Homeಮುಖಪುಟನುಡಿ ನೆನಪು; ಕಪ್ಪು ಮೊಗದ ಸುಂದರ - ಸಿಡ್ನಿ ಪಾಟಿಯೆ

ನುಡಿ ನೆನಪು; ಕಪ್ಪು ಮೊಗದ ಸುಂದರ – ಸಿಡ್ನಿ ಪಾಟಿಯೆ

- Advertisement -
- Advertisement -

ಚೆಲುವು, ಆತ್ಮವಿಶ್ವಾಸ, ಕರುಣೆ, ಧೈರ್ಯ, ಸ್ವಾಭಿಮಾನ, ಲಾಲಿತ್ಯ ಮೊದಲಾದ ಗುಣಗಳು ಅತ್ಯುತ್ತಮ ಅಭಿವ್ಯಕ್ತಿ ಪಡೆದಿದ್ದ ಕಪ್ಪು ಸಮುದಾಯದ ವ್ಯಕ್ತಿಯೇ ಸಿಡ್ನಿ ಪಾಟಿಯೆ. ಕೆಲವೇ ದಿನಗಳ ಹಿಂದೆ ತೀರಿಕೊಂಡಿದ್ದಾನೆ. ಅವನ ಚಿತ್ರಗಳನ್ನು ಗಾಢ ಮೆಚ್ಚುಗೆಯಿಂದ ನೋಡಿದ ನಮ್ಮಂಥವರನ್ನು ಒಂದು ಮ್ಲಾನತೆ ಮತ್ತು ವಿಷಾದ ಕಾಡುತ್ತಿದೆ. ಸಿಡ್ನಿ ಪಾಟಿಯೆ ಕಪ್ಪು ಸಮುದಾಯದವರ ಆತ್ಮಗೌರವದ, ಪ್ರತಿಭಟನೆಯ ಸಂಕೇತ ಕೂಡ. ಚರಿತ್ರೆಯಲ್ಲೊಂದು ಪ್ರತಿಭಟನೆಯೇ ಆದ ಅವನ ಬಗ್ಗೆ ಒಂದು ಪುಸ್ತಕವನ್ನೇ ಬರೆಯುವಷ್ಟು ವಿಷಯಗಳಿವೆ. ಪುಟ್ಟ ಸವಿನಯ ಶ್ರದ್ಧಾಂಜಲಿ ಇದು.

ಸಿಡ್ನಿ ಬದುಕಿದ್ದರೆ ಈ ಫೆಬ್ರುವರಿ 20ಕ್ಕೆ 95 ವರ್ಷ ಮುಗಿಸಿ 96ಕ್ಕೆ ಕಾಲಿಟ್ಟಿರುತ್ತಿದ್ದ. ಬಹಾಮಾಸ್ ಎಂಬ ಪುಟ್ಟ ದ್ವೀಪ ರಾಷ್ಟ್ರದಲ್ಲಿ ಹುಟ್ಟಿದವನು. ತಂದೆ ತಾಯಿ ಬಡವರು, ಟೊಮ್ಯಾಟೊ ಬೆಳೆಯುತ್ತಿದ್ದ ರೈತಾಪಿಗಳು. ಏಳು ಮಕ್ಕಳಲ್ಲಿ ಇವನೊಬ್ಬ. ಏಳೇ ತಿಂಗಳಿಗೆ ಹುಟ್ಟಿದ ಹಸುಗೂಸು ಸಿಡ್ನಿ ಅಂಗೈ ಮೇಲೆ ಇಟ್ಟುಕೊಳ್ಳುವಷ್ಟು ಪುಟ್ಟದಾಗಿತ್ತಂತೆ. ಅಮ್ಮ ಕಣಿ ಹೇಳುವವಳನ್ನು “ಇದು ಬದುಕುಳಿಯುವ ಕಂದನೇ” ಎಂದು ಕೇಳಿದಳು. ಅವಳು, “ಬದುಕುತ್ತಾನೆ, ರಾಜನಂತೆ ಬದುಕುತ್ತಾನೆ” ಎಂದಳು! ಬೆಳ್ಳಿತೆರೆಯ ಮೇಲೆ ರಾಜನ ಠೀವಿ, ಗಾಂಭೀರ್ಯಗಳಿಂದ ನಮ್ಮ ಸಿಡ್ನಿ ಮೆರೆದದ್ದು ನಿಜ.

