ನಟ ರಾಕ್ಷಸ ಖ್ಯಾತಿಯ ಧನಂಜಯ ಅವರು ಅಭಿನಯಿಸಿ, ನಿರ್ಮಾಣ ಮಾಡಿರುವ ‘ಹೆಡ್ ಬುಷ್’ ಸಿನಿಮಾದಲ್ಲಿ ‘ವೀರಗಾಸೆ ಕಲೆಗೆ ಅಪಮಾನ ಎಸಗಲಾಗಿದೆ’ ಎಂದು ಹಿಂದುತ್ವವಾದಿಗಳು ದೂರು ನೀಡಿರುವ ಬೆನ್ನಲ್ಲೇ, ಹಳೆಯ ಸಿನಿಮಾ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗತೊಡಗಿವೆ.
‘ಹೆಡ್ ಬುಷ್’ನಲ್ಲಿ ವಿವಾದ ಸೃಷ್ಟಿಸಲಾಗಿದೆ ಎನ್ನುವವರು ಈ ದೃಶ್ಯಗಳಿಗೆ ಹಿಂದೇಕೆ ಆಕ್ಷೇಪಗಳನ್ನು ವ್ಯಕ್ತಪಡಿಸಲಿಲ್ಲ. ಇಲ್ಲಿ ಯಾರು ಯಾವ ಸಿನಿಮಾವನ್ನು ಮಾಡಿದ್ದಾರೆ, ಸಿನಿಮಾ ಮಾಡಿದವರ ಸಾಮಾಜಿಕ ಹಿನ್ನೆಲೆ ಏನು ಮುಖ್ಯವಾಗುತ್ತಿದೆ ಎಂಬ ಟೀಕೆಗಳನ್ನು ಸಿನಿಮಾ ಪ್ರೇಕ್ಷಕರು ವ್ಯಕ್ತಪಡಿಸಿದ್ದಾರೆ.
‘ನಟ ಉಪೇಂದ್ರ ಅವರ ಸಿನಿಮಾಗಳಲ್ಲಿ ಹಿಂದೂ ದೇವರುಗಳಿಗೆ ಅವಹೇಳನ ಮಾಡಲಾಗಿದೆ’ ಎಂಬ ಚರ್ಚೆಯ ಜೊತೆಗೆ ಹಲವು ಸಿನಿಮಾಗಳ ದೃಶ್ಯಗಳನ್ನು ಜನರು ಹಂಚಿಕೊಳ್ಳುತ್ತಿದ್ದಾರೆ. ಡಾಲಿ ಧನಂಜಯ ಅವರು ಇತ್ತೀಚೆಗೆ ನೀಡಿದ್ದ ‘ಬಡವರ ಮಕ್ಳು ಬೆಳೀಬೇಕ್ ಕಣ್ರಯ್ಯ’ ಹೇಳಿಕೆ ವೈರಲ್ ಆಗುತ್ತಿತ್ತು, ಇದೇ ಹೇಳಿಕೆಯ ಪ್ರೊಫೈಲ್ ಫೋಟೋ ಈಗ ಟ್ರೆಂಡ್ ಆಗಿದೆ. ಆ ಮೂಲಕ ಡಾಲಿ ಧನಂಜಯ ಅವರಿಗೆ ಬೆಂಬಲ ಸೂಚಿಸುತ್ತಿದ್ದಾರೆ.
“ಮೊದಲು ಮಾನವನಾಗು” ಎಂದು ಡಾಲಿ ಧನಂಜಯ ಅವರು ಬಿಜೆಪಿ ಬೆಂಬಲಿಗ ಚಕ್ರವರ್ತಿ ಸೂಲಿಬೆಲೆಯವರಿಗೆ ಬುದ್ಧಿ ಹೇಳಿದ್ದರಿಂದ ಒಂದು ವರ್ಗದ ಜನರು ಧನಂಜಯ ವಿರುದ್ಧ ಹಗೆ ಸಾಧಿಸುತ್ತಿದ್ದಾರೆಂಬ ಪೋಸ್ಟ್‌ಗಳು ಹರಿದಾಡಿವೆ. ಅದರ ಜೊತೆಗೆ ಹಳೆಯ ಸಿನಿಮಾ ದೃಶ್ಯಗಳು ಗಮನ ಸೆಳೆಯುತ್ತಿವೆ.
