Homeಮುಖಪುಟಒಳ್ಳೆಯತನದ ಪಾಲುದಾರಿಕೆಗೆ ಹಪಹಪಿಸುವ ಕ್ರೌರ್ಯ ಮೂಲದ ವ್ಯವಸ್ಥೆ; ಅಸ್ಗರ್ ಫರ್ಹಾದಿಯ ’ಎ ಹೀರೊ’

ಒಳ್ಳೆಯತನದ ಪಾಲುದಾರಿಕೆಗೆ ಹಪಹಪಿಸುವ ಕ್ರೌರ್ಯ ಮೂಲದ ವ್ಯವಸ್ಥೆ; ಅಸ್ಗರ್ ಫರ್ಹಾದಿಯ ’ಎ ಹೀರೊ’

- Advertisement -
- Advertisement -

ಕೊರೊನಾ ಸಾಂಕ್ರಾಮಿಕದ ಕಾರಣವಾಗಿ ಈ ದೇಶದ ಪ್ರಭುತ್ವ ಯಾವ ಮುನ್ಸೂಚನೆಯೂ ಇಲ್ಲದೆ ಏಕಾಏಕಿ ಲಾಕ್‌ಡೌನ್ ವಿಧಿಸಿ ಅಂದಿಗೆ ಒಂದೂವರೆ ತಿಂಗಳು. ದುಡಿಯಲು ಕೆಲಸವಿಲ್ಲದೆ, ಹೊಟ್ಟೆ ಹೊರೆಯುವುದಕ್ಕೂ ಸಾಧ್ಯವಾಗದೆ ಸಾಯುವುದಾದರೆ ನನ್ನ ಹುಟ್ಟೂರಿನಲ್ಲೇ ಎಂದು ನಿರ್ಧರಿಸಿ ತಮ್ಮ ಹಸುಗೂಸು ಮತ್ತು ವೃದ್ಧರೊಂದಿಗೆ ನೂರಾರು ಮೈಲಿ ಬರಿಗಾಲಲ್ಲಿ ಸಾವಿರಾರು ಜನ ನಡೆದು, ಹಸಿವು ಮತ್ತು ಸುಸ್ತಿನಿಂದ ದಾರಿ ಮಧ್ಯೆ ನೂರಾರು ಜನ ಅಸುನೀಗಿದ ಎದೆಬಿರಿಯುವ ಘಟನೆಗಳಿಗೆ ಸಾಕ್ಷಿಯಾದ ಕಾಲವದು. ಅಂದು ಮೇ 7 2020. ಹದಿನೈದು ವರ್ಷದ ಜ್ಯೋತಿ ಕುಮಾರಿ ತನ್ನ ದಿನಗೂಲಿಯಿಂದ ಉಳಿತಾಯ ಮಾಡಿದ ಎರಡು ಸಾವಿರ ಹಣಕ್ಕೆ ಒಂದು ಸೆಕೆಂಡ್ ಹ್ಯಾಂಡ್ ಸೈಕಲ್ ಖರೀದಿಸಿ ಕಾಲು ಮುರಿದ ತನ್ನ ತಂದೆಯನ್ನು ಸೈಕಲ್ ಹಿಂದೆ ಕೂರಿಸಿಕೊಂಡು ಹರಿಯಾಣ ರಾಜ್ಯದ ಸಿಕಂದರಪುರದಿಂದ ಬಿಹಾರದ ತನ್ನ ಹುಟ್ಟೂರಿಗೆ ಸುಮಾರು 1200 ಕಿಲೋಮೀಟರ್ ದೂರ ಕ್ರಮಿಸುತ್ತಾಳೆ. ನಂತರ ಈ ಘಟನೆ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತದೆ. ಕ್ಷಣಾರ್ಧದಲ್ಲಿ ಜ್ಯೋತಿ ಪ್ರಖ್ಯಾತಳಾಗುತ್ತಾಳೆ. ಅಮೆರಿಕದ ಅಧ್ಯಕ್ಷರ ಮಗಳ ಆದಿಯಾಗಿ ಈ ದೇಶದ ಪ್ರಧಾನಿ ಸಮೇತ ಅವಳನ್ನು ಪ್ರಶಂಸಿಸುತ್ತಾರೆ. ಅವಳಿಗೆ ಪ್ರಭುತ್ವ ಶೌರ್ಯ ಪ್ರಶಸ್ತಿಯನ್ನು ದಯಪಾಲಿಸುತ್ತದೆ. ರಾಜ್ಯ ಆರೋಗ್ಯ ಸಚಿವರು ಆಕೆಯನ್ನು ತಮ್ಮ ಇಲಾಖೆಯ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡುತ್ತಾರೆ. ಸ್ಪೋರ್ಟ್ಸ್ ಕ್ಲಬ್ ಒಂದು ಜ್ಯೋತಿ ಕುಮಾರಿಗೆ ಸೈಕ್ಲಿಂಗ್ ತರಬೇತಿ ನೀಡಲು ಮುಂದಾಗುತ್ತದೆ.

