ಮುಂಗಾರು ಆರಂಭವಾಗಿ ರಭಸದಿಂದ ಸುರಿಯುತ್ತಿದೆ. ಆಗಲೆ ಮಲೆನಾಡಿನ ಹಲವೆಡೆ ಭೂಕುಸಿತ, ಗುಡ್ಡ ಕುಸಿತದ ವರದಿಗಳು ಬರುತ್ತಿವೆ. ಮುನ್ನೆಚ್ಚರಿಸಿ ವಹಿಸಿ, ಕ್ರಮ ಕೈಗೊಳ್ಳಬೇಕಿದ್ದ ಅಧಿಕಾರಿಗಳು ಜನರಿಗೆ ನೋಟಿಸ್ ನೀಡುವುದಕ್ಕೆ ಮಾತ್ರ ಸೀಮಿತರಾಗಿದ್ದಾರೆ ಎನ್ನುವ ಆರೋಪಗಳು ಕೇಳಿಬರುತ್ತಿವೆ. ಪ್ರತಿ ದಿನ ದೊಡ್ಡ ಮಳೆ ಸುರಿಯುತ್ತಿದ್ದು, ಅಲ್ಲಿನ ಬಡಜನರು ಭಯಭೀತರಾಗಿದ್ದಾರೆ. ಶಾಶ್ವತ ಪರಿಹಾರಕ್ಕಾಗಿ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಿದ್ದಾರೆ. ಈ ಕುರಿತು ನಾನುಗೌರಿ.ಕಾಂ ಸರಣಿ ವರದಿ ಮಾಡಲು ಮುಂದಾಗಿದೆ. ಅದರ ಮೊದಲ ಕಂತು ಇಲ್ಲಿದೆ.

ಈ ಮೇಲಿನ ಚಿತ್ರ ನೋಡಿ. ಇದು ಕಳೆದ ವರ್ಷ ಸುರಿದ ಮಳೆಗೆ ಮನೆ ಪಕ್ಕದಲ್ಲಿಯೇ ಭೂಕುಸಿತ ಸಂಭವಿಸಿರುವುದು. ಚಿಕ್ಕಮಗಳೂರು ಜಿಲ್ಲೆ, ಕೊಪ್ಪ ತಾಲ್ಲೂಕಿನ, ಮೇಗುಂದ ಹೋಬಳಿ ಬಳಿಯ ಗುಡ್ಡೇತೋಟ ಗ್ರಾಮದಲ್ಲಿ ವಾಸವಾಗಿರುವ ನಾರಾಯಣ್ ಮತ್ತು ಸುಮತಿ ಎಂಬ ದಂಪತಿಗಳಿಗೆ ಸೇರಿದ ಮನೆ ಇದಾಗಿದೆ. ಈ ಘಟನೆ ನಡೆದ ವರ್ಷವಾದರೂ ಅವರಿಗೆ ಯಾವುದೇ ಪುನರ್ವಸತಿ ಕಲ್ಪಿಸಲಾಗಿಲ್ಲ. ಈಗ ಆ ಭಾಗದಲ್ಲಿ ಪುನರಸ ಮಳೆ ಆರಂಭವಾಗಿದೆ. ಈ ಬಾರಿ ಮಳೆಗೆ ಮನೆಯೆ ಕುಸಿಯಬಹುದು ಎಂಬುದು ಅವರ ಆತಂಕ. ಸದ್ಯಕ್ಕೆ ಅವರೀಗ ಗ್ರಾಮದ ಅಂಗನವಾಡಿಯಲ್ಲಿ ಆಶ್ರಯ ಪಡೆದಿದ್ದಾರೆ. ಎಷ್ಟು ದಿನ ಎಂದು ಹೀಗೆಯೇ ಬದುಕುವುದು? ನಮಗೆ ನೆಮ್ಮದಿಯಿಂದ ಬದುಕುವ ಹಕ್ಕಿಲ್ಲವೇ? ಸರ್ಕಾರ, ಅಧಿಕಾರಿಗಳಿಗೆ ನಮ್ಮ ಕಷ್ಟ ತಿಳಿಯುವುದಿಲ್ಲವೇ ಎಂಬುದು ಅವರ ಪ್ರಶ್ನೆಯಾಗಿದೆ.
