ಪಶ್ಚಿಮ ಬಂಗಾಳದ ಆರ್.ಜಿ. ಕರ್ ಆಸ್ಪತ್ರೆಯಲ್ಲಿ ತಮ್ಮ ಸಹೋದ್ಯೋಗಿಯ ಅತ್ಯಾಚಾರ ಮತ್ತು ಹತ್ಯೆಯನ್ನು ಪ್ರತಿಭಟಿಸಿ ಆಮರಣಾಂತ ಉಪವಾಸ ನಡೆಸುತ್ತಿರುವ ವೈದ್ಯರ ಸತ್ಯಾಗ್ರಹ 15ನೇ ದಿನಕ್ಕೆ ಕಾಲಿಟ್ಟಿದೆ. ಆದರೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರತಿಭಟನೆಯನ್ನು ಕೊನೆಗೊಳಿಸುವಂತೆ ಒತ್ತಾಯಿಸಿದ್ದು, ಅವರ ಹೆಚ್ಚಿನ ಬೇಡಿಕೆಗಳನ್ನು ಪರಿಹರಿಸಲಾಗಿದೆ ಎಂದು ಹೇಳಿದ್ದಾರೆ. ಅದಾಗ್ಯೂ, ರಾಜ್ಯದ ಆರೋಗ್ಯ ಕಾರ್ಯದರ್ಶಿಯನ್ನು ತೆಗೆದುಹಾಕುಂವಂತೆ ಒತ್ತಾಯಿಸಿದ್ದ ವೈದ್ಯರ ಬೇಡಿಕೆಯನ್ನು ತಿರಸ್ಕರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಮುಖ್ಯ ಕಾರ್ಯದರ್ಶಿ ಮನೋಜ್ ಪಂತ್ ಮತ್ತು ಗೃಹ ಕಾರ್ಯದರ್ಶಿ ನಂದಿನಿ ಚಕ್ರವರ್ತಿ ಅವರು ಎಸ್‌ಪ್ಲಾನೇಡ್‌ನಲ್ಲಿರುವ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭ ಫೋನ್‌ನಲ್ಲಿ ವೈದ್ಯರೊಂದಿಗೆ ಮಾತನಾಡಿದ ಬ್ಯಾನರ್ಜಿ, “ಪ್ರತಿಭಟನೆ ಮಾಡುವ ಹಕ್ಕು ಪ್ರತಿಯೊಬ್ಬರಿಗೂ ಇದೆ, ಆದರೆ ಇದು ಆರೋಗ್ಯ ಸೇವೆಗಳ ಮೇಲೆ ಪರಿಣಾಮ ಬೀರಬಾರದು. ನಿಮ್ಮೆಲ್ಲರ ಉಪವಾಸ ಹಿಂಪಡೆಯಲು ನಾನು ವಿನಂತಿಸುತ್ತೇನೆ” ಎಂದು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ರಾಜ್ಯ ಆರೋಗ್ಯ ಕಾರ್ಯದರ್ಶಿ ನಾರಾಯಣ ಸ್ವರೂಪ್ ನಿಗಮ್ ಅವರನ್ನು ವಜಾಗೊಳಿಸುವಂತೆ ಮತ್ತು ಜೊತೆಗೆ ಇತರ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ಕಿರಿಯ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ನಾನು ಆರೋಗ್ಯ ಕಾರ್ಯದರ್ಶಿಯನ್ನು ಏಕೆ ತೆಗೆದುಹಾಕಲಿಲ್ಲ ಎಂದು ನಿಮಗೆ ತಿಳಿದಿದೆ. ಇಲಾಖೆಯಲ್ಲಿರುವ ಎಲ್ಲರನ್ನೂ ಒಂದೇ ಬಾರಿಗೆ ತೆಗೆಯಲು ಸಾಧ್ಯವಿಲ್ಲ. ನಾವು ಈ ಹಿಂದೆ DHS ಮತ್ತು DME ಅನ್ನು ತೆಗೆದುಹಾಕಿದ್ದೇವೆ. ದಯವಿಟ್ಟು ರಾಜಕೀಯ ಬಿಟ್ಟು ಮತ್ತೆ ಕೆಲಸಕ್ಕೆ ಸೇರಿಕೊಳ್ಳಿ” ಎಂದು ಸಿಎಂ ಹೇಳಿದ್ದಾರೆ.