ಅಸ್ಗರ್ ಫರ್ಹಾದಿಯ ’ಎ ಹೀರೊ’

ರಹೀಮ್ ಇರಾನಿನ ಸಾಮಾನ್ಯ ನಾಗರಿಕ ಮತ್ತು ನಿರುದ್ಯೋಗಿ. ವ್ಯವಹಾರ ಒಂದರಲ್ಲಿ ಮೋಸಹೋಗಿ ಸಾಲ ತೀರಿಸಲಾಗದೆ ಆ ಸಂಬಂಧವಾಗಿ ಪ್ರಸ್ತುತ ಜೈಲುವಾಸಿಯಾಗಿದ್ದಾನೆ. ವೈವಾಹಿಕ ಬದುಕು ಮುರಿದುಬಿದ್ದಿದೆ. ಅಕ್ಕ ಮತ್ತು ಭಾವನ ಮನೆಯಲ್ಲಿ ತನ್ನ ಹತ್ತು ವರ್ಷದ ಮಗ ನೆಲೆಸಿದ್ದಾನೆ. ರಹೀಮ್ ಸಾಲ ತೀರಿಸಿ ಜೈಲಿನಿಂದ ಬಿಡುಗಡೆಗೊಂಡು, ಮತ್ತೊಂದು ಮದುವೆಯಾಗಿ ಹೊಸ ಬದುಕು ಕಟ್ಟಿಕೊಳ್ಳುವ ನಿರೀಕ್ಷೆಯಲ್ಲಿದ್ದಾನೆ. ಈ ನಿರೀಕ್ಷೆಗೆ ಕಾರಣ ತನ್ನ ಪ್ರೇಯಸಿ ಮತ್ತು ಭಾವಿ ಪತ್ನಿ ಫರ್ಖೊಂದ್ಹೆಗೆ ದಾರಿಯಲ್ಲಿ ಸಿಕ್ಕಿರುವ ಒಂದು ಕೈಬ್ಯಾಗು. ಈ ಬ್ಯಾಗಿನಲ್ಲಿರುವ ಚಿನ್ನದ ನಾಣ್ಯಗಳನ್ನು ಮಾರಿ ಸಾಲದ ಅರ್ಧ ಭಾಗವನ್ನು ತೀರಿಸಿ ಉಳಿದರ್ಧವನ್ನು ಮುಂದೆ ದುಡಿದು ತೀರಿಸುವ ಯೋಜನೆ ರಹೀಮನದು. ಈ ಸಂಬಂಧ ತನಗೆ ಸಾಲ ಕೊಟ್ಟ ಬಹ್ರಮ್‌ನೊಂದಿಗೆ ಮಾತನಾಡಿ ಒಪ್ಪಿಸಲು ತನ್ನ ಭಾವನನ್ನು ಕೋರುತ್ತಾನೆ. ಅಸಮಾಧಾನದಿಂದಲೆ ಬಹ್ರಮ್ ಇದಕ್ಕೆ ಒಪ್ಪುತ್ತಾನೆ. ಆದರೆ, ರಹೀಮ್‌ನ ಅಕ್ಕ ನೈತಿಕತೆಯ ಪ್ರಶ್ನೆಯನ್ನು ಮುಂದಿಡುತ್ತಾಳೆ. ಅಲ್ಲಿಗೆ ರಹೀಮ್ ಚಿನ್ನದ ನಾಣ್ಯ ಮಾರಿ ಸಾಲ ತೀರಿಸುವ ಯೋಜನೆ ಕೈಬಿಟ್ಟು, ಆ ಬ್ಯಾಗನ್ನು ಕಳೆದುಕೊಂಡವರಿಗೆ ತಲುಪಿಸುವ ಸಲುವಾಗಿ ವಾರಸುದಾರರನ್ನು ಹುಡುಕಲು ಮುಂದಾಗುತ್ತಾನೆ.

