ರಾಮನವಮಿ ಹಬ್ಬಕ್ಕೆ ಮುನ್ನ ಮೂವರು ಮುಸ್ಲಿಂ ವ್ಯಕ್ತಿಗಳನ್ನು ಬಂಧಿಸುವ ಸಲುವಾಗಿ ಅಖಿಲ ಭಾರತ ಹಿಂದೂ ಮಹಾಸಭಾದ ಸದಸ್ಯರು ಹಸುವನ್ನು ಕೊಂದಿರುವ ಘಟನೆ ಆಗ್ರಾದಲ್ಲಿ ನಡೆದಿದೆ ಎಂದು ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ.
ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ನಕಿಮ್, ಮೊಹಮ್ಮದ್ ಶಾನು ಮತ್ತು ಇಮ್ರಾನ್ ಖುರೇಷಿ ಎಂಬ ನಾಲ್ವರ ವಿರುದ್ಧ ಆಗ್ರಾ ಪೊಲೀಸರು ಗೋಹತ್ಯೆ ಆರೋಪದ ಮೇಲೆ ದೂರು ದಾಖಲಿಸಿದ್ದರು. ಆದರೆ, ನಾಲ್ವರು ವ್ಯಕ್ತಿಗಳಿಗೂ ಘಟನೆಗೂ ಯಾವುದೇ ಸಂಬಂಧವಿಲ್ಲ ಎಂದು ಪೊಲೀಸ್ ತನಿಖೆಯ ನಂತರ ತಿಳಿದುಬಂದಿದೆ.
“ಹಿಂದೂ ಮಹಾಸಭಾ ನಾಯಕ ಸಂಜಯ್ ಜಾಟ್ ಮುಖ್ಯ ಸಂಚುಕೋರನಾಗಿದ್ದೇನೆ” ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ ಆರ್.ಕೆ.ಸಿಂಗ್ ಅವರು ‘ದಿ ಟೆಲಿಗ್ರಾಫ್’ಗೆ ತಿಳಿಸಿದ್ದಾರೆ.
“ಈತನ ಫಾಲೋವರ್ಸ್ ಮತ್ತು ಸ್ನೇಹಿತರು ಮಾರ್ಚ್ 29 ರ ರಾತ್ರಿ ಮೆಹ್ತಾಬ್ ಬಾಗ್ ಪ್ರದೇಶದಲ್ಲಿ ಹಸುವನ್ನು ಕೊಂದಿದ್ದರು. ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ನಕಿಮ್ ಮತ್ತು ಮೊಹಮ್ಮದ್ ಶಾನು ವಿರುದ್ಧ ಪ್ರಕರಣ ದಾಖಲಿಸುವಂತೆ ಪಕ್ಷದ ಸದಸ್ಯ ಜಿತೇಂದ್ರ ಕುಶ್ವಾಹಾ ಎಂಬಾತನಿಗೆ ಹೇಳಿದ್ದರು” ಎಂಬುದು ಬಯಲಾಗಿದೆ.
ಮರುದಿನ ಖುರೇಷಿ ಮತ್ತು ಶಾನು ಅವರನ್ನು ಬಂಧಿಸಲಾಯಿತು. ಆದರೆ ಹಿಂದೂ ಮಹಾಸಭಾದ ವಕ್ತಾರನಾದ ಸಂಜಯ್ ಜಾಟ್‌ನಿಗೆ ಇವರ ಮೇಲೆ ದ್ವೇಷವಿತ್ತು. ಆ ಕಾರಣದಿಂದಾಗಿ ಈ ವ್ಯಕ್ತಿಗಳ ಗುಂಪನ್ನು ಪ್ರಕರಣದಲ್ಲಿ ಸಿಲುಕಿಸಲು ಬಯಸಿದ್ದನು ಎಂಬುದು ನಂತರದ ತನಿಖೆಗಳಿಂದ ತಿಳಿದುಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
“ವಿಚಾರಣೆಯ ಸಮಯದಲ್ಲಿ ಜಿತೇಂದ್ರ [ಕುಶ್ವಾಹ] ನಮಗೆ ಸುಳ್ಳು ಹೇಳಿರುವುದು ತಿಳಿದುಬಂದಿದೆ” ಎಂದು ಆರ್.ಕೆ.ಸಿಂಗ್ ಅವರು ದಿ ಟೆಲಿಗ್ರಾಫ್‌ನೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.
