Homeಮುಖಪುಟರೈತಾಂದೋಲನ ಮುಂದೇನು? - ನೂರ್ ಶ್ರೀಧರ್

ರೈತಾಂದೋಲನ ಮುಂದೇನು? – ನೂರ್ ಶ್ರೀಧರ್

ರೈತಾಪಿಯನ್ನು ಎದುರುಹಾಕಿಕೊಂಡ ಯಾವ ಸಾಮ್ರಜ್ಯಗಳೂ ದೀರ್ಘಕಾಲ ಉಳಿಯಲು ಸಾಧ್ಯವಿಲ್ಲ. ತನ್ನ ಬಂಡವಾಳಶಾಹಿ ಮಿತ್ರರಿಗಾಗಿ ಮೋದಿ ರೈತರನ್ನು ಎದುರು ಹಾಕಿಕೊಂಡಿದ್ದಾರೆ. ಮುಂದೇನು?

- Advertisement -

ನವೆಂಬರ್ 26, 2020 ರಂದು ದೆಹಲಿ ಗಡಿಗಳನ್ನು ಆವರಿಸಿಕೊಂಡ ರೈತಾಂದೋಲನ ದೇಶದ ಮಾತ್ರವಲ್ಲ, ಜಗತ್ತಿನ ಗಮನ ಸೆಳೆಯಿತು. ಅಖಿಲ ಭಾರತ ರೈತ ಹೋರಾಟ ಸಮಿತಿ (AIKSCC) ಕರೆ ನೀಡಿದ್ದ “ದೆಹಲಿ ಚಲೋ”, ಯಾರೂ ನಿರೀಕ್ಷಿಸದಿದ್ದ ಹೋರಾಟವಾಗಿ ರೂಪಾಂತರಗೊಂಡಿತ್ತು. ದೆಹಲಿಯತ್ತ ನುಗ್ಗುತ್ತಿದ್ದ ರೈತ ಪ್ರವಾಹವನ್ನು ತಡೆಯಲು, ತಣಿಸಲು, ತಳ್ಳಲು, ದಣಿಸಲು ಸರ್ಕಾರ ಮಾಡಿದ ಎಲ್ಲಾ ಪ್ರಯತ್ನಗಳೂ ವಿಫಲವಾಗಿ, ದೆಹಲಿ ಗಡಿಗಳು ರೈತ ಬಿಡಾರಗಳಾಗಿ ಪರಿವರ್ತನೆಗೊಂಡವು. ಒಂದೊಂದು ಕಡೆಯೂ ಸಹಸ್ರಾರು ಸಂಖ್ಯೆಯಲ್ಲಿ ಬೀಡುಬಿಟ್ಟ ರೈತರು ಸರ್ಕಾರ ತಮ್ಮ ಹಕ್ಕೊತ್ತಾಯಗಳನ್ನು ಒಪ್ಪುವ ತನಕ ಹಿಂತಿರುಗುವ ಮಾತಿಲ್ಲ ಎಂದು ಘೋಷಿಸಿದರು.

ಈ ರೈತಾಂದೋಲನ ಈಗ 8 ತಿಂಗಳನ್ನು ಪೂರ್ಣಗೊಳಿಸಿ 9 ನೇ ತಿಂಗಳಿನಲ್ಲಿದೆ. ಕೇಂದ್ರ ಸರ್ಕಾರ ಬಲವಂತವಾಗಿ ಹೇರುತ್ತಿರುವ “ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು”, “ರೈತರ ಬೆಳೆಗೆ ಬೆಲೆಖಾತ್ರಿ ನೀಡುವ ಕಾಯ್ದೆಯನ್ನು ಜಾರಿಗೆ ತರಬೇಕು” ಮತ್ತು “ವಿದ್ಯುತ್ ವಿತರಣೆಯನ್ನು ಖಾಸಗೀಕರಿಸುವ ಪ್ರಯತ್ನಗಳನ್ನು ಕೈಬಿಡಬೇಕು”. ಈ ಬೇಡಿಕೆಗಳು ಈಡೇರದೆ ಮನೆಗಳಿಗೆ ಮರಳುವ ಮಾತಿಲ್ಲ ಎಂದು ರೈತರು ಘೋಷಿಸಿ ಶಾಂತಿಯುತ ಸಂಗ್ರಾಮ ಹೂಡಿದ್ದಾರೆ. ನಮ್ಮ ಚರಿತ್ರೆಯಲ್ಲೆಲ್ಲೂ ಕಾಣಲು ಸಿಗದಂತಹ ಸುದೀರ್ಘ ಮತ್ತು ಸಂಯುಕ್ತ ಹೋರಾಟದ ಮೂಲಕ ಈ ಆಂದೋಲನವೊಂದು ಹೊಸ ಇತಿಹಾಸ ಬರೆಯುತ್ತಿದೆ. ಭಾರತದಲ್ಲಿ ಮಾತ್ರವಲ್ಲ ಜಗತ್ತಿನ ಅನೇಕ ದೇಶಗಳಲ್ಲಿ ಈ ಹೋರಾಟವನ್ನು ಬೆಂಬಲಿಸಿ ಪ್ರದರ್ಶನಗಳು ನಡಿಯುತ್ತಿವೆ. ಅಷ್ಟೇ ಅಲ್ಲ ಹಲವು ದೇಶಗಳ ಪಾರ್ಲಿಮೆಂಟುಗಳಲ್ಲೂ ಇದರ ಕುರಿತು ಚರ್ಚೆಗಳು ನಡೆಯುತ್ತಿವೆ.

ಇಷ್ಟೆಲ್ಲಾ ಆದರೂ “ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳಲು ಸಾಧ್ಯವೇ ಇಲ್ಲ” ಎಂದು ಸರ್ಕಾರ ಖಚಿತ ಮಾತುಗಳಲ್ಲಿ ಹೇಳಿದೆ, “ಬೇಡಿಕೆಗಳು ಈಡೇರದೆ ಹೋರಾಟದಿಂದ ಹಿಂದ್ಸರಿಯುವ ಮಾತೇ ಇಲ್ಲ” ಎಂದು ರೈತ ಮುಖಂಡರು ಅಷ್ಟೇ ಖಡಾಖಂಡಿತವಾಗಿ ಘೋಷಿಸಿದ್ದಾರೆ. ಹೋರಾಟ ಒಂದು ರೀತಿಯ ಸ್ಟೇಲ್ ಮೇಟ್ ಹಂತಕ್ಕೆ ಬಂದು ತಲುಪಿದೆ. ಮುಂದೇನು? ಎಂಬ ಪ್ರಶ್ನೆ ಅನೇಕರ ಮನದಲ್ಲಿದೆ. ಈ ಪ್ರಶ್ನೆಗೆ ಸಾಧ್ಯವಾದಷ್ಟು ವಾಸ್ತವಿಕ ನೆಲೆಗಟ್ಟಿನಲ್ಲಿ ಉತ್ತರಿಸುವುದು ಈ ಲೇಖನದ ಉದ್ದೇಶವಾಗಿದೆ.

ರೈತಾಂದೋಲನ ಮುಂದೇನು? ಎಂಬ ಪ್ರಶ್ನೆಗೆ ಉತ್ತರಿಸಿಕೊಳ್ಳುವ ಮುನ್ನ, ರೈತಾಂದೋಲನ ಹಿಂದೇನು? ಮತ್ತು ಇಂದೇನು? ಎಂಬ ಪ್ರಶ್ನೆಗಳತ್ತವೂ ಸಂಕ್ಷಿಪ್ತವಾಗಿ ಗಮನಹರಿಸುವುದು ಸೂಕ್ತ.

ರೈತಾಂದೋಲನ ಹಿಂದೇನು?

