ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ರಾಜ್ಯದಲ್ಲಿ ಹಮ್ಮಿಕೊಂಡಿರುವ ಟ್ರಾನ್ಸ್‌ಜೆಂಡರ್ ಸಮೀಕ್ಷೆಯಯಲ್ಲಿ ʼಸ್ಟ್ರಿಪ್ ಆ್ಯಂಡ್ ಸರ್ಚ್ʼ (ಬಟ್ಟೆ ತೆಗೆಸಿ ಶೋಧಿಸುವ) ವಿಧಾನಕ್ಕೆ ಹೈಕೋರ್ಟ್ ಬುಧವಾರ (ಅ.15) ತಡೆ ನೀಡಿದೆ.
ಸೆಪ್ಟೆಂಬರ್ 15ರಂದು ಪ್ರಾರಂಭವಾದ ಸಮೀಕ್ಷೆಯಲ್ಲಿ ಸಂಗ್ರಹಿಸಿದ ಮಾಹಿತಿಯನ್ನು ಕಟ್ಟುನಿಟ್ಟಾಗಿ ಗೌಪ್ಯವಾಗಿಡಬೇಕು, ಎಲ್ಲೂ ಬಹಿರಂಗಪಡಿಸಬಾರದು ಎಂದು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿಎಂ ಪೂಣಚ್ಚ ಅವರ ವಿಭಾಗೀಯ ಪೀಠ ಸರ್ಕಾರಕ್ಕೆ ನಿರ್ದೇಶಿಸಿದೆ.
“ಆಸ್ಪತ್ರೆಗಳಲ್ಲಿ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳನ್ನು ವಿವಸ್ತ್ರಗೊಳಿಸಿ ಪರಿಶೀಲನೆ ಮಾಡಲಾಗುತ್ತಿದೆ. ಇದನ್ನು ಮಾಡುವವರು ಟ್ರಾನ್ಸ್‌ಜೆಂಡರ್ ಆದರೂ, ಅವರು ಲಿಂಗ ಗುರುತು ಸರಿಯಾಗಿ ಹೇಳಿಕೊಳ್ಳದವರು ಆಗಿರಬಹುದು. ಇದು ಟ್ರಾನ್ಸ್‌ಜೆಂಡರ್ ಜನರಿಗೆ ಅಪಮಾನ ಮತ್ತು ಖಾಸಗಿ ಭಾವನೆಗೆ ಧಕ್ಕೆ ತರುತ್ತದೆ. ಟ್ರಾನ್ಸ್‌ಜೆಂಡರ್‌ಗಳಿಗೆ ಸರ್ಕಾರ ಈಗಾಗಲೇ ಗುರುತಿನ ಚೀಟಿಗಳನ್ನು ನೀಡಿದೆ. ಇದರಿಂದ ಅವರ ಗುರುತು ಸುಲಭವಾಗಿ ಪತ್ತೆ ಮಾಡಬಹುದು. ಆದ್ದರಿಂದ, ಹೊಸ ಸಮೀಕ್ಷೆಗೆ ಮತ್ತೆ ಇಂತಹ ತಪಾಸಣೆ ಮಾಡುವ ಅಗತ್ಯವೇ ಇಲ್ಲ” ಎಂದು ಅನಿತಾ ಫೌಂಡೇಶನ್ ಪರ ವಕೀಲರು ವಾದಿಸಿದ್ದರು.
ಅರ್ಜಿಯ ಕುರಿತು ನೋಟಿಸ್ ಜಾರಿ ಮಾಡಿರುವ ಪೀಠ, ಮುಂದಿನ ವಿಚಾರಣೆಯ ದಿನಾಂಕವಾದ ಡಿಸೆಂಬರ್ 5ರೊಳಗೆ ತನ್ನ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಸಮೀಕ್ಷೆಯ ಸಮಯದಲ್ಲಿ ಸಂಗ್ರಹಿಸಿದ ಮಾಹಿತಿಯ ಗೌಪ್ಯತೆಯನ್ನು ಕಾಪಾಡಿಕೊಳ್ಳುವ ವಿಧಾನವನ್ನು ಸ್ಪಷ್ಟವಾಗಿ ವಿವರಿಸುವ ಅಫಿಡವಿಟ್ ಅನ್ನು 3 ದಿನಗಳಲ್ಲಿ ಸಲ್ಲಿಸುವಂತೆ ನ್ಯಾಯಾಲಯವು ಸಮಾಜ ಕಲ್ಯಾಣ ಇಲಾಖೆಗೆ ಸೂಚಿಸಿದೆ.
