ಅದಾನಿ ಸೇರಿದಂತೆ ಹಲವು ಕಾರ್ಪೋರೇಟ್ ದೈತ್ಯರ ಅಕ್ರಮಗಳನ್ನು ಬಯಲಿಗೆಳೆದಿದ್ದ ಅಮೆರಿಕದ ಶಾರ್ಟ್ ಸೆಲ್ಲರ್ ಸಂಸ್ಥೆ ಹಿಂಡನ್‌ಬರ್ಗ್ ರಿಸರ್ಚ್ ತನ್ನ ಕಾರ್ಯಾಚರಣೆ ಸ್ಥಗಿತಗೊಳಿಸಲು ನಿರ್ಧರಿಸಿದೆ.
“ನಾವು ಮುನ್ನಡೆಸುತ್ತಿದ್ದ ಎಲ್ಲಾ ಯೋಜನೆಗಳನ್ನು ಪೂರ್ಣಗೊಳಿಸಿದ್ದೇವೆ. ಹಾಗಾಗಿ ಸಂಸ್ಥೆಯನ್ನು ವಿಸರ್ಜಿಸುತ್ತೇವೆ ಎಂದು ಹಿಂಡನ್‌ಬರ್ಗ್ ಸಂಸ್ಥಾಪಕ ನೇಟ್ ಆಂಡರ್ಸನ್ ಬುಧವಾರ (ಜ.15) ಹೇಳಿದ್ದಾರೆ.

ನೇಟ್ ಆಂಡರ್ಸನ್ ಅವರ ಸಂಪೂರ್ಣ ಹೇಳಿಕೆ ಇಲ್ಲಿದೆ
2017ರಲ್ಲಿ ಸುಮಾರು 10 ಸಿಬ್ಬಂದಿಯೊಂದಿಗೆ ಸಣ್ಣ ಮಟ್ಟದಲ್ಲಿ ಸ್ಥಾಪನೆಯಾದ ಹಿಂಡನ್‌ಬರ್ಗ್, ಕಡಿಮೆ ಅವಧಿಯಲ್ಲಿ ಭಾರತ ಅದಾನಿ ಗ್ರೂಪ್ ಸೇರಿದಂತೆ ಜಗತ್ತಿನ ದೈತ್ಯ ಕಾರ್ಪೋರೇಟ್ ಕಂಪನಿಗಳ ಲೆಕ್ಕಪತ್ರ ದೋಷಗಳು ಸೇರಿದಂತೆ ಹಲವು ಅಕ್ರಮಗಳನ್ನು ಬಯಲಿಗೆಳೆದಿತ್ತು.
2023ರಲ್ಲಿ ಭಾರತೀಯ ಸಂಘಟಿತ ಸಂಸ್ಥೆಗಳ ವಿರುದ್ಧ ಹಿಂಡನ್‌ಬರ್ಗ್ ವರದಿ ಪ್ರಕಟಿಸಿತ್ತು. ಅದಾನಿ ಗ್ರೂಪ್ ಕಡಲಾಚೆಯ ತೆರಿಗೆಳನ್ನು ಅಸಮರ್ಪಕವಾಗಿ ಬಳಕೆ ಮಾಡುತ್ತಿದೆ ಎಂದು ಆರೋಪಿಸಿತ್ತು. ಆದರೆ, ಈ ಆರೋಪವನ್ನು ಅದಾನಿ ಗ್ರೂಪ್ ನಿರಾಕರಿಸಿತ್ತು.
ಅದಾನಿ ಗ್ರೂಪ್ ತನ್ನ ಕಂಪನಿಯ ಷೇರುಗಳ ಬೆಲೆಯನ್ನು ಕೃತಕವಾಗಿ ಹೆಚ್ಚಿಸಲು ಬಳಸಿದ ಮಾರಿಷಸ್ ನಿಧಿಯಲ್ಲಿ ಸೆಬಿ ಅಧ್ಯಕ್ಷೆ ಮಾಧವಿ ಪುರಿ ಬುಚ್ ಪಾಲು ಹೊಂದಿದ್ದಾರೆ ಎಂದು ಹಿಂಡನ್‌ಬರ್ಗ್ 2024ರಲ್ಲಿ ಆರೋಪ ಮಾಡಿತ್ತು. ಇದು ಷೇರುಪೇಟೆಯಲ್ಲಿ ಸಾಕಷ್ಟು ಸಂಚಲನ ಉಂಟು ಮಾಡಿತ್ತು. ಇದರಿಂದಾಗಿ ಅದಾನಿ ಗ್ರೂಪ್ ಷೇರುಗಳಲ್ಲಿ ಭಾರೀ ಕುಸಿತ ಉಂಟಾಗಿತ್ತು.
