ಜೆಎಂಎಂ ನಾಯಕ ಹೇಮಂತ್ ಸೊರೇನ್ ಅವರು ಜಾರ್ಖಂಡ್‌ನ 14ನೇ ಮುಖ್ಯಮಂತ್ರಿಯಾಗಿ ಇಂದು (ನ.28) ಪ್ರಮಾಣವಚನ ಸ್ವೀಕರಿಸಿದರು.
ರಾಂಚಿಯ ಮೊರಬಾಡಿ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಸಂತೋಷ್ ಕುಮಾರ್ ಗಂಗ್ವಾರ್ ಅವರು ಪ್ರಮಾಣವಚನ ಬೋಧಿಸಿದರು.
ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ಸಿಪಿಐ(ಎಂಎಲ್) ಲಿಬರೇಷನ್ ಪ್ರಧಾನ ಕಾರ್ಯದರ್ಶಿ ದೀಪಂಕರ್ ಭಟ್ಟಾಚಾರ್ಯ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಬಿಹಾರದ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಸೇರಿದಂತೆ ಪ್ರಮುಖರು ಹಾಜರಿದ್ದರು.
49 ವರ್ಷದ ಬುಡಕಟ್ಟು ನಾಯಕ ಹೇಮಂತ್ ಸೊರೇನ್ ಜಾರ್ಖಂಡ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು, ಇದು ನಾಲ್ಕನೇ ಬಾರಿಯಾಗಿದೆ.
ನವೆಂಬರ್ 23ರಂದು ಪ್ರಕಟಗೊಂಡ ಜಾರ್ಖಂಡ್ ವಿಧಾನಸಭೆ ಚುನಾವಣೆಯ ಫಲಿತಾಂಶದಲ್ಲಿ ಬರ್ಹೈತ್ ಕ್ಷೇತ್ರದಿಂದ ಜೆಎಂಎಂ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹೇಮಂತ್ ಸೊರೇನ್ ಅವರು ಬಿಜೆಪಿ ಅಭ್ಯರ್ಥಿ ಗಮ್ಲಿಯೆಲ್ ಹೆಂಬ್ರೋಮ್ ಅವರ ವಿರುದ್ದ 39,791 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
81 ಸದಸ್ಯ ಬಲದ ಜಾರ್ಖಂಡ್ ವಿಧಾನಸಭೆಯಲ್ಲಿ ಜೆಎಂಎಂ ನೇತೃತ್ವದ ಇಂಡಿಯಾ ಮೈತ್ರಿಕೂಟ 56 ಸ್ಥಾನಗಳನ್ನು ಗಳಿಸಿದರೆ, ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 24 ಸ್ಥಾನಗಳನ್ನು ಪಡೆದುಕೊಂಡಿದೆ.
ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿದ್ದ ಬುಡಕಟ್ಟು ತಂಡಗಳು ಬಿಗಿ ಭದ್ರತೆಯ ನಡುವೆ ಕಾರ್ಯಕ್ರಮದಲ್ಲಿ ‘ಧೋಲ್ ಮತ್ತು ನಾಗರಾ’ ನಾದಕ್ಕೆ ನೃತ್ಯ ಮಾಡಿದರು. ಪ್ರಮಾಣವಚನ ಸಮಾರಂಭದ ಹಿನ್ನೆಲೆ ರಾಂಚಿ ನಗರದ ಶಾಲೆಗಳಿಗೆ ಇಂದು ರಜೆ ನೀಡಲಾಗಿತ್ತು.
ಇದನ್ನೂ ಓದಿ : ಲೋಕಸಭೆ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ಪ್ರಿಯಾಂಕಾ ಗಾಂಧಿ