ಇದು ಅವರೊಬ್ಬರ ಪ್ರಶ್ನೆ ಮಾತ್ರ ಅಲ್ಲ. ಬದಲಿಗೆ ಗುಡ್ಡೆ ತೋಟ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ 16 ಕುಟುಂಬಗಳು ಇದೇ ರೀತಿಯ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಬಹುತೇಕ ಕೂಲಿ ಕೆಲಸ ಮಾಡುವ ಇವರಿಗೆ ಮನೆ ಬಿಟ್ಟರೆ ಬೇರೆ ಯಾವುದೇ ಜಮೀನು ಇಲ್ಲ. ಪ್ರತಿ ವರ್ಷ ಮಳೆಗಾಲ ಬಂತೆದ್ದರೆ ಸಾಕು ಸಾವಿನ ದವಡೆಗೆ ಹೋದ ಅನುಭವ ಅವರದು. ಹೇಗಾದರೂ ಮಾಡಿ ನಮ್ಮನ್ನು ಇಲ್ಲಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಿ. ಬದುಕಲು ಒಂದು ಚಿಕ್ಕ ಸೂರು ಕಟ್ಟಿಸಿಕೊಡಿ ಎಂಬುದು ಅವರ 5 ವರ್ಷದ ಬೇಡಿಕೆ. ಅದಕ್ಕಾಗಿ ಕಂಡ ಕಂಡವರ ಕಾಲು ಹಿಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅವರ ನೋವು ಕೇಳಬೇಕಾದವರು ಕಂಡು ಕಾಣದಂತಿದ್ದಾರೆ.

“ಈ ಮೂಲಕ ತಮಗೆ ತಿಳಿಯಪಡಿಸುವುದೇನೆಂದರೆ ಕಳೆದ ಒಂದು ವಾರದ ಮಳೆಯಿಂದ ಗುಡ್ಡೇತೋಟದ ಸೈಟ್ ಮನೆಯ ಹಿಂದಿನ ಮತ್ತು ಮುಂದಿನ ಧರೆಗಳು ಜರಿದು ಮನೆಗಳಿಗೆ ಅನಾಹುತವಾಗಿರುವುದರಿಂದ, ಹಾಗೂ ಇನ್ನೂ ಹೆಚ್ಚು ಮಳೆಯಾಗುವ ಸಂಭವವಿದ್ದು, ತಮ್ಮಗಳ ಮನೆಗಳಿಗೆ ಸಮಸ್ಯೆ ಉಂಟಾಗುವ ಸಾಧ್ಯತೆಗಳಿದ್ದು, ನೀವು ಗ್ರಾಮ ಪಂಚಾಯಿತಿಯಿಂದ ಸೂಚಿಸುವವರೆಗೂ ತಮ್ಮ ವಾಸದ ಮನೆಯಿಂದ ಪಂಚಾಯ್ತಿಯಿಂದ ಸೂಚಿಸಿದ ಸ್ಥಳಗಳಿಗೆ ಸ್ಥಳಾಂತರವಾಗಬೇಕಾಗಿ ಹಾಗೂ ರಾತ್ರಿ ವೇಳೆಯಲ್ಲಿ ಕಡ್ಡಾಯವಾಗಿ ತಮ್ಮ ವಾಸದ ಮನೆಗಳಲ್ಲಿ ವಾಸ ಇರಬಾರದಾಗಿ ಈ ಮೂಲಕ ಸೂಚಿಸಿದೆ”
ಇದು ಪ್ರತಿ ವರ್ಷ ಮಳೆಗಾಲ ಬಂದಾಗ ಅಧಿಕಾರಿಗಳು ಗ್ರಾಮಪಂಚಾಯತ್ ಮೂಲಕ ಮನೆ ಮನೆಗಳಿಗೆ ಅಂಟಿಸುವ ಎಚ್ಚರಿಕೆಯ ನೋಟಿಸ್. ಈ ನೋಟೀಸ್ ಅಂಟಿಸಿ ಅವರು ತಮ್ಮ ಜವಾಬ್ದಾರಿಗಳಿಂದ ಕೈ ತೊಳೆದುಕೊಂಡಿದ್ದಾರೆ. ಅಂಗನವಾಡಿ, ಶಾಲೆಗಳಲ್ಲಿ ಉಳಿದುಕೊಳ್ಳಿ ಎಂದು ತಿಳಿಸಿದ್ದು ಬಿಟ್ಟರೆ, ಅವರಿಗೆ ಯಾವುದೇ ಸರಿಯಾದ ಸೌಕರ್ಯಗಳನ್ನು ಒದಗಿಸುವುದಿಲ್ಲ ಎಂಬುದು ನಿವಾಸಿಗಳ ಅಳಲು.