ದೇಶ ಮೊದಲ ಸುತ್ತಿನ ಲಾಕ್ ಡೌನಿನಲ್ಲಿದ್ದಾಗ, ಕೇಂದ್ರ ಸರ್ಕಾರವು, ಧುತ್ತೆಂದು ಮೂರು ಕೃಷಿ ಕಾಯ್ದೆಗಳನ್ನು ಜಾರಿಗೆ ತಂದಿತು. ಎಪಿಎಂಸಿ ವ್ಯವಸ್ಥೆಯನ್ನು ಶಿಥಿಲಗೊಳಿಸುವ, ಕೃಷಿಯಲ್ಲಿ ಕಾರ್ಪೊರೇಟ್ ಗುತ್ತಿಗೆಯನ್ನು ಪ್ರೋತ್ಸಾಹಿಸುವ ಮತ್ತು ಆಹಾರ ಧಾನ್ಯಗಳನ್ನು ದಾಸ್ತಾನು ಮಾಡಿಕೊಳ್ಳಲು ಕಂಪನಿಗಳಿಗೆ ಅಪರಿಮಿತ ಅವಕಾಶ ನೀಡುವ ಈ ಕಾಯ್ದೆಗಳು ಸಹಜವಾಗಿಯೇ ಆತಂಕಕ್ಕೆ ಕಾರಣವಾದವು. ರೈತ ಪ್ರತಿನಿಧಿಗಳೊಂದಿಗೆ ಸಮಾಲೋಚನೆಯನ್ನೂ ಮಾಡದೆ, ಮುಕ್ತ ಸಂವಾದವೂ ಇಲ್ಲದೆ, ಪಾರ್ಲಿಮೆಂಟಿನಲ್ಲಾದರೂ ಸಮಗ್ರ ಚರ್ಚೆ ನಡೆಸದೆ ಗಡಿಬಿಡಿಯಲ್ಲಿ ಜಾರಿಗೊಳಿಸಲು ನಡೆಸಿದ ಪ್ರಯತ್ನಗಳು ರೈತರ ಅನುಮಾನವನ್ನು ಗಟ್ಟಿಗೊಳಿಸಿದವು. ದೇಶವ್ಯಾಪಿ ಖಂಡನೆಗಳು ವ್ಯಕ್ತವಾದವು.

ಪಂಜಾಬಿನ ಇಡೀ ಕೃಷಿ ಎಪಿಎಂಸಿ ಮತ್ತು ಎಂ ಎಸ್ ಪಿಯ ಮೇಲೆ ಅವಲಂಬಿತವಾಗಿರುವುದರಿಂದ, ಅಲ್ಲಿನ ರೈತರು ತಮ್ಮ ಭವಿಷ್ಯ ಉಳಿಸಿಕೊಳ್ಳಲು ಲಾಕ್ ಡೌನ್ ಅನ್ನು ಬದಿಗೊತ್ತಿ ಬೀದಿಗಿಳಿಯಲು ನಿರ್ಧರಿಸಿದರು. ಜುಲೈ ತಿಂಗಳಿನಲ್ಲಿ ಪಂಜಾಬಿನ ಎಲ್ಲಾ ಜಿಲ್ಲೆಗಳಲ್ಲೂ ರೈತ ಹೋರಾಟಗಳು ಸಿಡಿದವು. ಸಂಘಟನೆಗಳ ನಿರೀಕ್ಷೆಗೂ ಮೀರಿ ಜನರು ಪ್ರತಿಭಟನೆಗಳಲ್ಲಿ ಭಾಗವಹಿಸತೊಡಗಿದರು. ದೇಶದ ಬಹುತೇಕ ರಾಜ್ಯಗಳಲ್ಲಿ ಸಣ್ಣ ಅಥವ ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗಳು ಪ್ರಾರಂಭವಾದವು.

ಕರ್ನಾಟಕದಲ್ಲೂ ಐಕ್ಯ ಹೋರಾಟದ ಹೆಸರಿನಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ ಅನೇಕ ಪ್ರತಿಭಟನೆಗಳು ನಡೆದವು. ಕರ್ನಾಟಕ ಬಂದ್ ಸಹ ಜರುಗಿತು. ರಾಜ್ಯ ಮಟ್ಟದಲ್ಲಿ ಪುಟಿಯದೊಡಗಿದ ರೈತ ಹೋರಾಟಗಳು ದೇಶವ್ಯಾಪಿ ಹೋರಾಟವಾಗಿ ರೂಪ ಪಡೆದದ್ದು ನವೆಂಬರ್ ತಿಂಗಳಿನಿಂದ. ಅಂದಿನಿಂದ ಇಂದಿನ ತನಕ ನಡೆದ ರೈತಾಂದೋಲನವನ್ನು 4 ಪರ್ವಗಳಲ್ಲಿ ವಿಂಗಡಿಸಿ ನೋಡಬಹುದು.

ಉಬ್ಬರದ ಪರ್ವ: ನವೆಂಬರ್ 26 & ಜನವರಿ 26.

ಇದು ಅತ್ಯಂತ ರಭಸಭರಿತ ಪರ್ವವಾಗಿತ್ತು. ಒಂದು ಕಾಲದಲ್ಲಿ ಹಸಿರು ಕ್ರಾಂತಿಯ ಪ್ರಯೋಗ ಶಾಲೆಯಾಗಿದ್ದ ಪಂಜಾಬಿನಲ್ಲಿ ರೈತ ಸ್ಪೋಟ ಸಂಭವಿಸಿತ್ತು. ಮಡುಗಟ್ಟಿದ ಆಕ್ರೋಶ ಸಿಡಿದು ದೆಹಲಿಯತ್ತ ಹರಿದಿತ್ತು. ಅಚ್ಚರಿಯ ವಿಚಾರವೆಂದರೆ ಸಾಮಾನ್ಯವಾಗಿ ಪಂಜಾಬಿನ ಜೊತೆ ಸದಾ ಸಂಘರ್ಷದಲ್ಲಿರುತ್ತಿದ್ದ ಹರಿಯಾಣ ಈ ದೆಹಲಿ ಲಗ್ಗೆಗೆ ಸಂಪೂರ್ಣ ಸಾತ್ ನೀಡಿ ಪಂಜಾಬಿನ ಜೊತೆಗೂಡಿತ್ತು. ಹರಿಯಾಣದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ರೈತರನ್ನು ತಡೆಯುವ ಪ್ರಯತ್ನ ಮಾಡಿತಾದರೂ ಯಶಸ್ವಿಯಾಗಲಿಲ್ಲ. ರೈತರು ದೆಹಲಿ ತಲುಪದಂತೆ ತಡೆಯಲು ಅರೆಸೇನಾಪಡೆಗಳು ದೆಹಲಿಯ ರಸ್ತೆಗಳಲ್ಲಿ ಕಂದಕ ತೋಡಿ, ಬೃಹತ್ ಬಂಡೆಗಳನ್ನು ಸುರಿದು, ತಂತಿಬೇಲಿ ಜಡಿದು ರಣರಂಗವನ್ನಾಗಿ ಪರಿವರ್ತಿಸಿದರು. ದೆಹಲಿ ಗಡಿಗಳು ದೇಶದ ಗಡಿಗಳೆಂಬಂತೆ ಗೋಚರಿಸಿದವು. ಅತ್ತ ರೈತರು, ಇತ್ತ ಪೋಲೀಸರು. ಪಂಜಾಬ್ ಮತ್ತು ಹರಿಯಾಣದಿಂದ ಬಂದಿದ್ದ ಸಹಸ್ರಾರು ರೈತರು ಸಿಂಘು ಮತ್ತು ಟಿಕ್ರಿ ಗಡಿಗಳಲ್ಲಿ ಬೀಡುಬಿಟ್ಟರು. ನಂತರ ರಾಜಸ್ಥಾನದ ಕಡೆಗಳಿಂದ ಬಂದ ರೈತರು ಶಹಜಹಾನ್ ಪುರದ ಹೈವೆಯಲ್ಲಿ ಬಿಡಾರ ಹೂಡಿದರು. ಉತ್ತರ ಪ್ರದೇಶದ ರೈತರು ಗಾಜಿಪುರದ ಹೈವೇಯಲ್ಲಿ ಕೂತರು. ದೇಶದ ಬೇರೆ ಬೇರೆ ರಾಜ್ಯಗಳಿಂದ ಬಂದ ರೈತರು ಮತ್ತು ರೈತ ಬೆಂಬಲಿಗ ಹೋರಾಟಗಾರರು ಈ ದೆಹಲಿ ಗಡಿ ಹೋರಾಟಗಳಲ್ಲಿ ಸೇರಿಕೊಳ್ಳತೊಡಗಿದರು. ಪ್ರತಿನಿತ್ಯ ಹೆಚ್ಚುತ್ತಾ ಹೋದ ಸಂಖ್ಯೆ ಜನವರಿ 26ರ ಹೊತ್ತಿಗೆ ಗರಿಷ್ಟ ಸಂಖ್ಯೆಗೆ ತಲುಪಿತು. ಅಂದು ಕನಿಷ್ಟ 2 ಲಕ್ಷ ರೈತರು ದೆಹಲಿ ಗಡಿಗಳಲ್ಲಿದ್ದರು.