ಇದಿಷ್ಟು ಬಹಳ ಸರಳವಾಗಿ ಮತ್ತು ನೇರವಾಗಿ ಪ್ರಸ್ತುತಗೊಳ್ಳುವ ಸಿನಿಮಾದ ಮೊದಲ ಭಾಗ ಅಥವಾ ಫಸ್ಟ್ ಆಕ್ಟ್. ಮುಂದಿನದು ಮಾತ್ರ ಸಂಕೀರ್ಣವಾದ ಕಥಾಹಂದರ. ಬ್ಯಾಗು ಹಿಂದಿರುಗಿಸುವ ನಿರ್ಧಾರ ರಹೀಮ್‌ನಿಗೆ ಬಹಳ ಸಹಜವಾದ ನಡವಳಿಕೆಯಾಗಿದ್ದು, ಯಾವುದೇ ಹೆಚ್ಚುಗಾರಿಕೆ ಇಲ್ಲ. ಆದರೆ ರಹೀಮ್‌ನ ಈ ನಿರ್ಧಾರ ಹಲವು ತಿರುವುಗಳನ್ನು ಪಡೆಯುತ್ತದೆ. ಇರಾನ್ ಪ್ರಭುತ್ವ, ಕಾನೂನು, ಪೊಲೀಸ್, ಮಾಧ್ಯಮ, ಪ್ರಿವಿಲೆಜ್ ಸಮುದಾಯದವರ ಚಾರಿಟಿ ಮತ್ತು ಮನುಷ್ಯನ ಬಗ್ಗೆ ಅವರ ಮೇಲ್ಪದರದ ಗ್ರಹಿಕೆ, ಮಾಡರ್ನ್ ಸೊಸೈಟಿಯ ಭಾಗವಾದ ಸೋಷಿಯಲ್ ಮೀಡಿಯಾ ಇವುಗಳೆಲ್ಲಾ ಹೇಗೆ ಸಾಮಾನ್ಯ ಮನುಷ್ಯನೊಬ್ಬನ ಘನತೆಯನ್ನು ನಿರಾಕರಿಸುತ್ತವೆ ಎಂದು ಎಳೆಎಳೆಯಾಗಿ ಅಸ್ಗರ್, ಸಿನಿಮಾದ ಎರಡನೇ ಭಾಗ ಅಥವಾ ಸೆಕೆಂಡ್ ಆಕ್ಟ್‌ನಲ್ಲಿ ಪ್ರಸ್ತುತಪಡಿಸುತ್ತಾನೆ.

ರಹೀಮ್, ಇರಾನಿನ ಪ್ರಭುತ್ವ, ಪೊಲೀಸ್, ಮಾಧ್ಯಮ, ಚಾರಿಟಿ ಸಂಸ್ಥೆ ಮತ್ತು ಸಮುದಾಯದೊಳಗೆ ರಾತ್ರೋರಾತ್ರಿ ನೈತಿಕತೆಯ ಪ್ರತೀಕವಾಗಿಬಿಡುತ್ತಾನೆ. ತನ್ನ ಮಗಳ ಮದುವೆಗೆ ಇಟ್ಟುಕೊಂಡಿದ್ದ ಒಡವೆಯನ್ನು ಮಾರಿ ಸಾಲ ಕೊಟ್ಟಿದ್ದ ಬಹ್ರಮ್‌ನನ್ನು ಸಾಲ ವಸೂಲಿ ಮಾಡುವ ಮನುಷ್ಯತ್ವಹೀನ ವ್ಯಕ್ತಿಯಾಗಿ ಬಿಂಬಿಸಲಾಗುತ್ತದೆ. ಕ್ಷಣಮಾತ್ರದಲ್ಲಿ ರಹೀಮ್‌ನನ್ನು ಹೀರೋವಾಗಿ ಮೆರೆಸುವ ಮತ್ತು ಅವನ ಒಳ್ಳೆಯತನಕ್ಕೆ ತಾವು ಪಾಲುದಾರರಾಗಲು ಹಪಹಪಿಸುವ ಇವರೇ, ರಹೀಮ್‌ನ ಬಗ್ಗೆ ಕೆಲವು ಅನುಮಾನಗಳು ಮೂಡಿದ ತಕ್ಷಣ ಅವನನ್ನು ಮೋಸಗಾರ ಎಂದು ಬಿಂಬಿಸಿಬಿಡುತ್ತಾರೆ.

’ಎ ಹೀರೋ’ ಸಿನಿಮಾ ನಮಗೆಷ್ಟು ಪ್ರಸ್ತುತ?

