ಕೋಮು ಧ್ರುವೀಕರಣದ ನಿರೂಪಣೆಗಾಗಿ ವ್ಯಾಪಕ ಟೀಕೆಗಳಿಗೆ ಗುರಿಯಾಗಿದ್ದ ‘ರಜಾಕಾರ್: ದಿ ಸೈಲಂಟ್ ಜಿನೊಸೈಡ್ ಆಫ್ ಹೈದರಾಬಾದ್’ ಚಿತ್ರಕ್ಕೆ ತೆಲಂಗಾಣದ ಕಾಂಗ್ರೆಸ್ ಸರ್ಕಾರವು ಶನಿವಾರ ಇತಿಹಾಸದ ಕುರಿತ ಅತ್ಯುತ್ತಮ ಚಲನಚಿತ್ರಕ್ಕೆ ನೀಡಲಾಗುವ ‘ತೆಲಂಗಾಣ ಗದ್ದರ್ ಚಲನಚಿತ್ರ ಪ್ರಶಸ್ತಿ’ಯನ್ನು ಪ್ರದಾನಿಸಿದೆ. 2024ರ ಈ ಚಿತ್ರವನ್ನು ತೆಲಂಗಾಣ ಬಿಜೆಪಿ ನಾಯಕ ಗೂಡೂರ್ ನಾರಾಯಣ ರೆಡ್ಡಿ ನಿರ್ಮಿಸಿದ್ದು, ಯಾಟಾ ಸತ್ಯನಾರಾಯಣ ನಿರ್ದೇಶಿಸಿದ್ದಾರೆ.
ತೆಲಂಗಾಣದ ಕ್ರಾಂತಿಕಾರಿ ಕವಿ ಗದ್ದರ್ ಹೆಸರಿನ ಈ ಪ್ರಶಸ್ತಿಯನ್ನು ಕಾಂಗ್ರೆಸ್ ಸರ್ಕಾರ 2025ರಲ್ಲಿ ಸ್ಥಾಪಿಸಿದ್ದು, ತೆಲುಗು ನಟಿ ಹಾಗೂ ಬಿಜೆಪಿ ನಾಯಕಿ ಜಯಸುಧಾ ಅವರು ರೇವಂತ್ ರೆಡ್ಡಿ ಸರ್ಕಾರ ರಚಿಸಿದ್ದ ಆಯ್ಕೆ ಸಮಿತಿಯ ಅಧ್ಯಕ್ಷೆಯಾಗಿದ್ದರು. ನಟ ಹಾಗೂ ಬಿಜೆಪಿಯ ಮಿತ್ರಪಕ್ಷ ಟಿಡಿಪಿಯ ಮಾಜಿ ಸಂಸದ ಮುರಳಿ ಮೋಹನ್ ಅವರೂ ಸಮಿತಿಯ ಸದಸ್ಯರಾಗಿದ್ದರು.
ರಜಾಕಾರ್ ಪರಿಸರ/ಪರಂಪರೆ/ಇತಿಹಾಸ ಕುರಿತು ಅತ್ಯುತ್ತಮ ಚಲನಚಿತ್ರ, ಭೀಮ್ಸ್ ಸೆಸಿರೊಲಿಯೊ ಅವರಿಗೆ ಅತ್ಯುತ್ತಮ ಸಂಗೀತ ನಿರ್ದೇಶಕ ಮತ್ತು ನಲ್ಲ ಶ್ರೀನು ಅವರಿಗೆ ಅತ್ಯುತ್ತಮ ಮೇಕಪ್ ಕಲಾವಿದ; ಹೀಗೆ ಮೂರು ತೆಲಂಗಾಣ ಗದ್ದರ್ ಪ್ರಶಸ್ತಿಗಳನ್ನು ಗೆದ್ದಿದೆ.
ಹಿಂದುತ್ವದ ಅಜೆಂಡಾವನ್ನು ಮುಂದುವರಿಸಲು ಮತ್ತು ಕೋಮು ಉದ್ವಿಗ್ನತೆಯನ್ನು ಪ್ರಚೋದಿಸಲು ನಿರ್ಮಿಸಲಾದ ಪ್ರೊಪಗಂಡ ಚಿತ್ರ ಎಂದು ವ್ಯಾಪಕ ಟೀಕೆಗೊಳಗಾಗಿದ್ದ ‘ರಜಾಕಾರ್’ಗೆ ರೇವಂತ್ ರೆಡ್ಡಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಪ್ರಶಸ್ತಿ ನೀಡಿದ್ದಕ್ಕೆ ಸಾಮಾಜಿಕ ಕಾರ್ಯಕರ್ತರು ಮತ್ತು ಪ್ರತಿಪಕ್ಷಗಳ ನಾಯಕರು ಆಘಾತವನ್ನು ವ್ಯಕ್ತಪಡಿಸಿದ್ದಾರೆ.
