ಕಳೆದ ಮೂರು ದಿನಗಳಿಂದ ಬಿಡುವು ಕೊಟ್ಟಿದ್ದ ವರುಣ ಇಂದು ಸಂಜೆಯಿಂದ ರಾಜಧಾನಿಯಲ್ಲಿ ಅಬ್ಬರಿಸುತ್ತಿದ್ದಾನೆ. ಭಾರಿ ಮಳೆಗೆ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಸಿಲಿಕಾನ್ ಸಿಟಿಯ ರಸ್ತೆಗಳು ಕೆರೆಗಳಂತಾಗಿದ್ದು, ವಾಹನ ಸವಾರರು ಮನೆಗೆ ತೆರಳಲು ಸಾಧ್ಯವಾಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ರಸ್ತೆಗಳಲ್ಲಿ ವಾಹನ ಸಂದಣೆ ಜಾಸ್ತಿಯಾಗಿ ಟ್ರಾಫಿಕ್ ಜಾಮ್ ಉಂಟಾಗಿದೆ.
ಯಶವಂತಪುರ, ರಾಜಾಜಿನಗರ, ಮಲ್ಲೇಶ್ವರ, ಮೆಜೆಸ್ಟಿಕ್, ಬಸವನಗುಡಿ, ಗಿರಿನಗರ, ರಾಜರಾಜೇಶ್ವರಿ ನಗರ, ಕತ್ರಿಗುಪ್ಪೆ, ಬನಶಂಕರಿ ಸೇರಿದಂತೆ ಹಲವೆಡೆ ಭಾರೀ ಮಳೆಯಾಗುತ್ತಿದ್ದು ಚರಂಡಿಗಳು ತುಂಬಿ ರಸ್ತೆಗಳ ಮೇಲೆ ಹರಿಯುತ್ತಿವೆ. ತಗ್ಗಿನ ಪ್ರದೇಶಗಳಿಗೆ ಮಳೆ ನೀರು ನುಗ್ಗಿ, ಮನೆಗಳು ಜಲಾವೃತವಾಗಿವೆ.
ಇದನ್ನೂ ಓದಿ: ಸಂಸತ್ತಿನ ಮಾನ್ಸೂನ್ ಅಧಿವೇಶನ: ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿದ ಕೇಂದ್ರ !

ಇದರ ಜೊತೆಗೆ ರಾಜಧಾನಿಯಲ್ಲಿ ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಮಾನ್ಯತಾ ಟೆಕ್ ಪಾರ್ಕ್ ಜಲಾವೃತವಾಗಿರುವ ವಿಡಿಯೋವನ್ನು ಬೆಂಗಳೂರು ಮಿರರ್ ಹಂಚಿಕೊಂಡಿದೆ.
Scenes at Bengaluru's Manyata Tech Park following heavy rain on Tuesday night.#BengaluruRains pic.twitter.com/uPaNNYSyF3
— Bangalore Mirror (@BangaloreMirror) September 9, 2020
ಭಾರಿ ಮಳೆಯ ಜೊತೆಗೆ ವಿಪರೀತ ಗಾಳಿ ಇಲ್ಲದ ಪರಿಣಾಮ, ಎಲ್ಲೂ ಸಹ ಮರಗಳು ಉರುಳಿರುವ ಕುರಿತು ಮಾಹಿತಿ ದೊರಕಿಲ್ಲ. ಆದರೆ, ಮುಂದಿನ ಮೂರು ನಾಲ್ಕು ದಿನ ಸಂಜೆ ವೇಳೆ ಹೀಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.


