಹುಟ್ಟು ಹಬ್ಬದ ಶುಭಾಶಯ ಕೋರಿದವರಿಗೆ ಧನ್ಯವಾದ ತಿಳಿಸುತ್ತಾ ಕುಮಾರಸ್ವಾಮಿಯವರು “ತತ್ವ-ಸಿದ್ಧಾಂತಗಳೆಂಬುದು ಕ್ಲಿಷೆಯ ಮಾತಾಗಿರುವ ಈ ದಿನಗಳಲ್ಲಿ ನಾಡಿನ ಜನರ ಒಳಿತಿಗಾಗಿ ದುಡಿವುದಷ್ಟೆ ಒಂದು ಸಿದ್ಧಾಂತವಾಗಬೇಕು” ಎಂಬ ಮಾತುಗಳನ್ನಾಡಿದ್ದಾರೆ. ತಮ್ಮ ಪಕ್ಷ ಜಾತ್ಯಾತೀತ ಜನತಾದಳವೆಂದೂ, ತಾವು ರೈತಪರವೆಂದು ಘೋಷಿಸಿಕೊಂಡಿದ್ದ ಕುಮಾರಸ್ವಾಮಿಯವರು ನಿಧಾನವಾಗಿ ತಮ್ಮ ಸಿದ್ದಾಂತದ ಅರ್ಥವನ್ನು ಬದಲಿಸುತ್ತಿದ್ದಾರೆಯೇ ಎಂಬ ಪ್ರಶ್ನೆ ಎದ್ದಿದೆ.
ತನ್ನನ್ನು ಸಿಎಂ ಕುರ್ಚಿಯಿಂದ ಇಳಿಸಿದ ಬಿಜೆಪಿ ಬಗ್ಗೆ ಕುಮಾರಸ್ವಾಮಿಯವರಿಗೆ ಸಿಟ್ಟಿಲ್ಲ. ಕಳೆದ ಆರು ತಿಂಗಳುಗಳಿಂದ ಕುಮಾರಸ್ವಾಮಿಯವರು ಬಿಜೆಪಿ ಜೊತೆ ಸಖ್ಯವನ್ನು, ಅದೇ ಸಮಯದಲ್ಲಿ ಕಾಂಗ್ರೆಸ್ ವಿರುದ್ಧ ಟೀಕೆಯನ್ನು ಮುಂದುವರೆಸಿದ್ದಾರೆ. ನೇರವಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರನ್ನು ಪ್ರತಿದಿನ ಟೀಕಿಸುತ್ತಿದ್ದಾರೆ. ತಾನು ಸಿಎಂ ಸ್ಥಾನದಿಂದ ಕೆಳಗಿಳಿಯಲು ಸಿದ್ದರಾಮಯ್ಯ ಕಾರಣ ಎಂದು ಇಂದೂ ಸಹ ಆರೋಪಿಸಿದ್ದಾರೆ.
ಎಲ್ಲಕ್ಕಿಂತ ಮುಖ್ಯವಾಗಿ ತಮ್ಮ ಹುಟ್ಟು ಹಬ್ಬಕ್ಕೂ ಒಂದು ವಾರ ಮುಂಚಿತವಾಗಿ ಡಿಸೆಂಬರ್ 08 ರಂದು ರಾಜ್ಯ ವಿಧಾನ ಮಂಡಲದ ವಿಧಾನ ಪರಿಷತ್‌ನಲ್ಲಿ ಬಿಜೆಪಿಯು ಕರ್ನಾಟಕ ಭೂಸುಧಾರಣೆ ತಿದ್ದುಪಡಿ ವಿಧೇಯಕ 2020 ಅನ್ನು ಮಂಡಿಸಿತು. ರೈತರ ಪಕ್ಷ ಎಂದು ಹೇಳಿಕೊಳ್ಳುವ ಜೆಡಿಎಸ್ ಮೂರು ತಿಂಗಳ ಹಿಂದೆ ತಾನೇ ಅದನ್ನು ವೀರಾವೇಷದಿಂದ ವಿರೋಧಿಸಿತ್ತು. ಆದರೆ ಡಿಸೆಂಬರ್ 08 ರಂದು ಮಾತ್ರ ಸದ್ದಿಲ್ಲದೆ ಭೂಸುಧಾರಣೆ ವಿಧೇಯಕದ ಪರವಾಗಿ ಮತಹಾಕಿ ಪರಿಷತ್‌ನಲ್ಲಿ ಅದು ಅಂಗೀಕಾರವಾಗಲು ಕಾರಣವಾಯಿತು! ಆ ಮೂಲಕ ಬಿಜೆಪಿಯೊಂದಿಗೆ ಬಹಿರಂಗ ದೋಸ್ತಿ ಘೋಷಿಸಿತು.
