ಕರ್ನಾಟಕ ಸರ್ಕಾರ ಜಾರಿಗೊಳಿಸಿರುವ ಒಳಮೀಸಲಾತಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ನಿಂದ ಮಹತ್ವದ ನಿರ್ಧಾರ ಪ್ರಕಟವಾಗಿದ್ದು, ನೇಮಕಾತಿ ಆದೇಶಕ್ಕೆ ತಡೆ ನೀಡಿದೆ. ಒಳಮೀಸಲಾತಿ ಹಂಚಿಕೆಯಲ್ಲಿ ಅನ್ಯಾಯವಾಗಿದೆ ಎಂದು ಅಸ್ಪೃಶ್ಯ ಅಲೆಮಾರಿ ಸಮುದಾಯಗಳು ಕೋರ್ಟ್ ಮೆಟ್ಟಿಲೇರಿದ್ದವು.
ಪರಿಶಿಷ್ಟ ಜಾತಿಗಳನ್ನು ಉಪವರ್ಗೀಕರಿಸಿ ಒಳಮೀಸಲಾತಿ ಕಲ್ಪಿಸಿ ಸರ್ಕಾರ ಹೊರಡಿಸಿದ್ದ 25.08.2025ರ ಆದೇಶವನ್ನು ಕರ್ನಾಟಕ ಅಸ್ಪೃಶ್ಯ ಅಲೆಮಾರಿಗಳ ಮಹಾ ಒಕ್ಕೂಟ ಮತ್ತು ಇತರರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
ಪ್ರಕರಣದಲ್ಲಿ 16.10.2025 ರಂದು ವಾದ ಆಲಿಸಿದ ಕರ್ನಾಟಕ ಹೈಕೋರ್ಟ್ ಸರ್ಕಾರಕ್ಕೆ ನೋಟಿಸ್ ನೀಡಿ ನೇಮಕಾತಿ ಆದೇಶ ಮಾಡದಂತೆ ಮಧ್ಯಂತರ ಆದೇಶ ಹೊರಡಿಸಿದೆ. ನೇಮಕಾತಿ ಪ್ರಕ್ರಿಯೆ ಮಾಡಬಹುದಾದರೂ ನೇಮಕಾತಿ ಆದೇಶ ಹೊರಡಿಸುವಂತಿಲ್ಲ ಎಂದು ಹೇಳಿರುವ ನ್ಯಾಯಾಲಯವು ಸರ್ಕಾರಕ್ಕೆ ತಕರಾರು ಸಲ್ಲಿಸಲು ಕಾಲಾವಕಾಶ ಕಲ್ಪಿಸಿ ವಿಚಾರಣೆಯನ್ನು ದಿನಾಂಕ ನವೆಂಬರ್ 13ಕ್ಕೆ ಮುಂದೂಡಿದೆ.
ಒಳಮೀಸಲಾತಿ ಜಾರಿಗಾಗಿ ಜಸ್ಟಿಸ್ ಎಚ್.ಎನ್.ನಾಗಮೋಹನ ದಾಸ್ ಆಯೋಗ ನೀಡಿದ್ದ ವರದಿಯನ್ನು ಸರ್ಕಾರ ಪರಿಷ್ಕರಿಸಿತ್ತು. ಐದು ವಿಭಾಗಗಳನ್ನಾಗಿ ಮಾಡಿದ್ದ ಆಯೋಗ, ಅಲೆಮಾರಿಗಳನ್ನು ‘ಪ್ರವರ್ಗ ಎ’ನಲ್ಲಿ ಇಟ್ಟು ಶೇ.1ರಷ್ಟು ಮೀಸಲಾತಿಯನ್ನು ಶಿಫಾರಸ್ಸು ಮಾಡಿತ್ತು. ಆದರೆ ಸರ್ಕಾರ ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ಮೂರು ವರ್ಗಗಳನ್ನಾಗಿ ವರ್ಗೀಕರಿಸಿ, ಸ್ಪೃಶ್ಯ ಜಾತಿಗಳ ಗುಂಪಿನೊಂದಿಗೆ ಅಲೆಮಾರಿಗಳನ್ನು ವಿಲೀನ ಮಾಡಿ, ‘ಪ್ರವರ್ಗ ಸಿ’ ಅಡಿ ಶೇ.5ರಷ್ಟು ಮೀಸಲಾತಿ ನೀಡಿತ್ತು.
“ಬಲಾಢ್ಯರೊಂದಿಗೆ ತಮ್ಮನ್ನು ಸೇರಿಸಿರುವುದರಿಂದ ಅನ್ಯಾಯವಾಗಿದೆ, ನಮ್ಮ ಅನ್ನದ ಬಟ್ಟಲನ್ನು ಸರ್ಕಾರ ಕಿತ್ತುಕೊಂಡಿದೆ” ಎಂದು ಅಲೆಮಾರಿಗಳು ಸಂಕಟ ವ್ಯಕ್ತಪಡಿಸಿದ್ದರು. ನಿರಂತರ ಹೋರಾಟ ಮಾಡಿದರೂ ಸರ್ಕಾರ ನಿರ್ಲಕ್ಷ್ಯ ತಾಳಿದ್ದರಿಂದ ಕೋರ್ಟ್ ಕದ ತಟ್ಟಿದ್ದರು. ಮತ್ತೊಂದೆಡೆ ದೆಹಲಿಗೂ ತೆರಳಿ ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ತರುವ ಪ್ರಯತ್ನವನ್ನು ಅಲೆಮಾರಿಗಳು ಮಾಡಿದ್ದರು.
ಸಚಿವ ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಕರೆ : ಆರೋಪಿಯನ್ನು ಬಂಧಿಸಿದ ಪೊಲೀಸರು