ರೈತ ಹೋರಾಟ

ಜನವರಿ 16ರ ಗಣರಾಜ್ಯೋತ್ಸವದಂದು ರಾಷ್ಟ್ರಧ್ವಜಗಳನ್ನು ಹಿಡಿದು 60 ಸಾವಿರ ಟ್ರಾಕ್ಟರುಗಳು ದೆಹಲಿಯ ಹೆದ್ದಾರಿಗಳಿಗಿಳಿದವು. ದೆಹಲಿಯ ಹೊರವಲಯವನ್ನು ಸುತ್ತುವರಿದಿರುವ ರಿಂಗ್ ರೋಡನ್ನಾಧರಿಸಿ ರೈತ ಪೆರೇಡ್ ನಡೆಸಲು 5 ಮಾರ್ಗಗಳ ಒಪ್ಪಂದವಾಗಿತ್ತು. ಈ ಪೆರೇಡ್ ಮುಗಿಸಲು ಬರಲು ಎರಡು ದಿನ ಹಿಡಿಸುವುದಿತ್ತು. ರೊಟ್ಟಿಯ ಗಂಟು ಹಿಡಿದು ರೈತರು ಹೊರಟಿದ್ದರು. ಇದು ಅಂದುಕೊಂಡಂತೆ ನಡೆದಿದ್ದಲ್ಲಿ ಹೊಸ ಅಧ್ಯಯವೊಂದನ್ನು ತೆರೆಯುತ್ತಿತ್ತು. ಆದರೆ ಇದನ್ನು ಮುರಿಯಲು ಬೇಹುಗಾರಿಕಾ ಪಡೆಗಳು ತಮ್ಮದೇ ಷಡ್ಯಂತ್ರ ಹೂಡಿದವು.

ರಿಂಗ್ ರೋಡನ್ನು ಸುತ್ತುವುದೇಕೆ? “ಕೆಂಪುಕೋಟೆಗೆ ಹೋಗಿ, ಅದರ ಮೇಲೆಯೇ ಬಾವುಟ ಹಾರಿಸಬೇಕು” ಎಂಬ ಅತ್ಯುತ್ಸಾಹದ ಮತ್ತು ವಿವೇಕ ಕೊರತೆಯ ಒಂದೆರಡು ಯುವ ಗುಂಪುಗಳೂ ರೈತಾಂದೋಲನದಲ್ಲಿದ್ದವು. ಆ ಗುಂಪುಗಳನ್ನು ಮತ್ತಷ್ಟು ಪ್ರಚೋದಿಸಿ, ನಿರ್ಧರಿತ ಮಾರ್ಗವನ್ನು ಬಿಟ್ಟು ಕೆಂಪುಕೋಟೆಯತ್ತ ಸಾಗುವಂತೆ ಮಾಡಲು ದೀಪ್ ಸಿದ್ದು ಎಂಬ ಚಿತ್ರನಟ ಹಾಗೂ ಬಿಜೆಪಿ ಬೆಂಬಲಿಗನನ್ನು ಬಳಸಿಕೊಳ್ಳಲಾಯಿತು. ನಿರ್ಧರಿತ ಮಾರ್ಗವನ್ನು ಬಿಟ್ಟು ಒಂದು ಟ್ರಾಕ್ಟರ್ ಗುಂಪು ಕೆಂಪುಕೋಟೆ ತಲುಪಿತು. ಅದರಲ್ಲಿ ಸಿದ್ದು ನೇತೃತ್ವದ ಒಂದು ಸಣ್ಣ ಗುಂಪು ಸಿಖ್ಖರ ಧಾರ್ಮಿಕ ಹಳದಿ ಧ್ವಜವನ್ನು ಕೆಂಪುಕೋಟೆಯ ಮೇಲೆ ಹಾರಿಸಿತು.

ಕೆಂಪು ಕೋಟೆ
PC: ANI

ಇದನ್ನೇ ಬಳಸಿಕೊಂಡು ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ, ಪೋಲೀಸರನ್ನು ಗಾಯಗೊಳಿಸಿದ್ದಾರೆ, ರೈತರಲ್ಲ ಇವರು ರಾಷ್ಟ್ರದ್ರೋಹಿಗಳು ಎಂದು ಹುಯಿಲೆಬ್ಬಿಸಲಾಯಿತು. ಪ್ರಮುಖ ಮಾಧ್ಯಮ ಸಂಸ್ಥೆಗಳು ಹಸಿಹಸಿ ದುಷ್ಪ್ರಚಾರ ನಡೆಸಿದವು. ಈ ಪ್ರಚಾರದ ಬೆನ್ನಲ್ಲೇ ಸಂಘಪರಿವಾರದ ಶಕ್ತಿಗಳು ಬೀದಿಗಿಳಿದವು. ರೈತರು ಬಿಡಾರ ಬಿಟ್ಟಿರುವ ಗಡಿಗಳ ಮೇಲೆ ದಾಳಿ ನಡೆಸಿ ಖಾಲಿ ಮಾಡಿಸುವ ಪ್ರಯತ್ನಗಳನ್ನು ಮಾಡಿದರು. ಸಿಂಘು, ಟಿಕ್ರಿ, ಷಹಜಹಾನ್ ಪುರ ಗಡಿಗಳು ಬಲವಾಗಿದ್ದರಿಂದ ಅಲ್ಲಿ ಅವರ ಆಟ ನಡೆಯಲಿಲ್ಲ. ಗಾಜಿಪುರ ಗಡಿಯನ್ನೂ ಖಾಲಿ ಮಾಡಿಸಲು ಸ್ಥಳೀಯ ಬಿಜೆಪಿ ಎಂಎಲ್‌ಎ ನೇತೃತ್ವದಲ್ಲಿ 600 ಜನರ ಪಡೆ ದಾಳಿ ಮಾಡಿತು. ಪೋಲೀಸರು ಮತ್ತು ಬಿಜೆಪಿ ಬೆಂಬಲಿಗರು ಸೇರಿ ಟೆಂಟುಗಳನ್ನು ಕೀಳುವ, ಬೆಂಕಿ ಹಚ್ಚುವ ಕೆಲಸ ಪ್ರಾರಂಭಿಸಿದರು. ಆಗ ಗಾಜಿಪುರದಲ್ಲಿ ಸುಮಾರು 5 ಸಾವಿರ ರೈತರಷ್ಟೇ ಇದ್ದರು. ಹೋರಾಟ ಮುರಿದುಹೋಗಬಹುದು ಎಂಬ ವಾತಾವರಣ ಸೃಷ್ಟಿಯಾಯಿತು. ದುಃಖ ತಡೆಯಲಾರದೆ ಟಿಕಾಯತ್ ಮಾಧ್ಯಮಗಳ ಮುಂದೆಯೇ ಕಣ್ಣೀರಿಟ್ಟರು. ಈ ಕಣ್ಣೀರು ರೈತ ಕುಲವನ್ನು ಕಲುಕಿಬಿಟ್ಟಿತು. ಅವರ ಹೋರಾಟದ ಕೆಚ್ಚು ಕೆರಳಿಬಿಟ್ಟಿತು. ಇಡೀ ಚಳವಳಿ ಭಾವುಕ ರೂಪ ಪಡೆದುಕೊಂಡಿತು.