ಅದಾದ ಒಂದು ವಾರದ ನಂತರ ಒಂದು ದಿನದ ವಿಧಾನಪರಿಷತ್ ಅಧಿವೇಶನ ಕರೆಯಲಾಯಿತು. ಗೋಹತ್ಯೆ ನಿಷೇಧ ಮಸೂದೆಗೆ ಅಂಗೀಕಾರ ಮತ್ತು ಸಭಾಪತಿ ವಿರುದ್ದ ಅವಿಶ್ವಾಸ ನಿರ್ಣಯ ಮಂಡಿಸಲು ಆಡಳಿತರೂಢ ಬಿಜೆಪಿ ಪಕ್ಷ ಎಣಿಸಿತ್ತು. ಆಗ ಸಭಾಪತಿ ಪ್ರತಾಪ್ ಚಂದ್ರಶೆಟ್ಟಿಯವರನ್ನು ಪದಚ್ಯುತಿಗೊಳಿಸಲು ಕುಮಾರಸ್ವಾಮಿಯವರು ಬಿಜೆಪಿಗೆ ಬೇಷರತ್ ಬೆಂಬಲ ನೀಡಿದರು. ಸಭಾಪತಿಗಳಾದ ಪ್ರತಾಪ್ ಚಂದ್ರಶೆಟ್ಟಿಯವರು ಆಸೀನರಾಗುವ ಮೊದಲೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಒಟ್ಟುಸೇರಿ ಉಪಸಭಾಪತಿ ಧರ್ಮೇಗೌಡ ಅವರನ್ನು ಕುಳ್ಳಿರಿಸಿ ಭಾರೀ ಗದ್ದಲ ನಡೆಯಲು ಕಾರಣರಾದರು!
ಇನ್ನು ಕರ್ನಾಟಕದಲ್ಲಿ ದಿನೇ ದಿನೇ ಜೆಡಿಎಸ್ ಬಲ ಕುಗ್ಗುತ್ತಿರುವುದರಿಂದ ಕುಮಾರಸ್ವಾಮಿಯವರು ಬಿಜೆಪಿಯಲ್ಲಿ ತಮ್ಮ ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಅದಕ್ಕೆ ಅನುಗುಣವಾಗಿಯೇ ಕುಮಾರಸ್ವಾಮಿಯವರು ಬಿಜೆಪಿಯವರೊಡನೆ ಸೌಮ್ಯವಾಗಿಯೂ, ಕಾಂಗ್ರೆಸ್‌ನವರೊಡನೆ ಉಗ್ರವಾಗಿಯೂ ನಡೆದುಕೊಳ್ಳುತ್ತಿದ್ದಾರೆ. ಅದಕ್ಕೆ ಪುಷ್ಠಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಆದಿಯಾಗಿ ಬಿಜೆಪಿಯ ರಾಜ್ಯದ ಎಲ್ಲಾ ಮುಖಂಡರು, ಹೊರರಾಜ್ಯದ ಸಂಸದರು, ಮುಖಂಡರು ಸಹ ಕುಮಾರಸ್ವಾಮಿಯವರ ಜನ್ಮದಿನಕ್ಕೆ ಶುಭಾಶಯ ಕೋರಿ ಪಕ್ಷಕ್ಕೆ ಬರಮಾಡಿಕೊಳ್ಳಲು ಸಿದ್ದರಾಗಿದ್ದಾರೆ.
