ಮಲಯಾಳಂ ಚಲನಚಿತ್ರೋದ್ಯಮದಲ್ಲಿನ ಮಹಿಳೆಯರ ಮೇಲಿನ ಲೈಂಗಿಕ ಶೋಷಣೆ ಮತ್ತು ಸ್ತ್ರೀದ್ವೇಷದ ಕುರಿತು ಹೇಮಾ ಸಮಿತಿ ನೀಡಿದ ವರದಿಗೆ ಸಂಬಂಧಿಸಿದ ಕೆಲ ಪ್ರಕರಣಗಳನ್ನು ಕೈಬಿಡಲು ಕೇರಳ ಪೊಲೀಸರು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.
ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಸಾಕಷ್ಟು ಸಾಕ್ಷ್ಯಗಳನ್ನು ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ. ಸಂತ್ರಸ್ತರು ತನಿಖೆಗೆ ಅಸಹಕಾರ ತೋರುತ್ತಿದ್ದಾರೆ. ಆದ್ದರಿಂದ 35 ಕ್ರಿಮಿನಲ್ ಪ್ರಕರಣಗಳಲ್ಲಿ ‘ಫರ್ದರ್ ಆಕ್ಷನ್ ಡ್ರಾಪ್ಡ್’ (ಎಫ್‌ಎಡಿ) ವರದಿಗಳನ್ನು ಸಲ್ಲಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ದಿ ಹಿಂದೂ ವರದಿ ಮಾಡಿದೆ.
ಅಧಿಕೃತ ಮೂಲಗಳ ಪ್ರಕಾರ, ಎಸ್‌ಐಟಿ ಮತ್ತು ನ್ಯಾಯಾಲಯ ಪದೇ ಪದೇ ಸಮನ್ಸ್ ಜಾರಿ ಮಾಡಿದರೂ, ಸಂತ್ರಸ್ತರು ಪ್ರಕರಣಗಳಿಗೆ ಸಂಬಂಧಿಸಿದಂತೆ ಹೇಳಿಕೆಗಳನ್ನು ನೀಡಲು ನಿರಾಕರಿಸಿದ್ದಾರೆ ಎಂದು ವರದಿ ಹೇಳಿದೆ.
ತನಿಖೆಯಲ್ಲಿ ಯಾವುದೇ ಪ್ರಗತಿ ಕಾಣದ ಕಾರಣ 21 ಪ್ರಕರಣಗಳಲ್ಲಿ ಎಫ್‌ಎಡಿ ವರದಿಗಳನ್ನು ಸಲ್ಲಿಸಲಾಗಿದೆ. ಉಳಿದ 14 ಪ್ರಕರಣಗಳನ್ನು ಕೂಡ ತಾತ್ಕಾಲಿಕವಾಗಿ ಕೈಬಿಡುವ ಸಾಧ್ಯತೆಯಿದೆ ಎಂದು ತನಿಖೆಯ ನೋಡಲ್ ಅಧಿಕಾರಿ ಮತ್ತು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕಿ ಜಿ. ಪೂಂಗುಝಿಲಿ ತಿಳಿಸಿದ್ದಾರೆ.
“ಶಾಶ್ವತವಾಗಿ ಪ್ರಕರಣಗಳನ್ನು ಕೈಬಿಟ್ಟಿಲ್ಲ”
“ಕಾನೂನು ಹಾಗೂ ಕಾರ್ಯವಿಧಾನಗಳ ಭಾಗವಾಗಿ ಸದ್ಯಕ್ಕೆ ಪ್ರಕರಣಗಳಲ್ಲಿ ತನಿಖೆಯನ್ನು ಅಂತ್ಯಗೊಳಿಸಲಾಗುತ್ತಿದೆ. ಆದರೆ, ಯಾವುದೇ ಪ್ರಕರಣಗಳನ್ನು ಶಾಶ್ವತವಾಗಿ ಕೈಬಿಡುವುದಿಲ್ಲ. ಸಂತ್ರಸ್ತರು ಯಾವುದೇ ಹಂತದಲ್ಲೂ ಮುಂದೆ ಬಂದು ಹೇಳಿಕೆ ದಾಖಲಿಸಲು ಅವಕಾಶವಿದೆ. ಹಾಗೇನಾದರು ಆದರೆ, ತನಿಖೆ ಮುಂದುವರಿಯಲಿದೆ” ಎಂದು ಪೂಂಗುಝಿಲಿ ಸ್ಪಷ್ಟಪಡಿಸಿದ್ದಾಗಿ ವರದಿ ಹೇಳಿದೆ.