ಬಾವುಕ ಪರ್ವ: ಜನವರಿ 26 & ಮಾರ್ಚ್ 26.

ಸರ್ಕಾರದ ಹಟಮಾರಿತನ, ಪೋಲೀಸರ ಷಡ್ಯಂತ್ರ, ಮಾಧ್ಯಮಗಳ ದುಷ್ಪ್ರಚಾರ ಮತ್ತು ಬಿಜೆಪಿ ಬೆಂಬಲಿಗರ ದಾಳಿಯ ವಿರುದ್ಧ ರೈತರು ತಿರುಗಿಬಿದ್ದರು. ಬಹಳ ಹಿಂದುಳಿದ ಸಂಪ್ರದಾಯಿ ಚಿಂತನೆಗಳಿಗೆ ಮತ್ತು ತೀರ್ಮಾನಗಳಿಗೆ ಹೆಸರಾಗಿದ್ದ ಖಾಪ್ ಪಂಚಾಯಿತಿಗಳು, ರೈತ ಸ್ವಾಭಿಮಾನದ ಸಂಕೇತಗಳಾಗಿ ರೂಪಾಂತರಗೊಂಡವು. ಎಲ್ಲೆಡೆಯೂ ಕಿಸಾನ್ ಮಹಾಪಂಚಾಯತ್ ಗಳನ್ನು ನಡೆಸುವ ಕರೆ ನೀಡಲಾಯಿತು. ಲಕ್ಷ ಲಕ್ಷ ಸಂಖ್ಯೆಯ ರೈತರನ್ನೊಳಗೊಂಡ ಸರಣಿ ಕಿಸಾನ್ ಪಂಚಾಯಿತಿಗಳು ನಡೆದವು. ಪಶ್ಚಿಮ ಉತ್ತರ ಪ್ರದೇಶ ಮತ್ತು ಹರ್ಯಾಣ ರಾಜ್ಯದಲ್ಲಿ ಕಿಸಾನ್ ಪಂಚಾಯತ್ಗಳ ಮಾಹಾಪೂರವೇ ನಡೆಯಿತು.

ರಾಜಸ್ತಾನದಲ್ಲಿ ಭಾರಿ ಬೆಂಬಲ ಪಡೆಯುತ್ತಿರುವ ಮಹಾಪಂಚಾಯತ್‌ಗಳು: ಟಿಕಾಯತ್ ಹಿಂದೆ ಬೃಹತ್ ಜನಸ್ತೋಮ

ಅಲ್ಲಿಂದ ವಿಸ್ತರಿಸಿ, ಫೆಬ್ರವರಿ ಮತ್ತು ಮಾರ್ಚ್ ಈ ಎರಡು ತಿಂಗಳುಗಳಲ್ಲಿ, ದೇಶದ ಸುಮಾರು 16 ರಾಜ್ಯಗಳಲ್ಲಿ ರೈತ ಪಂಚಾಯತ್ ಗಳು ಆಯೋಜನೆಗೊಂಡವು. ಕರ್ನಾಟಕದಲ್ಲೂ 4 ಕಡೆ ಮಹಾಪಂಚಾಯತ್ಗಳು ನಡೆದವು. “ಮರೇಂಗೆ ಮಗರ್ ಪೀಛೆನಾ ಹಟೇಂಗೆ” [ಸಾಯುತ್ತೇವೆ ಆದರೆ ಹಿಂದೆ ಸರಿಯುವುದಿಲ್ಲ] ಎಂಬ ಪ್ರತಿಜ್ಞಾ ಘೋಷಣೆಗಳು ಮೊಳಗಿದವು. ಇದರ ಮುಂದುವರಿಕೆಯಾಗೇ ಚುನಾವಣೆಯಲ್ಲಿದ್ದ ಬೆಂಗಲಾಕ್ಕೂ ರೈತ ಮುಖಂಡರು ಧಾವಿಸಿದರು. ಅಲ್ಲೂ ಕಿಸಾನ್ ಪಂಚಾಯತ್ಗಳು ನಡೆದವು. ಅಲ್ಲಿ ಬಿರುಸುಪಡೆದುಕೊಳ್ಳುತ್ತಿದ್ದ “ನೋ ವೋಟ್ ಟು ಬಿಜೆಪಿ” ಘೋಷಣೆಗೆ ರೈತ ಶಕ್ತಿಯ ಕಸುವನ್ನೂ ಬೆರೆಸಿದರು. ಬಂಗಾಳ ಮತ್ತು ತಮಿಳುನಾಡಿನಲ್ಲಿ ಬಿಜೆಪಿ ಮುಖಭಂಗ ಅನುಭವಿಸಿತು. ಕಿಸಾನ್ ಪಂಚಾಯತುಗಳ ಬಿರುಗಾಳಿ ಇನ್ನೂ ಅನೇಕ ಕಡೆಗಳಲ್ಲಿ ಬೀಸುವುದಿತ್ತು. ಆದರೆ ಅಷ್ಟರಲ್ಲಿ ಕೋವಿಡ್ ಎರಡನೇ ಅಲೆ ಅಪ್ಪಳಿಸಿತು.

ತಾಳಿಕೆಯ ಪರ್ವ: ಏಪ್ರಿಲ್ ಮತ್ತು ಮೇ

ಕೋವಿಡ್ ಎರಡನೇ ಅಲೆ ಮೊದಲ ಅಲೆಗಿಂತಲೂ ವ್ಯಾಪಕವಾಗಿ ಹಾಗೂ ತೀವ್ರವಾಗಿ ಹರಡತೊಡಗಿತು. ದೇಶದಾದ್ಯಂತ ಲಾಕ್ ಡೌನುಗಳು ಘೋಷಣೆಯಾದವು. ಗಡಿ ರೈತ ಬಿಡಾರಗಳು ಕೋವಿಡ್ ಅನ್ನು ಹರಡುವ ತಾಣಗಳಾಗಬಹುದು, ಅವನ್ನು ಖಾಲಿ ಮಾಡಿಸಬೇಕು ಎಂಬೆಲ್ಲಾ ಪ್ರಚಾರಗಳು ಪ್ರಾರಂಭವಾದವು. ಆದರೆ ಕೋವಿಡ್ ಬಂದರೂ ಕದಲದಿರುವ ತೀರ್ಮಾನವನ್ನು ರೈತರು ತೆಗೆದುಕೊಂಡರು. ಗಡಿಗಳಲ್ಲಿ ಚಿಕಿತ್ಸಾ ವ್ಯವಸ್ಥೆಗಳನ್ನು ಬಲಗೊಳಿಸಿಕೊಂಡರು. ತಮ್ಮದೇ ಆಕ್ಸಿಜನ್ ಮತ್ತು ವೆಂಟಿಲೇಟರ್ ಸಹಿತ ಆಸ್ಪತ್ರೆಗಳನ್ನು ಸ್ಥಾಪಿಸಿಕೊಂಡರು. ವಿವಿಧ ರಾಜ್ಯಗಳ ಡಾಕ್ಟರುಗಳ ತಂಡಗಳು ನೆರವಿಗೆ ಧಾವಿಸಿದವು. ಇಡೀ ದೇಶ ಹೆದರಿ ಮನೆ ಸೇರಿದರೂ ರೈತರು ಪಟ್ಟುಬಿಡದೆ ಹೋರಾಟ ಮುಂದುವರೆಸಿದರು. ಅಚ್ಚರಿ ಎಂಬಂತೆ ಲಾಕ್ ಡೌನ್ ಇದ್ದ ದೆಹಲಿ ಮತ್ತು ಸುತ್ತಮುತ್ತ ಕೋವಿಡ್ ಸಾವುಗಳು ವಿಪರೀತ ಹೆಚ್ಚಾದವು. ಆದರೆ ರೈತ ಬಿಡಾರಗಳಲ್ಲಿ ಕೋವಿಡ್ ಸಂಖ್ಯೆ ತೀರಾ ಕಡಿಮೆ ಇತ್ತು. ಸಾವುಗಳಂತೂ ಅತಿ ವಿರಳ ಎಂಬಷ್ಟೇ ಇದ್ದವು. ಮಾಸ್ಕ್ ಸಹ ಹಾಕದೆ, ಸಣ್ಣ ಪ್ರದೇಶದಲ್ಲಿ ಸಹಸ್ರಾರು ರೈತರು ಹಗಲಿರುಳು ಒಟ್ಟಿಗಿದ್ದರೂ ಕೋವಿಡ್ ಪರಿಣಾಮ ಬೀರಲಿಲ್ಲ. ಇದೊಂದು ಅಧ್ಯಯನಾರ್ಹ ವಿಚಾರ. ಒಟ್ಟಿನಲ್ಲಿ ಕೋವಿಡ್ ಕಾಲಘಟ್ಟದಲ್ಲಿ ರೈತಾಂದೋಲನದ ವಿಸ್ತರಣೆ ತಗ್ಗಿತಾದರೂ, ಗಡಿ ಭಾಗದಲ್ಲಿ ರೈತರ ಸಂಖ್ಯೆ ಕಡಿಮೆಯಾಯಿತಾದರೂ, ಹೋರಾಟ ವಿಚಲಿತಗೊಳ್ಳಲಿಲ್ಲ. ಸಂಯಮ ಮತ್ತು ಸಂಕಲ್ಪದ ಜೊತೆ ಧೃಡವಾಗಿ ನಿಂತಿತು. ಕೋವಿಡ್ ಅಲೆಯನ್ನು ತಾಳಿಕೊಂಡು ರೈತಾಂದೋಲನದ ಆಂತರಿಕ ಶಕ್ತಿಯನ್ನು ಮತ್ತೊಮ್ಮೆ ಜಗತ್ತಿಗೆ ತೋರಿಸಿತು.

