Homeಮುಖಪುಟಹಿಜಾಬ್‌ live Updates: ಅಧಿಕೃತ ಮಧ್ಯಂತರ ಆದೇಶ ಪ್ರಕಟಿಸಿದ ಕರ್ನಾಟಕ ಹೈಕೋರ್ಟ್

ಹಿಜಾಬ್‌ live Updates: ಅಧಿಕೃತ ಮಧ್ಯಂತರ ಆದೇಶ ಪ್ರಕಟಿಸಿದ ಕರ್ನಾಟಕ ಹೈಕೋರ್ಟ್

- Advertisement -
- Advertisement -

ಸಮಯ: ಮಧ್ಯಾಹ್ನ 12 ಗಂಟೆ, ಶುಕ್ರವಾರ: ಗುರುವಾರ ಮೌಖಿಕ ಆದೇಶ ನೀಡಿದ್ದ ಕರ್ನಾಟಕ ಹೈಕೋರ್ಟ್ ಶುಕ್ರವಾರ ಮಧ್ಯಂತರ ಆದೇಶ ಪ್ರಕಟಿಸಿದೆ.

“ಎಲ್ಲಾ ವಿದ್ಯಾರ್ಥಿಗಳಿಗೂ ನಾವು ನಿರ್ಬಂಧ ಹೇರುತ್ತಿದ್ದೇವೆ. ಅವರವರ ಧರ್ಮಾನುಸಾರ ಕೇಸರಿ ಶಾಲನ್ನಾಗಲೀ, ಹಿಜಾಬ್ ಅನ್ನಾಗಲೀ, ಧಾರ್ಮಿಕ ಬಾವುಟಗಳನ್ನಾಗಲೀ ತರಗತಿಯೊಳಗೆ ತರಬಾರದು. ಮುಂದಿನ ಆದೇಶದವರೆಗೂ ಇವುಗಳನ್ನು ತರದಂತೆ ನಿರ್ಬಂಧಿಸುತ್ತಿದ್ದೇವೆ” ಎಂದು ಹೈಕೋರ್ಟ್ ತಿಳಿಸಿದೆ.

“ನಮ್ಮದು ನಾಗರಿಕ ಸಮಾಜ. ಧರ್ಮ, ಸಂಸ್ಕೃತಿ ಹೆಸರಲ್ಲಿ ಶಾಂತಿ, ಸಾಮರಸ್ಯಕ್ಕೆ ಧಕ್ಕೆ ಸರಿಯಲ್ಲ. ಯಾವುದೇ ವ್ಯಕ್ತಿ ಇಂತಹ ಕೃತ್ಯ ನಡೆಸಲು ಅವಕಾಶವಿಲ್ಲ. ಕಡಿವಾಣವಿರದ ಪ್ರತಿಭಟನೆಗಳಿಂದ ಶಾಲೆ ಕಾಲೇಜುಗಳು ಬಂದ್ ಆಗಬಾರದು” ಎಂದು ಹೇಳಿದೆ.

“ಶಿಕ್ಷಣ ಸಂಸ್ಥೆಗಳು ಅನಿರ್ದಿಷ್ಟ ಕಾಲ ಬಂದ್ ಆಗುವುದು ಸಂತಸದ ಸಂಗತಿಯಲ್ಲ. ಈ ಪ್ರಕರಣದ ವಿಚಾರಣೆಯನ್ನು ತುರ್ತು ಆಧಾರದ ಮೇಲೆ ನಡೆಸಲಾಗುತ್ತಿದೆ. ಶೈಕ್ಷಣಿಕ ವರ್ಷವನ್ನು ವಿಳಂಬಿಸುವುದರಿಂದ ವಿದ್ಯಾರ್ಥಿಗಳ ಹಿತಕ್ಕೆ ಧಕ್ಕೆಯಾಗುತ್ತದೆ. ಉನ್ನತ ಶಿಕ್ಷಣದ ಪ್ರವೇಶಕ್ಕೆ ಸಮಯ ಈಗಾಗಲೇ ನಿಗದಿಯಾಗಿರುತ್ತದೆ. ನಿಗದಿತ ಸಮಯದೊಳಗೆ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯುವುದು ಕಡ್ಡಾಯವಾಗುತ್ತದೆ” ಎಂದು ಹೈಕೋರ್ಟ್ ತಿಳಿಸಿದೆ.