ಸಿನಿಮಾದ ಪ್ರಾರಂಭದಲ್ಲೇ ಒಂದು ದೃಶ್ಯವಿದೆ. ರಹೀಮ್ ಎರಡು ದಿನದ ರಜೆ ಮೇಲೆ ಜೈಲಿನಿಂದ ಹೊರಬಂದು ತನ್ನ ಭಾವ ಕೆಲಸ ಮಾಡುವ ಜಾಗಕ್ಕೆ ತೆರಳುತ್ತಾನೆ. ಅಲ್ಲಿ ಸಾವಿರಾರು ಅಡಿ ಎತ್ತರದ ಬೃಹತ್ ಗಾತ್ರದ ಸುಮಾರು 2500 ವರ್ಷಗಳ ಹಿಂದಿನ ಸಮಾಧಿಗೆ ಪಾಲಿಶ್ ಮಾಡಲಾಗುತ್ತಿರುತ್ತದೆ. ತುದಿಯಲ್ಲಿ ಪಾಲಿಶ್ ಮಾಡುತ್ತಿದ್ದ ತನ್ನ ಭಾವನನ್ನು ನೋಡಲು ಒಂದೊಂದೆ ಅಂತನ್ನು ಹತ್ತುವ ದೃಶ್ಯ, ರಹೀಮ್ ಇರಾನಿನ ಈ ಪ್ರತಿಷ್ಠೆಯ ತುದಿ ತಲುಪುವಷ್ಟರಲ್ಲಿ ಸುಸ್ತಾಗುತ್ತಾನೆ ಅನಿಸುತ್ತದೆ. ರಹೀಮ್ ತರದ ಸಾವಿರಾರು ಮಂದಿ, ಮಾಡಿದ ಸಾಲ ತೀರಿಸಲಾಗದೆ ಜೈಲು ಸೇರಿದ್ದಾರೆ, ಕೆಲವರಿಗೆ ಮರಣ ದಂಡನೆ ವಿಧಿಸಲಾಗಿದೆ, ಕೆಲವರು ಜೈಲಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೇಶದಲ್ಲಿ ದುಡಿಯುವವರಿಗೆ ಸರಿಯಾದ ಉದ್ಯೋಗ ಇಲ್ಲ. ರಹೀಮ್ ತರದ ಸಾಮಾನ್ಯರಿಗೆ ಸರಿಯಾದ ಶಿಕ್ಷಣವನ್ನು ನೀಡಲು ಆ ದೇಶಕ್ಕೆ ಸಾಧ್ಯವಾಗಿಲ್ಲ. ಇಷ್ಟೆಲ್ಲಾ ಕೊರತೆಗಳು ಮತ್ತು ಅದ್ವಾನ ಇರುವ ದೇಶದಲ್ಲಿ ಅಲ್ಲಿನ ಆಳುವ ಸರ್ಕಾರದ ಪ್ರಿಯಾರಿಟಿ ಮಾತ್ರ ಸಾವಿರಾರು ವರ್ಷದ ಸಮಾಧಿಯನ್ನು ಪಾಲಿಶ್ ಮಾಡುವುದು. ಇರಾನ್‌ಗಿಂತ ನಮ್ ದೇಶ ಯಾವುದರಲ್ಲಿ ಕಡಿಮೆ ಹೇಳಿ? ಇದರ ನೂರುಪಟ್ಟು ಮೂಲ ಸಮಸ್ಯೆಗಳು ಇದ್ದ ಸಂದರ್ಭದಲ್ಲೇ ಸಾವಿರಾರು ಕೋಟಿ ಹಣ ಸುರಿದು ನದಿಯೊಂದರ ತಟದಲ್ಲಿ ನಾಯಕನೊಬ್ಬನ ಗಗನಚುಂಬಿ ಪ್ರತಿಮೆ ನಿಲ್ಲಿಸಿದ ಹೆಗ್ಗಳಿಕೆಗೆ ಈ ದೇಶದ ಪ್ರಭುತ್ವದ್ದು.

ಇದು ವ್ಯವಸ್ಥೆಯ Window Dressing. ಕಿಟಕಿ ಹಿಂದೆ ಕೊಳೆತು ನಾರುತ್ತಿದ್ದರೂ ಅದಕ್ಕೆ ಬಣ್ಣ ಬಣ್ಣದ ಪರದೆ ಹಾಕಿ ಅಲಂಕಾರ ಮಾಡಿ ಪ್ರದರ್ಶನ ಮಾಡಲಾಗುತ್ತದೆ. ಇಲ್ಲಿ ಹಸಿವು, ಬಡತನ, ನಿರುದ್ಯೋಗದಿಂದ ಸಾವಿರಾರು ಜನ ಸಾಯುತ್ತಿದ್ದರೂ, ಸಮಾಧಿಗಳನ್ನು ಅಲಂಕರಿಸಲಾಗುತ್ತದೆ, ಎತ್ತರೆತ್ತರದ ಪ್ರತಿಮೆಗಳನ್ನು ನಿರ್ಮಿಸಿ ದೇಶವನ್ನು ಪ್ರದರ್ಶನ ಮಾಡಲಾಗುತ್ತದೆ. ಕೊನೆಗೆ, ವ್ಯವಸ್ಥೆಯ ಬಲಿಪಶುಗಳಾದ ಜ್ಯೋತಿ ಕುಮಾರಿ ಮತ್ತು ರಹೀಮ್ ಅಂತವರನ್ನು ಅದೇ ವ್ಯವಸ್ಥೆ ಹಿರೋಗಳನ್ನಾಗಿ ಮಾಡಿ ಅವರಿಗೆ ಪರಮವೀರ ಪ್ರಶಸ್ತಿ ಕೊಟ್ಟು ತನ್ನದೇ ಇಲಾಖೆಗೆ ಬ್ರಾಂಡ್ ಅಂಬಾಸಿಡರ್ ಆಗಿ ಮಾಡಿಕೊಂಡುಬಿಡುತ್ತದೆ. ಪ್ರಭುತ್ವ ತಾನು ಮಾಡಿದ ಕೃತ್ಯಗಳನ್ನೆ ಮರೆಮಾಚಿ, ಅವರೊಂದಿಗೆ ಹಿರೋಯಿಸಂನಲ್ಲಿ ಪಾಲುದಾರನಾಗಿಬಿಡುತ್ತದೆ.