ಚಿತ್ರವು ಭಾರತ ಒಕ್ಕೂಟದಲ್ಲಿ ಹಿಂದಿನ ಹೈದರಾಬಾದ್ ರಾಜ್ಯದ ವಿಲೀನದ ಹಿನ್ನೆಲೆಯನ್ನು ಹೊಂದಿದೆ. ರಜಾಕಾರರು ಭಾರತ ಒಕ್ಕೂಟದಲ್ಲಿ ವಿಲೀನಗೊಳ್ಳುವುದು ಇಷ್ಟವಿರದಿದ್ದ ನಿಝಾಮರ ಕ್ರಿಯಾಶೀಲ ಅರೆಸೇನಾ ಪಡೆಯಾಗಿದ್ದರು.
ತೆಲಂಗಾಣ ರೈತರ ಹೋರಾಟವನ್ನು ಹತ್ತಿಕ್ಕಲು ರಜಾಕಾರರನ್ನು ನಿಯೋಜಿಸಲಾಗಿತ್ತು ಮತ್ತು ಅವರು ಮುಸ್ಲಿಮರು ಸೇರಿದಂತೆ ದಬ್ಬಾಳಿಕೆಯ ನಿಝಾಮ್ ಆಡಳಿತದ ವಿರುದ್ಧ ಹೋರಾಡುತ್ತಿದ್ದವರ ವಿರುದ್ಧ ಹಲವಾರು ದೌರ್ಜನ್ಯಗಳನ್ನು ಎಸಗಿದ್ದರು.
ಇತ್ತೀಚಿನ ವರ್ಷಗಳಲ್ಲಿ ತೆಲಂಗಾಣ ಬಿಜೆಪಿಯು ರಾಜಕೀಯ ಲಾಭಕ್ಕಾಗಿ ರಜಾಕಾರರ ಸಂಕೀರ್ಣ ಇತಿಹಾಸವನ್ನು ತಪ್ಪಾಗಿ ನಿರೂಪಿಸಲು ಪ್ರಯತ್ನಿಸುತ್ತಿದೆ. ಬೆಜೆಪಿಯು ತೆಲಂಗಾಣ ರೈತ ಬಂಡಾಯದ ಸೂಕ್ಷ್ಮ ವ್ಯತ್ಯಾಸಗಳನ್ನು ಮತ್ತು ನಿಝಾಮರ ರಜಾಕಾರರು ಪ್ರಬಲ ಜಾತಿಗಳ ಭೂಮಾಲಿಕರೊಂದಿಗೆ ಸೇರಿಕೊಂಡು ಕೆಳಜಾತಿಗಳವರೇ ಹೆಚ್ಚಿದ್ದ ಕಾರ್ಮಿಕರ ಮಲೆ ನಡೆಸಿದ್ದ ದೌರ್ಜನ್ಯಗಳನ್ನು ಬದಿಗಿಟ್ಟು ಅದನ್ನು ಧಾರ್ಮಿಕ ಕಿರುಕುಳದ ನಿದರ್ಶನವನ್ನಾಗಿ ಚಿತ್ರಿಸುವ ಮೂಲಕ ಹಿಂದು-ಮಸ್ಲಿಮ್ ಬಿರುಕನ್ನು ಸೃಷ್ಟಿಸಲು ಯತ್ನಿಸುತ್ತಿದೆ.
ಆರಂಭದಲ್ಲಿ 2023ರ ತೆಲಂಗಾಣ ವಿಧಾನಸಭಾ ಚುನಾವಣೆಗೆ ಮುನ್ನ ಬಿಡುಗಡೆಯಾಗಬೇಕಿದ್ದ ರಜಾಕರ್ ಚಿತ್ರವು, ಇಡೀ ಮುಸ್ಲಿಂ ಸಮುದಾಯವನ್ನು ಖಳನಾಯಕರನ್ನಾಗಿ ಚಿತ್ರೀಕರಿಸುವ ಮೂಲಕ ವ್ಯಾಪಕ ಟೀಕೆಗೆ ಗುರಿಯಾಗಿತ್ತು.