ಸಮಯ: ಬೆಳಿಗ್ಗೆ 11 ಗಂಟೆ, 12 ನಿಮಿಷ, ಶುಕ್ರವಾರ: ಹಿಜಾಬ್ ಅರ್ಜಿಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ನ ನಿರ್ದೇಶನದ ವಿರುದ್ಧ ಸಲ್ಲಿಕೆಯಾಗಿದ್ದ ವಿಶೇಷ ರಜೆ ಅರ್ಜಿಯ ವಿಚಾರಣೆಗೆ ತುರ್ತು ಪಟ್ಟಿಯನ್ನು ನೀಡಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.

ಸುಪ್ರೀಂ ಕೋರ್ಟ್ ಈ ವಿಷಯವನ್ನು ಸೂಕ್ತ ಸಮಯದಲ್ಲಿ ಕೈಗೆತ್ತಿಕೊಳ್ಳಲಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಹೇಳಿದ್ದಾರೆ.

ಈ ವಿಷಯವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಸ್ತಾಪಿಸಿದ ಹಿರಿಯ ವಕೀಲ ದೇವದತ್ತ್ ಕಾಮತ್ ಅವರಿಗೆ, ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯವರು, “ಈ ವಿಷಯವನ್ನು ದೊಡ್ಡ ಮಟ್ಟದಲ್ಲಿ ಹರಡಲು ಬಯಸುವುದಿಲ್ಲ” ಎಂದಿದ್ದಾರೆ.

“ನಾನು ಏನನ್ನೂ ವ್ಯಕ್ತಪಡಿಸಲು ಬಯಸುವುದಿಲ್ಲ. ಈ ವಿಷಯಗಳನ್ನು ದೊಡ್ಡ ಮಟ್ಟಕ್ಕೆ ಹರಡಬೇಡಿ. ಈ ವಿಷಯಗಳನ್ನು ದೆಹಲಿಗೆ ತರುವುದು ಸರಿಯೇ, ರಾಷ್ಟ್ರೀಯ ಮಟ್ಟದ ಸಮಸ್ಯೆಯೇ, ಎಲ್ಲದಕ್ಕೂ ನೀವು ಯೋಚಿಸಬೇಕು” ಎಂದು ತಿಳಿಸಿದ್ದಾರೆ.

ತ್ರಿಸದಸ್ಯ ಪೀಠದ ಮುಂದೆ ನಡೆಯುತ್ತಿರುವ ವಿಚಾರಣೆಗಳು ಹಾಗೂ ಹಿಜಾಬ್ ಸಮಸ್ಯೆಯನ್ನು ವಿಚಾರಣೆ ನಡೆಸುತ್ತಿರುವ ಹೈಕೋರ್ಟ್‌ನ ನಿರ್ದೇಶನಕ್ಕೆ ತಡೆಯಾಜ್ಞೆ ನೀಡಬೇಕು ಎಂದು ವಿದ್ಯಾರ್ಥಿಯೊಬ್ಬರು ಸಲ್ಲಿಸಿರುವ ಮನವಿಯಲ್ಲಿ ಕೋರಲಾಗಿದೆ. ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಅವಕಾಶ ನೀಡದೆ ಅವರ ಮೂಲಭೂತ ಹಕ್ಕನ್ನು ಮೊಟಕುಗೊಳಿಸಲು ಹೈಕೋರ್ಟ್ ಪ್ರಯತ್ನಿಸಿದೆ ಎಂದು ಮೇಲ್ಮನವಿಯಲ್ಲಿ ಪ್ರತಿಪಾದಿಸಲಾಗಿದೆ.