ಹ್ಯಾರಿ ಬೆಲಾಫೊಂಟೆ

ಬಡತನದಲ್ಲಿ ಬದುಕಿ ಕಂಗೆಟ್ಟಿದ್ದ ಸಿಡ್ನಿ ಹದಿನೈದನೆಯ ವಯಸ್ಸಿನಲ್ಲಿ ಹೊಸ ಬದುಕನ್ನು ಅರಸಿ ಅಮೆರಿಕಾಗೆ ಹೊರಟ. ಮಗನ ಜೇಬಿನಲ್ಲಿ ಮೂರು ಡಾಲರ್ ಹಣ ಇಟ್ಟು ಅಪ್ಪ ಹಡಗು ಹತ್ತಿಸಿದ. ಮಯಾಮಿಯಲ್ಲಿ ಹೋಟೆಲ್ ಒಂದರಲ್ಲಿ ತಟ್ಟೆ ಲೋಟ ತೊಳೆದು ಸಿಡ್ನಿ ಬದುಕಲು ದಾರಿ ಕಂಡುಕೊಂಡ. ರಂಗಭೂಮಿಯ ಬಗ್ಗೆ ಆಸಕ್ತಿ ಇತ್ತು. ಆದ್ದರಿಂದ ನ್ಯೂಯಾರ್ಕ್‌ಗೆ ಹೋದ. ಆದರೆ ಅವನ ಅಸಮರ್ಪಕ ಭಾಷೆ ಮತ್ತು ಉಚ್ಛಾರಣೆಗಳಿಂದಾಗಿ ಹೆಸರಾಂತ ನಾಟಕ ತಂಡದವರು ಬಾಗಿಲು ಮುಚ್ಚಿದರಂತೆ. ಆಗ ಅವನ ಜೊತೆಗಿದ್ದ ಹಿರಿಯ ಕೆಲಸಗಾರನೊಬ್ಬ ಅವನಿಗೆ ಚೆನ್ನಾಗಿ ಇಂಗ್ಲಿಷ್ ಓದಲು, ಬರೆಯಲು, ಹೊಸ ಅಮೆರಿಕನ್ ಉಚ್ಚಾರಣೆಯನ್ನು ಕಲಿತುಕೊಳ್ಳಲು ನೆರವು ನೀಡಿದ. ಆ ಹಿರಿಯ ಕಾರ್ಮಿಕನ ಮಮತೆ, ಶ್ರದ್ಧೆಯನ್ನು ಸಿಡ್ನಿ ದೊಡ್ಡ ಮನುಷ್ಯನಾದ ಮೇಲೆ ನೆನಪಿಸಿಕೊಂಡಿದ್ದಾನೆ. ಕೆಲಸದ ನಂತರದ ಸಮಯದಲ್ಲಿ ನೀಗ್ರೊ ಥಿಯೇಟರ್‌ನಲ್ಲಿ ತರಬೇತಿ ಪಡೆದು ರಂಗಭೂಮಿಯನ್ನು ಪ್ರವೇಶಿಸಿದ. ಅಲ್ಲಿ ಯಶಸ್ಸು ಸಿಕ್ಕನಂತರ ಸಿನಿಮಾ ರಂಗವನ್ನು ಪ್ರವೇಶಿಸಿದ.

ಧನಾತ್ಮಕ ಪಾತ್ರಗಳು

ಆ ದಿನಗಳಲ್ಲಿ ಸಿಡ್ನಿಗೆ ಗೆಳೆಯನಾಗಿ ಬಂದವನು ಹ್ಯಾರಿ ಬೆಲಾಫೊಂಟೆ. ನಟನೂ, ಗಾಯಕನೂ ಆದ ಅವನು ಕಪ್ಪು ಸಮುದಾಯದ ವ್ಯಕ್ತಿಗಳ ಹಕ್ಕುಗಳ ಬಗ್ಗೆ ದೃಢವಾದ ನಿಲುವನ್ನು ಹೊಂದಿದ್ದ. ಸಿಡ್ನಿಯ ವಯಸ್ಸಿನವನೇ ಆದ ಅವನು ಗೆಳೆಯನನ್ನು ಮುನ್ನಲೆಗೆ ತರಲು ಶ್ರಮಿಸಿದ. ಸಿಡ್ನಿಗೆ ಮೊದಲ ಚಿತ್ರದಲ್ಲೇ ಉತ್ತಮವಾದ ಪಾತ್ರ ಸಿಕ್ಕಿತು. ಆ ಚಿತ್ರ ’ನೋ ವೇ ಔಟ್’. ಅದರಲ್ಲಿ ಸಿಡ್ನಿ ಆದರ್ಶವಾದಿ ಕಪ್ಪು ವೈದ್ಯ. ಬದ್ಧತೆಯಿಂದ ಕೊಳೆಗೇರಿಗಳಲ್ಲಿ ಕೆಲಸ ಮಾಡುತ್ತಿದ್ದ ಆತ, ತನ್ನ ವಿರುದ್ಧ ಇದ್ದ ವರ್ಣದ್ವೇಷದ ಗಾಢವಾದ ಪೂರ್ವಾಗ್ರಹಗಳನ್ನು ಮೆಟ್ಟಿನಿಲ್ಲಬೇಕಾಗುತ್ತದೆ. ಕೇವಲ ಇಪ್ಪತ್ತಮೂರು ವಯಸ್ಸಿನ, ಮುದ್ದುಮುಖದ ಕಪ್ಪು ನಟ ಈ ಚಿತ್ರದ ಮೂಲಕ ಜನಮನವನ್ನು ಗೆದ್ದುಬಿಟ್ಟ.

