Homeಮುಖಪುಟಗುರುಗ್ರಾಮದಲ್ಲಿ ಮುಸ್ಲಿಮರು ಪ್ರಾರ್ಥನೆ ಮಾಡಲು ಹಿಂದುತ್ವ ಸಂಘಟನೆಗಳ ಅಡ್ಡಿ: ನಮ್ಮಲ್ಲಿಗೆ ಬನ್ನಿ ಎಂದ ಸಿಖ್ ಗುರುದ್ವಾರಗಳು

ಗುರುಗ್ರಾಮದಲ್ಲಿ ಮುಸ್ಲಿಮರು ಪ್ರಾರ್ಥನೆ ಮಾಡಲು ಹಿಂದುತ್ವ ಸಂಘಟನೆಗಳ ಅಡ್ಡಿ: ನಮ್ಮಲ್ಲಿಗೆ ಬನ್ನಿ ಎಂದ ಸಿಖ್ ಗುರುದ್ವಾರಗಳು

ಅಕ್ಷಯ್ ಯಾದವ್ ಎಂಬುವವರು ತಮ್ಮ ಅಂಗಡಿ ಸ್ಥಳದಲ್ಲಿ ಮುಸ್ಲಿಮರು ಬಂದು ಪ್ರಾರ್ಥನೆ ಸಲ್ಲಿಸಬಹುದು ಎಂದು ಆಹ್ವಾನ ನೀಡಿದ್ದಾರೆ.

- Advertisement -

ಗುರುಗ್ರಾಮ್ ಆಡಳಿತವು ಮುಸ್ಲಿಮರಿಗೆ ನಮಾಜ್ ಮಾಡಲು ಗೊತ್ತುಪಡಿಸಿದ 37 ಸ್ಥಳಗಳ ಪೈಕಿ 8 ರಲ್ಲಿ ಸ್ಥಳೀಯರ ವಿರೋಧದಿಂದ ಅನುಮತಿ ವಾಪಸ್ ಪಡೆದಿದೆ. ತದನಂತರ ಹರಿಯಾಣ-ದೆಹಲಿ ಗಡಿಯಲ್ಲಿರುವ 5 ಸಿಖ್ ಗುರುದ್ವಾರಗಳ ಮೇಲ್ವಿಚಾರಣ ಸಮಿತಿಯು ತಮ್ಮ ಗುರುದ್ವಾರಗಳನ್ನು ಮುಸ್ಲಿಮರು ನಮಾಜ್ ಮಾಡಲು ಬಳಸಬಹುದು ಎಂದು ಆಹ್ವಾನ ನೀಡಿದೆ.

ಗುರುಗ್ರಾಮ್ ಸಬ್ಜಿ ಮಂಡಿಯಲ್ಲಿರುವ ಶ್ರೀ ಗುರು ಸಿಂಗ್ ಸಭಾದ ಅಧ್ಯಕ್ಷರಾದ ಶೆರ್ದಿಲ್ ಸಿಂಗ್ ಸಿಧು ಮಾತನಾಡಿ, “ಗುರುದ್ವಾರವೆಂದರೆ ಗುರುವಿನ ಮನೆ ಎಂದರ್ಥ. ಎಲ್ಲಾ ಸಮುದಾಯದ ಜನರು ಇಲ್ಲಿಗೆ ಬಂದು ಪ್ರಾರ್ಥನೆ ಸಲ್ಲಿಸಲು ಆಹ್ವಾನವಿದೆ. ಮುಸ್ಲಿಮರಿಗೆ ನಿಗಧಿಪಡಿಸಿದ ಪ್ರದೇಶಗಳಲ್ಲಿ ಪ್ರಾರ್ಥನೆ ಮಾಡಲು ಅಡ್ಡಿಯಾಗುತ್ತಿದ್ದಲ್ಲಿ ಅವರು ಗುರುದ್ವಾರಕ್ಕೆ ಬಂದು ಪ್ರಾರ್ಥನೆ ಸಲ್ಲಿಸಬಹುದು. ಎಲ್ಲರಿಗೂ ಗುರುದ್ವಾರದ ಬಾಗಿಲು ಸದಾ ತೆರೆದಿರುತ್ತವೆ” ಎಂದು ತಿಳಿಸಿದ್ದಾರೆ.