ಕರ್ನಾಟಕ ಹೈಕೋರ್ಟ್‌ ಮೌಖಿಕವಾಗಿ ನೀಡಿರುವ ಮಧ್ಯಂತರ ತಡೆ ಆದೇಶವನ್ನು ಪ್ರಶ್ನಿಸಿ ಹಿಜಾಬ್ ಧರಿಸುವ ಧಾರ್ಮಿಕ ಹಕ್ಕಿಗಾಗಿ ಹೋರಾಡುತ್ತಿರುವ ವಿದ್ಯಾರ್ಥಿನಿಯೊಬ್ಬರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು.

ಶಾಲಾ-ಕಾಲೇಜುಗಳನ್ನು ಮತ್ತೆ ತೆರೆಯಬಹುದು. ಆದರೆ ವಿದ್ಯಾರ್ಥಿಗಳು ಧಾರ್ಮಿಕ ಉಡುಪುಗಳನ್ನು ವಿಚಾರಣೆ ಮುಗಿಯುವವರೆಗೂ ಧರಿಸುವಂತಿಲ್ಲ ಎಂಬ ಕರ್ನಾಟಕ ಹೈಕೋರ್ಟ್ ಸೂಚನೆಯು ಭಾರತೀಯ ಸಂವಿಧಾನದ 14, 15, 19, 21 ಮತ್ತು 25ನೇ ವಿಧಿಯನ್ನು ಉಲ್ಲಂಘಿಸುತ್ತದೆ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾದ ವಿಶೇಷ ರಜೆ ಅರ್ಜಿಯಲ್ಲಿ ತಿಳಿಸಲಾಗಿದೆ.

ಕಾಲೇಜುಗಳಲ್ಲಿ ಧಾರ್ಮಿಕ ವಸ್ತ್ರಗಳನ್ನು ಧರಿಸುವುದನ್ನು ಮೌಖಿಕವಾಗಿ ನಿಷೇಧಿಸಿರುವ ಕರ್ನಾಟಕ ಹೈಕೋರ್ಟ್‌ನ ಸೂಚನೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಹೊಸ ಅರ್ಜಿಯನ್ನು ಸಲ್ಲಿಸಲಾಗಿದೆ.

“ಮಧ್ಯಂತರ ಆದೇಶವು ವ್ಯಕ್ತಿಗಳ, ವಿಶೇಷವಾಗಿ ಮುಸ್ಲಿಂ ಮಹಿಳಾ ವಿದ್ಯಾರ್ಥಿಗಳ ಆತ್ಮಸಾಕ್ಷಿಯ ಆಯ್ಕೆಯನ್ನು ಪ್ರಶ್ನಿಸಿದೆ” ಎಂದು ವಿದ್ಯಾರ್ಥಿಯೊಬ್ಬರು ವಿಶೇಷ ರಜೆ ಅರ್ಜಿಯನ್ನು ಸಲ್ಲಿಸಿದ್ದರು.

ಹೈಕೋರ್ಟ್ ಆದೇಶದ ಪ್ರತಿಯನ್ನು ಇನ್ನೂ ಬಿಡುಗಡೆ ಮಾಡದ ಕಾರಣ ಅರ್ಜಿದಾರರು, ಕರ್ನಾಟಕ ಹೈಕೋರ್ಟ್ ಪ್ರೊಸೀಡಿಂಗ್ಸ್ ಲೈವ್ ಲಾನಲ್ಲಿ ಆಗಿರುವ ಲೈವ್ ಟ್ವೀಟ್‌ಗಳ ಪಠ್ಯವನ್ನು ಸಲ್ಲಿಸಲಾಗಿದೆ.