ಇನ್ನೂ ನಮ್ಮ ನಡುವಿನ ಪ್ರಿವಿಲೇಜ್ ಸಮುದಾಯ ಮತ್ತು ಅವರು ಕಟ್ಟಿಕೊಂಡಿರುವ ಬಹುಪಾಲು ಚಾರಿಟಿ ಸಂಸ್ಥೆಗಳದ್ದೂ ಇಂಥದ್ದೇ ಇನ್ನೊಂದು ಕಥೆ. ಸಾಮಾನ್ಯವಾಗಿ ಯಾವಾಗಲೂ ಅವಕಾಶವಾದಿತನದಿಂದಲೇ ವರ್ತಿಸುವ ಈ ಸಮುದಾಯ ಸಾಮಾನ್ಯ ಮನುಷ್ಯನೊಬ್ಬನನ್ನು ಅವನ ಸಾಮಾಜಿಕ ಹಿನ್ನೆಲೆಯಿಂದ ಅರ್ಥ ಮಾಡಿಕೊಂಡಿದ್ದು ಮತ್ತು ಅವನ ವೈಯಕ್ತಿಕ ಘನತೆಯನ್ನು ಗೌರವಿಸಿದ್ದು ಬಹಳ ಅಪರೂಪ. ಜ್ಯೋತಿ ಕುಮಾರಿ ಮತ್ತು ರಹೀಮ್ ತರದ ಬಲಿಪಶುಗಳು ಈ ಸಮುದಾಯಕ್ಕೆ ಬೆಚ್ಚಗಿನ ಅನುಭವ (Warm Feeling) ನೀಡುವ ವಸ್ತುಗಳು. ತಾವು ಮಾಡಿದ ಬಿಡಿಗಾಸು ಸಹಾಯಕ್ಕೆ ಯಾವಾಗಲೂ ಹೆಚ್ಚಿನ ಟೋಕನ್ ಬಯಸುತ್ತವೆ. ಇವರಿಗೆ ಮನುಷ್ಯನ ಘನತೆಗಿಂತ ತಮ್ಮ ಮತ್ತು ತಮ್ಮ ಚಾರಿಟಿ ಸಂಸ್ಥೆಗಳ ಪ್ರತಿಷ್ಠೆಯೇ ಮುಖ್ಯವಾಗಿರುತ್ತದೆ. ಇವರ ಬೆಚ್ಚನೆಯ ಭಾವಕ್ಕೆ ರಹೀಮ್ ಇಲ್ಲಾಂದ್ರೆ ಜ್ಯೋತಿ, ಜ್ಯೋತಿ ಇಲ್ಲಾಂದ್ರೆ ಮತ್ತೊಬ್ಬರು. ’ಎ ಹೀರೋ’ ಸಿನಿಮಾದಲ್ಲಿ ಬರುವ ಚಾರಿಟಿ ಸಂಸ್ಥೆಯ ವರ್ತನೆಯೂ ಇದೇ ತೆರನಾದದ್ದು. ವ್ಯವಸ್ಥೆಯ ಕ್ರೌರ್ಯದ ಕಾರಣವಾಗಿ ಸಾವಿರಾರು ಮೈಲಿ ಸೈಕಲ್ ತುಳಿಯಬೇಕಾದ ಪರಿಸ್ಥಿತಿಗೆ ದೂಕಲ್ಪಟ್ಟ ಜ್ಯೋತಿಗೆ ಇದೇ ತರಹದ ಚಾರಿಟಿ ಸಂಸ್ಥೆಯೊಂದು ಸೈಕ್ಲಿಂಗ್ ತರಬೇತಿ ನೀಡಲು ಮುಂದಾಗುತ್ತದೆ.

ಆಧುನಿಕ ಸಮಾಜದ ಪರಿಕರಗಳಲ್ಲಿ ಒಂದಾದ ಟಿ.ವಿ ಚಾನಲ್‌ಗಳಿಗಂತೂ ಸುದ್ದಿಯ ರೋಚಕತೆ ಅಷ್ಟೇ ಮುಖ್ಯ, ಬಾಕಿ ಎಲ್ಲಾ ನಗಣ್ಯ. ರೋಚಕ ಸುದ್ದಿಯ ಹಪಾಹಪಿಗೆ ಕ್ಷಣ ಮಾತ್ರದಲ್ಲಿ ಯಾರನ್ನೂ ಬೇಕಾದರೂ ಹೀರೋ ಮಾಡುವ ಮತ್ತು ಕ್ಷಣಮಾತ್ರದಲ್ಲಿ ಯಾರನ್ನೂ ಬೇಕಾದರೂ ವಿಲನ್ ಮಾಡುವ ಸಾಧನವಾಗಿ ಮಾತ್ರ ಅವು ಚಾಲ್ತಿಯಲ್ಲಿವೆ ಅನಿಸುತ್ತದೆ. ನಾವು ದಿನನಿತ್ಯ ನೋಡುವ ನ್ಯೂಸ್ ಚಾನಲ್‌ಗಳಾಗಿರಬಹುದು ಅಥವಾ ಮನರಂಜನೆ ಚಾನಲ್‌ಗಳಾಗಿರಬಹುದು, ವ್ಯವಸ್ಥೆಯ ಬಲಿಪಶುಗಳಾದ ಮುಗ್ಧ ಜನರು ಇವರಿಗೆ ತಮ್ಮ ಚಾನಲ್‌ನ ಟಿಆರ್‌ಪಿ ಹೆಚ್ಚಿಸುವ ಮಿಕಗಳು ಮಾತ್ರ. ಅದರಾಚೆಗೆ ಇವರಿಗೆ ಯಾವ ಕಾಳಜಿಯೂ ಇಲ್ಲ.