ಚೇತರಿಕೆಯ ಪರ್ವ: ಜೂನ್ ಮತ್ತು ಜುಲೈ.

ಒಂದೆಡೆ ಕೋವಿಡ್ ತಗ್ಗಿತು, ಮತ್ತೊಂದೆಡೆ ರೈತರು ತಮ್ಮ ನಾಟಿ ಕೆಲಸ ಮುಗಿಸಿಕೊಂಡರು. ಜೂನ್ ಮತ್ತು ಜುಲೈ ಎರಡೂ ತಿಂಗಳುಗಳಲ್ಲಿ ಕ್ರಮೇಣ ಗಡಿ ಹೋರಾಟ ಚೇತರಿಸಿಕೊಳ್ಳತೊಡಗಿತು. ರೈತರು ತಮ್ಮ ತಮ್ಮ ಸಂಘಟನೆ ಮತ್ತು ಹಳ್ಳಿಗಳಲ್ಲಿ ತಯಾರಿಗಳನ್ನು ಮಾಡಿಕೊಂಡು ದೆಹಲಿ ಗಡಿಗಳಿಗೆ ಹಿಂತಿರುಗತೊಡಗಿದರು. ದೆಹಲಿ ಗಡಿಗಳಲ್ಲಿ ರೈತರ ಸಂಖ್ಯೆ ಬೆಳೆಯತೊಡಗಿತು. ಜುಲೈ ಕೊನೆಹೊತ್ತಿಗೆ ಎಲ್ಲಾ ಗಡಿಗಳೂ ಮತ್ತೆ ಸಕ್ರಿಯ ಚಟುವಟಿಕೆಗಳನ್ನು ಪ್ರಾರಂಭಿಸಿದವು. ಜುಲೈ 22ರಂದು ಸಂಸತ್ತು ಅಧಿವೇಶನ ಪ್ರಾರಂಭವಾಯಿತು. ಅಂದಿನಿಂದಲೇ “ಕಿಸಾನ್ ಸಂಸತ್ತ”ನ್ನು ಆಯೋಜಿಸುವುದಾಗಿ ರೈತ ಮುಖಂಡರು ಘೋಷಿಸಿದರು. ತಡೆದರೆ ಸಂಸತ್ತಿನೊಳಗೂ ಮತ್ತು ಹೊರಗೂ ತೀವ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆಂದು ಸರ್ಕಾರ ಸಂಧಾನಕ್ಕೆ ಬಂದಿತು. ನಿತ್ಯ 200 ಜನ ರೈತ ಪ್ರತಿನಿಧಿಗಳನ್ನೊಳಗೊಂಡ “ಕಿಸಾನ್ ಸಂಸತ್ತಿಗೆ” ಒಪ್ಪಿಗೆ ನೀಡಿತು. ಜುಲೈ 26 ರಿಂದ ಆಗಸ್ಟ್ 11 ರವರೆಗೆ ಕಿಸಾನ್ ಪಂಚಾಯತ್ಗಳು ನಡೆದವು. ಒಂದೊಂದು ಕೃಷಿ ಬಿಲ್ ಗಳ ಕುರಿತೂ ವಿಸ್ತೃತ ಚರ್ಚೆಗಳು ನಡೆದು ತಿರಸ್ಕರಿಸಲಾಯಿತು. ಕೊನೆಯಲ್ಲಿ ಮೋದಿ ಸರ್ಕಾರದ ಮೇಲೆ ಅವಿಶ್ವಾಸ ಗೊತ್ತುವಳಿ ಮಂಡಿಸಿ ಸರ್ಕಾರವ ಆಳುವ ನೈತಿಕ ಹಕ್ಕನ್ನು ಕಳೆದುಕೊಂಡಿದೆ ಎಂದು ಘೋಷಿಸಲಾಯಿತು. ಎರಡು ದಿನ ಸಂಪೂರ್ಣ ರೈತ ಮಹಿಳೆಯರ ಪ್ರಾತಿನಿಧ್ಯ ಹೊಂದಿದ್ದ “ಮಹಿಳಾ ಕಿಸಾನ್ ಸಂಸತ್ತು”ಗಳು ಸಹ ನಡೆದದ್ದು ವಿಶೇಷ. ಈ “ರೈತ ಸಂಸತ್ತು” ಸಾಂಕೇತಿಕವಾದದ್ದಾದರೂ ಅಪಾರ ನೈತಿಕ ಶಕ್ತಿಯನ್ನು ಹೊಂದಿತ್ತು. ದೆಹಲಿಯ ಹೃದಯ ಭಾಗಕ್ಕೂ ಬರುವ ಮತ್ತು ತಮ್ಮ ವಿಚಾರಗಳನ್ನು ಮಂಡಿಸುವ ಹಾಗೂ ಖಂಡಿಸುವ ಅವಕಾಶವನ್ನಾಗಿ ರೈತರು ಬಳಸಿಕೊಂಡರು.

ರೈತಾಂದೋಲನ ಇಂದೇನು?