ಆಗಿನ ಚಿತ್ರಗಳಲ್ಲಿ ಕಪ್ಪು ಸಮುದಾಯದವರನ್ನು ದಡ್ಡರು, ಮನೆಗೆಲಸ ಮುಂತಾದ ’ಕೆಳದರ್ಜೆ’ ಕೆಲಸ ಮಾಡಲು ತಕ್ಕ ಜನ, ಲಂಪಟರು, ಕೇಡಿಗಳು, ವಿದೂಷಕರು ಎಂದು ಸ್ಟಿರಿಯೋಟೈಪ್ ಮಾಡಲಾಗಿತ್ತು. ಈ ಪಾತ್ರದಲ್ಲಿ ತಾನು ಯಶಸ್ವಿಯಾದರೂ ಮುಂದೆ ಇಂತಹ ಸ್ಥಾಪಿತ ಮಾದರಿಯನ್ನು ಮುರಿಯುವುದು ಸಿಡ್ನಿಗೆ ಸುಲಭವೇನೂ ಆಗಿರಲಿಲ್ಲ. ಅವನು ಕಡುಬಡತನದಲ್ಲಿ ಬೇಯುತ್ತಿದ್ದ. ಅವನಿಗೆ ಆಗ ಇನ್ನೊಂದು ಚಿತ್ರದಲ್ಲಿ ನಟನೆಯ ಅವಕಾಶ ಬಂತು. ಅದಕ್ಕೆ ನಿರ್ಮಾಪಕರು ಅವನಿಗೆ ಏಳುನೂರ ಐವತ್ತು ಡಾಲರ್ ಸಂಭಾವನೆ ಕೊಡಲು ಸಿದ್ಧರಿದ್ದರು. ಅಂದಿನ ಸಂದರ್ಭದಲ್ಲಿ ಅವನಿಗೆ ಅದು ಬಹಳ ದೊಡ್ಡ ಮೊತ್ತವೇ. ಅದರಲ್ಲಿ ಅವನು ತನ್ನ ಹೆಣ್ಣುಮಕ್ಕಳನ್ನು ಗೂಂಡಾಗಳು ಕೊಂದರೂ ಪ್ರತಿಕ್ರಿಯಿಸದ ವ್ಯಕ್ತಿಯಾಗಿ ನಟಿಸಬೇಕಾಗಿತ್ತು. ಸಿಡ್ನಿಗೆ ಅದು ಕಪ್ಪು ಸಮುದಾಯದ ವ್ಯಕ್ತಿಗಳನ್ನು ಋಣಾತ್ಮಕವಾಗಿ ಚಿತ್ರಿಸುತ್ತದೆ ಅನಿಸಿತು. ಗೆಳೆಯರು ಒಪ್ಪಿಸಲೆತ್ನಿಸಿದರೂ ಸಿಡ್ನಿ ಆ ಪಾತ್ರಕ್ಕೆ ಸಿದ್ಧವಿರಲಿಲ್ಲ. ಅವನಿಗೆ ಹೊಸ ರೀತಿಯಲ್ಲಿ ಕಪ್ಪುಜನಾಂಗದ ಪ್ರತಿನಿಧಿಗಳನ್ನು ಜಗತ್ತಿಗೆ ತೋರಿಸಬೇಕು ಎನ್ನಿಸಿತ್ತು. ಅವನು ಹೇಳಿಕೊಳ್ಳುತ್ತಾನೆ: ’ನನಗೆ ಪ್ರತಿಯೊಂದು ಸನ್ನಿವೇಶದಲ್ಲೂ ಕೋಟ್ಯಂತರ ಕಪ್ಪು ಸಮುದಾಯದ ವ್ಯಕ್ತಿಗಳನ್ನು ನಾನು ಪ್ರತಿನಿಧಿಸುತ್ತಿದ್ದೇನೆ ಅನಿಸುತ್ತಿತ್ತು’ ಎಂದು.