’ಎ ಹೀರೋ’ ಸಿನಿಮಾದಲ್ಲಿನ ಪ್ರತಿಯೊಂದು ಪಾತ್ರವೂ – ರಹೀಮ್, ಅವನಿಗೆ ಸಾಲ ಕೊಟ್ಟ ಬಹ್ರಮ್ ಮತ್ತು ಆತನ ಮಗಳು, ರಹೀಮ್‌ನ ಮಗ, ಪ್ರೇಯಸಿ, ಅಕ್ಕ, ಭಾವ ಮತ್ತು ಡ್ರೈವರ್ ಎಲ್ಲರೂ ಹಿರೋಗಳಾಗಿ ನಮಗೆ ದಾಟುತ್ತಾರೆ. ಆದರೆ ವ್ಯವಸ್ಥೆಯ ಕೈಗೊಂಬೆಗಳಾದ ಪೊಲೀಸ್, ಮಾಧ್ಯಮ, ಚಾರಿಟಿ ಮತ್ತು ಆಧುನಿಕ ಸಮಾಜದ ಸೋಷಿಯಲ್ ಮೀಡೀಯಾ, ಇವೆಲ್ಲಾ ಮನುಷ್ಯನ ಘನತೆಯನ್ನು ನಿರಾಕರಿಸುವ ವಿಲನ್‌ಗಳಾಗಿ ದಕ್ಕುತ್ತಾರೆ.

ಸಿನಿಮಾದಲ್ಲಿ ಒಂದು ಸಂದರ್ಭ ಇದೆ: ರಹೀಮ್ ತನ್ನ ನೈತಿಕತೆಯನ್ನು ರುಜುವಾತು ಪಡಿಸುವ ಸಂದರ್ಭ ಎದುರಾದಾಗ, ತಾನು ಚಿನ್ನದ ನಾಣ್ಯವನ್ನು ಮರಳಿಸಿದ ವಾರಸುದಾರರನ್ನು ಹುಡುಕಲು ಹೊರಡುತ್ತಾನೆ. ಅದೇ ವಾರಸುದಾರರನ್ನು ಕಾರಿನಲ್ಲಿ ಡ್ರಾಪ್ ಮಾಡಿದ ಡ್ರೈವರ್ ಇವನಿಗೆ ಸಹಕರಿಸುತ್ತಾನೆ. ಆದರೆ ವಾರಸುದಾರರು ಸಿಗುವುದಿಲ್ಲ. ರಹೀಮ್ ಕಾರಿನಲ್ಲಿ ಓಡಾಡಿದ ಬಾಡಿಗೆ ಹಣ ಕೊಡುವುದಕ್ಕೆ ಹೋದಾಗ ಆ ಡ್ರೈವರ್ ನಾನು ಜೈಲುವಾಸಿಗಳ ಹತ್ತಿರ ಹಣ ಪಡೆಯುವುದಿಲ್ಲ ಎಂದು ನಿರಾಕರಿಸುತ್ತಾನೆ. ಇದು ನ್ಯಾಯವಲ್ಲ ದಯವಿಟ್ಟು ಸ್ವೀಕರಿಸಬೇಕು ಎಂದು ರಹೀಮ್ ಕೇಳಿಕೊಂಡಾಗ, ಆ ಡ್ರೈವರ್ ’ಈ ಪ್ರಪಂಚದಲ್ಲಿ ಯಾವುದು ನ್ಯಾಯವಲ್ಲ, ಅನ್ಯಾಯವಾಗಿ ನಾನು ಕೂಡ ಎರಡು ವರ್ಷ ಜೈಲಿನಲ್ಲಿ ಇದ್ದವನೇ’ ಎಂದು ಹೇಳಿ ಹೊರಟುಬಿಡುತ್ತಾನೆ. ಈ  ದೃಶ್ಯ ಕೆಲವು ನಿರ್ದಿಷ್ಟ ನೈತಿಕತೆಯ ಹಿನ್ನೆಲೆಯಲ್ಲಿ ರೂಪುಗೊಂಡ ವ್ಯವಸ್ಥೆ ಮತ್ತು ಕಾನೂನುಗಳ ಆಳದಲ್ಲಿರುವ ಕ್ರೌರ್ಯ ಹಾಗು ಮನುಷ್ಯ ಸಹಜವಾಗಿ ಸಾಮಾನ್ಯರಲ್ಲಿರುವ ನೈತಿಕತೆಗೆ ಕನ್ನಡಿಯಾಗಿದೆ.