“ಯಾವ ಅಧಿಕಾರಿಯನ್ನು ತೆಗೆದುಹಾಕಬೇಕು ಅಥವಾ ಬೇಡ ಎಂಬುದನ್ನು ನೀವು ನಿರ್ಧರಿಸಲು ಸಾಧ್ಯವಿಲ್ಲ? ಇದು ತಾರ್ಕಿಕವೇ?” ಎಂದು ಅವರು ಪ್ರಶ್ನಿಸಿದ್ದಾರೆ. ಆರ್‌ಜಿ ಕರ್ ಆಸ್ಪತ್ರೆಯಲ್ಲಿ ಅತ್ಯಚಾರಕ್ಕೆ ಒಳಗಾಗಿ ಮೃತಪಟ್ಟ ತಮ್ಮ ಸಹೋದ್ಯೋಗಿ ನ್ಯಾಯ ಸಿಗುವಂತೆ ಮತ್ತು ರಾಜ್ಯದ ಆರೋಗ್ಯ ಮೂಲಸೌಕರ್ಯದಲ್ಲಿ ವ್ಯವಸ್ಥಿತ ಬದಲಾವಣೆಗೆ ಒತ್ತಾಯಿಸಿ ಕಿರಿಯ ವೈದ್ಯರು ಎರಡು ವಾರಗಳಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಎಂಟು ಮಂದಿಯಲ್ಲಿ, ಇದುವರೆಗೆ ಆರು ವೈದ್ಯರ ಆರೋಗ್ಯ ಹದಗೆಟ್ಟ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಕ್ಟೋಬರ್ 21ರೊಳಗೆ ರಾಜ್ಯ ಸರ್ಕಾರ ರಚನಾತ್ಮಕ ಕ್ರಮ ಕೈಗೊಂಡು ಬಿಕ್ಕಟ್ಟು ಪರಿಹರಿಸಬೇಕು ಎಂದು ಅವರು ಒತ್ತಾಯಿಸುತ್ತಿದ್ದಾರೆ.
ವೈದ್ಯರು ಮುಷ್ಕರ ಹಿಂಪಡೆದು ಸೋಮವಾರ ರಾಜ್ಯ ಕಾರ್ಯದರ್ಶಿಯನ್ನು ಭೇಟಿ ಮಾಡಿ ತಮ್ಮ ಬೇಡಿಕೆಗಳ ಕುರಿತು ಹೆಚ್ಚಿನ ಚರ್ಚೆ ನಡೆಸಬೇಕು ಎಂದು ಸಿಎಂ ಒತ್ತಾಯಿಸಿದ್ದಾರೆ. “ನಾನು ಪೊಲೀಸ್ ಕಮಿಷನರ್ (ಸಿಪಿ), ವೈದ್ಯಕೀಯ ಶಿಕ್ಷಣ ನಿರ್ದೇಶಕ (ಡಿಎಂಇ) ಮತ್ತು ಆರೋಗ್ಯ ಸೇವೆಗಳ ನಿರ್ದೇಶಕರನ್ನು (ಡಿಎಚ್‌ಎಸ್) ತೆಗೆದುಹಾಕಿದ್ದೇನೆ. ಆದರೆ ಇಲಾಖೆಯಲ್ಲಿರುವ ಎಲ್ಲರನ್ನೂ ನಾನು ತೆಗೆದುಹಾಕಲು ಸಾಧ್ಯವಿಲ್ಲ” ಎಂದು ಮಮತಾ ಬ್ಯಾನರ್ಜಿ ವಿವರಿಸಿದ್ದಾರೆ.
ಇದನ್ನೂ ಓದಿ: ಸುಲಿಗೆ ಪ್ರಕರಣ | ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಹೋದರ ಗೋಪಾಲ್ ಜೋಶಿ ಬಂಧನ
ಸುಲಿಗೆ ಪ್ರಕರಣ | ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಹೋದರ ಗೋಪಾಲ್ ಜೋಶಿ ಬಂಧನ