ಪ್ರಗತಿಶೀಲ ಚಿತ್ರಗಳ ಸರಣಿ

ಹಾಲಿವುಡ್ ಸದಾಕಾಲಕ್ಕೂ ವ್ಯಾಪಾರಿ ಚಿತ್ರಗಳಿಗೇ ಹೆಸರುವಾಸಿಯಾದದ್ದು. ಆದರೆ ಕಳೆದ ಶತಮಾನದ ನಲವತ್ತು ಮತ್ತು ಐವತ್ತರ ದಶಕದಲ್ಲಿ ಅನೇಕ ಪ್ರಗತಿಶೀಲ ಚಿತ್ರಗಳು ಬಂದವು. ಸ್ಟಾನ್ಲಿ ಕ್ರೇಮರ್‌ನಂಥ ನಿರ್ದೇಶಕ, ಸ್ಪೆನ್ಸರ್ ಟ್ರೇಸಿ, ಕರ್ಕ್ ಡಗ್ಲರ್ಸ್, ಗ್ರೆಗೊರಿ ಪೆಕ್‌ರಂಥ ನಟರು, ಕ್ಯಾಥರೀನ್ ಹೆಪ್‌ಬರ್ನ್‌ರಂಥ ನಟಿ ಇಂಥ ಚಿತ್ರಗಳ ತಯಾರಿಕೆಗೆ ಕಾರಣರಾದರು. ಅಮೆರಿಕನ್ ವ್ಯವಸ್ಥೆಯ ಜನವಿರೋಧಿ ಧೋರಣೆಯನ್ನು ಪ್ರತಿಭಟಿಸಿದವರಿವರು. ಈ ಪಟ್ಟಿ ಇನ್ನೂ ದೊಡ್ಡದಿದೆ. ಅವರೊಂದಿಗೆ ನಟಿಸುವ ಸೌಭಾಗ್ಯ ನಮ್ಮ ಸಿಡ್ನಿಗೆ ಸಿಕ್ಕಿತು.

ಸ್ಟಾನ್ಲಿ ಕ್ರೇಮರ್‌

ಸ್ಟಾನ್ಲಿ ಕ್ರೇಮರ್‌ನ ’ದ ಡಿಫಯಂಟ್ ಒನ್ಸ್’ ಒಂದು ಯಶಸ್ವಿ ಚಿತ್ರವಾಯಿತು. ಅದರಲ್ಲಿ ಲಾರಿಯೊಂದರಲ್ಲಿ ಸಾಗಿಸಲ್ಪಡುತ್ತಿದ್ದ ಖೈದಿಗಳಿಬ್ಬರು, ಆ ವಾಹನವು ಅಪಘಾತಕ್ಕೆ ಸಿಲುಕಿದಾಗ ತಪ್ಪಿಸಿಕೊಂಡು ಓಡುತ್ತಾರೆ. ಆದರೆ
ಇಬ್ಬರನ್ನು ಸೇರಿಸಿ ಬೇಡಿ ಹಾಕಲಾಗಿರುತ್ತದೆ. ಅದರಲ್ಲಿ ಒಬ್ಬ ಸಿಡ್ನಿ, ಇನ್ನೊಬ್ಬ ಬಿಳಿಯ. ಅವರು ತಮ್ಮ ಪೂರ್ವಾಗ್ರಹಗಳನ್ನು ಮೀರಿ ತಮ್ಮ ವಿಮೋಚನೆಗಾಗಿ ಒಂದಾಗಲೇಬೇಕು. ದಮನಕಾರಿ ಬಂಡವಾಳಶಾಹಿ ವ್ಯವಸ್ಥೆಯ ವಿರುದ್ಧ ಕಪ್ಪು ಸಮುದಾಯದ ಮತ್ತು ಬಿಳಿಯ ಬಡವರು ಒಂದಾಗಲೇಬೇಕು ಎಂಬುದನ್ನು ಸಾರಿ ಹೇಳುವ ಅದ್ಭುತ ರೂಪಕ ಅದು. ಆ ಪಾತ್ರಕ್ಕಾಗಿ ಸಿಡ್ನಿ ಆಸ್ಕರ್‌ಗೆ ನಾಮಾಂಕಿತಗೊಂಡರು. ಕಡೆಗೂ 1964ರಲ್ಲಿ ಚಿತ್ರ ಜಗತ್ತಿನ ಪ್ರತಿಷ್ಟಿತ ಪ್ರಶಸ್ತಿಯಾದ ಆಸ್ಕರ್ ಅವನಿಗೆ ಸಿಕ್ಕಿದ್ದು ’ಲಿಲೀಸ್ ಆಫ್ ದಿ ಫೀಲ್ಡ್’ ಚಿತ್ರಕ್ಕಾಗಿ. ಅದಾದ ಮೇಲೆ ಅವನ ಅತ್ಯಂತ ಪ್ರಖ್ಯಾತ ಚಿತ್ರ ’ಟು ಸರ್ ವಿತ್ ಲವ್’ ಬಂತು. ಅದರಲ್ಲಿ ಸಿಡ್ನಿ ಇಂಗ್ಲೆಂಡಿನ ಶಾಲೆಯೊಂದರಲ್ಲಿ ಉಪಾಧ್ಯಾಯ. ಬಡ ಬಿಳಿಯ ಹುಡುಗರಲ್ಲಿ ವರ್ಣ ದ್ವೇಷವಿದ್ದು ಅವರು ಹೊಸ ಮೇಷ್ಟ್ರನ್ನು ಪೀಡಿಸಲೆತ್ನಿಸುತ್ತಾರೆ. ಬಡವರಲ್ಲೂ ಕಪ್ಪು ಸಮುದಾಯ ವಿರೋಧಿ ಪೂರ್ವಾಗ್ರಹ ಧಂಡಿಯಾಗಿರುತ್ತದೆ. ಅವರನ್ನು ಅವನು ಗೆದ್ದುಕೊಳ್ಳುವ ರೀತಿ ಬಹಳ ಮನೋಜ್ಞವಾದದ್ದು.