“ಟ್ರಾನ್ಸ್‌ಜೆಂಡರ್ ಮತ್ತು ಲಿಂಗ ವೈವಿಧ್ಯ ಹೊಂದಿರುವ (ಜೆಂಡರ್ ಡೈವರ್ಸ್) ಎಲ್ಲ ವ್ಯಕ್ತಿಗಳಿಗೆ ಪರಿಹಾರ ಮತ್ತು ಪುನರ್ವಸತಿ ನಿಧಿ (ಕಾಂಪೆನ್ಸೇಶನ್ ಮತ್ತು ರಿಹ್ಯಾಬಿಲಿಟೇಶನ್ ಫಂಡ್) ಸ್ಥಾಪಿಸುವಂತೆ ಹಾಗೂ, ಈ ನಿಧಿಯನ್ನು ಸಮೀಕ್ಷೆ ವೇಳೆ ಬಲವಂತದ ಗುರುತು ಪರಿಶೀಲನೆ/ಸ್ಟ್ರಿಪ್ ಚೆಕಿಂಗ್ (ಬಲಪೂರ್ವಕ ದೇಹ ಪರಿಶೀಲನೆ) ಅಥವಾ ಇತರ ಅಪಮಾನದ ರೂಪಗಳಿಗೆ ಒಳಗಾದವರಿಗೆ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
“ಕಾನೂನುಬಾಹಿರ, ಆಕ್ರಮಣಕಾರಿ ಮತ್ತು ಅಸಂವಿಧಾನಿಕ ಸಮೀಕ್ಷೆ ಪ್ರಕ್ರಿಯೆ”ಯನ್ನು ಕೈಗೊಂಡಿದ್ದಕ್ಕಾಗಿ ರಾಜ್ಯ ಸರ್ಕಾರ ಟ್ರಾನ್ಸ್‌ಜೆಂಡರ್ ಸಮುದಾಯಕ್ಕೆ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಮತ್ತು ಅಂತಹ ಕ್ರಮಗಳು ಪುನರಾವರ್ತನೆಯಾಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳಬೇಕು” ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಅಲ್ಲದೆ, ಆಕ್ಷೇಪಾರ್ಹ ಸಮೀಕ್ಷೆಯನ್ನು ರೂಪಿಸಿದ ಮತ್ತು ಕಾರ್ಯಗತಗೊಳಿಸಿದ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಹೊಣೆಗಾರಿಯನ್ನು ಹೊರಿಸುವಂತೆ ಕೋರಲಾಗಿದೆ.
ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ ಕಲ್ಯಾಣಕ್ಕಾಗಿ ಭವಿಷ್ಯದಲ್ಲಿ ಯಾವುದೇ ನೀತಿ ಅಥವಾ ಯೋಜನೆಯನ್ನು ರೂಪಿಸುವುದು ಮತ್ತು ಜಾರಿಗೊಳಿಸುವುದಕ್ಕೆ ಮುನ್ನ ಟ್ರಾನ್ಸ್‌ಜೆಂಡರ್ ಮತ್ತು LGBTQIA ಸಮುದಾಯದ ಪ್ರತಿನಿಧಿಗಳೊಂದಿಗೆ ಸರಿಯಾದ ಸಮಾಲೋಚನೆ ನಡೆಸಬೇಕು ಮತ್ತು ಆ ನೀತಿ, ಯೋಜನೆಗಳು ಸುಪ್ರೀಂ ಕೋರ್ಟ್‌ನ NALSA v. Union of India ತೀರ್ಪು ಮತ್ತು ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ 2019ರ ಸೆಕ್ಷನ್ 4ಕ್ಕೆ ಸಮ್ಮತವಾಗಿರಬೇಕು ಎಂದು ಆದೇಶ ನೀಡುವಂತೆ ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು.


