ಇನ್ಫೋಸಿಸ್ ಸಹ ಸಂಸ್ಥಾಪಕ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಆಡಳಿತ ಮಂಡಳಿ ಅಧ್ಯಕ್ಷ ಸೇನಾಪತಿ ಕ್ರಿಸ್ ಗೋಪಾಲಕೃಷ್ಣನ್, ಐಐಎಸ್‌ಸಿ ನಿರ್ದೇಶಕ ಪ್ರೊ. ಗೋವಿಂದನ್ ರಂಗರಾಜನ್ ಸೇರಿ 16 ಮಂದಿಯ ವಿರುದ್ಧ ಜಾತಿ ನಿಂದನೆ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ ಎಂದು ವರದಿಯಾಗಿದೆ.
ವಿಶೇಷ ನ್ಯಾಯಾಲಯವು ಡಾ. ಡಿ ಸಣ್ಣ ದುರ್ಗಪ್ಪ ಅವರ ಖಾಸಗಿ ದೂರಿನ ಸಂಜ್ಞೇ ಪರಿಗಣಿಸಿರುವುದು ಮತ್ತು ಬೆಂಗಳೂರಿನ ಸದಾಶಿವನಗರ ಠಾಣೆಯ ಪೊಲೀಸರು ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಸೇನಾಪತಿ ಕ್ರಿಸ್ ಗೋಪಾಲಕೃಷ್ಣನ್, ಐಐಎಸ್‌ಸಿ ನಿರ್ದೇಶಕ ಗೋವಿಂದನ್ ರಂಗರಾಜನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರ ಏಕಸದಸ್ಯ ಪೀಠವು ಪುರಸ್ಕರಿಸಿದೆ ಎಂದು barandbench.com ವರದಿ ಮಾಡಿದೆ.
“ಸಿವಿಲ್ ಪ್ರಕರಣಕ್ಕೆ ಕ್ರಿಮಿನಲ್ ಬಣ್ಣ ನೀಡಲಾಗಿದೆ ಎಂಬುದನ್ನು ಆಧರಿಸಿ ಈ ಹಿಂದೆ ದೂರುದಾರರು ದಾಖಲಿಸಿದ್ದ ಎರಡು ಕ್ರಿಮಿನಲ್ ದೂರುಗಳನ್ನು ನ್ಯಾಯಾಲಯ ವಜಾಗೊಳಿಸಿದೆ. ಹಾಲಿ ಪ್ರಕರಣವು ಅಂಥವೇ ಆರೋಪಗಳನ್ನು ಒಳಗೊಂಡಿದೆ. ದೂರುದಾರ ದುರ್ಗಪ್ಪ ಅವರನ್ನು ಸೇವೆಯಿಂದ ವಜಾಗೊಳಿಸಿರುವುದರಿಂದ ಅವರು ರಾಜೀನಾಮೆ ನೀಡಿದ್ದರು. ಇದಕ್ಕೆ ಪ್ರತೀಕಾರವಾಗಿ ಮೂರನೇ ದೂರು ನೀಡಿದ್ದಾರೆ. ಪಕ್ಷಕಾರರ ನಡುವಿನ ವಿವಾದವು ಸಿವಿಲ್ ಸ್ವರೂಪದ್ದಾಗಿದ್ದು, ಅದಕ್ಕೆ ಕ್ರಿಮಿನಲ್ ಬಣ್ಣ ಹಚ್ಚಲಾಗಿದೆ” ಎಂದು ನ್ಯಾಯಾಲಯ ಹೇಳಿದ್ದು, ಹಾಲಿ ದೂರು ಕಾನೂನಿನ ದುರ್ಬಳಕೆ ಎಂದು ಪೀಠ ದಾಖಲಿಸಿದೆ ಎಂದು ವರದಿ ವಿವರಿಸಿದೆ.