‘ಹಿಂದುತ್ವ ಸಿನಿಮಾ’ಗೆ ಕಾಂಗ್ರೆಸ್ ಸರ್ಕಾರ ಅನುಮೋದನೆ ನೀಡುತ್ತಿರುವುದಕ್ಕೆ ಟೀಕೆ
ರಜಾಕಾರ್ ಚಿತ್ರಕ್ಕೆ ಪ್ರಶಸ್ತಿ ನೀಡುವ ನಿರ್ಧಾರಕ್ಕಾಗಿ ಮತ್ತು ತನ್ಮೂಲಕ ಚಿತ್ರದಲ್ಲಿನ ಮುಸ್ಲಿಮ ವಿರೋಧಿ ದೃಷ್ಟಿಕೋನಗಳನ್ನು ಮೌನವಾಗಿ ಅನುಮೋದಿಸಿದ್ದಕ್ಕಾಗಿ ಸಾಮಾಜಿಕ ಕಾರ್ಯಕರ್ತರು ಮತ್ತು ಪ್ರತಿಪಕ್ಷ ನಾಯಕರು ಕಾಂಗ್ರೆಸ್ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
“ರಜಾಕರ್ ಚಿತ್ರದ ಸೋಗಿನಲ್ಲಿ ಹೈದರಾಬಾದ್ ಮುಸ್ಲಿಮರ ವಿರುದ್ಧ ದ್ವೇಷವನ್ನು ಹರಡುವ ಬಿಜೆಪಿ ನಾಯಕರ ಪ್ರೊಪಗಂಡ ಚಿತ್ರಕ್ಕೆ ಅತ್ಯುತ್ತಮ ಚಿತ್ರ ಪ್ರಶಸ್ತಿ ನೀಡಿರುವುದು ಆಘಾತಕಾರಿಯಾಗಿದೆ. ತೆಲಂಗಾಣ ಕಾಂಗ್ರೆಸ್ ಮತ್ತು ಸಿಎಂ ರೇವಂತ್ ರೆಡ್ಡಿ ನಿರ್ದೇಶಕರ ಅಭಿಪ್ರಾಯಗಳನ್ನು ಅನುಮೋದಿಸುತ್ತಿದ್ದಾರೆ” ಎಂದು ಹೈದರಾಬಾದ್ ಮೂಲದ ನಾಗರಿಕ ಹಕ್ಕುಗಳ ಕಾರ್ಯಕರ್ತ ಎಸ್‌ಕ್ಯೂ ಮಸೂದ್ ಹೇಳಿದ್ದಾರೆ.
“ತೆಲಂಗಾಣ ರೈತ ಸಶಸ್ತ್ರ ಹೋರಾಟದಲ್ಲಿ ಪ್ರಾಣ ತ್ಯಾಗ ಮಾಡಿದ ಹುತಾತ್ಮರನ್ನು ಈ ಚಿತ್ರ ಅವಹೇಳನ ಮಾಡುತ್ತದೆ. ಭೂಮಾಲೀಕರು ಮತ್ತು ಜಮೀನ್ದಾರರ ವಿರುದ್ದದ ಭೂಮಿ, ಆಹಾರ ಮತ್ತು ಗುಲಾಮಗಿರಿಯಿಂದ ಸ್ವಾತಂತ್ರ್ಯಕ್ಕಾಗಿ ರೈತರು ಹೋರಾಟ ನಡೆಸಿದ್ದರು. ಆದರೆ, ರಜಾಕರ್ ಚಿತ್ರವು ಅದನ್ನು ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ಸಂಘರ್ಷ ಎಂದು ಚಿತ್ರಿಸಿದೆ” ಎಂದು ತೆಲಂಗಾಣದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ನಾಯಕ ತಕಲ್ಲಪಲ್ಲಿ ಶ್ರೀನಿವಾಸ್ ರಾವ್ ಹೇಳಿದ್ದಾರೆ.
ಮಜ್ಲಿಸ್ ಬಚಾವೋ ತೆಹ್ರೀಕ್ ವಕ್ತಾರ ಅಮ್ಜದುಲ್ಲಾ ಖಾನ್ ಅವರು ಕಾಂಗ್ರೆಸ್‌ನ ಜಾತ್ಯತೀತತೆ ಮತ್ತು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮೌನವನ್ನು ಪ್ರಶ್ನಿಸಿದ್ದಾರೆ.