ಜಾಗೃತಿ, ಆಕ್ರೋಶ, ಉಬ್ಬರ, ಭಾವುಕತೆ, ತಾಳಿಕೆ, ಚೇತರಿಕೆ ಮೂಲಕ ಸಾಗಿದ ಚಳವಳಿ ಇಂದು ಪರಿಪಕ್ವತೆಗೆ ಬಂದು ತಲುಪಿದೆ. ಸುದೀರ್ಘ ಹೋರಾಟಕ್ಕೆ ರೈತ ಸಮುದಾಯ ಮಾನಸಿಕವಾಗಿ ಸಿದ್ಧವಾಗಿದೆ, ಸಂಘಟನಾತ್ಮಕವಾಗಿ ಸಜ್ಜಾಗುತ್ತಿದೆ. ಎಲ್ಲ ಗಡಿಭಾಗಗಳಲ್ಲೂ ನಿರಂತರವಾಗಿ ಟೆಂಟುಗಳ ನಿರ್ಮಾಣ ಮುಂದುವರಿಯುತ್ತಿದೆ. ದೀರ್ಘ ಹೋರಾಟವಾದ್ದರಿಂದ ಸ್ಥಿರ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಬಿಸಿಲು, ಚಳಿ, ಗಾಳಿಗೆ ತಾಳುವಂತಹ ಗಟ್ಟಿ ಟೆಂಟುಗಳು ರೂಪತಳಿಯುತ್ತಿವೆ. ಬಿದಿರಿನ ಗೋಡೆಗಳು, ಶೀಟಿನ ಛಾವಣಿಗಳು ಸಿದ್ಧವಾಗುತ್ತಿವೆ. ಮಂಚ, ಕುರ್ಚಿ, ಫ್ಯಾನು, ಫ್ರಿಜ್ಜು, ಟಿವಿ, ಎಸಿ…ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಪರಿಕರಗಳು ಈ ಸಮುದಾಯಿಕ ಟೆಂಟುಗಳಲ್ಲಿ ವ್ಯವಸ್ಥಿತಗೊಳ್ಳುತ್ತಿವೆ. ಹಳ್ಳಿಗಳಲ್ಲಿ ಪಾಳಿ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಪ್ರತಿ ಹಳ್ಳಿಯಿಂದ ರೊಟೇಷನ್ ಬೇಸಿಸ್ಸಿನ ಮೇಲೆ ರೈತರು ಬಂದು ಹೋಗುವುದು ನಡಿಯುತ್ತಿದೆ. ಕೇಂದ್ರೀಯ ಕರೆಬಂದರೆ ಎಲ್ಲರೂ ದೆಹಲಿಯತ್ತ ದೌಡಾಯಿಸುವ ಮಾನಸಿಕ ಸಂಸಿದ್ಧತೆ ಎಲ್ಲರಲ್ಲೂ ಇದೆ. ಸಾರಾಂಶದಲ್ಲಿ ಸುದೀರ್ಘ, ಶಾಂತ ಹಾಗೂ ಪರಿಣಾಮಕಾರಿ ಹೋರಾಟಕ್ಕೆ ರೈತಾಂದೋಲನ ಸಕಲ ಸಿದ್ಧತೆಗಳನ್ನೂ ಮಾಡಿಕೊಂಡಿದೆ.

ರೈತಾಂದೋಲನ ಮುಂದೇನು?
ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರ ರೈತರ ಹಕ್ಕೊತ್ತಾಯಗಳನ್ನು ಒಪ್ಪಲು ಸಾಧ್ಯವೇ ಇಲ್ಲ ಎಂಬ ಧೃಡ/ಜಡ ಧೋರಣೆ ಹೊಂದಿರುವುದರಿಂದ ಈ ಸರ್ಕಾರವನ್ನು ಕೆಡವಿಯೇ ನಮ್ಮ ಭವಿಷ್ಯವನ್ನು ಉಳಿಸಿಕೊಳ್ಳಬೇಕು ಎಂಬ ನಿಲುವು ರೈತಾಂದೋಲನದಲ್ಲಿ ಬಲಗೊಳ್ಳುತ್ತಿದೆ. ಈ ಚಿಂತನೆ ಎರಡು ದಿಕ್ಕಿನ ಆಲೋಚನೆಗಳಿಗೆ ಪುಷ್ಟಿ ನೀಡಿದೆ.

1. ಬಿಜೆಪಿಗೆ ರಾಜಕೀಯ ಪಾಠ ಕಲಿಸಬೇಕು:

2021 ರ ಫೆಬ್ರವರಿಯಲ್ಲಿ ಉತ್ತರ ಪ್ರದೇಶ, ಉತ್ತರ ಖಂಡ ಮತ್ತು ಪಂಜಾಬಿನಲ್ಲಿ ಚುನಾವಣೆಗಳು ನಡೆಯಲಿವೆ. ಈ ಚುನಾವಣೆಗಳಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು ಎಂಬ ಚರ್ಚೆ ಬಲವಾಗಿದೆ. ಅದರ ಭಾಗವಾಗಿ ರೈತಾಂದೋಲನವು “ಮಿಷನ್ ಯುಪಿ ಮತ್ತು ಯುಕೆ” ಎಂಬ ವಿಸ್ತೃತ ಕಾರ್ಯ ಯೋಜನೆಯನ್ನು ರೂಪಿಸಿದೆ. ಬಿಜೆಪಿಯನ್ನು ತಿರಸ್ಕರಿಸುವಂತೆ ಉತ್ತರಪ್ರದೇಶ ಮತ್ತು ಉತ್ತರ ಖಂಡದ ರೈತರನ್ನು ಮನವೊಲಿಸುವುದು ಇದರ ಗುರಿಯಾಗಿದೆ. ಪ್ರಸ್ತುತ ಪಶ್ಚಿಮ ಉತ್ತರ ಪ್ರದೇಶ ಮತ್ತು ದಕ್ಷಿಣ ಉತ್ತರ ಖಂಡದಲ್ಲಿ ಮಾತ್ರ ರೈತಾಂದೋಲನ ವ್ಯಾಪಕತೆಯನ್ನು ಹೊಂದಿದೆ. ಇದನ್ನು ಎರಡೂ ರಾಜ್ಯಗಳುದ್ದಕ್ಕೂ ವಿಸ್ತರಿಸುವುದು ಈ ‘ಮಿಷನ್ ಯುಪಿ-ಯುಕೆ’ಯ ಗುರಿಯಾಗಿದೆ. ಸೆಪ್ಟೆಂಬರ್ 5 ರಂದು ಗಾಜಿಪುರದಲ್ಲಿ ಬೃಹತ್ ರೈತ ರ್ಯಾಲಿಯ ಆಯೋಜನೆಯಾಗಿತ್ತಿದ್ದು, ಅದರ ನಂತರ ಈ ಅಭಿಯಾನ ಬಿರುಸು ಪಡೆಯಲಿದೆ. ಎರಡೂ ರಾಜ್ಯಗಳ ಎಲ್ಲಾ ಜಿಲ್ಲೆಗಳಲ್ಲಿ ರೈತ ಪಂಚಾಯತ್ಗಳನ್ನು ಸಂಘಟಿಸಿ “ಬಿಜೆಪಿಯನ್ನು ತಿರಸ್ಕರಿಸುವಂತೆ” ಕರೆ ನೀಡಲಾಗುತ್ತಿದೆ. ಫಲಿತಾಂಶ ಹೇಗೆಯೇ ಆಗಬಹುದಾದರೂ, ಅದು ಇನ್ನೂ ಹಲವು ವಿದ್ಯಮಾನಗಳ ಮೇಲೆ ಅವಲಂಬಿತವಾಗಿದೆಯಾದರೂ ಈ ಎರಡು ರಾಜ್ಯಗಳ ಚುನಾವಣೆ ಮೇಲೆ ರೈತಾಂದೋಲನ ತನ್ನ ಛಾಪನ್ನು ಮೂಡಿಸುವುದಂತೂ ಸತ್ಯ. ಯೋಗಿ ದುರಾಡಳಿತವನ್ನು ರೈತರು ಕಾಡುವುದಂತೂ ದಿಟ. ಒಂದು ವೇಳೆ ಫೆಬ್ರವರಿಯಲ್ಲಿ ಯೋಗಿ ಸರ್ಕಾರವನ್ನು ಕೆಳಗಿಳಿಸುವುದರಲ್ಲಿ ಯಶಸ್ವಿಯಾದರೆ, ಅದು ಇಡೀ ದೇಶದ ರಾಜಕಾರಣದಲ್ಲೇ ಹೊಸ ತಿರುವು ತರಲಿದೆ.