ರಹೀಮ್‌ಗೆ ಕೊನೆಯದಾಗಿ ಎರಡು ಆಯ್ಕೆಗಳು ಮಾತ್ರ ಉಳಿಯುತ್ತವೆ. ಒಂದು ತನ್ನ ಒಳ್ಳೆಯತನವನ್ನ ರುಜುವಾತುಪಡಿಸುವುದು, ಇಲ್ಲ ಜೈಲು ಶಿಕ್ಷೆ ಅನುಭವಿಸುವುದು. ರಹೀಮ್‌ನ ಒಳ್ಳೆಯತನದ ರುಜುವಾತುವಿನಲ್ಲಿ ಜೈಲು ಅಧಿಕಾರಿಗಳ ಪ್ರತಿಷ್ಠೆಯು ಅಡಗಿರುವ ಕಾರಣ, ಜೈಲಿನ ಅಧಿಕಾರಿ ತೊದಲು ಮಾತಿನ ರಹೀಮ್‌ನ ಮಗನಿಂದಲೇ ತನ್ನ ಅಪ್ಪನ ಒಳ್ಳೆಯತನದ ಬಗ್ಗೆ ಬಹಳ ಚಿಂತಾಜನಕವಾಗಿ ವಿಡಿಯೋ ಮಾಡುತ್ತಾನೆ. ರಹೀಮ್ ಆ ವಿಡಿಯೋ ಪ್ರಸಾರ ಮಾಡಲು ವಿರೋಧಿಸುತ್ತಾನೆ. ಇದು ರಹೀಮ್‌ಗೆ ತನ್ನ ಮಗನ ಘನತೆಯ ಪ್ರಶ್ನೆ ಆಗಿರುತ್ತದೆ. ಕೊನೆಗೆ ರಹೀಮ್‌ಗೆ ತನ್ನ ನೈತಿಕತೆಯ ರುಜುವಾತುಗಿಂತ ತನ್ನ ಮಗನ ಘನತೆಯೇ ಮುಖ್ಯವಾಗಿ ಜೈಲು ಶಿಕ್ಷೆಯನ್ನೆ ಆಯ್ಕೆ ಮಾಡಿಕೊಳ್ಳುತ್ತಾನೆ.

ಅಸ್ಗರ್ ಫರ್ಹಾದಿ

ಅಸ್ಗರ್ ಫರ್ಹಾದಿ ಇವತ್ತಿಗೆ ಜಗತ್ತಿನ ಸಿನಿಮಾ ನಿರ್ಮಾತೃಗಳಲ್ಲಿ ಬಹಳ ಪ್ರಮುಖನಾದವನು. ಫರ್ಹಾದಿ ಜಾಗತಿಕ ಸಿನಿಮಾ ಪ್ರೇಕ್ಷಕರಿಗೆ ಹೆಚ್ಚು ಪರಿಚಯವಾಗಿದ್ದು ತನ್ನ 2011ರ ಸಿನಿಮಾ ’ಎ ಸಪರೇಶನ್’ ಮುಖಾಂತರ. ದೃಶ್ಯ ಮಾಧ್ಯಮದ ಕಲಾವಂತಿಕೆಯನ್ನು ಈ ಸಿನಿಮಾದ ಪ್ರತಿ ದೃಶ್ಯದಲ್ಲಿ ಅನುಭವಿಸಿದ ನಾನು ಅವನ ಈ ಹಿಂದಿನ ಸಿನಿಮಾಗಳಾದ ’ಎಬೌಟ್ ಎಲ್ಲಿ’ ನೋಡಿದ ಮೇಲೆ ಇದು ಮತ್ತೊಂದು ಎತ್ತರ ಅನಿಸಿತು. ಹಾಗೇ ’ದ ಪಾಸ್ಟ್’ ಮತ್ತು ’ಫೈರ್‌ವರ್ಕ್ಸ್ ವೆಡ್‌ನಸ್‌ಡೆ’ ಸಿನಿಮಾಗಳು ಕೂಡ. ಆದರೆ, ಅಸ್ಗರ್ ಯಾವಾಗಲೂ ಖಾಸಗಿ ಬದುಕಿನ ನೈತಿಕತೆಯ ಸಂಘರ್ಷ ಮತ್ತು ಅದರ ಸಂಕೀರ್ಣತೆಗಳನ್ನು ಮಾತ್ರ ಚರ್ಚಿಸುತ್ತಾನೆ, ಇವನದೇ ದೇಶದವರಾದ ಜಾಫರ್ ಫನ್ಹಾಹಿ, ಮೊಹಮ್ಮದ್ ರಸೊಲಫ್ ರೀತಿ ಪ್ರಭುತ್ವದ ಹಳವಂಡಗಳನ್ನು ವಿಮರ್ಶಿಸಿ ನೇರವಾಗಿ ಸ್ಟೇಟ್ಮೆಂಟ್ ಮಾಡೋದಿಲ್ಲ ಅಥವಾ ವಿರೋಧಿಸುವುದಿಲ್ಲ ಎಂಬ ಕೊರಗು ಇತ್ತು. ೨೦೧೬ರ ’ದ ಸೇಲ್ಸ್‌ಮನ್’ ಕೂಡ ಪ್ರಭುತ್ವವನ್ನು ನೇರವಾಗಿ ವಿಮರ್ಶಿಸುವುದಿಲ್ಲವಾದರೂ, ಪ್ರಭುತ್ವ ಯಾವುದನ್ನೂ ಆದರ್ಶ ಎಂದು ಪ್ರತಿಪಾದಿಸುತ್ತದೋ, ಆ ಪುರುಷ ಪ್ರಧಾನ ಅಲೋಚನೆ ಮತ್ತು ಪೂರ್ವಗ್ರಹವನ್ನು ಒಡೆದುಹಾಕುತ್ತದೆ. ’ಎ ಹೀರೋ’ (2021) ಸಿನಿಮಾದ ಮೊದಲ ದೃಶ್ಯಗಳನ್ನು ನೋಡಿದ ಮೇಲಂತೂ, ಅಸ್ಗರ್, ಫನ್ಹಾಹಿ ಮತ್ತು ರಸೊಲಫ್ ರೀತಿಯಲ್ಲಿ ಪ್ರಭುತ್ವವನ್ನು ನೇರವಾಗಿ ವಿರೋಧಿಸುವ ಬದಲು ಅದನ್ನೇ ಬಹಳ Subtle ಆಗಿ ಪ್ರಸ್ತುತಪಡಿಸುತ್ತಾನೆ ಅನಿಸಿತು. ಇವನ ಹಿಂದಿನ ಸಿನಿಮಾಗಳನ್ನು ಈಗ ಇದೇ ಗ್ರಹಿಕೆಯ ಹಿನ್ನೆಲೆಯಲ್ಲಿ ನೋಡಬೇಕೇನೋ ಅನಿಸ್ತಿದೆ. ಅಸ್ಗರ್‌ನ ಇತ್ತೀಚಿನ ಎಲ್ಲಾ ಸಿನಿಮಾಗಳು ಪ್ರಮುಖ ಕಾನ್ ಒಳಗೊಂಡು ಬಹುತೇಕ ಅಂತಾರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಬಾಚುತ್ತಿರುವುದು ಮಾತ್ರವಲ್ಲ, ವಿವಿಧ ದೇಶಗಳ ಪ್ರೇಕ್ಷಕರನ್ನು ಸಮ್ಮೋಹನಗೊಳಿಸಿ ಆಸ್ಕರ್ ಪ್ರಶಸ್ತಿಗೂ ಪೈಪೋಟಿ ನೀಡುತ್ತಿವೆ.

