ಪ್ರಧಾನಮಂತ್ರಿ ನರೇಂದ್ರ ಮೋದಿ ನಿನ್ನೆ ರಾತ್ರಿ ಘೋಷಿಸಿದ್ದ ಆತ್ಮನಿರ್ಭರ ಭಾರತ ಪ್ಯಾಕೇಜನ್ನು ಇಂದು ಸಂಜೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅದರ ವಿವರವಾದ ಮಾಹಿತಿ ನೀಡಿದ್ದಾರೆ.
ನಿನ್ನೆ ರಾತ್ರಿ ಪ್ರಧಾನಿ ಪ್ಯಾಕೇಜನ್ನು ಘೋಷಿಸಿದಾಗಲೇ ಪ್ಯಾಕೇಜಿನ ವಿವರವಾದ ಮಾಹಿತಿಯನ್ನು ಹಣಕಾಸು ಸಚಿವರು ನೀಡುತ್ತಾರೆ ಎಂದು ಹೇಳಿದ್ದರು. ಅದರಂತೆ ಇಂದು ಸಂಜೆಗೆ ಇದರ ವಿವರವನ್ನು ನೀಡುವುದಾಗಿ ನಿರ್ಮಲಾ ಸೀತಾರಾಮನ್ ಅವರು ಕೂಡಾ ಹೇಳಿದ್ದರು.
ಸುದ್ದಿಗೋಷ್ಟಿಯಲ್ಲಿ ಆತ್ಮನಿರ್ಭರ ಯೋಜನೆಯನ್ನು ಸಮಗ್ರ ದೃಷ್ಟಿಕೋನದಿಂದ, ಸಮಾಜದ ಹಲವಾರು ವರ್ಗಗಳೊಂದಿಗೆ ವ್ಯಾಪಕ ಸಮಾಲೋಚನೆ ನಡೆಸಿದ ನಂತರ ಇದನ್ನು ರೂಪಿಸಲಾಯಿತು ಎಂದು ಸಚಿವರು ಹೇಳಿದರು.
ಮೂಲಭೂತವಾಗಿ ಈ ಯೋಜನೆಯು ಬೆಳವಣಿಗೆಯನ್ನು ಉತ್ತೇಜಿಸುವುದು ಹಾಗೂ ಅತ್ಯಂತ ಸ್ವಾವಲಂಬಿ ಭಾರತವನ್ನು ನಿರ್ಮಿಸುವುದಾಗಿದ್ದು ಅದಕ್ಕಾಗಿಯೇ ಇದನ್ನು ಆತ್ಮನಿರ್ಭರ ಭಾರತ ಅಭಿಯಾನ್ ಎಂದು ಕರೆಯಲಾಗುತ್ತದೆ ಎಂದು ಹೇಳಿದ್ದಾರೆ.
ಆತ್ಮನಿರ್ಭಾರ ಭಾರತದ ಐದು ಸ್ತಂಭಗಳು ಆರ್ಥಿಕತೆ, ಮೂಲಸೌಕರ್ಯ, ವ್ಯವಸ್ಥೆ, ಜನಸಂಖ್ಯಾಶಾಸ್ತ್ರ ಮತ್ತು ಬೇಡಿಕೆ ಎಂದು ಸೀತಾರಾಮನ್ ಹೇಳಿದರಲ್ಲದೆ, ಇಂದಿನಿಂದ ಮುಂದಿನ ಕೆಲವು ದಿನಗಳಲ್ಲಿ ಪ್ರಧಾನ ಮಂತ್ರಿಯ ದೃಷ್ಟಿಕೋನವನ್ನು ಮುಂದಿಡಲು ನಾವು ತಂಡದೊಂದಿಗೆ ಮಾಧ್ಯಮದ ಮುಂದೆ ಬರುತ್ತೇವೆ ಎಂದರು.
ದೇಶದ ಬಡವರು, ನಿರ್ಗತಿಕರು, ವಲಸೆ ಕಾರ್ಮಿಕರು, ದಿವ್ಯಾಂಗರು ಮತ್ತು ವಯಸ್ಸಾದವರ ಬಗ್ಗೆ ನಮಗೆ ಜವಾಬ್ದಾರಿ ಇದೆ ಎಂಬುದನ್ನು ನಾವು ಮರೆಯಬಾರದು ಎಂದು ಅವರು ಹೇಳಿದರು.