“ಸಣ್ಣ ದುರ್ಗಪ್ಪ ಮತ್ತು ಐಐಎಸ್‌ಸಿ ಪ್ರತಿನಿಧಿಗಳು ರಾಜೀ ಮಾಡಿಕೊಂಡ ಹಿನ್ನೆಲೆಯಲ್ಲಿ ಅವರನ್ನು ವಜಾಗೊಳಿಸಿದ್ದನ್ನು ರಾಜೀನಾಮೆಯನ್ನಾಗಿ ಪರಿವರ್ತಿಸಲಾಗಿತ್ತು. ವಿವಿಧ ಕಡೆ ಐಐಎಸ್‌ಸಿ ಪ್ರತಿನಿಧಿಗಳ ವಿರುದ್ಧ ದಾಖಲಿಸಿರುವ ದೂರುಗಳನ್ನು ಹಿಂಪಡೆಯಬೇಕು ಎಂಬುದು ಷರತ್ತುಗಳ ಪೈಕಿ ಒಂದಾಗಿತ್ತು. ರಾಜೀನಾಮೆ ಹಿನ್ನೆಲೆಯಲ್ಲಿ ಲಭ್ಯವಿರುವ ಸವಲತ್ತುಗಳನ್ನು ಪಡೆದ ಬಳಿಕವೂ ಸಣ್ಣ ದುರ್ಗಪ್ಪ ಅವರು ಐಐಎಸ್‌ಸಿ ಪ್ರತಿನಿಧಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ಮುಂದುವರಿಸಿದ್ದರು ಎಂಬುದನ್ನು ನ್ಯಾಯಾಲಯ ಆದೇಶದಲ್ಲಿ ಉಲ್ಲೇಖಿಸಿದೆ. ಅಲ್ಲದೇ, ಸಣ್ಣ ದುರ್ಗಪ್ಪ ವಿರುದ್ಧ ಐಐಎಸ್‌ಸಿ ಪ್ರತಿನಿಧಿಗಳು ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಮುಂದುವರಿಸಲು ಕ್ರಮಕೈಗೊಳ್ಳಬಹುದು” ಎಂದು ಆದೇಶಿಸಿದೆ ಎಂದು ತಿಳಿಸಿದೆ.
ದೂರಿನಲ್ಲಿ ಏನಿತ್ತು?: ಐಐಎಸ್‌ಸಿಯಲ್ಲಿ 2014ರಲ್ಲಿ ಹನಿಟ್ರ್ಯಾಪ್ ಮೂಲಕ ತನ್ನನ್ನು ಸೇವೆಯಿಂದ ವಜಾ ಮಾಡಿಸಲಾಗಿದೆ ಎಂದು ದುರ್ಗಪ್ಪ ದೂರಿದ್ದರು. ಅಲ್ಲದೇ, ಗೋಂವಿದನ್ ರಂಗರಾವ್, ಶ್ರೀಧರ್ ವಾರಿಯರ್, ಸೇನಾಪತಿ ಕ್ರಿಶ್ ಗೋಪಾಲಕೃಷ್ಣನ್, ಅನಿಲ್ ಕುಮಾರ್, ದೀಪ್ಸಿಕಾ ಚಕ್ರವರ್ತಿ, ನಮ್ರತಾ ಗುಂಡಯ್ಯ, ಡಾ. ನಿರ್ಮಲಾ, ಸಂಧ್ಯಾ ವಿಶ್ವೇಶ್ವರಯ್ಯ, ಕೆವಿಎಸ್ ಹರಿ, ದಾಸಪ್ಪ, ಪಿ ಬಾಲಚಂದ್ರ, ಪಿ ಬಲರಾಮ, ಅಂಜಲಿ ಕೆ ಕಾರಂಡೆ, ಹೇಮಲತಾ ಮ್ಹಿಷಿ, ಕೆ ಚಟ್ಟೋಪಾಧ್ಯಾಯ, ಪ್ರದೀಪ್ ಸಾವ್ಕಾರ್, ಅಭಿಲಾಷ್ ರಾಜು, ವಿಕ್ಟರ್ ಮನೋಹರನ್ ಅವರು 2008ರಿಂದ 2025ರವರೆಗೆ ತನ್ನ ಮೇಲೆ ಜಾತಿ ನಿಂದನೆ ಮಾಡಿ, ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದರು.
ಸೌಜನ್ಯ : barandbench.com
ಜಾತಿ ಗಣತಿ ವರದಿ ಪ್ರಶ್ನಿಸಿ ಅರ್ಜಿ: ಮಧ್ಯಂತರ ಆದೇಶಕ್ಕೆ ಹೈಕೋರ್ಟ್ ನಕಾರ


