2020 ರ ರಾಷ್ಟ್ರೀಯ ಶಿಕ್ಷಣ ನೀತಿಯು ತಮಿಳುನಾಡಿನಲ್ಲಿ ಹಿಂದಿಯನ್ನು ಹೇರುವುದಿಲ್ಲ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಭಾನುವಾರ ಪುನರುಚ್ಚರಿಸಿದ್ದಾರೆ. ತಮಿಳುನಾಡಿನಲ್ಲಿ ಈ ಯೋಜನೆಗೆ ವಿರೋಧ ವ್ಯಕ್ತವಾಗುತ್ತಿರುವುದು ರಾಜಕೀಯ ಉದ್ದೇಶಗಳ ಕಾರಣಕ್ಕಾಗಿ ಎಂದು ಅವರು ಪ್ರತಿಪಾದಿಸಿದ್ದಾರೆ.
“ಎನ್‌ಇಪಿ 2020 ಹಿಂದಿ, ತಮಿಳು, ಒಡಿಯಾ, ಪಂಜಾಬಿ ಸೇರಿದಂತೆ ಭಾರತದ ವಿವಿಧ ಭಾಷೆಗಳ ಮೇಲೆ ಕೇಂದ್ರೀಕೃತವಾಗಿದೆ. ಈ ಎಲ್ಲಾ ಭಾಷೆಗಳು ಸಮಾನ ಪ್ರಾಮುಖ್ಯತೆಯನ್ನು ಹೊಂದಿವೆ.” ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
“ತಮಿಳುನಾಡಿನಲ್ಲಿ ರಾಜಕೀಯ ಕಾರಣಕ್ಕಾಗಿ ಕೆಲವರು [ಎನ್‌ಇಪಿ]ಯನ್ನು ವಿರೋಧಿಸುತ್ತಿದ್ದಾರೆ. ಎನ್‌ಇಪಿ 2020 ರಲ್ಲಿ ಹಿಂದಿ ಮಾತ್ರ ಇರುತ್ತದೆ ಎಂದು ನಾವು ಎಂದಿಗೂ ಹೇಳಿಲ್ಲ. ಶಿಕ್ಷಣವು ಮಾತೃಭಾಷೆಯನ್ನು ಆಧರಿಸಿರುತ್ತದೆ ಎಂದು ಮಾತ್ರ ನಾವು ಹೇಳಿದ್ದೇವೆ. ತಮಿಳುನಾಡಿನಲ್ಲಿ ಅದು ತಮಿಳು ಆಗಿರುತ್ತದೆ.” ಎಂದು ಅವರು ಹೇಳಿದ್ದಾರೆ.
ತಮಿಳುನಾಡಿನ ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ ಸೇರಿದಂತೆ ತಮಿಳುನಾಡಿನ ರಾಜಕೀಯ ಪಕ್ಷಗಳು ತ್ರಿಭಾಷಾ ಸೂತ್ರದ ಅಡಿಯಲ್ಲಿ ಹಿಂದಿಯನ್ನು ಮೂರನೇ ಭಾಷೆಯಾಗಿ ಹೇರುವ ಪ್ರಯತ್ನಗಳನ್ನು ಬಹಳ ಹಿಂದಿನಿಂದಲೂ ವಿರೋಧಿಸುತ್ತಿವೆ.
ಕೇಂದ್ರದ ತ್ರಿಭಾಷಾ ನೀತಿಯು ವಿದ್ಯಾರ್ಥಿಗಳಿಗೆ ಇಂಗ್ಲಿಷ್, ಹಿಂದಿ ಮತ್ತು ರಾಜ್ಯದ ಸ್ಥಳೀಯ ಭಾಷೆಯನ್ನು ಕಲಿಸುವುದನ್ನು ಸೂಚಿಸುತ್ತದೆ. ಇದನ್ನು 1968 ರಲ್ಲಿ ಮೊದಲ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪರಿಚಯಿಸಲಾಯಿತು ಮತ್ತು 2020 ರಿಂದ ಹೊಸ ನೀತಿಯಲ್ಲಿ ಉಳಿಸಿಕೊಳ್ಳಲಾಯಿತು.
ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಶಾಲೆಗಳಲ್ಲಿ ಯಾವುದೇ ಭಾಷೆಯನ್ನು ಮೂರನೇ ಭಾಷೆಯಾಗಿ ಒತ್ತಾಯಿಸುವುದು ಅನಗತ್ಯ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹೇಳಿದ ಎರಡು ದಿನಗಳ ನಂತರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಈ ಹೇಳಿಕೆಗಳನ್ನು ನೀಡಿದ್ದಾರೆ.
ಫೆಬ್ರವರಿ 21 ರಂದು ರಾಷ್ಟ್ರೀಯ ಶಿಕ್ಷಣ ನೀತಿಯು ಯಾವುದೇ ಭಾಷೆಯನ್ನು ಹೇರುವುದನ್ನು ಪ್ರತಿಪಾದಿಸುವುದಿಲ್ಲ ಎಂದು ಹೇಳಿದ್ದ ಹೇಳಿಕೆಗಳನ್ನು ಧರ್ಮೇಂದ್ರ ಪ್ರಧಾನ್ ಭಾನುವಾರ ಪುನರುಚ್ಚರಿಸಿದ್ದಾರೆ. ಸಿಎಂ ಸ್ಟಾಲಿನ್ ಅವರಿಗೆ ಬರೆದ ಪತ್ರದಲ್ಲಿ, ರಾಜಕೀಯ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಈ ನೀತಿಯನ್ನು ಬಿಜೆಪಿಯೇತರ ರಾಜ್ಯಗಳು ಜಾರಿಗೆ ತಂದಿವೆ ಎಂದು ಹೇಳಿದ್ದರು.