3 ಲಕ್ಷ ಕೋಟಿ ಮೌಲ್ಯದ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ಕೊಲ್ಯಾಟರಲ್ ಉಚಿತ ಸ್ವಯಂಚಾಲಿತ ಸಾಲ ನೀಡಲಾಗುವುದು, ಇವುಗಳು 4 ವರ್ಷದ ಟೆನರ್ ಹೊಂದಿದ್ದು, 2020 ರ ಅಕ್ಟೋಬರ್ 31 ರವರೆಗೆ ಮಾನ್ಯವಾಗಿವೆ ಎಂದರು.
ಇದು 45 ಲಕ್ಷ ಸಣ್ಣ ಹಾಗೂ ಮಧ್ಯಮ ಕೈಗಾರಿಕಾ ಘಟಕಗಳಿಗೆ ವ್ಯವಹಾರ ಚಟುವಟಿಕೆಯನ್ನು ಪುನರಾರಂಭಿಸಲು ಮತ್ತು ಉದ್ಯೋಗಗಳನ್ನು ಕಾಪಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸಣ್ಣ ಹಾಗೂ ಮಧ್ಯಮ ಕೈಗಾರಿಕೆ ಸೇರಿದಂತೆ ವ್ಯವಹಾರಗಳಿಗೆ 3 ಲಕ್ಷ ಕೋಟಿ ರೂ. ಮೇಲಾಧಾರ ರಹಿತ ಸ್ವಯಂಚಾಲಿತ ಸಾಲಗಳನ್ನು ಘೋಷಿಸಿದ ಅವರು, ಇದಕ್ಕೆ 25 ಕೋಟಿ ಬಾಕಿ ಮತ್ತು 100 ಕೋಟಿ ವಹಿವಾಟು ಹೊಂದಿರುವ ಸಾಲಗಾರರು ಅರ್ಹರು ಎಂದರು.
ಸಣ್ಣ ಹಾಗೂ ಮಧ್ಯಮ ಕೈಗಾರಿಕೆ ವ್ಯಾಖ್ಯಾನವನ್ನು ಪರಿಷ್ಕರಿಸಲಾಗಿದ್ದು, ಹೂಡಿಕೆಯ ಮಿತಿಯನ್ನು ಮೇಲ್ಮುಖವಾಗಿ ಪರಿಷ್ಕರಿಸಿ, ವಹಿವಾಟಿನ ಹೆಚ್ಚುವರಿ ಮಾನದಂಡಗಳನ್ನು ಸಹ ಪರಿಚಯಿಸಲಾಗುತ್ತಿದೆ ಎಂದು ಹೇಳಿದರು.
200 ಕೋಟಿ ರೂ.ಗಳವರೆಗೆ ಸರ್ಕಾರದ ಖರೀದಿಯಲ್ಲಿ ಜಾಗತಿಕ ಟೆಂಡರ್‌ಗಳಿಗೆ ಅನುಮತಿ ನೀಡಲಾಗುವುದಿಲ್ಲ. ಇದರಿಂದಾಗಿ ಭಾರತ ಸ್ವಾವಲಂಬಿಯಾಗಲಿದೆ. ವ್ಯವಹಾರಗಳು ಮರಳಿ ಸರಿಯಾಗುತ್ತಿದ್ದಂತೆ ಆರ್ಥಿಕ ಒತ್ತಡವನ್ನು ಕಡಿಮೆ ಮಾಡಲು, ವ್ಯಾಪಾರ ಮತ್ತು ಕಾರ್ಮಿಕರಿಗೆ ಪಿಎಫ್ ಬೆಂಬಲವನ್ನು ಇನ್ನೂ 3 ತಿಂಗಳು ಮುಂದುವರಿಸಿ 2,500 ಕೋಟಿ ರೂ.ಗಳ ದ್ರವ್ಯತೆಯ ಪರಿಹಾರವನ್ನು ಸರ್ಕಾರ ನೀಡುತ್ತದೆ ಎಂದರು.