ಆ ನಂತರ ಅವನು ಸ್ಟಾನ್ಲಿ ಕ್ರೇಮರ್ ಜೊತೆಗೆ ಇನ್ನೊಂದು ಹೆಸರುವಾಸಿ ಚಿತ್ರ ಮಾಡಿದ. ಅದೇ ’ಗೆಸ್ ಹು ಈಸ್ ಕಮಿಂಗ್ ಟು ಡಿನ್ನರ್’. ಅದರಲ್ಲಿ ಅವನೊಬ್ಬ ಉಜ್ವಲ ಪ್ರತಿಭೆಯ ವೈದ್ಯ. ಅವನನ್ನು ಒಬ್ಬ ಬಿಳಿಯ ತರುಣಿ ಪ್ರೇಮಿಸಿದ್ದಾಳೆ. ಅವರಿಬ್ಬರೂ ಮದುವೆಯಾಗ ಬಯಸುತ್ತಾರೆ. ತರುಣಿಯ ತಾಯಿ, ತಂದೆ ಉದಾರವಾದಿಗಳು.
ಆದರೆ ಭಯ ಆತಂಕಗಳಿಂದ ಅವರೂ ಮುಕ್ತರಲ್ಲ. ಅದ್ಭುತ ನಟನಾ ವರ್ಗವೇ ಇತ್ತು. ಸಿನಿಮಾದಲ್ಲಿ ಸಹ ಕಪ್ಪು ಸಮುದಾಯದ ಹುಡುಗನೊಬ್ಬ ಬಿಳಿಯ ಹುಡುಗಿಯನ್ನು ಮದುವೆಯಾಗುವುದನ್ನು ಅನೇಕ ಕಡೆ ಅಮೆರಿಕದ ಜನತೆ ಒಪ್ಪುತ್ತಿರಲಿಲ್ಲ. ಅಲ್ಲಿನ ದಕ್ಷಿಣ ರಾಜ್ಯಗಳಲ್ಲಿ ಬಹಳಷ್ಟು ಕಡೆ ಚಿತ್ರ ಬಿಡುಗಡೆ ಸಹ ಆಗಲಿಲ್ಲ. ಅಮೆರಿಕದ ಎಲ್ಲ ಐವತ್ತು ರಾಜ್ಯಗಳಲ್ಲೂ ಅಂತಹ ಮದುವೆ ಮಾನ್ಯ ಎಂದು ಹೇಳುವ ಕಾನೂನನ್ನು ಅಂಗೀಕರಿಸಿ ಆರು ತಿಂಗಳಾಗಿತ್ತು ಅಷ್ಟೇ! ಇಂದಿಗೂ ನಾವೆಲ್ಲರೂ ತಪ್ಪದೆ ನೋಡಬೇಕಾದ ಕ್ಲಾಸಿಕ್ ಇದು. ದಲಿತರು ಮತ್ತು ಮುಸ್ಲಿಮರು ಹಾಗೂ ಮೇಲ್ಜಾತಿಯವರು ನೆಮ್ಮದಿಯ ಮದುವೆಯಾಗಲು ಸಾಧ್ಯವಾದ ಭಾರತ ನಮಗಿನ್ನೂ ದಕ್ಕಿಲ್ಲ.

