ಅನರ್ಹ ಶಾಸಕರು ಕುರಿತು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಬಗ್ಗೆ ಮಾತನಾಡಲು ಪತ್ರಿಕಾಗೋಷ್ಠಿ ನಡೆಸಿದ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ, ಸುಪ್ರೀಂ ಕೋರ್ಟಿನ ತೀರ್ಪನ್ನು ಸ್ವಾಗತಿಸುತ್ತಲೇ ತಮ್ಮ ಪಕ್ಷದ ಜಿ.ಟಿ ದೇವೇಗೌಡರ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಪತ್ರಕರ್ತರೊಬ್ಬರು ಜಿ.ಟಿ ದೇವೇಗೌಡರು ಜೆಡಿಎಸ್ ಬಿಟ್ಟು ಬಿಜಪಿ ಸೇರುವ ಮೂಲಕ ನಿಮಗೆ ಶಾಕ್ ನೀಡುತ್ತಿದ್ದಾರಲ್ಲ ಸರ್ ಎಂಬ ಪ್ರಶ್ನೆಗೆ “ಜಿ.ಟಿ ದೇವೇಗೌಡರಿಗೆ ’ಫ್ಯೂಸ್’ ಇಲ್ಲ, ಇನ್ನು ಶಾಕ್ ಎಲ್ಲಿ ಕೊಡುತ್ತಾರೆ? ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಇನ್ನು ತಮ್ಮ ಪಕ್ಷ ಜೆಡಿಎಸ್ 14 ಕ್ಷೇತ್ರಗಳಲ್ಲಿ ಮಾತ್ರ ಅಭ್ಯರ್ಥಿಗಳನ್ನು ಈ ಉಪಚುನಾವಣೆಗೆ ಕಣಕ್ಕಿಳಿಸಲಿದೆ. ಹೊಸಕೋಟೆ ಕ್ಷೇತ್ರದಲ್ಲಿ ಮಾತ್ರ ಸ್ವತಂತ್ರ ಅಭ್ಯರ್ಥಿ ಶರತ್ ಬಚ್ಚೇಗೌಡರಿಗೆ ಬೆಂಬಲ ನೀಡುತ್ತೇವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಅದಾದ ಸ್ವಲ್ಪ ಸಮಯದಲ್ಲಿಯೇ ಎಚ್.ಡಿ.ಕೆ ಪುತ್ರ ನಿಖಿಲ್ ಕುಮಾರಸ್ವಾಮಿ ಸಹ ಶರತ್ ಬಚ್ಚೇಗೌಡರ ಪರವಾಗಿ ಚುನಾವಣೆಯಲ್ಲಿ ಪ್ರಚಾರಾಂದೋಲನ ಮಾಡುವುದಾಗಿ ಘೋಷಿಸಿದ್ದಾರೆ. ಯೂತ್ ಐಕಾನ್ ಎಂಬ ರೀತಿಯಲ್ಲಿ ಇದನ್ನು ಬಿಂಬಿಸಲು ತಯಾರಿ ನಡೆಸಿದ್ದಾರೆ.
ಇದಕ್ಕೆ ಬಯಸದೇ ಬಂದ ಭಾಗ್ಯ ಎಂದು ಪ್ರತಿಕ್ರಿಯಿಸಿರುವ ಶರತ್ ಬಚ್ಚೇಗೌಡ ಅವರಿಬ್ಬರಿಗೂ ಥ್ಯಾಂಕ್ಸ್ ಹೇಳಿದ್ದಾರೆ.


