ಆಗಸ್ಟ್ 1ರಿಂದ ಪಶ್ಚಿಮ ಬಂಗಾಳದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (MGNREGA) ಅನುಷ್ಠಾನವನ್ನು ಪುನರಾರಂಭಿಸುವಂತೆ ಕಲ್ಕತ್ತಾ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ.
ಭ್ರಷ್ಟಾಚಾರದ ಆರೋಪಗಳು, ಆಡಳಿತರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ನಡುವಿನ ರಾಜಕೀಯ ಕಿತ್ತಾಟದ ಕಾರಣ, ಈ ಯೋಜನೆಯು ರಾಜ್ಯದಲ್ಲಿ ಸುಮಾರು ಮೂರು ವರ್ಷಗಳ ಕಾಲ ಸ್ಥಗಿತಗೊಂಡಿತ್ತು.
ಮುಖ್ಯ ನ್ಯಾಯಮೂರ್ತಿ ಟಿ.ಎಸ್ ಶಿವಜ್ಞಾನಂ ಮತ್ತು ನ್ಯಾಯಮೂರ್ತಿ ಚೈತಾಲಿ ಚಟರ್ಜಿ ದಾಸ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಈಗ ಯೋಜನೆಯನ್ನು ಪುನರಾರಂಭಿಸಲು ಸೂಚಿಸಿದೆ.
ಅಲ್ಲದೆ, ರಾಜ್ಯದಲ್ಲಿ ಯೋಜನೆಯ ಅನುಷ್ಠಾನವನ್ನು ವಿಳಂಬಗೊಳಿಸಲು ಕಾರಣವಾದ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವವರ ವಿರುದ್ಧ ಕೇಂದ್ರ ಅಥವಾ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುವುದನ್ನು ನ್ಯಾಯಪೀಠ ಗಮನಿಸಿದೆ.
“ಕೇಂದ್ರವು ಸಾಕಷ್ಟು ಅಧಿಕಾರವನ್ನು ಹೊಂದಿದೆ. ಈ ಯೋಜನೆಯನ್ನು ನಾಲ್ಕು ಜಿಲ್ಲೆಗಳಲ್ಲಿ ಮಾತ್ರವಲ್ಲದೆ ಇಡೀ ರಾಜ್ಯಾದ್ಯಂತ ಆಗಸ್ಟ್ 1ರಿಂದ ಪ್ರಾರಂಭಿಸಲಿದೆ. ಹಿಂದೆ ನಡೆದ ಭ್ರಷ್ಟಾಚಾರ ಪುನರಾವರ್ತನೆಯಾಗದಂತೆ ನೋಡಿಕೊಳ್ಳಲು ಅಗತ್ಯವೆಂದು ಭಾವಿಸುವ ಯಾವುದೇ ಷರತ್ತುಗಳು ಅಥವಾ ನಿರ್ಬಂಧಗಳನ್ನು ಕೇಂದ್ರವು ವಿಧಿಸಬಹುದು” ಎಂದು ನ್ಯಾಯಾಲಯ ಹೇಳಿದೆ.
ಗ್ರಾಮೀಣ ಕುಟುಂಬಗಳಿಗೆ ವರ್ಷಕ್ಕೆ 100 ದಿನಗಳ ಉದ್ಯೋಗವನ್ನು ಖಾತರಿಪಡಿಸುವ ಕಾಯ್ದೆಯಡಿ ಬಡವರಿಗೆ ಕಾನೂನುಬದ್ಧ ಹಕ್ಕನ್ನು ನಿರಾಕರಿಸಲಾಗುತ್ತಿದೆ ಎಂದು ಆರೋಪಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ವಿಚಾರಣೆ ನಡೆಸಿ ಹೈಕೋರ್ಟ್ ಆದೇಶ ನೀಡಿದೆ.
ಬಿಜೆಪಿ ನಾಯಕ ಸುವೇಂದು ಅಧಿಕಾರಿ ಕೂಡ ಈ ಸಂಬಂಧ ಪ್ರಕರಣ ದಾಖಲಿಸಿದ್ದರು. ನಂತರ ಅದನ್ನು ಪಿಐಎಲ್‌ನೊಂದಿಗೆ ವಿಲೀನಗೊಳಿಸಲಾಗಿತ್ತು.