“ಉಪೇಂದ್ರ ‘ಗಣೇಶ’ನಿಗೆ ಗನ್ ಹಿಡಿದಾಗ ಧರ್ಮಕ್ಕೆ ಅಪಚಾರ ಆಗಲಿಲ್ಲ. ಡೈರೆಕ್ಟರ್ ಗುರುಪ್ರಸಾದ್ ಮಠದೊಳಗೇ ಕಾವಿಧಾರಿಗಳು ಎಣ್ಣೆ ಹೊಡಿತಾರೆ ಅಂದಾಗ ಧರ್ಮಕ್ಕೆ ಅಪಚಾರ ಆಗಲಿಲ್ಲ. ಧನಂಜಯ್ ಅವರಿಂದ ಅಪಚಾರಿ ಆಗ್ಬಿಟ್ಟಿದೆ ನೋಡಿ” ಎಂಬ ಪೋಸ್ಟರ್ ವೈರಲ್ ಆಗುತ್ತಿದೆ.
“ಇದು ಹಿಂದು ಧರ್ಮಕ್ಕೆ ಮಾಡಿದ ಅವಮಾನ ಅಲ್ವಾ?” ಎಂಬ ಮತ್ತೊಂದು ದೃಶ್ಯವನ್ನು ಉಪೇಂದ್ರ ಅವರ ಸಿನಿಮಾದಿಂದ ಆಯ್ದು ಹಂಚಿಕೊಳ್ಳಲಾಗುತ್ತಿದೆ.
ತುಳಸಿಕೃಷ್ಣ ಎಂಬವರು ಹಲವು ಸಿನಿಮಾ ದೃಶ್ಯಗಳನ್ನು ಪಟ್ಟಿ ಮಾಡಿದ್ದಾರೆ.
ಬೇಡರ ಕಣ್ಣಪ್ಪ: ಅಣ್ಣಾವ್ರು ಬೇಡರ ಕಣ್ಣಪ್ಪ ಪಾತ್ರಧಾರಿಯಾಗಿ ಶಿವಲಿಂಗದ ಮೇಲೆ ಕಾಲಿಡ್ತಾರೆ.
ಉಪೇಂದ್ರ: ಉಪೇಂದ್ರರವರು ಪುರೋಹಿತರಿಗೆ ಎಣ್ಣೆ ಕುಡಿಸಿ, ಗಣೇಶನನ್ನು ನೀರಿಗೆ ಎಸೀತಾರೆ.
A: ಉಪೇಂದ್ರ, I am God, God is great ಅಂತ ತಮ್ಮನ್ನು ತಾವೇ ದೇವರು ಅಂತಾರೆ.
ಅಪ್ಪಾಜಿ: ವೀರಗಾಸೆ ವೇಷಧಾರಿಯಾಗಿ ವಿಲನ್‌ಗಳು ಗೋವಿಂದ, ಗೋವಿಂದ ಅಂತ ಕ್ಯಾಪ್ಟನ್‌ರನ್ನು ಸಾಯಿಸುತ್ತಾರೆ.
ಉಳಿದವರು ಕಂಡಂತೆ: ಹುಲಿ ವೇಷಧಾರಿಯನ್ನು ರಕ್ಷಿತ್ ಶೆಟ್ಟಿ ಹೊಡೆಯುತ್ತಾರೆ.
ಗರುಡ ಗಮನ ವೃಷಭ ವಾಹನ: ಮಾದೇವನ ಹಾಡು ಬರುವಾಗ ರಾಜ್.ಬಿ.ಶೆಟ್ಟಿ ಕೊಲೆ ಮಾಡಿ ಕುಣಿಯುತ್ತಾರೆ.
ಕಾಂತಾರ: ವಿಲನ್ ದೈವದ ಕುತ್ತಿಗೆ ಹಿಸುಕಿ ಮೇಲಕ್ಕೆ ಎತ್ತುತ್ತಾನೆ.
ಜನುಮದ ಜೋಡಿ: ಓ ಊರ ದ್ಯಾವ್ರೆ ಹಾಡು.. ದೇವರಿಗೆ, ನೀ ಎಕ್ಕುಟ್ಟೋಗ, ನಿನ್ ಮನೆ ಕಾಯ್ವೋಗ, ನಿನ್ ತಲೆ ಹೊಡೆಯ, ಹಾಳಾದೋನೆ, ನೀನ್ ನೆಗುದ್ ಬೀಳ, ನಿಂಗ್ ಉಳ ಬೀಳ.