ಈ ನಡುವೆ 2024ರ ನವೆಂಬರ್‌ನಲ್ಲಿ ಬಹುಕೋಟಿ ಡಾಲರ್ ಲಂಚ ಮತ್ತು ವಂಚನೆ ಆರೋಪಿಸಿ ನ್ಯೂಯಾರ್ಕ್‌ನಲ್ಲಿ ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಸೇರಿದಂತೆ ಹಲವರ ವಿರುದ್ಧ ಚಾರ್ಜ್‌ಶೀಟ್ ದಾಖಲಿಸಲಾಗಿದೆ ಎಂದು ಯುಎಸ್ ಪ್ರಾಸಿಕ್ಯೂಟರ್‌ಗಳು ತಿಳಿಸಿದ್ದರು.
ಭಾರತಕ್ಕೆ ಸಂಬಂಧಪಟ್ಟಂತೆ ಅದಾನಿ ವಿರುದ್ದ ಹಿಂಡನ್‌ಬರ್ಗ್ ಮಾಡಿದ್ದ ಎರಡು ಪ್ರಮುಖ ಆರೋಪಗಳು ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿತ್ತು. ಅದಾನಿ ಕಂಪನಿಯನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಭಾರತದಲ್ಲಿ ಆಡಳಿತ ಪಕ್ಷ ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತು ಪ್ರತಿಪಕ್ಷಗಳ ಒಕ್ಕೂಟ ಕಾಂಗ್ರೆಸ್ ನೇತೃತ್ವದ ಇಂಡಿಯಾ ನಡುವೆ ತೀವ್ರ ತಿಕ್ಕಾಟ ನಡೆದಿತ್ತು.
ಬಿಜೆಪಿ ಮತ್ತು ಸಂಘ ಪರಿವಾರದ ಹಿಂದುತ್ವ ಸಂಘಟನೆಗಳು ಆದಾನಿ ವಿರುದ್ದ ಹಿಂಡನ್‌ಬರ್ಗ್ ಆರೋಪ ಭಾರತ ವಿರೋಧಿ ಕೃತ್ಯ ಎಂದು ಬಣ್ಣಿಸಿತ್ತು. ಹಿಂಡನ್‌ಬರ್ಗ್ ಅನ್ನು ಬೆಂಬಲಿಸಿದ್ದ ಪ್ರತಿಪಕ್ಷಗಳ ವಿರುದ್ದ ದೇಶದ್ರೋಹದ ಆರೋಪ ಮಾಡಿತ್ತು.
ಹಿಂಡನ್‌ಬರ್ಗ್ ಜಾಗತಿಕ ಮಟ್ಟದಲ್ಲಿ ಬಯಲಿಗೆಳೆದ ಕಾರ್ಪೋರೇಟ್ ಕಂಪನಿಗಳ ಅಕ್ರಮಗಳಲ್ಲಿಎಲೆಕ್ಟ್ರಿಕ್ ಟ್ರಕ್ ತಯಾರಕ ಕಂಪನಿ ನಿಕೋಲಾ ವಿರುದ್ಧದ ಪ್ರಕರಣವೂ ಒಂದು. ನಿಕೋಲಾ ತನ್ನ ತಂತ್ರಜ್ಞಾನದ ಸ್ಥಿತಿಯ ಬಗ್ಗೆ ಸುಳ್ಳು ಹೇಳುತ್ತಿದೆ ಎಂದು 2020ರಲ್ಲಿ ಹಿಂಡನ್‌ಬರ್ಗ್ ಆರೋಪಿಸಿತ್ತು.
ಪರಿಣಾಮ, ನಿಕೋಲಾ ಕಂಪನಿಯ ಮೇಲೆ ಕ್ರಿಮಿನಲ್ ವಂಚನೆ ಪ್ರಕರಣ ದಾಖಲಿಸಲಾಗಿತ್ತು. ಕಂಪನಿಯು ಯುಎಸ್ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಕಮಿಷನ್‌ಗೆ 125 ಮಿಲಿಯನ್ ಡಾಲರ್ ಪಾವತಿಸಲು ಒಪ್ಪಿಕೊಂಡಿತ್ತು. ಇದು ಹಿಂಡನ್‌ಬರ್ಗ್‌ನ ಯಶಸ್ವಿ ವರದಿ ಎಂದು ಪರಿಗಣಿಸಲಾಗಿದೆ.
ಹಿಂಡೆನ್‌ಬರ್ಗ್ ವರದಿಯು ವಂಚನೆ ಆರೋಪ ಹೊರಿಸಿದ ನಂತರ ಅದಾನಿ ಗ್ರೂಪ್ 2023 ರಲ್ಲಿ ತನ್ನ ಮಾರುಕಟ್ಟೆ ಮೌಲ್ಯದಿಂದ 150 ಬಿಲಿಯನ್ ಡಾಲರ್ ಕಳೆದುಕೊಂಡಿತ್ತು.