‘ರಜಾಕರ್ ‘ಚಿತ್ರವು ‘ದಿ ಕಾಶ್ಮೀರ್ ಫೈಲ್ಸ್’ ಮತ್ತು ‘ದಿ ಕೇರಳ ಸ್ಟೋರಿ’ ಪ್ರೊಪಗಂಡ ಚಿತ್ರಗಳ ವರ್ಗಕ್ಕೆ ಸೇರುತ್ತದೆ. ಇವೆರಡೂ, ಇತಿಹಾಸಲ್ಲಿ ಆಗಿ ಹೋದ ನೈಜ ಘಟನೆಗಳ ಸೋಗಿನಲ್ಲಿ ಇಡೀ ಭಾರತದ ಮುಸ್ಲಿಮರನ್ನು ಖಳನಾಯಕರಂತೆ ಚಿತ್ರಿಸುವ ಪ್ರಯತ್ನ ಮಾಡಿತ್ತು.
ಈ ಹಿಂದೆ ಇಂತಹ ಚಿತ್ರಗಳು ವಿವಿಧ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರಗಳಿಂದ ಪ್ರಶಸ್ತಿಗಳು, ತೆರಿಗೆ ರಿಯಾಯಿತಿ ಮತ್ತು ಪಕ್ಷದ ನಾಯಕರಿಂದ ಪ್ರಶಂಸೆಯ ರೂಪದಲ್ಲಿ ಅನುಮೋದನೆ ಪಡೆದಿವೆ. ಆದರೆ, ಕೋಮು ಸಂಘರ್ಷಗಳನ್ನು ಪ್ರಚೋದಿಸುವ ಬಿಜೆಪಿಯನ್ನು ಆಗಾಗ್ಗೆ ಟೀಕಿಸುವ ಸಿಎಂ ರೇವಂತ್ ರೆಡ್ಡಿ ಅವರು ರಜಾಕರ್‌ಗೆ ಬೆಂಬಲ ನೀಡಿರುವುದು ಹಲವರಿಗೆ ಆಶ್ಚರ್ಯವನ್ನುಂಟು ಮಾಡಿದೆ.
ಜೂನ್ 14 ರಂದು ಹೈದರಾಬಾದ್‌ನ ಹೈಟೆಕ್ಸ್ ಎಕ್ಸಿಬಿಷನ್ ಗ್ರೌಂಡ್‌ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರೇವಂತ್ ರೆಡ್ಡಿ ಅವರು ರಜಾಕರ್ ಚಿತ್ರದ ನಿರ್ಮಾಪಕ ಮತ್ತು ಬಿಜೆಪಿ ನಾಯಕ ಗುಡೂರ್ ನಾರಾಯಣ ರೆಡ್ಡಿ ಅವರಿಗೆ 5 ಲಕ್ಷ ರೂಪಾಯಿ ನಗದು ಬಹುಮಾನದೊಂದಿಗೆ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.
ಮುಖ್ಯಮಂತ್ರಿ ರೇವಂತ್ ರೆಡ್ಡಿ ಮತ್ತು ರಾಜ್ಯ ಕಾಂಗ್ರೆಸ್ ಸರ್ಕಾರದ ಇತರ ನಾಯಕರಿಗೆ ಧನ್ಯವಾದ ಹೇಳಿದ ನಾರಾಯಣ ರೆಡ್ಡಿ, “ಅವರೆಲ್ಲರೂ ಇತಿಹಾಸವನ್ನು ಗೌರವಿಸಿದ್ದಾರೆ ಮತ್ತು ನಮ್ಮ ಪ್ರಯತ್ನಗಳನ್ನು ನಿರ್ಲಕ್ಷಿಸಿಲ್ಲ. ರಜಾಕರಂತಹ ಗುಂಪುಗಳು ಮತ್ತೆ ಕಾಣಿಸಿಕೊಳ್ಳದಂತೆ ನೋಡಿಕೊಳ್ಳಲು ನಾವು ಇತಿಹಾಸದ ಚಲನಚಿತ್ರವನ್ನು ಪ್ರಚಾರ ಮಾಡಲು ಸಮರ್ಪಿತರಾಗಿದ್ದೇವೆ… ಉದಾಹರಣೆಗೆ ಇತ್ತೀಚೆಗೆ ಪಹಲ್ಗಾಮ್‌ನಲ್ಲಿ ಏನಾಯಿತು ಎಂಬುದನ್ನು ನಾವು ನೋಡಿದ್ದೇವೆ” ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಆಯ್ಕೆ ಸಮಿತಿಯ ವಿವಾದ
ಗದ್ದರ್ ತೆಲಂಗಾಣ ಚಲನಚಿತ್ರ ಪ್ರಶಸ್ತಿಗಳ (ಜಿಟಿಎಫ್‌ಎ) ನಿಯಮಗಳ ಷರತ್ತು 9(a) ಪ್ರಕಾರ, ತೆಲಂಗಾಣ ಸರ್ಕಾರವು ಅಯ್ಕೆ ಸಮಿತಿಯನ್ನು ರಚಿಸಬೇಕಾಗಿತ್ತು. ತೆಲಂಗಾಣ ಚಲನಚಿತ್ರ ಅಭಿವೃದ್ಧಿ ನಿಗಮ ಲಿಮಿಟೆಡ್‌ನ ಅಧ್ಯಕ್ಷರು ಪ್ರಶಸ್ತಿಗಳ ಆಯ್ಕೆಗೆ ಸದಸ್ಯ-ಸಂಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದರು.
