ಹಾಸನ ಜಿಲ್ಲೆಯಲ್ಲಿ ಸಂಭವಿಸುತ್ತಿರುವ ಸರಣಿ ಹೃದಯಘಾತ ಪ್ರಕರಣಗಳ ಕುರಿತು ವರದಿ ಪಡೆಯಲು ಸೂಚಿಸಿರುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೋಮವಾರ (ಜೂನ್.30) ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಅವರು, “ಹಾಸನ ಜಿಲ್ಲೆಯಲ್ಲಿ ಒಂದು ತಿಂಗಳ ಅವಧಿಯಲ್ಲಿ 18 ಹೃದಯಾಘಾತಗಳು ಸಂಭವಿಸಿರುವುದನ್ನು ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಹೃದಯಾಘಾತಗಳು ಹೆಚ್ಚಾಗುತ್ತಿರುವ ಕುರಿತಂತೆ ಜಯದೇವ ಸಂಸ್ಥೆಯ ನಿರ್ದೇಶಕರ ಅಧ್ಯಕ್ಷತೆಯಲ್ಲಿ ತಜ್ಞರಿಂದ ಅಧ್ಯಯನ ನಡೆಸಿ ವರದಿ ಪಡೆಯುವಂತೆ ಈಗಾಗಲೇ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.
ಹಠಾತ್ ಹೃದಯಾಘಾತಗಳನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆಯನ್ನು ಜಾರಿಗೆ ತಂದಿದೆ. ಆದರೆ, ಇತ್ತೀಚೆಗೆ ಯುವಕರು ಹೃದಯಾಘಾತಕ್ಕೆ ಒಳಗಾಗುತ್ತಿರುವುದರ ಬಗ್ಗೆ ಸಮಗ್ರ ಸಂಶೋಧನೆಯ ಅಗತ್ಯತೆ ಇದೆ. ಬದಲಾದ ಜೀವನ ಶೈಲಿ, ಆಹಾರ, ಅಸಾಂಕ್ರಾಮಿಕ ರೋಗಗಳು ಹೃದಯಾಘಾತಗಳು ಹೆಚ್ಚಾಗಲು ಕಾರಣ ಎಂಬುದು ಮೇಲ್ನೋಟಕ್ಕೆ ಕಂಡುಬಂದರೂ, ಹಾಸನದ ಪ್ರಕರಣ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ತಜ್ಞರ ತಂಡದಿಂದ ಅಧ್ಯಯನ ನಡೆಸಿ 10 ದಿನಗಳ ಒಳಗಾಗಿ ವರದಿ ಪಡೆಯಲು ಸೂಚಿಸಲಾಗಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಹಾಸನ ಜಿಲ್ಲೆಯಲ್ಲಿ ಒಂದು ತಿಂಗಳ ಅವಧಿಯಲ್ಲಿ 18 ಹೃದಯಾಘಾತಗಳು ಸಂಭವಿಸಿರುವುದನ್ನು ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಹೃದಯಾಘಾತಗಳು ಹೆಚ್ಚಾಗುತ್ತಿರುವು ಕುರುತಂತೆ ಜಯದೇವ ಸಂಸ್ಥೆಯ ನಿರ್ದೇಶಕರ ಅಧ್ಯಕ್ಷತೆಯಲ್ಲಿ ತಜ್ಞರಿಂದ ಅಧ್ಯಯನ ನಡೆಸಿ ವರದಿ ಪಡೆಯುವಂತೆ ಈಗಾಗಲೇ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.
ಹಠಾತ್… pic.twitter.com/4h3PpmvujF
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) June 30, 2025
ಕಳೆದ ಎರಡು ವರ್ಷಗಳಿಂದ ದೇಶದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿವೆ. ಕೋವಿಡ್ ಲಸಿಕೆಯ ಅಡ್ಡ ಪರಿಣಾಮವೇ ಇದಕ್ಕೆ ಕಾರಣ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಹಾಗಾಗಿ, 2025ರ ಫೆಬ್ರವರಿ 14ರಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಂಗಳೂರಿನ ಶ್ರೀ ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕರ ಅಧ್ಯಕ್ಷತೆಯಲ್ಲಿ 10 ಮಂದಿ ತಜ್ಞರ ಸಮಿತಿ ರಚಿಸಿ ಆದೇಶಿಸಿದೆ.
ಈ ಸಮಿತಿ ಹಾಸನ ವೈದ್ಯಕೀಯ ವಿಜ್ಞಾನ ಮಹಾವಿದ್ಯಾಲಯದ (ಹಿಮ್ಸ್) ಸಹಯೋಗದೊಂದಿಗೆ ಹಾಸನ ಜಿಲ್ಲೆಯ ಹೃದಯಾಘಾತ ಪ್ರಕರಣಗಳ ಕುರಿತು 10 ದಿನಗಳ ಒಳಗೆ ವರದಿ ನೀಡಲು ಸೂಚಿಸಲಾಗಿದೆ.
ಜುಲೈ 1ರ ಪ್ರಜಾವಾಣಿ ವರದಿ ಪ್ರಕಾರ, ಹಾಸನ ಜಿಲ್ಲೆಯಲ್ಲಿ 2025ರ ಮೇ 20ರಿಂದ ಜೂನ್ 30ರವರೆಗೆ 21 ಜನರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಈ ಪೈಕಿ ನಾಲ್ವರು ಬೆಂಗಳೂರಿನಲ್ಲಿ ಮೃತಪಟ್ಟಿದ್ದಾರೆ. 25 ವರ್ಷದೊಳಗಿನ ಮೂವರು ಯುವತಿಯರು ಹಾಗೂ ಇಬ್ಬರು ಯುವಕರು ಮೃತಪಟ್ಟಿದ್ದಾರೆ. 30 ವರ್ಷ ಮೇಲಿನ 16 ಜನರು ಮೃತಪಟ್ಟಿದ್ದಾರೆ.
ಬೆಂಗಳೂರು: ಕಸದ ಲಾರಿಯಲ್ಲಿ ಮಹಿಳೆ ಶವ ಪತ್ತೆ: ಲಿವ್-ಇನ್ ಸಂಗಾತಿ ಬಂಧನ