ಎಸ್‌ಐಟಿ ಸಂತ್ರಸ್ತರಿಗೆ ಮೂರು ಸುತ್ತಿನ ನೋಟಿಸ್‌ಗಳನ್ನು ನೀಡಿದೆ. ನ್ಯಾಯಾಲಯ ಕೂಡ ಮೂರು ಬಾರಿ ಸಮನ್ಸ್ ಜಾರಿ ಮಾಡಿದೆ. ಆದರೂ, ಸಂತ್ರಸ್ತರಿಂದ ಯಾವುದೇ ಪ್ರತಿಕ್ರಿಯೆಗಳು ಬಂದಿಲ್ಲ. ಇಂತಹ ಸ್ಥಿತಿಯಲ್ಲಿ ಮುಂದಿನ ತನಿಖೆ ಅಸಾಧ್ಯವಾಗಿದೆ ಎಂದು ಪೂಂಗುಝಿಲಿ ಹೇಳಿದ್ದಾರೆ.
ಈ ಹಿನ್ನಡೆಯ ಹೊರತಾಗಿಯೂ, ಹೇಮಾ ಸಮಿತಿ ವರದಿ ಮತ್ತು ಸಂತ್ರಸ್ತರ ಆರೋಪಗಳನ್ನು ಆಧರಿಸಿ ದಾಖಲಾಗಿರುವ ಸುಮಾರು 70 ಇತರ ಪ್ರಕರಣಗಳ ಪೊಲೀಸ್ ತನಿಖೆಗಳು ಮುಂದುವರೆದಿವೆ. ಇವುಗಳಲ್ಲಿ, ಸುಮಾರು 25 ಪ್ರಕರಣಗಳಲ್ಲಿ ಈಗಾಗಲೇ ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಲಾಗಿದೆ.
ಗಮನಾರ್ಹವಾಗಿ, ಈಗಾಗಲೇ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಶಾಸಕ ಎಂ. ಮುಖೇಶ್, ಸಿದ್ದಿಕ್, ಜಯಸೂರ್ಯ, ಎಡವೇಲ ಬಾಬು, ಮಣಿಯನ್‌ಪಿಳ್ಳೈ ರಾಜು ಮತ್ತು ರಂಜಿತ್ ಸೇರಿದಂತೆ ಮಲಯಾಳಂ ಚಲನಚಿತ್ರೋದ್ಯಮದ ಪ್ರಮುಖ ವ್ಯಕ್ತಿಗಳ ಹೆಸರಿದೆ.
ಮಲಯಾಳಂ ಚಿತ್ರೋದ್ಯಮದಲ್ಲಿ ಮಹಿಳಾ ಕಲಾವಿದರು ಅನುಭವಿಸುತ್ತಿರುವ ಲೈಂಗಿಕ ಮತ್ತು ಇತರ ಶೋಷಣೆಗಳ ಕುರಿತು ಅಧ್ಯಯನ ನಡೆಸಿ ವರದಿ ನೀಡಲು ಜುಲೈ 2017 ರಲ್ಲಿ ಹೇಮಾ ಸಮಿತಿಯನ್ನು ಸರ್ಕಾರ ರಚಿಸಿತ್ತು. ಈ ಸಮಿತಿ 31 ಡಿಸೆಂಬರ್ 2019ರಂದು ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಈ ವರದಿಯನ್ನು ಸುಮಾರು ಐದು ವರ್ಷಗಳ ಬಳಿಕ,19 ಆಗಸ್ಟ್ 2024ರಂದು ಬಹಿರಂಗಗೊಳಿಸಲಾಗಿದೆ.