ತತ್ವಬದ್ಧ ನಟ

1967ರಲ್ಲಿ ಸಿಡ್ನಿ ಹಾಲಿವುಡ್‌ನಲ್ಲಿ ನಂಬರ್ ಒನ್ ನಟ ಎಂದು ಗುರುತಿಸಲ್ಪಟ್ಟಿದ್ದ. ಇದು ಅವನ ದೈತ್ಯ ಪ್ರತಿಭೆಗೆ ಸಾಕ್ಷಿ. ಇಷ್ಟಾಗಿಯೂ ಅವನು ಜನಾಂಗೀಯ ಪೂರ್ವಗ್ರಹಗಳಿಗೆ ಬಲಿಯಾಗುತ್ತಿದ್ದ. ಲಾಸ್ ಏಂಜಲಿಸ್‌ನಂಥ ಮಹಾನಗರದಲ್ಲಿ ಅವನಿಗೆ ವಾಸಕ್ಕೆ ಮನೆ ಸಿಕ್ಕಿರಲಿಲ್ಲ! ಒಮ್ಮೆ ಕು-ಕ್ಲುಕ್ಸ್-ಕ್ಲಾನ್ ಎಂಬ ವರ್ಣದ್ವೇಷಿ ಉಗ್ರವಾದಿ ಸಂಘಟನೆ ಅವನಿದ್ದ ಗೆಸ್ಟ್‌ಹೌಸ್‌ಗೆ ಬಂದು ದೈಹಿಕವಾಗಿ ದಾಳಿ ನಡೆಸಲು ಪ್ರಯತ್ನಿಸಿತ್ತು. ಗೆಳೆಯ ಬೆಲಾಫಾಂಟೆಯ ಜೊತೆಯಲ್ಲಿ ಸಿಡ್ನಿ ಕಪ್ಪು ಸಮುದಾಯದವರ ಹಕ್ಕುಗಳಿಗಾಗಿ ಮೆರವಣಿಗೆಗಳಲ್ಲಿ ಭಾಗವಹಿಸಿದ ಮತ್ತು ಚಳುವಳಿಗೆ ಧನ ಸಹಾಯ ಕೂಡ ಮಾಡಿದ. 1960ರ ದಶಕ ತೀವ್ರವಾದ ಕಪ್ಪು ಸಮುದಾಯದ ಹಕ್ಕುಗಳ ಹೋರಾಟಗಳ ಕಾಲ. ’ನಾನು ಮೊದಲ ಕಪ್ಪು ಜನರ ತಾರೆ ಮತ್ತು ಪ್ರತಿಭಟನೆಯ ಸಂಕೇತ, ನಾನು ಆ ಕಾಲದ ಚರಿತ್ರೆಯ ಕೂಸಾಗಿ ಹಾಗೆ ಇರಲೇಬೇಕಿತ್ತು’ ಎಂದು ಅವನು ತನ್ನ ಆತ್ಮಕಥೆಯಲ್ಲಿ ಬರೆದಿದ್ದಾನೆ.

ಎರಡನೆಯ ಮಹಾಯುದ್ಧದ ನಂತರದ ಕಾಲಘಟ್ಟದಲ್ಲಿ ಅಮೆರಿಕ ಕಮ್ಯುಸಮ್‌ನ ಬೆಳವಣಿಗೆಯ ಬಗ್ಗೆ ತೀರಾ ಹೆದರಿಬಿಟ್ಟಿತ್ತು. ಆಗ ಅಮೆರಿಕದಲ್ಲಿದ್ದ ಎಲ್ಲ ಹೆಸರಾಂತ ಎಡಪಂಥೀಯ ಲೇಖಕರನ್ನು, ಕಲಾವಿದರನ್ನು ಬಗ್ಗುಬಡಿ ಯಬೇಕು ಎಂಬ ದಮನಕಾರಿ ನೀತಿ ಆರಂಭವಾಯಿತು. ಇದಕ್ಕೆ ನೇತೃತ್ವ ವಹಿಸಿದವನು ಸೆನೆಟರ್ ಆಗಿದ್ದ ಮೆಕಾರ್ಥಿ. ಹಾಲಿವುಡ್‌ನಲ್ಲಿ ಇದ್ದ ಅನೇಕ ನಟರು, ನಿರ್ದೇಶಕರು, ಲೇಖಕರು ಸಹ ಈ ಉನ್ಮಾದಕ್ಕೆ ತುತ್ತಾಗಬೇಕಾಯಿತು. ಸಿಡ್ನಿಗೆ, ಹ್ಯಾರಿಗೆ ಗುರು ಸಮಾನನಾಗಿದ್ದವನು ಮಹಾನ್ ಗಾಯಕ ಪಾಲ್ ರೋಬ್ಸನ್. ಆತ ಕಟ್ಟಾ ಹೋರಾಟಗಾರ ಮತ್ತು ಕಮ್ಯುನಿಸ್ಟ್. ಆದ್ದರಿಂದ ಸಿಡ್ನಿಯ ಮೇಲೆ ವಿಪರೀತ ಒತ್ತಡ ಸೃಷ್ಟಿಯಾಯಿತು. ಆದರೆ ಸಿಡ್ನಿ ಬಾಗಲಿಲ್ಲ. ತನ್ನ ಆತ್ಮಸಾಕ್ಷಿಯನ್ನು ಒಂದಿಷ್ಟು ಸಹ ರಾಜಿ ಮಾಡಿಕೊಳ್ಳಲಿಲ್ಲ.