(ಸಿನಿಮಾದ ಕಥೆಯನ್ನು ಸಂಪೂರ್ಣ ಚರ್ಚೆಮಾಡಿ, ಮುಂದೆ ಸಿನಿಮಾ ನೋಡಬಯಸುವ ಪ್ರೇಕ್ಷಕರ ಕುತೂಹಲವನ್ನು ಹಾಳುಮಾಡಬಾರದು ಎಂಬ ಕಾರಣಕ್ಕೆ ಸಿನಿಮಾದ ಕೆಲವು ಸಂಗತಿಗಳನ್ನಷ್ಟೆ ಇಂದಿನ ನಮ್ಮ ಪರಿಸ್ಥಿತಿಯ ಪಕ್ಕದಲ್ಲಿಟ್ಟು (Juxtaposed) ನನ್ನ ಗ್ರಹಿಕೆಗೆ ಸೀಮಿತವಾಗಿ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದೇನೆ)

ಯದುನಂದನ್ ಕೀಲಾರ

ಯದುನಂದನ್ ಕೀಲಾರ
ಜಗತ್ತಿನ ಸಿನಿಮಾಗಳ ವೀಕ್ಷಣೆ ಮತ್ತು ಅವುಗಳು ಬೀರುವ ಸಾಮಾಜಿಕ ಪ್ರಭಾವದ ಸಾಧ್ಯತೆಗಳ ಬಗ್ಗೆ ಅಪಾರ ಉತ್ಸಾಹ ಇರುವ ಯದುನಂದನ್ ಸಿನಿಮಾಗಳ ರಾಜಕೀಯ ನಿಲುವುಗಳನ್ನು ತೀಕ್ಷ್ಣವಾಗಿ ಶೋಧಿಸುತ್ತಾರೆ.


ಇದನ್ನೂ ಓದಿ: ನುಡಿ ನೆನಪು; ಕಪ್ಪು ಮೊಗದ ಸುಂದರ – ಸಿಡ್ನಿ ಪಾಟಿಯೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಜಾತಿ ಗಣತಿ ಕುರಿತ ರಾಹುಲ್ ಗಾಂಧಿಯ ವೈರಲ್ ಕ್ಲಿಪ್ ಎಡಿಟೆಡ್

0
ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಭಾಷಣದ ಕ್ಲಿಪ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅನೇಕ ಬಾರಿ ಸುಳ್ಳು ಸುದ್ದಿಗಳನ್ನು ಹಂಚಿಕೊಂಡಿರುವ ಬಲ ಪಂಥೀಯ ಎಕ್ಸ್...