“ನಾ ತಮಿಳು ಪೆಸುಮ್ ಇಂಡಿಯನ್” (ನಾನು ತಮಿಳು ಮಾತನಾಡುವ ಭಾರತೀಯ) ಮತ್ತು ‘ಹಿಂದಿ ತೆರಿಯಾದು ಪೊಡಾ’ (ಹಿಂದಿ ಗೊತ್ತಿಲ್ಲ, ಹೋಗೋ) ಸೇರಿದಂತೆ ಇತರೆ ಘೋಷಣೆಗಳೊಂದಿಗೆ ಟೀಶರ್ಟ್ ತಯಾರಿಸುತ್ತಿರುವ ತಿರುಪ್ಪೂರಿನ ಬಟ್ಟೆ ತಯಾರಕರಿಗೆ ಕಳೆದ ಕೆಲವು ದಿನಗಳಿಂದ ಬೆದರಿಕೆ ಕರೆಗಳು ಬರುತ್ತಿವೆ ಎಂದು ಅವರು ಆರೋಪಿಸಿದ್ದಾರೆ.
ತಿರುಪ್ಪೂರಿನ ವೀರಪಾಂಡಿಯಲ್ಲಿ ಕಳೆದ ಐದು ವರ್ಷಗಳಿಂದ ಗಾರ್ಮೆಂಟ್ ವ್ಯವಹಾರದಲ್ಲಿ ತೊಡಗಿರುವ ಬಿ ಕಾರ್ತಿಕೇಯನ್, “ನಾನು ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಗಳಿಗೆ ಮತ್ತು ಕಾರ್ಪೊರೇಟ್ ಆದೇಶದ ಮೇರೆಗೆ ಟಿ-ಶರ್ಟ್‌ಗಳನ್ನು ಮಾರಾಟ ಮಾಡುತ್ತಿದ್ದೇನೆ. ಕಳೆದ ವಾರ, ಟಿ-ಶರ್ಟ್ ಮತ್ತು ಘೋಷಣೆಯ ಬಗ್ಗೆ ತೂತುಕುಡಿ ಸಂಸದ ಕನಿಮೋಳಿ ಅವರ ಕಚೇರಿಯಿಂದ ನನಗೆ ಕರೆ ಬಂದಿತು. ಅವರು ನೀಡಿದ ಘೋಷಣೆಯನ್ನು ನಾನು ಸ್ವೀಕರಿಸಿದೆ. ಅದು ವಿಶಿಷ್ಟ ಮತ್ತು ಶಕ್ತಿಯುತವಾಗಿತ್ತು” ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಹೇಳಿದ್ದಾರೆ ಎಂದು ವರದಿಯಾಗಿದೆ.
“ನಾ ತಮಿಳು ಪೆಸುಮ್ ಇಂಡಿಯನ್” (ನಾನು ತಮಿಳು ಮಾತನಾಡುವ ಭಾರತೀಯ) ಮತ್ತು ‘ಹಿಂದಿ ತೆರಿಯಾದು ಪೊಡಾ’ (ಹಿಂದಿ ಗೊತ್ತಿಲ್ಲ, ಹೋಗೋ) ಎಂಬ ಘೋಷಣೆಗಳು ನನ್ನ ಆಸಕ್ತಿಯನ್ನು ಸೆಳೆದವು. ಆದ್ದರಿಂದ, ನಾವು ಟಿ-ಶರ್ಟ್ ಮೇಲೆ ಈ ಘೋಷಣೆಯ ಮುದ್ರಣವನ್ನು ಹಾಕಿಸಿದ್ದೇವೆ. ಕೆಲವೇ ದಿನಗಳಲ್ಲಿ, ಇದು ಚೆನ್ನೈ ಮತ್ತು ತಮಿಳುನಾಡಿನಾದ್ಯಂತ ಭಾರಿ ಮನ್ನಣೆ ಪಡೆಯಿತು. ಹಲವಾರು ಸಿನಿ ಸೆಲೆಬ್ರಿಟಿಗಳು ಮತ್ತು ಉನ್ನತ ವ್ಯಕ್ತಿಗಳು ಟಿ-ಶರ್ಟ್ ಅನ್ನು ತೆಗೆದುಕೊಂಡು ಪ್ರಚಾರ ಮಾಡಿದರು. ಇದರ ಬಗ್ಗೆ ನನಗೆ ತುಂಬಾ ಸಂತೋಷವಾಗಿದೆ” ಎಂದು ಅವರು ಹೇಳಿದರು.