ಪಂಜಾಬಿನ ಚುನಾವಣೆಗೆ ಇದೇ ರಣನೀತಿ ಅನ್ವಯವಾಗುವುದಿಲ್ಲ ಎನ್ನುತ್ತಾರೆ ರೈತ ಮುಖಂಡರು. ಏಕೆಂದರೆ ಅಲ್ಲಿ ಬಿಜೆಪಿ ಮತ್ತು ಅದರ ಮಿತ್ರ ಪಕ್ಷ ಅಕಾಲಿ ದಳ ಇಂದು ಪ್ರತಿಸ್ಪರ್ಧಿಯಾಗೇ ಉಳಿದಿಲ್ಲ. ಪಂಜಾಬ್ ಮತ್ತು ಹರ್ಯಾಣ ಎರಡೂ ರಾಜ್ಯಗಳಲ್ಲಿ ಬಿಜೆಪಿ ನಾಮಾವಶೇಷವಾಗಿಬಿಟ್ಟಿದೆ. ರೈತಾಂದೋಲನ ಈಗಾಗಲೇ ಇದನ್ನು ಆಗುಮಾಡಿಬಿಟ್ಟಿದೆ. ಬಿಜೆಪಿಯನ್ನು ಸೋಲಿಸಿ ಎಂಬ ಕರೆಗೆ ವಿಶೇಷ ಅರ್ಥವೇನಿಲ್ಲ. ಪಂಜಾಬಿನಲ್ಲಿ ಈ ಬಾರಿಯ ಸ್ಪರ್ಧೆ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ ನಡುವೆ ನಡೆಯಲಿದೆ. ಯಾರನ್ನು ಸೋಲಿಸಬೇಕು? ಎಂಬುದು ಇಲ್ಲಿ ಮುಖ್ಯವಲ್ಲದಿರುವುದರಿಂದ ಯಾರನ್ನು ಗೆಲ್ಲಿಸಬೇಕು? ಎಂಬ ಚರ್ಚೆ ರಾಜಕೀಯ ನಿಲುವುಗಳ ಕೇಂದ್ರವಾಗಲಿದೆ. ಈ ಚರ್ಚೆ ಮತ್ತು ನಿಲುವುಗಳು ಭಿನ್ನ ಅಭಿಪ್ರಾಯಗಳಾಗಿ ಮೂಡಿ, ಭಿನ್ನಾಭಿಪ್ರಾಯಗಳಾಗಿ ಬೆಳೆಯುವ ಸಾಧ್ಯತೆ ಇದೆ. ರೈತಾಂದೋಲನದ ಐಕ್ಯತೆಗೆ ಧಕ್ಕೆ ತರುವ ಎಲ್ಲಾ ಸಾಧ್ಯತೆ ಇದೆ. ಈ ಅನಾಹುತವನ್ನು ತಡೆಯುವ ಬಗೆ ಹೇಗೆ ಎಂಬ ಚಿಂತೆ ರೈತ ಮುಂದಾಳುಗಳನ್ನು ಕಾಡುತ್ತಿದೆ. ಐಕ್ಯತೆಯನ್ನು ಕಾಯ್ದಿಟ್ಟುಕೊಳ್ಳಲು “ನೋ ಎಲೆಕ್ಷನ್ ಟಿಲ್ ರೆಸೊಲೂಷನ್” ಎಂಬ ಕರೆಕೊಡುವ ಕುರಿತು ಚಿಂತನೆ ನಡೆದಿದೆ. ಅಂದರೆ ರೈತರ ಪ್ರಶ್ನೆ ಬಗೆಹರಿಯುವ ತನಕ ಪಂಜಾಬಿನಲ್ಲಿ ಚುನಾವಣೆಯೇ ಬೇಡ ಎಂಬ ನಿಲುವನ್ನು ತಾಳಬೇಕು ಎಂಬುದು ಕೆಲವು ಮುಖಂಡರ ಪ್ರಸ್ತಾಪವಾಗಿದೆ. ಇದಿನ್ನು ಪಂಜಾಬಿನ 32 ರೈತ ಸಂಘಟನೆಗಳ ಒಕ್ಕೂಟದಲ್ಲಿ ಚರ್ಚೆಯಾಗಿ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕಿದೆ. ಒಂದು ವೇಳೆ ರೈತ ಸಂಘಟನೆಗಳು ಏಕಾಭಿಪ್ರಾಯಕ್ಕೆ ತಲುಪಿದಲ್ಲಿ ಇದೊಂದು ಹೊಸ ರೀತಿಯ ರಾಜಕಾರಣಕ್ಕೆ ದಾರಿಮಾಡಲಿದೆ. ರೈತರ ಮಾತನ್ನು ಧಿಕ್ಕರಿಸಿ ಚುನಾವಣೆಗೆ ಹೋಗುವ ಧೈರ್ಯವನ್ನು ಕಾಂಗ್ರೆಸ್ ಆಗಲೀ, ಆಮ್ ಆದ್ಮಿ ಪಾರ್ಟಿಯಾಗಲೀ ತೋರಲು ಸಾಧ್ಯವೇ ಇಲ್ಲ. ಪ್ರತಿಪಕ್ಷಗಳು ಚುನಾವಣೆಗಳನ್ನು ಬಹಿಷ್ಕರಿಸಿದರೆ ಬಿಜೆಪಿ ಮತ್ತು ಅಕಾಲಿದಳಗಳು ಇಕ್ಕಟ್ಟಿಗೆ ಸಿಲುಕುತ್ತವೆ. ಬಲವಂತವಾಗಿ ಚುನಾವಣೆ ಮಾಡಿಸಲು ಹೊರಟರೆ ತೀವ್ರ ಸ್ವರೂಪದ ರೈತ ಪ್ರತಿರೋಧವನ್ನು ಎದುರಿಸಬೇಕಾಗಿ ಬರಲಿದೆ. ಏನಾಗಲಿದೆ ಕಾದು ನೋಡಬೇಕಿದೆ.

2. ರೈತಾಂದೋಲನವನ್ನು ರಾಷ್ಟ್ರೀಯ ಆಂದೋಲನವಾಗಿ ಮಾರ್ಪಡಿಸಬೇಕು:

ರೈತಾಂದೋಲನ ಗೆಲ್ಲಬೇಕಾದರೆ ದೇಶದಲ್ಲೇ ಬಿಜೆಪಿಯನ್ನು ಸೋಲಿಸಬೇಕಿರುವುದರಿಂದ ರೈತಾಂದೋಲನವನ್ನು ರಾಷ್ಟ್ರೀಯ ಆಂದೋಲನವನ್ನಾಗಿ ಬೆಳೆಸಬೇಕು ಎಂಬುದು ಎರಡನೇ ಚಿಂತನೆಯಾಗಿದೆ. ಇದಕ್ಕಾಗಿ ಒಂದೆಡೆ ರೈತಾಂದೋಲನದ ಸಂಘಟಿತ ಅಭಿವ್ಯಕ್ತಿಯಾದ ‘ಸಂಯುಕ್ತ ಕಿಸಾನ್ ಮೋರ್ಚಾ’ ವನ್ನು ದೇಶವ್ಯಾಪಿಯಾಗಿ ವಿಸ್ತರಿಸುವುದು, ಮತ್ತೊಂದೆಡೆ ಇನ್ನಿತರ ಜನವರ್ಗಗಳ ಜೊತೆ ಮೈತ್ರಿಯನ್ನು ಬಲಪಡಿಸುವ ಯೋಜನೆಗಳು ರೂಪಗೊಳ್ಳುತ್ತಿವೆ. ರೈತಂದೋಲನವನ್ನು ಸುಸಂಘಟಿತಗೊಳಿಸುವ ಭಾಗವಾಗಿ ದೇಶದ ಕಾರ್ಮಿಕ ಸಂಘಟನೆಗಳ ಜೊತೆ, ವಿದ್ಯಾರ್ಥಿ – ಯುವಜನ ಸಂಘಟನೆಗಳ ಜೊತೆ, ದಲಿತ – ಆದಿವಾಸಿ – ಅಲ್ಪಸಂಖ್ಯಾತ ಸಂಘಟನೆಗಳ ಜೊತೆ, ವಿವಿಧ ಪ್ರಜಾತಾಂತ್ರಿಕ ಸಂಘಟನೆಗಳ ಜೊತೆ ಮಾತುಕತೆಗಳು ಪ್ರಾರಂಭವಾಗಿವೆ. ಬರುವ ದಿನಗಳಲ್ಲಿ ಈ ಮಾತುಕತೆಗಳು ಖಚಿತ ಯೋಜನೆಗಳಾಗಿ ಅಭಿವೃದ್ಧಿಪಡೆಯುವ ಸಾಧ್ಯತೆ ಇದೆ. ರೈತಾಂದೋಲನ ರಾಷ್ಟ್ರೀಯ ಆಂದೋಲನವಾಗಿ ವಿಕಾಸಗೊಳ್ಳುವ ಎಲ್ಲಾ ಸಾಧ್ಯತೆಗಳೂ ಇವೆ.