ಬಹಳ ಕಡಿಮೆ ಅವಧಿಯಲ್ಲಿ ಜಾಗತಿಕ ಮಟ್ಟದಲ್ಲಿ ದೈತ್ಯ ಕಾರ್ಪೋರೇಟ್ ಕಂಪನಿಗಳ ಅಕ್ರಮ ಬಯಲಿಗೆಳೆದು, ಅವರನ್ನು ಎದುರು ಹಾಕಿಕೊಂಡಿರುವ ಹಿಂಡನ್‌ಬರ್ಗ್ ಹಠಾತ್ ಮುಚ್ಚುವ ನಿರ್ಧಾರಕ್ಕೆ ಬಂದಿರುವುದು ಏಕೆ ಎಂಬುವುದು ಸ್ಪಷ್ಟವಾಗಿಲ್ಲ.
ಆದರೆ, ಮುಂದಿನ ವಾರ ಅಮೆರಿದಲ್ಲಿ ಬೈಡೆನ್ ಆಡಳಿತ ಕೊನೆಗೊಂಡು ಪ್ರಧಾನಿ ಮೋದಿಯವರ ಆಪ್ತ ಡೊನಾಲ್ಡ್ ಟ್ರಂಪ್ ಅಧ್ಯಕ್ಷ ಹುದ್ದೆ ಅಲಂಕರಿಸಲಿದ್ದಾರೆ. ಅದಕ್ಕೂ ಮುನ್ನ ಹಿಂಡನ್‌ಬರ್ಗ್ ಸ್ಥಗಿತಕ್ಕೆ ಮುಂದಾಗಿರುವುದು ಗಮನಾರ್ಹ.
ಕಂಪನಿ ಮುಚ್ಚುವ ಪ್ರಕ್ರಿಯೆ ನಡೆಯುತ್ತಿದೆ. ಅದು ಪೂರ್ಣಗೊಂಡ ಬಳಿಕ ಕಾರ್ಯಾಚರಣೆ ಸ್ಥಗಿಗೊಳ್ಳಲಿದೆ ಎಂದು ಸಂಸ್ಥಾಪಕ ನೇಟ್ ಆಂಡರ್ಸನ್ ಹೇಳಿದ್ದಾರೆ.
ಇದುವರೆಗಿನ ತಮ್ಮ ಕಾರ್ಯಾಚರಣೆಯ ಅವಧಿಯಲ್ಲಿ ಕನಿಷ್ಠ 100 ಜನರು ಕೋಟ್ಯಾದಿಪತಿಗಳು, ಕಾರ್ಪೋರೇಟ್ ದೈತ್ಯರ ಮೇಲೆ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ಆಂಡರ್ನಸ್ ಮೆಲುಕು ಹಾಕಿದ್ದಾರೆ. “ನಾವು ಅಲುಗಾಡಿಸಬೇಕು ಎಂದಿದ್ದ ಕೆಲವು ಸಾಮ್ರಾಜ್ಯಗಳನ್ನು ಅಲುಗಾಡಿಸಿದ್ದೇವೆ” ಎಂದಿದ್ದಾರೆ.
ಮುಂದಿನ ಆರು ತಿಂಗಳಲ್ಲಿ ನಾವು ಹೇಗೆ ಸಂಶೋಧನೆಗಳನ್ನು ಮಾಡುತ್ತೇವೆ. ಹೇಗೆ ಅಕ್ರಮಗಳನ್ನು ಬಯಲಿಗೆಳೆಯುತ್ತೇವೆ ಎಂಬುವುದರ ಬಗ್ಗೆ ಸರಣಿ ವಿಡಿಯೋ ಮತ್ತು ಇತರ ರೀತಿಯಲ್ಲಿ ಮಾಹಿತಿ ಹಂಚಿಕೊಳ್ಳುತ್ತೇವೆ ಎಂದು ಆಂಡರ್ಸನ್ ತಿಳಿಸಿದ್ದಾರೆ.
ಕಂಪನಿ ಮುಚ್ಚುವ ನಿರ್ಧಾರದ ಹಿಂದೆ ಯಾವುದೇ ನಿರ್ದಿಷ್ಟ ಬೆದರಿಕೆ ಅಥವಾ ವೈಯಕ್ತಿಕ ಸಮಸ್ಯೆ ಇಲ್ಲ ಎಂದು ಆಂಡರ್ಸನ್ ಸ್ಪಷ್ಟಪಡಿಸಿದ್ದಾರೆ.