1967ರಲ್ಲಿ ಬಂದ ’ಇನ್ ದಿ ಹೀಟ್ ಆಫ್ ದಿ ನೈಟ್’ನಲ್ಲಿ ಕಪ್ಪು ಸಮುದಾಯಕ್ಕೆ ಪತ್ತೆದಾರನ ಪಾತ್ರ. ಪೂರ್ವಗ್ರಹ ತುಂಬಿದ ಬಿಳಿಯ ಅಧಿಕಾರಿಯೊಡನೆ ಅವನು ಕೆಲಸ ಮಾಡಬೇಕು. ಅದರಲ್ಲಿ ಸಿಡ್ನಿಗೆ ಅವರು ಕೆನ್ನೆಗೆ ಹೊಡೆಯುತ್ತಾರೆ. ಮೂಲ ಚಿತ್ರಕತೆಯಲ್ಲಿ ಅವನು ಬಿಳಿಯ ಅಧಿಕಾರಿಯನ್ನು ದುರುಗುಟ್ಟಿ ನೋಡಿ ನಿರ್ಗಮಿಸಬೇಕು ಅಷ್ಟೇ. ಹಾಗೆ ತಣ್ಣಗೆ ಹೋಗುವುದರಲ್ಲಿ ಪ್ರತಿಭಟನೆಯ ಎಳೆ ಇತ್ತು ನಿಜ. ಆದರೆ ಸಿಡ್ನಿ ಚಿತ್ರಕಥೆಯನ್ನು ಬದಲಾಯಿಸಬೇಕು ಎಂದು ಹಠ ಹಿಡಿದ ಮತ್ತು ಕೊನೆಗೆ ಬದಲಾಯಿಸುವಂತೆ ಮಾಡಿದ. ಹೊಸ ಚಿತ್ರಕಥೆಯಲ್ಲಿ ಅವನು ಬಿಳಿಯನಿಗೆ ವಾಪಸ್ ಕೆನ್ನೆಗೆ ಬಾರಿಸುತ್ತಾನೆ. ಹಾಗೆಯೇ ಚಿತ್ರೀಕರಣವಾಗಬೇಕು, ಆ ದೃಶ್ಯವನ್ನು ಕತ್ತರಿಸಬಾರದು ಎಂದು ಅವನು ಲಿಖಿತ ಒಪ್ಪಂದ ಮಾಡಿಕೊಂಡ! ಶತಮಾನಗಳ ಕಾಲ ಅವಮಾನ ಅನುಭವಿಸಿದ್ದ ನನ್ನ ಜನರ ಪರವಾಗಿ ನಾನು ಹಾಗೆ ವಾಪಸ್ ಹೊಡೆಯಲೇಬೇಕಿತ್ತು ಎಂದು ಅವನು ಹೇಳುತ್ತಾನೆ.

ಇಂತಹ ಕಾರಣಗಳಿಂದಲೇ ಮುಂದೆ ಅವನಿಗೆ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ ನೀಡಿ ಸನ್ಮಾನ ಮಾಡುವ ಪ್ರಸಂಗ ಬಂದಾಗ ಅಂದಿನ ಅಮೆರಿಕದ ಅಧ್ಯಕ್ಷ ಒಬಾಮಾ ಹೇಳಿದರು: ’ಅಮೆರಿಕದ ಚಲನಚಿತ್ರ ಇತಿಹಾಸದಲ್ಲಿ ಎರಡು ಯುಗಗಳಿವೆ; ಒಂದು ಸಿಡ್ನಿ ಪಾಟಿಯೆ ಪೂರ್ವಯುಗ, ಇನ್ನೊಂದು ಸಿಡ್ನಿ ನಂತರದ ಯುಗ!