“ಇಂತಹ ಸಾವಿರ ಉದಾಹರಣೆಗಳು ಸಿಗುತ್ತವೆ. ನೀವು ಯಾವುದೇ ಚಿತ್ರ ಹೆಸರಿಸಿ, ಅದರಲ್ಲಿ ತಪ್ಪು ಹುಡುಕಬಹುದು. ಇವೆಲ್ಲವನ್ನು ಆ ಸಂದರ್ಭಕ್ಕೆ ಆ ಪಾತ್ರದ ರಿಯಾಕ್ಷನ್ ಅಂತ ಒಪ್ಪಿಕೊಂಡಿದ್ದೇವೆ. ಈಗ ಡಾಲಿ ವೀರಗಾಸೆ ವೇಷದಲ್ಲಿರುವ ವಿಲನ್‌ಗಳನ್ನು ಹೊಡೆದರೆ, ವೀರಗಾಸೆಗೆ ಅಪಮಾನ ಮಾಡುತ್ತಿರುವವರನ್ನು ಹೊಡೆದಂತೆ ಎಂದುಕೊಳ್ಳಬಹುದಲ್ಲವೆ. ಇಲ್ಲ, ಇಲ್ಲಿ ವಿರೋಧಿಸುತ್ತಿರುವವರಿಗೆ ವೀರಗಾಸೆ ಮುಖ್ಯವಲ್ಲ, ಅದರ ಮೇಲೆ ಪ್ರೀತಿಯು ಇಲ್ಲ, ಡಾಲಿ ಮೇಲಿನ ದ್ವೇಷ ಅಷ್ಟೆ” ಎಂದು ತುಳಸಿ ಕೃಷ್ಣ ತಿಳಿಸಿದ್ದಾರೆ.
‘ಕಠಾರಿವೀರ ಸುರಸುಂದರಾಂಗ’ ಸಿನಿಮಾದ ಸಿನಿಮಾ ದೃಶ್ಯದ ಕುರಿತು ಚರ್ಚೆಯಾಗುತ್ತಿದೆ. ಉಪೇಂದ್ರ ಅವರು ಹಿಂದೂ ದೇವರುಗಳಿಗೆ ಬೂಟು ಕಾಲಲ್ಲಿ ಒದ್ದು ಫೈಟ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

‘ಉಳಿದವರು ಕಂಡಂತೆ’ ಸಿನಿಮಾದಲ್ಲಿ ‘ಹುಲಿ ವೇಷಧಾರಿ’ಗೆ ಹೊಡೆಯುವ ದೃಶ್ಯವನ್ನು ಜನರು ಹಂಚಿಕೊಳ್ಳುತ್ತಿದ್ದಾರೆ.
ಹೋರಾಟಗಾರ್ತಿ ನಜ್ಮಾ ಅವರು ಬರೆದಿರುವ ಟಿಪ್ಪಣಿಯನ್ನು ಅನೇಕರು ಶೇರ್ ಮಾಡಿದ್ದಾರೆ.
“ನಾನು ಹುಟ್ಟಿರದೆ ಆರಾಮಾಗಿರಕ್ಕೆ ಅನ್ಲಿಲ್ಲ ನಮ್ ಧನಂಜಯ,
ರಿಸ್ಕ್ ಎಷ್ಟಾದ್ರೂ ತಗೊಂಡು ಮುಂದುಕ್ ಹೋಗ್ಬೇಕು ಅಂದ;
ಕಾಸಿರೋರೆ ಜಗತ್ ಆಳ್ಬೇಕು ಅನ್ಲಿಲ್ಲ ನಮ್ ಧನಂಜಯ,
ಬಡವರ್ ಮನೆ ಮಕ್ಳು ಬೆಳೇಬೇಕು ಅಂದ,
ಜಾತಿ ಧರ್ಮ ಅಂತ ಕಿತ್ತಾಡಿ ಸಾಯ್ರಿ ಅನ್ಲಿಲ್ಲ ನಮ್ ಧನಂಜಯ,
ಏನಾದರೂ ಆಗು ಮೊದಲು ಮಾನವನಾಗು ಅಂದ,
ಕಂಡೋರ್ ಹೊಟ್ಟೆ ಮ್ಯಾಲೆ ಹೊಡೆದು ಸಂಪಾದ್ನೇ ಮಾಡು ಅನ್ಲಿಲ್ಲ ನಮ್ ಧನಂಜಯ,
ಕಷ್ಟ ಪಟ್ಟು ದುಡ್ಡು ಮುಂದೆ ಬನ್ನಿ ಅಂದ,
ಮೇಲು-ಕೀಳು, ದೊಡ್ಡೋರು-ಚಿಕ್ಕೋರು ಅನ್ಲಿಲ್ಲ ನಮ್ ಧನಂಜಯ,
ಎಲ್ರು ನಮ್ಮವ್ರು ಕಂತೆ ಒಟ್ಟಿಗೆ ನಡೀರ್ಲಾ ಅಂದ,
ಸಿನೆಮಾ ಅಂದ್ರೆ ಬರಿ ಬಣ್ಣ ಹಚ್ಚೋದಲ್ಲ ಅಂದ ನಮ್ಮ ಧನಂಜಯ,
ಸಿನ್ಮಾ ಅಂದ್ರೆ ಬದ್ಕು-ಬವಣೆ ಕನ್ರಲಾ ಅಂದ” ಎಂಬ ಸಾಲುಗಳನ್ನು ನಜ್ಮಾ ಬರೆದಿದ್ದಾರೆ.