ಉದ್ಯೋಗಿಗಳಿಗೆ ಹೆಚ್ಚಿನ ಟೇಕ್ ಹೋಮ್ ಸಂಬಳವನ್ನು ಒದಗಿಸಲು ಮತ್ತು ಪಿಎಫ್ ಪಾವತಿಸುವಲ್ಲಿ ಉದ್ಯೋಗದಾತರಿಗೆ ಪರಿಹಾರವನ್ನು ನೀಡುವ ಸಲುವಾಗಿ, ವ್ಯವಹಾರಗಳು ಮತ್ತು ಕಾರ್ಮಿಕರಿಗೆ ಪಿಎಫ್ ಕೊಡುಗೆಯನ್ನು 3 ತಿಂಗಳವರೆಗೆ ಕಡಿತ ಮಾಡಿ, 6750 ಕೋಟಿ ರೂ.ಗಳ ದ್ರವ್ಯತೆ ಬೆಂಬಲವನ್ನು ನೀಡಲಾಗುತ್ತದೆ.
ಬ್ಯಾಂಕೇತರ ಹಣಕಾಸು ಕಂಪನಿಗಳು, ಕಿರುಬಂಡವಾಳ ಕಂಪನಿಗಳು, ವಸತಿ ಹಣಕಾಸು ಕಂಪನಿಗಳಿಗಾಗಿ ಸರ್ಕಾರ 30,000 ಕೋಟಿ ರೂ.ಗಳ ವಿಶೇಷ ದ್ರವ್ಯತೆ ಯೋಜನೆಯನ್ನು ಪ್ರಾರಂಭ. ವಿದ್ಯುತ್ ವಿತರಣಾ ಕಂಪನಿಗಳಿಗೆ (ಡಿಸ್ಕಾಮ್) 90,000 ಕೋಟಿ ರೂ. ಗಳ ದ್ರವ್ಯತೆ ನೀಡಲಾಗುವುದು ಎಂದರು.
ಎಲ್ಲಾ ಕೇಂದ್ರ ಏಜೆನ್ಸಿಗಳು ಗುತ್ತಿಗೆದಾರನಿಗೆ ವೆಚ್ಚವಿಲ್ಲದೆ, ನಿರ್ಮಾಣ ಹಾಗೂ ಸರಕು ಮತ್ತು ಸೇವಾ ಒಪ್ಪಂದಗಳನ್ನು ಒಳಗೊಂಡ ಕೆಲಸವನ್ನು ಪೂರ್ಣಗೊಳಿಸುವಂತಹ ಗುತ್ತಿಗೆಳನ್ನು 6 ತಿಂಗಳವರೆಗೆ ವಿಸ್ತರಣೆ ನೀಡಲಾಗಿದೆ ಎಂದರು.
ಮಾರ್ಚ್ 31, 2021 ರವರೆಗೆ ಟಿಡಿಎಸ್ / ಟಿಸಿಎಸ್ ದರವನ್ನು 25% ರಷ್ಟು ಕಡಿಮೆಗೊಳಿಸಲಾಗುವುದು ಹಾಗೂ 2019-2020ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್‌ನ ಅಂತಿಮ ದಿನಾಂಕವನ್ನು 2020 ರ ನವೆಂಬರ್ 30 ರವರೆಗೆ ವಿಸ್ತರಿಸಲಾಗಿದೆ ಎಂದು ಹೇಳಿದರು.
ಓದಿ: ಹಳ್ಳಿ ತಲುಪಲು 500 ಕಿ.ಮೀ. ಸೈಕಲ್ ಪ್ರಯಾಣ ಹೊರಟ ‘ಲಕ್ಷ್ಮಿ’! : ಮೋದಿ ಪ್ಯಾಕೇಜ್‌ನಿಂದ ಪ್ರಯೋಜನವಿಲ್ಲ.
ವಿಡಿಯೊ ನೋಡಿ: ಮರಯಲೇ ಬಾರದ ಸುದ್ದಿಗಳಿವು, ಈ ಸುದ್ದಿಗಳೇನಾಗಿದೆ