ಡೆಂಜೆಲ್ ವಾಷಿಂಗ್‌ಟನ್‌

ನಲವತ್ತೇಳು ವರ್ಷಗಳ ನಂತರ ಎರಡನೆಯ ಬಾರಿ ಇನ್ನೊಬ್ಬ ಕಪ್ಪು ಸಮುದಾಯದ ನಟ ಡೆಂಜೆಲ್ ವಾಷಿಂಗ್‌ಟನ್‌ಗೆ ಆಸ್ಕರ್ ಪ್ರಶಸ್ತಿ ಬಂತು. ಅದೇ ದಿನ ಸಿಡ್ನಿಗೂ ಜೀವಮಾನದ ಸಾಧನೆಗಾಗಿ ಮತ್ತೆ ಆಸ್ಕರ್ ಬಂದಿತ್ತು. ಅಲ್ಲಿ ಹಿರಿಯ ನಟನನ್ನು ಉದ್ದೇಶಿಸಿ ಕಿರಿಯ ಹೇಳಿದ: “ನಾನು ನಲವತ್ತು ವರ್ಷಗಳಿಂದ ಸಿಡ್ನಿಯ ಹಿಂದೆ ಓಡುತ್ತಾ ಬರುತ್ತಿದ್ದೇನೆ. ಸಿಡ್ನಿ, ನಿನ್ನ ಹಿಂದೆ ಬರುತ್ತಲೇ ಇರುತ್ತೇನೆ. ನಾನು ಯಾವತ್ತೂ ನಿನ್ನ ಹೆಜ್ಜೆಗಳನ್ನೇ ಅನುಸರಿಸುವವನು”.

ಸಿಡ್ನಿ ಯಾವಾಗಲೂ ಠಾಕುಠೀಕಾದ, ಸಭ್ಯನಾದ, ಎಲ್ಲೆಡೆ ಗೆಲ್ಲುವ ಕಪ್ಪು ಸಮುದಾಯದ ವ್ಯಕ್ತಿಗಳ ಪಾತ್ರಗಳನ್ನು ಮಾಡಿದ ಎಂದು ಅದೇ ಸಮುದಾಯದ ಕೆಲವರು ಅವನನ್ನು ಟೀಕಿಸಿದ್ದರು. ಅಂತಹ ಚಿತ್ರಣ ಅಮೆರಿಕದಲ್ಲಿ ಕಪ್ಪು ಸಮುದಾಯದ ವ್ಯಕ್ತಿಗಳು ಉನ್ನತ ಸ್ಥಾನಮಾನ ಗಳಿಸಿಕೊಳ್ಳಬಹುದು ಎಂಬ ಭ್ರಮೆಯನ್ನು ಪೋಷಿಸುತ್ತದೆ ಎಂಬುದು ಅವರ ಆಪಾದನೆ. ಅದಕ್ಕೆ ಸಿಡ್ನಿ ಹೇಳಿದ, “ನಿಜ ಕಪ್ಪು ಸಮುದಾಯದ ವ್ಯಕ್ತಿಗಳ ಬದುಕಿಗೆ ಅನೇಕ ಆಯಾಮಗಳಿವೆ. ನನಗೆ ಕೇಡಿಗಳ, ನಕಾರಾತ್ಮಕವಾದ ಪಾತ್ರಗಳನ್ನು ಮಾಡಲು ಸಹ ಬಹಳ ಇಷ್ಟವಿತ್ತು. ಆದರೆ
ಕಪ್ಪು ಸಮುದಾಯದ ವ್ಯಕ್ತಿಗಳು ಅಸಾಧಾರಣ ಪ್ರತಿಭಾವಂತರು, ಸಾಹಸಿಗಳು, ಸ್ವಾಭಿಮಾನಿಗಳು ಎಂಬುದನ್ನು ಜಗತ್ತಿನ ಎದುರು ಸಾಧಿಸಬೇಕಾಗಿದ್ದ ಕಾಲಾವಧಿ ಅದು”. ಆ ಅಗತ್ಯವನ್ನು ಅವನು ಬಹಳ ಚೆನ್ನಾಗಿ ಪೂರೈಸಿದ. “ನಾನು ಚರಿತ್ರೆಯ ಆಯ್ಕೆ” ಎಂಬುದು ಅವನ ಪ್ರಖ್ಯಾತ ಹೇಳಿಕೆ.

ಡಾ. ಬಿ ಆರ್ ಮಂಜುನಾಥ್

ಡಾ. ಬಿ ಆರ್ ಮಂಜುನಾಥ್
ವೃತ್ತಿಯಲ್ಲಿ ವೈದ್ಯರಾಗಿರುವ ಮಂಜುನಾಥ್ ಅವರು ಸಾಮಾಜಿಕ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವವರು. ’ಕಥನ ಕಣಜದ ಗಟ್ಟಿ ಕಾಳು’, ’ಎಂಟು ದಿಕ್ಕು ನೂರೆಂಟು ಕಥೆ’ ವಿಶ್ವದ ಸಾಹಿತ್ಯ ಕೃತಿಗಳ ಬಗ್ಗೆ ಚರ್ಚಿಸಿರುವ ಅವರ ಎರಡು ಪುಸ್ತಕಗಳು.


ಇದನ್ನೂ ಓದಿ: 2021 ಸಿನಿಮಾ ಲೋಕ: ಜಾತಿ ದೌರ್ಜನ್ಯವನ್ನು ಪ್ರಶ್ನಿಸಿದ, 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...