ಮಹಿಳೆಯ ಅಪಹರಣ ಪ್ರಕರಣದಲ್ಲಿ ಹೆಚ್.ಡಿ ರೇವಣ್ಣ ಅವರಿಗೆ ನೀಡಲಾಗಿರುವ ಜಾಮೀನು ರದ್ದುಗೊಳಿಸುವಂತೆ ಕೋರಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಇಂದು (ಆ.28) ವಜಾಗೊಳಿಸಿದೆ.
ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಎಸ್‌ಐಟಿ ವಾದ ಆಲಿಸಿದ ನಂತರ ಆಗಸ್ಟ್ 1 ರಂದು ಆದೇಶ ಕಾಯ್ದಿರಿಸಿತ್ತು. ರೇವಣ್ಣ ಅವರಿಗೆ ವಿಶೇಷ ನ್ಯಾಯಾಲಯ ಮೇ 13ರಂದು ಜಾಮೀನು ನೀಡಿದೆ.
ಪ್ರಜ್ವಲ್ ರೇವಣ್ಣ ವಿರುದ್ದ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದ ಬೆನ್ನಲ್ಲೇ, ಪ್ರಕರಣದ ಸಂತ್ರಸ್ತೆ ಎನ್ನಲಾದ ಮಹಿಳೆಯನ್ನು ಅಪಹರಿಸಿದ ಆರೋಪ ಶಾಸಕ ಹೆಚ್.ಡಿ ರೇವಣ್ಣ ಮೇಲಿದೆ. ಸಂತ್ರಸ್ತೆ ಪ್ರಜ್ವಲ್ ರೇವಣ್ಣ ವಿರುದ್ದ ದೂರು ನೀಡದಂತೆ ತಡೆಯಲು ಆಕೆಯನ್ನು ರೇವಣ್ಣ ಅಪಹರಣ ಮಾಡಿಸಿದ್ದರು ಎನ್ನಲಾಗಿದೆ. ಈ ಸಂಬಂಧ ಮಹಿಳೆಯ ಮಗ ದೂರು ದಾಖಲಿಸಿದ್ದರು. ಎಸ್‌ಐಟಿ ರೇವಣ್ಣ ಅವರನ್ನು ಬಂಧಿಸಿತ್ತು.
ಇತರ ಆರೋಪಿಗಳಿಗೂ ಜಾಮೀನು
ಇದೇ ವೇಳೆ ಅಪಹರಣ ಪ್ರಕರಣದ ಇತರೆ ಆರೋಪಿಗಳಾದ ಹಾಸನದ ಸತೀಶ್ ಬಾಬು ಅಲಿಯಾಸ್ ಸತೀಶ್ ಬಾಬಣ್ಣ, ಹೆಚ್ ಕೆ ಸುಜಯ್, ಹೆಚ್ ಎನ್ ಮಧು, ಎಸ್ ಟಿ ಕೀರ್ತಿ, ಹೆಚ್ ಡಿ ಮಾಯು ಗೌಡ, ಕೆ ಎ ರಾಜಗೋಪಾಲ್ ಅವರಿಗೂ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ : ಹೆಚ್‌ಡಿಕೆ ‘ರಿವರ್ಸ್ ಆಪರೇಷನ್’ : ಮಂಡ್ಯ ನಗರಸಭೆ ಜೆಡಿಎಸ್ ಪಾಲು