ನಮ್ಮ ಈ 16 ಕುಟುಂಬಗಳಿಗೆ ಒಂದು ಬಸ್ ಸ್ಟ್ಯಾಂಡ್ ಇಲ್ಲ. ಮಳೆಗಾಲದಲ್ಲಿ ಪಂಚಾಯ್ತಿಯಲ್ಲಿ, ಅಂಗನವಾಡಿಯಲ್ಲಿ ಮಲಗಿ ಅಂತಾರೆ. ಅಲ್ಲಿ ನೀರಿಲ್ಲ, ಶೌಚಾಲಯವಿಲ್ಲ. ಕೆಲವರ ಮನೆ ಕುಸಿದ ಸಂದರ್ಭದಲ್ಲಿ ಎರಡು ವರ್ಷದ ಹಿಂದೆ ಪಂಚಾಯ್ತಿಯಲ್ಲಿ, ಶಾಲೆಯಲ್ಲಿ ನೆಲೆ ಪಡೆದಿದ್ದಾರೆ. ಆದರೆ ಇಂದಿಗೂ ಅವರು ಅಲ್ಲಿಯೇ ವಾಸವಿದ್ದಾರೆ ಹೊರತು ಅವರಿಗೆ ಮನೆ ಕಟ್ಟಿಸಿಕೊಟ್ಟಿಲ್ಲ. ಈಗ ಅವರಿಗೆ ಬಾಡಿಗೆ ಕಟ್ಟಿ ಎಂದು ಕೇಳುತ್ತಿದ್ದಾರೆ. ಇದು ನಮ್ಮ ದುಸ್ಥಿತಿ ಎನ್ನುತ್ತಾರೆ ಸಂತ್ರಸ್ತರಾದ ನಾರಾಯಣ್.
ಕಳೆದ 5 ವರ್ಷದಿಂದ ಒಂದು ಗೋಮಾಳದ ಜಾಗ ತೋರಿಸಿ, ಅಳತೆ ಮಾಡಿ ಅಲ್ಲಿ ನಿಮಗೆ ಮನೆ ಕಟ್ಟಿಕೊಡುತ್ತೇವೆ ಎಂದು ಎಲ್ಲರೂ ಭರವಸೆ ಕೊಡುತ್ತಿದ್ದಾರೆ. ಅಲ್ಲಿಂದ ನಾವು ಹಲವಾರು ಬಾರಿ ಮನವಿ ಪತ್ರ ಸಲ್ಲಿಸಿದ್ದೇವೆ. ಆದರೆ ಅರಣ್ಯ ಇಲಾಖೆಯವರು ಕೊಡಲಾಗುವುದಿಲ್ಲ ಎನ್ನುತ್ತಿದ್ದಾರೆ. ಸರ್ಕಾರ ಮತ್ತು ಅರಣ್ಯ ಇಲಾಖೆಯ ನಡುವಿನ ಗಲಾಟೆಯಲ್ಲಿ ನಾವು ಮಧ್ಯ ಸಿಕ್ಕಿಕೊಂಡಿದ್ದೇವೆ ಎಂದು ದೂರಿದರು.
ಆ ಭಾಗದಲ್ಲಿ ಜನರೊಟ್ಟಿಗೆ ಕೆಲಸ ಮಾಡುತ್ತಿರುವ ಕರ್ನಾಟಕ ಜನಶಕ್ತಿ ಜಿಲ್ಲಾ ಕಾರ್ಯದರ್ಶಿ ಆನಂದ್‌ರವರು ಮಾತನಾಡಿ, “ಇಲ್ಲಿನ ಜನರು ಜೀವ ಕೈಯಲ್ಲಿ ಹಿಡಿದುಕೊಂಡು ದಿನದೂಡುತ್ತಿದ್ದಾರೆ. ಮಳೆ ಜೋರಾಗುತ್ತಿರುವುದರಿಂದ ಶಾಸಕರು, ಅಧಿಕಾರಿಗಳು ಇಚ್ಚಾಶಕ್ತಿಯಿಂದ ಕೆಲಸ ಮಾಡಬೇಕು. ಈ ಕೂಡಲೇ ಗೋಮಾಳದಲ್ಲಿ ಜಾಗ ನೀಡಬೇಕು ಇಲ್ಲವೇ ಬೇರೆ ಕಡೆ ಶಾಶ್ವತ ಪುನರ್ವಸತಿ ಕಲ್ಪಿಸಬೇಕು. ಯಾವುದೇ ಜೀವ ಹಾನಿಯಾಗಲು ಬಿಡಬಾರದು” ಎಂದು ಒತ್ತಾಯಿಸಿದರು.
ಶೃಂಗೇರಿ ಕ್ಷೇತ್ರದ ಶಾಸಕರಾದ ರಾಜೇಗೌಡರನ್ನು ನಾನುಗೌರಿ.ಕಾಂ ವತಿಯಿಂದ ಸಂಪರ್ಕಿಸಲು ಯತ್ನಿಸಲಾಯಿತು. ಅವರು ಸಂಪರ್ಕಕ್ಕೆ ದೊರಕಿಲ್ಲ. ಪ್ರತಿಕ್ರಿಯೆ ಸಿಕ್ಕಲ್ಲಿ ಅಪ್‌ಡೇಟ್ ಮಾಡಲಾಗುವುದು.
ಇದನ್ನೂ ಓದಿ: ಕರಾವಳಿ ಕರ್ನಾಟಕದ ರಕ್ತಸಿಕ್ತ ಚರಿತ್ರೆಯ ನಿಜ ಕಥನ ‘ನೇತ್ರಾವತಿಯಲ್ಲಿ ನೆತ್ತರು’


