ಜನವರಿ 16ರಂದು ಗುರುವಾರ ತಿಹಾರ್ ಜೈಲಿನಿಂದ ಬಿಡುಗಡೆಯಾದ ನಂತರ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್‌ರವರು CAA, NRC, NPRಗೆ ಸಂಬಂಧಿಸಿದ ದಾಖಲೆಗಳನ್ನು ತೋರಿಸುವುದಿಲ್ಲ ಎಂದು ಘೋಷಿಸಿದ್ದಾರೆ.
ಕ್ವಿಂಟ್‌ನೊಡನೆ ಮಾತನಾಡಿದ ಅವರು ‘Here by Choice, Not by Chance’ (ನಾವು ಇಲ್ಲಿಗೆ ಬಂದಿರುವುದು ಆಯ್ಕೆಯಿಂದ, ಆಕಸ್ಮಿಕವಾಗಿ ಅಲ್ಲ) ಇದ್ದೇವೆ ಎಂದು ಘೋಷಿಸಿದ್ದಾರೆ.
“ಇದು ನಮ್ಮ ದೇಶ. ನಾವು ಇಲ್ಲಿರುವುದು ನಮ್ಮ ಆಯ್ಕೆಯಿಂದ, ಆಕಸ್ಮಿಕವಾಗಿ ಅಲ್ಲ. ಧರ್ಮದ ಆಧಾರದ ಮೇಲೆ ದೇಶವನ್ನು ವಿಭಜಿಸುವ ಮತ್ತು ದೇಶದ ನಾಗರಿಕರಿಂದ ದಾಖಲೆಗಳನ್ನು ಕೇಳುವ ಪ್ರಕ್ರಿಯೆಯು ಸಂವಿಧಾನದ 14 ಮತ್ತು 15 ನೇ ವಿಧಿಗಳಿಗೆ ವಿರುದ್ಧವಾಗಿದೆ”
– ಚಂದ್ರಶೇಖರ್ ಅಜಾದ್
“ದೇಶವನ್ನು ವಿಭಜಿಸುವ ಆಳುವ ಶಕ್ತಿಗಳು ಮುಂದಾದಾಗ ಬಂಧನಕ್ಕೊಳಗಾಗುವುದು ಮಾತ್ರವಲ್ಲದೆ ಅವರ ಗುಂಡಿಗೆ ಎದೆ ಕೊಟ್ಟಾದರೂ ಸರಿಯೇ ದೇಶವನ್ನು ವಿಭಜಿಸದಂತೆ ತಡೆಯುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ” ಎಂದು ಅವರು ಹೇಳಿದರು.
ಅಲ್ಲದೆ, ‘ಹಿಂದೂ ರಾಷ್ಟ್ರ’ ರಚಿಸುವ ಕಾರ್ಯಸೂಚಿಯು ವಾಸ್ತವವಾಗಿ ಆರ್‌ಎಸ್‌ಎಸ್‌ದ್ದಾಗಿದೆಯೇ ಹೊರತು ಸರ್ಕಾರದದ್ದಲ್ಲ ಎಂದು ಅವರು ತಿಳಿಸಿದರು.
ಸರ್ಕಾರವು ತನ್ನ ನಿರ್ಧಾರವನ್ನು ಸಾರ್ವಜನಿಕರಿಂದ ಪರಿಶೀಲಿಸಬಹುದು ಎಂದ ಅವರು, ವಾಸ್ತವವೆಂದರೆ ದೇಶದ ಬಹುಸಂಖ್ಯಾತ ಜನರು ಈ ಕಾಯ್ದೆಗಳ ವಿರುದ್ಧವಿದ್ದಾರೆ. ಆದರೆ ಮಾಧ್ಯಮಗಳು ಅದನ್ನು ತೋರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
26 ದಿನಗಳ ಕಾಲ ನ್ಯಾಯಾಂಗ ಬಂಧನದಿಂದ ಬಿಡುಗಡೆಯಾಗಿರುವ ಆಜಾದ್ ಇಂದು ಮಧ್ಯಾಹ್ನ 1 ಗಂಟೆಗೆ ಜಮಾ ಮಸೀದಿಗೆ ಭೇಟಿ ನೀಡಲಿದ್ದು, ನಂತರ ರವಿದಾಸ್ ದೇವಸ್ಥಾನ, ಗುರುದ್ವಾರ ಮತ್ತು ಚರ್ಚ್‌ಗೆ ಭೇಟಿ ನೀಡಲಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.