ಅಚ್ಚರಿಯ ಮತ್ತು ನೀವು ನಂಬಲೇಬೇಕಾದ ಮತ್ತೊಂದು ಅಂಶವೆಂದರೆ ಕುಮಾರಸ್ವಾಮಿಯವರ ಜನ್ಮದಿನದ ಎರಡು ದಿನದ ನಂತರ ಅಂದರೆ ಡಿಸೆಂಬರ್ 17ರಂದು ಬಿಜೆಪಿ ಮುಖಂಡ ಮತ್ತು ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್ ಸಹ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು. ಆದರೆ ಕುಮಾರಸ್ವಾಮಿಯವರಿಗೆ ವಿಶ್ ಮಾಡಿದ್ದ ಬಿಜೆಪಿಯ ನರೇಂದ್ರ ಮೋದಿ ಆದಿಯಾಗಿ ಸುರೇಶ್ ಪ್ರಭು, ದಿಯಾ ಕುಮಾರಿ, ಸಂಜಯ್ ಭಾಟಿಯಾ ಸೇರಿ ಬಹುತೇಕರು ತಮ್ಮದೇ ಪಕ್ಷದ ಮುಖಂಡರಾದ ಜಗದೀಶ್ ಶೆಟ್ಟರ್‌ರವರಿಗೆ ಜನ್ಮದಿನದ ಶುಭಾಶಯ ತಿಳಿಸಲಿಲ್ಲ ಏಕೆ? ಈ ಪ್ರಶ್ನೆಗೆ ಉತ್ತರ ಸ್ಪಷ್ಟ. ಬಿಜೆಪಿಯು ಕುಮಾರಸ್ವಾಮಿಯವರನ್ನು ಸೆಳೆದುಕೊಳ್ಳಲು ಪ್ರಯತ್ನಿಸುತ್ತಿದೆ. ಹಾಗಾಗಿ ಅವರ ಪಕ್ಷದ ನಿರ್ಣಯದಂತೆ ಕುಮಾರಸ್ವಾಮಿಯವರಿಗೆ ವಿಶ್ ಮಾಡಿ ಸಂಬಂಧ ವೃದ್ದಿಸಿಕೊಳ್ಳಲು ನೋಡುತ್ತಿದೆ. ಕುಮಾರಸ್ವಾಮಿಯವರಿಗೂ ಅದೇ ಬೇಕಿತ್ತು ಎನ್ನುವಂತೆ ವರ್ತಿಸುತ್ತಿದ್ದಾರೆ ಅಷ್ಟೇ.
ಇನ್ನು ರೈತ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಸಾರಿಗೆ ನೌಕರರು ಬಸ್ ಸೇವೆ ನಿಲ್ಲಿಸಿ ಹೋರಾಟ ಆರಂಭಿಸಿದ್ದರು. ಅದೇ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮಸೂದೆಯ ಪರವಾಗಿ ವಿಧಾನ ಪರಿಷತ್ತಿನಲ್ಲಿ ಮತ ಹಾಕಿದ ಜೆಡಿಎಸ್ ವಿರುದ್ಧ ಕೆಂಡಾಮಂಡಲವಾಗಿದ್ದರು. “ಕುಮಾರಸ್ವಾಮಿ ಇರೋದೇ ಪುಟಗೋಸಿ ರಾಜಕಾರಣ ಮಾಡಲು” ಎಂದು ಕೋಡಿಹಳ್ಳಿ ಆಕ್ರೋಶ ಹೊರಹಾಕಿದ್ದರು. ಆಗ ಸಿಎಂ ಬಿ.ಎಸ್ ಯಡಿಯೂರಪ್ಪನವರು ತಮ್ಮ ಪ್ರಕಟಣೆಯಲ್ಲಿ “ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ ಕುಮಾರಸ್ವಾಮಿಯವರ ಬಗ್ಗೆ ಕೋಡಿಹಳ್ಳಿ ಚಂದ್ರಶೇಖರ್‌ರವರು ಲಘುವಾಗಿ ಮಾತನಾಡಿರುವುದು ಖಂಡನೀಯ” ಎಂದು ಬರೆದು ಎಚ್‌ಡಿಕೆ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದರು.

ಒಟ್ಟಿನಲ್ಲಿ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಮೈತ್ರಿಗೆ ಕಾಲ ಕೂಡಿಬರುತ್ತಿದೆಯೇ? ಅಥವಾ ಕುಮಾರಸ್ವಾಮಿಯವರೆ ಬಿಜೆಪಿಯತ್ತ ನಡೆಯುತ್ತಿದ್ದಾರೆಯೇ? ಈ ಪ್ರಶ್ನೆಗಳಿಗೆ ಕಾಲವೇ ಉತ್ತರಿಸಲಿದೆ.
ಇದನ್ನೂ ಓದಿ: ವಿಸ್ಟ್ರಾನ್ ಬಿಕ್ಕಟ್ಟು – ಕಾರ್ಮಿಕರ ಬಳಿ ಕ್ಷಮೆಯಾಚಿಸಿದ ಕಂಪೆನಿ; ಉಪಾಧ್ಯಕ್ಷನ ವಜಾ!