ಹೈಕೋರ್ಟ್ ಆದೇಶಕ್ಕೆ ಪ್ರತಿಕ್ರಿಯಿಸಿದ ಟಿಎಂಸಿ ನಾಯಕ ಕುನಾಲ್ ಘೋಷ್, “ರಾಜ್ಯ ಸರ್ಕಾರವು ಈ ಬಗ್ಗೆ ವಿವರವಾಗಿ ಪ್ರತಿಕ್ರಿಯಿಸಲಿದೆ. ಆದರೆ, ಹೈಕೋರ್ಟ್ ಆದೇಶವು ನಮ್ಮ ನಿಲುವು ಮತ್ತು ಕೇಂದ್ರ ನಿಧಿಗಾಗಿ ನಡೆಸುತ್ತಿರುವ ಹೋರಾಟವನ್ನು ಸಮರ್ಥಿಸಿದೆ. ಕೇಂದ್ರ ಸರ್ಕಾರವು ಬಂಗಾಳದ ಹಣವನ್ನು ಕಾನೂನುಬಾಹಿರವಾಗಿ ಮತ್ತು ತಾರತಮ್ಯದ ರೀತಿಯಲ್ಲಿ ತಡೆ ಹಿಡಿಯುತ್ತಿದೆ” ಎಂದು ಹೇಳಿದ್ದಾರೆ.
“ದೇಶದಲ್ಲಿ ಇಂತಹ ತಾರತಮ್ಯ ನಡೆಯಬಾರದು. ನರೇಗಾ ವಿಷಯಕ್ಕೆ ಕೇಂದ್ರ ಬಂಗಾಳದ ಕಡೆಗೆ ಬೆರಳು ತೋರಿಸುತ್ತಿದೆ. ಆದರೆ, ಗುಜರಾತ್ ಸಚಿವರ ಮಗ ನರೇಗಾ ಹಗರಣದಲ್ಲಿ ಭಾಗಿಯಾಗಿದ್ದಾನೆ. ಉತ್ತರ ಪ್ರದೇಶದಲ್ಲಿ ನಕಲಿ ಉದ್ಯೋಗ ಕಾರ್ಡ್‌ಗಳು ಪತ್ತೆಯಾಗಿವೆ” ಎಂದು ಘೋಷ್ ಹೇಳಿದ್ದಾರೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (MGNREGA) 2005ರಲ್ಲಿ ರಚಿಸಲಾಯಿತು ಮತ್ತು ಫೆಬ್ರವರಿ 2, 2006ರಂದು ಜಾರಿಗೆ ಬಂದಿತು. ಆರಂಭದಲ್ಲಿ 200 ಜಿಲ್ಲೆಗಳನ್ನು ಒಳಗೊಂಡಿದ್ದ ಈ ಯೋಜನೆ, ನಂತರ ಭಾರತದಾದ್ಯಂತ ವಿಸ್ತರಣೆಗೊಂಡಿತು.
ಈ ಯೋಜನೆಯು ಗ್ರಾಮೀಣ ಕುಟುಂಬಗಳಿಗೆ ವರ್ಷಕ್ಕೆ 100 ದಿನಗಳ ಕೂಲಿ ಕೆಲಸವನ್ನು ಖಾತರಿಪಡಿಸುತ್ತದೆ. ಜೀವನೋಪಾಯ ಭದ್ರತೆಯನ್ನು ಹೆಚ್ಚಿಸುವುದು, ಬಡತನವನ್ನು ಕಡಿಮೆ ಮಾಡುವುದು. ಬಾಳಿಕೆ ಬರುವ ಗ್ರಾಮೀಣ ಸ್ವತ್ತುಗಳನ್ನು ಸೃಷ್ಟಿಸುವುದು ಮತ್ತು ಸಾರ್ವಜನಿಕ ಯೋಜನೆಗಳಲ್ಲಿ ಕೌಶಲ್ಯರಹಿತ ಕೈಪಿಡಿ ಕೆಲಸದ ಮೂಲಕ ಸಮಗ್ರ ಅಭಿವೃದ್ಧಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.