ತೆಲಂಗಾಣ ಸರ್ಕಾರವು ಪ್ರಸಿದ್ಧ ತೆಲುಗು ನಟಿ ಮತ್ತು ರಾಜಕಾರಣಿ ಜಯಸುಧಾ ಅವರನ್ನು ಅಯ್ಕೆ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಿತ್ತು. ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿದ್ದ ಜಯಸುಧಾ, ನಂತರ ತೆಲುಗು ದೇಶಂ ಪಕ್ಷ (ಟಿಡಿಪಿ) ಮತ್ತು ವೈಎಸ್ಆರ್ ಕಾಂಗ್ರೆಸ್ ಪಕ್ಷ (ವೈಎಸ್‌ಆರ್‌ಪಿಗೆ) ಗೆ ಸೇರಿದ್ದರು. ಆಗಸ್ಟ್ 2023ರಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ನಿಯಮಾವಳಿಗಳ 21ನೇ ಷರತ್ತು ಪ್ರಕಾರ, ಕೋಮು ಸಾಮರಸ್ಯವನ್ನು ಭಂಗಗೊಳಿಸುವ ವಿಷಯಗಳನ್ನು ಹೊಂದಿರುವ ಯಾವುದೇ ಚಲನಚಿತ್ರ ಶಿಫಾರಸ್ಸನ್ನು ಆಯ್ಕೆ ಸಮಿತಿ ಪರಿಗಣಿಸಬಾರದು.
ಪ್ರಶಸ್ತಿ ಪ್ರದಾನ ಸಮಾರಂಭದ ಒಂದು ದಿನ ಮೊದಲು ಜೂನ್ 13 ರಂದು, ಆಯ್ಕೆ ಸಮಿತಿಯ ರಚನೆ ಪ್ರಕ್ರಿಯೆಯ ಸಿಂಧುತ್ವವನ್ನು ಪ್ರಶ್ನಿಸಿ ತೆಲಂಗಾಣ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿದೆ.
“ಜಿಟಿಎಫ್‌ಎ ನಿಯಮಾವಳಿಗಳ ನಿಯಮ 9(ಎ) ಅಡಿಯಲ್ಲಿ ಎರಡು ಆಯ್ಕೆ ಸಮಿತಿಗಳನ್ನು ರಚಿಸಲಾಗಿದೆ ಮತ್ತು ಆಯ್ಕೆ ಸಮಿತಿಯ ಹಲವು ಸದಸ್ಯರು ಪ್ರಶಸ್ತಿ ವಿಜೇತ ಕೆಲವು ಚಿತ್ರಗಳಲ್ಲಿ ನೇರ ಹಿತಾಸಕ್ತಿಗಳನ್ನು ಹೊಂದಿದ್ದಾರೆ” ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ನ್ಯಾಯಮೂರ್ತಿಗಳಾದ ಸ್ಯಾಮ್ ಕೋಶಿ ಮತ್ತು ನರಸಿಂಗ್ ರಾವ್ ನಂದಿಕೊಂಡ ಅವರ ಪೀಠವು ಪ್ರತಿವಾದಿಗಳಾದ ಜಿಟಿಎಫ್‌ಎ ಆಯ್ಕೆ ಸಮಿತಿ ಮತ್ತು ತೆಲಂಗಾಣ ಚಲನಚಿತ್ರ ಅಭಿವೃದ್ಧಿ ನಿಗಮ ಲಿಮಿಟೆಡ್‌ಗೆ ನೋಟಿಸ್ ಜಾರಿ ಮಾಡುವಂತೆ ಆದೇಶಿಸಿದೆ.