2022ರ ಆಗಸ್ಟಿಗೆ ‘ಸ್ವತಂತ್ರ’ ಭಾರತ 75 ವರ್ಷಗಳನ್ನು ಪೂರೈಸಲಿದೆ. ಈ 75 ವರ್ಷಗಳ ಪಯಣ ಅಪೂರ್ಣ ಸ್ವಾತಂತ್ರ‍್ಯದಿಂದ ಪ್ರಾರಂಭವಾಗಿ ಏರುಪೇರುಗಳ ಮೂಲಕ ಸಾಗಿ, ಈಗ ಸರ್ವಾಧಿಕಾರದ ಹೊಸ್ತಿಲಿಗೆ ಬಂದು ತಲುಪಿದೆ. ಈ ಅರೆಬರೆ ಬಲಾಢ್ಯರ ಪರವಾದ ಪ್ರಜಾತಂತ್ರ ವ್ಯವಸ್ಥೆಯೂ ಉಳಿಯುವ ಸಾಧ್ಯತೆಗಳು ವಿರಳವಾಗುತ್ತಿವೆ. ಹಿಂದುತ್ವದ ಹೆಸರಿನಲ್ಲಿ ಸರ್ವಾಧಿಕಾರವನ್ನು ಹೇರಲು ಸಿದ್ಧತೆಗಳು ಭರದಿಂದ ಸಾಗಿವೆ. ಎಲ್ಲಾ ಜನಸಮುದಾಯಗಳ ಬದುಕು ಕುಸಿಯುತ್ತಿದೆ. ಕಾರ್ಪೊರೇಟ್ ಶಕ್ತಿಗಳ ಆಕ್ರಮಣ ಹೆಚ್ಚಾಗಿದೆ. ಬಿಜೆಪಿ ನಿರ್ಲಜ್ಜವಾಗಿ ಲೂಟಿಕೋಟ ಕಂಪನಿಗಳ ಜೊತೆ ನಿಂತಿದೆ. ಕಾರ್ಪೊರೇಟ್ ಬಿಜೆಪಿಯ ವಿರುದ್ಧ ದೇಶದ ಎಲ್ಲಾ ಜನಸಮುದಾಯಗಳೂ ಒಂದೊಂದಾಗಿ ತಿರುಗಿಬೀಳುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿವೆ. ರೈತಾಪಿಯನ್ನು ಎದುರುಹಾಕಿಕೊಂಡ ಯಾವ ಸಾಮ್ರಜ್ಯಗಳೂ ದೀರ್ಘಕಾಲ ಉಳಿಯಲು ಸಾಧ್ಯವಿಲ್ಲ. ತನ್ನ ಬಂಡವಾಳಶಾಹಿ ಮಿತ್ರರಿಗಾಗಿ ಮೋದಿ ರೈತರನ್ನು ಎದುರು ಹಾಕಿಕೊಂಡಿದ್ದಾರೆ. ರೈತರ ದನಿಗೆ ಕಿವುಡಾಗಿ ಕೂತಿದ್ದಾರೆ. ತಾನು ತೆಗೆದುಕೊಂಡಿರುವ ನಿಲುವಿನಿಂದ ಹಿಂದೆ ಸರಿಯುವುದಿಲ್ಲ ಎಂದು ಹಟ ಹಿಡಿದು ಕೂತಿದ್ದಾರೆ. ಮೋದಿಯ ಈ ಹಟವೇ ಅದರ ವಿನಾಶದ ಮೂಲ ಆಗುವ ಎಲ್ಲಾ ಸಾಧ್ಯತೆಗಳೂ ಇವೆ. ಏಕೆಂದರೆ ಪ್ರಾಣಬಿಟ್ಟೇವು, ಆದರೆ ಸೋತು ಹಿಂದಿರುಗಲಾರೆವು ಎಂದು ರೈತರು ಪ್ರತಿಜ್ಞೆ ಸ್ವೀಕರಿಸಿದ್ದಾರೆ. ರೈತರ ಈ ಚಾರಿತ್ರಿಕ ಹೋರಾಟ ಹೊಸ ಚರಿತೆಯನ್ನು ಬರೆಯುವ ಎಲ್ಲಾ ಸಾಧ್ಯತೆಗಳೂ ಇವೆ.

– ನೂರ್ ಶ್ರೀಧರ್

ಚಿತ್ರಕೃಪೆ: ದಿ ಸ್ಟೇಟ್‌

(ಚಿತ್ರದುರ್ಗದ ಇಂಜಿನಿಯರಿಂಗ್ ವಿದ್ಯಾರ್ಥಿ ನೂರ್ ಜುಲ್ಫೀಕರ್, ಶ್ರೀಧರ್ ಆಗಿದ್ದು ಭೂಗತ ಕ್ರಾಂತಿಕಾರಿ ಚಳವಳಿಯ ಪೂರ್ಣಾವಧಿ ಕಾರ್ಯಕರ್ತನಾಗಿ. ಭಾರತದ ಸಂದರ್ಭದಲ್ಲಿ ಈ ರೀತಿಯ ಭೂಗತ ಸಶಸ್ತ್ರ ಚಳವಳಿಯಿಂದ ಕ್ರಾಂತಿ ಮಾಡಲು ಸಾಧ್ಯವಿಲ್ಲವೆಂಬ ಕಾರಣಕ್ಕೆ ತೀವ್ರ ವೈಚಾರಿಕ ಸಂಘರ್ಷ ನಡೆಸಿ, ಮುಖ್ಯವಾಹಿನಿ ಪ್ರಜಾತಾಂತ್ರಿಕ ಚಳವಳಿಯಲ್ಲಿ ಸಕ್ರಿಯರಾಗಿದ್ದಾರೆ. ಮಾಕ್ರ್ಸ್ ಮತ್ತು ಅಂಬೇಡ್ಕರ್ ಚಿಂತನೆಯ ಲೇಖನಗಳ ಜೊತೆಗೆ, ‘ನನ್ನೊಳಗಿನ ಸೂಫಿ’, ‘ಮಾವೋವಾದಿ ಚಳವಳಿ’ ಅವರ ಎರಡು ಪ್ರಕಟಿತ ಕೃತಿಗಳು.)


ಇದನ್ನೂ ಓದಿ: ಬೌದ್ಧಿಕ ಬಿಕ್ಕಟ್ಟಿನಿಂದ ಹೊರಬರದೆ ದೇಶದ ಬಿಕ್ಕಟ್ಟಿಗೆ ಪರಿಹಾರವಿಲ್ಲ : ನೂರ್ ಶ್ರೀಧರ್

ನೂರ್‌ ಶ್ರೀಧರ್‌
+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಎಸ್‌‌ಪಿ ನಾಯಕ ಮುಲಾಯಂ ಸೊಸೆ ಬಿಜೆಪಿಗೆ ಸೇರ್ಪಡೆ: ಮಾಧ್ಯಮಗಳಲ್ಲಿ ಮರೆಯಾದ ಒಂದು ಅಂಶ!

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್‌ ಯಾದವ್ ಅವರ ಸೊಸೆ ಅಪರ್ಣಾ ಯಾದವ್‌ ಅವರು ಬಿಜೆಪಿ ಸೇರಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ. ಎಸ್‌ಪಿಗೆ ಹಿನ್ನೆಡೆಯಾಗುವ ಸಾಧ್ಯತೆ ಎಂದು ಕೆಲವು...
Wordpress Social Share Plugin powered by Ultimatelysocial