ಇದನ್ನೂ ಓದಿ: ಮೆಟ್ರೋದಲ್ಲಿ ಹಿಂದಿ ತೆಗೆಯಿರಿ, ಇಲ್ಲ ಎಲ್ಲಾ ಅಧಿಕೃತ 22 ಭಾಷೆಗಳನ್ನು ಬಳಸಿ: ಟಿ.ಎಸ್.ನಾಗಾಭರಣ
“ಸ್ನೇಹಿತರು ಮತ್ತು ಸಂಬಂಧಿಕರು ಈ ಕೆಲಸವನ್ನು ಮೆಚ್ಚಿಕೊಳ್ಳುವುದರೊಂದಿಗೆ, ಹಲವರಿಂದ ಆರ್ಡರ್ ಬರಲು ಆರಂಭವಾಯಿತು. ಆದ್ದರಿಂದ, ನಾನು ಟಿ-ಶರ್ಟ್ ಮಾರಾಟ ಮಾಡಲು ನಿರ್ಧರಿಸಿ, ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿದೆ. ಈಗ ಜಗತ್ತಿನಾದ್ಯಂತ ಆರ್ಡರ್ ಬರಲು ಪ್ರಾರಂಭವಾಗಿದೆ” ಎಂದು ಹೇಳಿದರು.
“ನಾನು ನನ್ನ ಮೊಬೈಲ್ ಸಂಖ್ಯೆ ಮತ್ತು ಟಿ-ಶರ್ಟ್‌ನ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದಾಗ, ನನಗೆ ಫೋನ್‌ನಲ್ಲಿ ಬೆದರಿಕೆಗಳು ಮತ್ತು ನಿಂದನೆಗಳು ಬರಲು ಆರಂಭವಾಯಿತು. ಅನೇಕ ಕರೆಗಳು ದುಬೈ ಮತ್ತು ಸಿಂಗಾಪುರದ ಜನರಿಂದ ಬಂದವು. ನಾನು, ’ಕೇವಲ ಭಾಷೆ ಹೇರಿಕೆಯನ್ನು ವಿರೋಧಿಸುವ ಉಡುಪು ತಯಾರಕ” ಎಂದು ವಿವರಿಸಿದರೂ ಅವರು ನನ್ನನ್ನು ನಿಂದಿಸಿದ್ದರು” ಎಂದು ಅವರು ಸ್ವೀಕರಿಸಿದ ಬೆದರಿಕೆಗಳ ಬಗ್ಗೆ ವಿವರಿಸಿದರು.
“ಆದ್ದರಿಂದ, ನಾನು ಮೌನವಾಗಿರಲು ನಿರ್ಧರಿಸಿ, ಹೊಸ ಆರ್ಡರ್ ಬಂದಾಗಲೆಲ್ಲಾ, ’ನಾನು ಉಡುಪು ತಯಾರಕನಲ್ಲ’ ಎಂದು ನಟಿಸಿದೆ. ಆದರೆ ನನ್ನ ಸ್ನೇಹಿತರು ನನಗೆ ಬಲತುಂಬಿ ಪ್ರೋತ್ಸಾಹಿಸಿದರು. ನಂತರ ನಾನು ಎಲ್ಲಾ ಆರ್ಡರ್‌ಗಳನ್ನು ಸ್ವೀಕರಿಸಲು ನಿರ್ಧರಿಸಿದ್ದೇನೆ. ಆದರೆ, ಬೆದರಿಕೆ ಕರೆಗಳ ಬಗ್ಗೆ ಪೊಲೀಸ್ ದೂರು ನೀಡಲು ಯೋಚಿಸಿಲ್ಲ. ಅವುಗಳನ್ನು ಎದುರಿಸಲು ನಾನು ಸಿದ್ಧ” ಎಂದು ಹೇಳಿದರು.
ಇದನ್ನೂ ಓದಿ: ಹಿಂದಿ ತಿಳಿದಿದ್ದವರು ಮಾತ್ರ ಭಾರತೀಯರೆ?: ಡಿಎಂಕೆ ಸಂಸದೆ ಕನಿಮೊಳಿ ಪ್ರಶ್ನೆ
ಹಿಂದಿ ದಿವಸ್ ವಿರುದ್ಧ ಅನೇಕ ರಾಜ್ಯಗಳು ದನಿಯೆತ್ತುತ್ತಿವೆ. ಕರ್ನಾಟಕದಲ್ಲಿಯೂ ಕೂಡ ಹಿಂದಿ ಭಾಷೆಯ ಹೇರಿಕೆಯ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಪರ-ವಿರೋಧದ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ಈಗ ಧನಂಜಯ್ ಧರಿಸಿರುವ ಟೀಶರ್ಟ್ ವೈರಲ್ ಆಗುತ್ತಿದ್ದು, ಅದರಲ್ಲಿ “ಕನ್ನಡಿಗರಿಗೆ ಕನ್ನಡ ಭಾಷೆಯೇ ರಾಷ್ಟ್ರೀಯ ಭಾಷೆ” ಎಂದು ಅದರಲ್ಲಿ ಬರೆದಿದೆ.
ಇದನ್ನೂ ಓದಿ: ನಾನು ಭಾರತೀಯ, ನಾನು ಹಿಂದಿ ಮಾತನಾಡುವುದಿಲ್ಲ: ಹಿಂದಿ ಹೇರಿಕೆ ವಿರುದ್ಧ ವಿಭಿನ್ನ ಪ್ರತಿರೋಧ