ಸೆಕ್ಟರ್ 39ರ ಸರ್ದಾರ್ ಬಜಾರ್‌ನಿಂದ ಆರಂಭವಾಗಿ ಸೆಕ್ಟರ್ 46ರ ಮಾಡೆಲ್ ಟೌನ್‌ವರೆಗೂ 5 ಗುರುದ್ವಾರಗಳಿವೆ. ಈ ಗುರುದ್ವಾರಗಳು 2000 ಜನರನ್ನು ಒಳಗೊಳ್ಳುವ ಸಾಮರ್ಥ್ಯ ಹೊಂದಿವೆ. ಆದರೆ ಕೋವಿಡ್ ಕಾರಣದಿಂದ ಸಣ್ಣ ಸಣ್ಣ ಗುಂಪುಗಳಲ್ಲಿ ಜನರು ಬಂದು ದೈಹಿಕ ಅಂತರ ಕಾಯ್ದುಕೊಂಡು ಪ್ರಾರ್ಥನೆ ಸಲ್ಲಿಸಿದರೆ ಒಳ್ಳೆಯದು. ಅದಕ್ಕೆ ಅಧಿಕಾರಗಳ ಅನುಮತಿ ಬೇಕಾದರೆ ಅದನ್ನು ಕೂಡ ತೆಗೆದುಕೊಳ್ಳುತ್ತೇವೆ ಎಂದು ಅವರು ತಿಳಿಸಿದ್ದಾರೆ.

ಗುರುದ್ವಾರದಲ್ಲಿ ಪ್ರಾರ್ಥನೆ ಸಲ್ಲಿಸುವ ಆಹ್ವಾನವನ್ನು ಜಮಾತ್ ಉಲಾಮದ ಅಧ್ಯಕ್ಷ ಮುಫ್ತಿ ಮೊಹಮ್ಮದ್ ಸಲೀಂ ತುಂಬು ಹೃದಯದಿಂದ ಸ್ವೀಕರಿಸಿದ್ದಾರೆ. ಬುಧವಾರ ಗುರುದ್ವಾರದ ಅಧಿಕಾರಗಳನ್ನು ಭೇಟಿಯಾದ ಅವರು ಪ್ರಾರ್ಥನೆ ಮಾಡುವುದಾಗಿ ತಿಳಿಸಿ ಅವಕಾಶಕ್ಕಾಗಿ ಧನ್ಯವಾದ ತಿಳಿಸಿದ್ದಾರೆ. ಇದು ಅತ್ಯಂತ ಸ್ವಾಗತಾರ್ಹ ಹೆಜ್ಜೆಯಾಗಿದ್ದು, ದೀರ್ಘಕಾಲೀನವಾಗಿ ಸಮುದಾಯಗಳ ನಡುವೆ ಸಾಮರಸ್ಯವನ್ನು ಉತ್ತೇಜಿಸುತ್ತದೆ ಎಂದು ತಿಳಿಸಿದ್ದಾರೆ.

ಅಲ್ಲದೆ ಗುರುಗ್ರಾಮದ ಸೆಕ್ಟರ್‌ 12 ರಲ್ಲಿ ಕಿರಾಣಿ ಅಂಗಡಿ ನಡೆಸುವ ಅಕ್ಷಯ್ ಯಾದವ್ ಎಂಬುವವರು ನಮಾಜ್‌ಗಾಗಿ ತಮ್ಮ ಅಂಗಡಿ ಸ್ಥಳವನ್ನು ಬಿಟ್ಟುಕೊಡುವುದಾಗಿ ಘೋಷಿಸಿದ್ದು ಮುಸ್ಲಿಮರು ಬಂದು ಪ್ರಾರ್ಥನೆ ಸಲ್ಲಿಸಬಹುದು ಎಂದು ಆಹ್ವಾನ ನೀಡಿದ್ದಾರೆ. ಒಂದು ಬಾರಿಗೆ 15 ಜನ ನಮಾಜ್ ಮಾಡಬಹುದು ಎಂದು ಅವರು ತಿಳಿಸಿದ್ದಾರೆ.

ಈ ಆಹ್ವಾನಗಳನ್ನು ಗುರುಗ್ರಾಮ್ ಮುಸ್ಲಿಂ ಕೌನ್ಸಿಲ್‌ನ ಸ್ಥಾಪಕರಾದ ಅಲ್ತಾಫ್ ಅಹ್ಮದ್ ಪ್ರಶಂಸಿದ್ದಾರೆ. “ಕಳೆದ ಎರಡು ತಿಂಗಳಿನಿಂದ ಗುರ್ಗಾಂವ್‌ನಲ್ಲಿ ದ್ವೇಷ ಮತ್ತು ಕೋಮು ಸೌಹಾರ್ದತೆಯನ್ನು ಕದಡುತ್ತಿರುವ ವಿಭಜಕ ಶಕ್ತಿಗಳನ್ನು ಸೋಲಿಸಲು ಬಹು ಧರ್ಮಗಳ ಜನರು ಮುಂದೆ ಬಂದಿರುವುದು ಸಹೋದರತ್ವದ ನಿಜವಾದ ಉದಾಹರಣೆಯಾಗಿದೆ” ಎಂದಿದ್ದಾರೆ.