“ಆತ ಮತ್ತು ಸಂಜಯ್, ಇನ್ನೂ ಕೆಲವರು ಗೋಹತ್ಯೆಯ ಸ್ಥಳದ ಸಮೀಪದಲ್ಲಿದ್ದರು ಎಂಬುದು ಫೋನ್ ಕರೆಗಳ ದಾಖಲೆಗಳಿಂದ ತಿಳಿದುಬಂದಿದೆ. ಇವರು ದೂರಿನಲ್ಲಿ ಹೆಸರಿಸಿದ ಆರೋಪಿಗಳು ಒಂದು ತಿಂಗಳಿನಿಂದ ಆ ಸ್ಥಳಕ್ಕೆ ಹೋಗಿಲ್ಲ ಎಂಬುದು ಫೋನ್ ಕರೆಯ ದಾಖಲೆಗಳಿಂದ ಸ್ಪಷ್ಟವಾಗಿದೆ” ಎಂದಿದ್ದಾರೆ.
ಖುರೇಷಿ ಮತ್ತು ಶಾನು ಶೀಘ್ರದಲ್ಲೇ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಇದರ ನಡುವೆ ಪ್ರತಿಕ್ರಿಯೆ ನೀಡಿರುವ ಸಂಜಯ್, “ಪೊಲೀಸರು ನಮ್ಮನ್ನು ಈ ಪ್ರಕರಣದಲ್ಲಿ ತಪ್ಪಾಗಿ ಸಿಲುಕಿಸಿದ್ದಾರೆ” ಎಂದು ವಾದಿಸಿದ್ದಾನೆ. “ಪ್ರಕರಣವನ್ನು ಸರಿಯಾಗಿ ತನಿಖೆ ಮಾಡದಿದ್ದರೆ ನಾವು ಪ್ರತಿಭಟನೆ ನಡೆಸುತ್ತೇವೆ” ಎಂದು ಹೇಳಿಕೆ ನೀಡಿದ್ದಾನೆ.
ಇದನ್ನೂ ಓದಿರಿ: ‘ರಾತ್ರಿ ಹೊತ್ತು ರಸ್ತೆಯಲ್ಲಿ ಬ್ಯಾಟ್ ಹಿಡಿದು ತಿರುಗುವವರಿಗೆ ಪೊಲೀಸರ ಅನುಮತಿ ಇತ್ತೇ?’: ಇದ್ರೀಶ್ ಹತ್ಯೆಗೆ ಎಚ್‌ಡಿಕೆ ಖಂಡನೆ
ಸುಲಿಗೆ ಪ್ರಕರಣದಲ್ಲಿ ಸಿಲುಕಿದ್ದ ಸಂಜಯ್ ಪ್ರಸ್ತುತ ಜಾಮೀನಿನ ಮೇಲೆ ಹೊರಗಿದ್ದಾನೆ. ಆತ ಮತ್ತು ಆತನ ಬೆಂಬಲಿಗರು ಆಗಾಗ್ಗೆ ಗೋಮಾಂಸ ಸಾಗಿಸುವ ವಾಹನಗಳನ್ನು ತಡೆದು ನಿಲ್ಲಿಸಿ ಬೆದರಿಸುತ್ತಾರೆಂಬುದು ತಿಳಿದುಬಂದಿದೆ. ಹಣ ಕೊಡದಿದ್ದರೆ ಪೊಲೀಸ್ ಪ್ರಕರಣಗಳನ್ನು ದಾಖಲಿಸುವುದಾಗಿ ಬೆದರಿಸಿ ಸುಲಿಗೆ ಮಾಡುವ ದಂಧೆಯಲ್ಲಿ ಇವರು ತೊಡಗಿದ್ದಾರೆಂದು ಪೊಲೀಸರು ಹೇಳಿರುವುದಾಗಿ ‘ದಿ ಟೆಲಿಗ್ರಾಫ್’ ವರದಿ ಮಾಡಿದೆ.
ಇಂತಹದ್ದೇ ಪ್ರಕರಣ ಇತ್ತೀಚೆಗೆ ರಾಜ್ಯದ ರಾಮನಗರ ಜಿಲ್ಲೆಯ ಸಾತನೂರಿನ ಬಳಿ ನಡೆದಿತ್ತು. ರಾಷ್ಟ್ರ ರಕ್ಷಣಾ ಪಡೆಯ ಪುನೀತ್ ಕೆರೆಹಳ್ಳಿ ಮತ್ತು ಆತನ ಸಂಗಡಿಗರು ಗೋರಕ್ಷಣೆಯ ಹೆಸರಿನಲ್ಲಿ ಮಂಡ್ಯ ನಿವಾಸಿ ಇದ್ರೀಶ್ ಪಾಶಾ ಎಂಬವರನ್ನು ಕೊಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ. ಜೊತೆಗೆ ಎರಡು ಲಕ್ಷ ರೂ.ಗಳ ಬೇಡಿಕೆಯನ್ನು ಪುನೀತ್ ಕೆರೆಹಳ್ಳಿ ಗ್ಯಾಂಗ್ ಇಟ್ಟಿತ್ತು ಎಂಬ ಆರೋಪಗಳು ಬಂದಿವೆ.