ತಮಿಳುನಾಡು ಈ ನೀತಿಯನ್ನು “ಸಂಕುಚಿತ ದೃಷ್ಠಿ”ಯಿಂದ ನೋಡುವುದು ಮತ್ತು ಅಂತಹ ಸುಧಾರಣೆಗಳನ್ನು ತಮ್ಮ ರಾಜಕೀಯ ನಿರೂಪಣೆಗಳನ್ನು ಉಳಿಸಿಕೊಳ್ಳಲು ಬೆದರಿಕೆಗಳಾಗಿ ಪರಿವರ್ತಿಸುವುದು ಸೂಕ್ತವಲ್ಲ ಎಂದು ಅವರು ಸಿಎಂ ಸ್ಟಾಲಿನ್ ಅವರಿಗೆ ಹೇಳಿದ್ದರು.
ಸಮಗ್ರ ಶಿಕ್ಷಾ ಯೋಜನೆಯಡಿ ತಮಿಳುನಾಡಿಗೆ ಬಿಡುಗಡೆಯಾದ 2,152 ಕೋಟಿ ರೂ. ಬಾಕಿ ಹಣವನ್ನು ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನಕ್ಕೆ ಲಿಂಕ್ ಮಾಡದೆ ಪಡೆಯುವಲ್ಲಿ ಮಧ್ಯಪ್ರವೇಶಿಸುವಂತೆ ಕೋರಿ ಸ್ಟಾಲಿನ್ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದ ಒಂದು ದಿನದ ನಂತರ ಧರ್ಮೇಂದ್ರ ಪ್ರಧಾನ್ ಅವರು ಈ ಹೇಳಿಕೆ ನೀಡಿದ್ದರು.
2018 ರಲ್ಲಿ ಜಾರಿಗೆ ತರಲಾದ ಸಮಗ್ರ ಶಿಕ್ಷಾ, ಕೇಂದ್ರ ಸರ್ಕಾರವು ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಣಕ್ಕೆ ಬೆಂಬಲ ನೀಡುವ ಯೋಜನೆಯಾಗಿದೆ.
ಕೇಂದ್ರ ಸರ್ಕಾರವು ತಾನು ಕಡ್ಡಾಯಗೊಳಿಸಿದ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳುವಂತೆ ರಾಜ್ಯಗಳನ್ನು ಒತ್ತಾಯಿಸುವ ತಂತ್ರವಾಗಿ ಹಣವನ್ನು ತಡೆಹಿಡಿಯುತ್ತಿದೆ ಎಂದು ಸ್ಟಾಲಿನ್ ಆರೋಪಿಸಿದ್ದಾರೆ. ತಮ್ಮ ರಾಜ್ಯವು ಎರಡು ಭಾಷಾ ನೀತಿಯನ್ನು ಹೊಂದಿದ್ದು, ಅದು ವಿದ್ಯಾರ್ಥಿಗಳಿಗೆ ತಮಿಳು ಮತ್ತು ಇಂಗ್ಲಿಷ್ ಕಲಿಸುವುದನ್ನು ಒಳಗೊಂಡಿದೆ ಎಂದು ಅವರು ಹೇಳಿದ್ದಾರೆ.
ತಮಿಳುನಾಡಿಗೆ ಸಮಗ್ರ ಶಿಕ್ಷಾ ಕಾರ್ಯಕ್ರಮದಡಿಯಲ್ಲಿ ರಾಜ್ಯವು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಸಂಪೂರ್ಣವಾಗಿ ಜಾರಿಗೆ ತರುವವರೆಗೆ ಮತ್ತು ತ್ರಿಭಾಷಾ ನೀತಿಯನ್ನು ಅಳವಡಿಸಿಕೊಳ್ಳುವವರೆಗೆ ಹಣವನ್ನು ಬಿಡುಗಡೆ ಮಾಡುವುದಿಲ್ಲ ಎಂದು ಧರ್ಮೇಂದ್ರ ಪ್ರಧಾನ್ ಅವರು ಈ ಹಿಂದೆ ನೀಡಿದ್ದ ಹೇಳಿಕೆಗಳಿಗೆ ಪ್ರತಿಕ್ರಿಯೆಯಾಗಿ ಸ್ಟಾಲಿನ್ ಈ ಹೇಳಿಕೆ ನೀಡಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಇಂದಿನಿಂದ ವಿಧಾನಮಂಡಲದ ಬಜೆಟ್ ಅಧಿವೇಶನ : ಉಭಯ ಪಕ್ಷಗಳ ವಾಗ್ಯುದ್ಧಕ್ಕೆ ವೇದಿಕೆ ಸಜ್ಜು
ಇಂದಿನಿಂದ ವಿಧಾನಮಂಡಲದ ಬಜೆಟ್ ಅಧಿವೇಶನ : ಉಭಯ ಪಕ್ಷಗಳ ವಾಗ್ಯುದ್ಧಕ್ಕೆ ವೇದಿಕೆ ಸಜ್ಜು