ಬಹಳ ಹಿಂದಿನಿಂದಲೂ ಗುರುಗ್ರಾಮದ ಹಲವು ಖಾಲಿ ನಿವೇ‍ಶನಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮುಸ್ಲಿಮರು ವಾರದಲ್ಲಿ ಒಂದು ದಿನ ನಮಾಜ್ ಮಾಡುತ್ತಿದ್ದರು. ಆದರೆ ಅಕ್ಟೋಬರ್ ಆರಂಭದಿಂದ ಕೆಲವು ಹಿಂದುತ್ವವಾದಿ ಸಂಘಟನೆಗಳು ಅದಕ್ಕೆ ಅಡ್ಡಿಪಡಿಸಿದ್ದವು. ಮುಸ್ಲಿಮರು ನಮಾಜ್ ಮಾಡುವ ಜಾಗದಲ್ಲಿಯೇ ಈ ಸಂಘಟನೆಗಳು ಗೋವರ್ಧನ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದವು. ಅಲ್ಲಿ ಹಿಂದೂ ವಿರೋಧಿಗಳಿಗೆ ಗುಂಡು ಹೊಡೆಯಿರಿ ಎಂದು ಘೋಷಣೆಗಳನ್ನು ಕೂಗಲಾಗಿತ್ತು. ಕಾರ್ಯಕ್ರಮದಲ್ಲಿ ದೆಹಲಿ ಗಲಭೆಯ ಪ್ರಚೋದನಾಕಾರಿ ಭಾಷಣಕಾರರದ ಕಪಿಲ್ ಮಿಶ್ರಾ ಭಾಗವಹಿಸಿದ್ದರು. ನಂತರ ಅದೇ ಜಾಗದಲ್ಲಿ ಸಗಣಿಗಳನ್ನು ತಂದು ಹಾಕಿ ನಮಾಜ್ ಮಾಡಲು ಅಡ್ಡಿಪಡಿಸಲಾಗಿತ್ತು. ಹಾಗಾಗಿ ಜಿಲ್ಲಾಡಳಿತ ಅಲ್ಲಿ ನಮಾಜ್ ಮಾಡಲು ಅನುಮತಿ ನಿರಾಕರಿಸಲಾಗಿತ್ತು. ಈಗ ಸಿಖ್ ಮತ್ತು ಕೆಲ ಹಿಂದೂ ಜನರು ಮಸ್ಲಿಮರು ನಮ್ಮ ಸ್ಥಳಗಳಿಗೆ ಬಂದು ನಮಾಜ್ ಮಾಡಿ ಎಂದು ಆಹ್ವಾನ ನೀಡುವ ಮೂಲಕ ಸಾಮರಸ್ಯ ಮೆರೆದಿದ್ದಾರೆ.

ಕೃಪೆ: ಇಂಡಿಯನ್ ಎಕ್ಸ್‌ಪ್ರೆಸ್‌


ಇದನ್ನೂ ಓದಿ: BJP ನಾಯಕ ಕಪಿಲ್ ಮಿಶ್ರಾ ಭಾಗವಹಿಸಿದ್ದ ಸಭೆಯಲ್ಲಿ ಮತ್ತೆ ‘ಗೋಲಿ ಮಾರೋ’ ಘೋಷಣೆ

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಂಗನಾ ಪೋಸ್ಟ್‌ಗಳಿಗೆ ಸೆನ್ಸಾರ್‌ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ

0
ನಟಿ ಕಂಗನಾ ರಣಾವತ್ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಮಾಡುವ ಪೋಸ್ಟ್‌ಗಳನ್ನು ಇನ್ನು ಮುಂದೆ ಸೆನ್ಸಾರ್ ಮಾಡಬೇಕು ಎಂದು ಒತ್ತಾಯಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ ಎಂದು ಬಾರ್ ಅಂಡ್‌‌ ಬೆಂಚ್ ವರದಿ...
Wordpress Social Share Plugin powered by Ultimatelysocial
Shares