ಸಮಯ: ಬೆಳಿಗ್ಗೆ 11.08. ಶುಕ್ರವಾರ

ವೈಯಕ್ತಿಕ ವಿವರ ಸೋರಿಕೆ: ದೂರು ದಾಖಲು

ಹಿಜಾಬ್‌ ಹಕ್ಕಿಗಾಗಿ ಪ್ರತಿಭಟಿಸಿದ ವಿದ್ಯಾರ್ಥಿನಿಯ ವೈಯಕ್ತಿಕ ವಿವರಗಳು ಸೋರಿಕೆಯಾಗಿರುವ ಸಂಬಂಧ ವಿದ್ಯಾರ್ಥಿನಿಯರ ಪೋಷಕರು ದೂರು ದಾಖಲಿಸಿದ್ದಾರೆ.

ಉಡುಪಿಯ ಪದವಿ ಪೂರ್ವ ಕಾಲೇಜಿನಲ್ಲಿ ಹಿಜಾಬ್ ಧರಿಸುವ ಹಕ್ಕಿಗಾಗಿ ಪ್ರತಿಭಟನೆ ನಡೆಸುತ್ತಿರುವ ಆರು ಮುಸ್ಲಿಂ ವಿದ್ಯಾರ್ಥಿನಿಯರ ಪೋಷಕರು ತಮ್ಮ ಮಕ್ಕಳ ವೈಯಕ್ತಿಕ ವಿವರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಹಂಚಿಕೊಳ್ಳುತ್ತಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್ ಅವರಿಗೆ ದೂರು ಸಲ್ಲಿಸಿರುವ ಪೋಷಕರು, ಮೊಬೈಲ್ ಸಂಖ್ಯೆ ಸೇರಿದಂತೆ ಬಾಲಕಿಯರ ವೈಯಕ್ತಿಕ ವಿವರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವವರ ವಿರುದ್ಧ ಕ್ರಮ ಜರುಗಿಸುವಂತೆ ಕೋರಿದ್ದಾರೆ. ಈ ವಿವರಗಳನ್ನು ಬಳಸಿಕೊಂಡು ದುಷ್ಕರ್ಮಿಗಳು ಬಾಲಕಿಯರಿಗೆ ಬೆದರಿಕೆ ಹಾಕಬಹುದು ಎಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.

ಬಾಲಕಿಯರ ಪೋಷಕರು ತಮಗೆ ಲಿಖಿತ ದೂರು ಸಲ್ಲಿಸಿದ್ದಾರೆ ಎಂದು ವಿಷ್ಣುವರ್ಧನ್ ಹೇಳಿದ್ದಾರೆ. ಸೂಕ್ತ ಮಾಹಿತಿ ಹಾಗೂ ಸಾಕ್ಷ್ಯಾಧಾರಗಳನ್ನು ಕೇಳಲಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

(ವಿವಾದಕ್ಕೆ ಸಂಬಂಧಿಸಿದ ವಿವರಗಳನ್ನು ಅಪ್‌ಡೇಟ್‌ ಮಾಡಲಾಗುತ್ತಿದೆ. ಆಗಾಗ್ಗೆ ರೀಫ್ರೆಶ್‌ ಮಾಡಿರಿ)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮತದಾನ ನಡೆದ 48 ಗಂಟೆಗಳಲ್ಲಿ ಅಂಕಿಅಂಶಗಳ ಬಿಡುಗಡೆ: ಚು.ಆಯೋಗದಿಂದ ಪ್ರತಿಕ್ರಿಯೆ ಕೇಳಿದ ಸುಪ್ರೀಂಕೋರ್ಟ್‌

0
ಮತದಾನ ಮುಗಿದ 48 ಗಂಟೆಗಳ ಒಳಗೆ ಮತದಾನ ಕೇಂದ್ರವಾರು ಮತದಾರರ ಅಂಕಿಅಂಶಗಳನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲು ನಿರ್ದೇಶನ ನೀಡುವಂತೆ ಕೋರಿ ಎನ್‌ಜಿಒ ಎಡಿಆರ್ ಸಲ್ಲಿಸಿದ ಮನವಿಗೆ ಸುಪ್ರೀಂಕೋರ್ಟ್ ಶುಕ್ರವಾರ ಒಂದು ವಾರದೊಳಗೆ ಭಾರತೀಯ...