Homeಅಂಕಣಗಳುಕಳೆದುಹೋದ ದಿನಗಳುಕಳೆದುಹೋದ ದಿನಗಳು - 6: ತೋಟದ ಕೂಲಿಗಳ ಕಣ್ಣೀರಿಗೆ ಮಿಡಿದ ಕೆಲ ಜನಪರ ಮಾಲೀಕರಿವರು

ಕಳೆದುಹೋದ ದಿನಗಳು – 6: ತೋಟದ ಕೂಲಿಗಳ ಕಣ್ಣೀರಿಗೆ ಮಿಡಿದ ಕೆಲ ಜನಪರ ಮಾಲೀಕರಿವರು

ಎಷ್ಟೋ ತೋಟಗಳಲ್ಲಿ ಕಾರ್ಮಿಕರನ್ನು ಕೂಡಿಹಾಕಿ ಹೊಡೆಯಲೆಂದೇ ಕೊಠಡಿಗಳಿದ್ದವು. ಮಾಲೀಕರು ಕಣ್ಸನ್ನೆ ಮಾಡಿ ಕರೆದ ಹೆಣ್ಣು ಅವರಿಗೆ ಬಲಿಯಾಗಲೇಬೇಕಿತ್ತು.

- Advertisement -
- Advertisement -

ಕಾಫಿ ತೋಟಗಳ ಬಗೆಯ ಮಾಲೀಕರುಗಳ ಬಗೆಗೆ, ಈ ಹಿಂದಿನ ಎಲ್ಲ ವಿವರಣೆಗಳನ್ನು ನೋಡುವಾಗ, ಗುಂಡುಕಟ್ಟಿ ಮಂಜುನಾಥಯ್ಯ, ಸಾಕಮ್ಮ, ಸಿ.ಎಂ.ಪೂಣಚ್ಚ, ಮಡಿಕೇರಿ ಸಿ.ವಿ ಸಹೋದರರು, ಗಣಪಯ್ಯ, ಕೃಷ್ಣಮೂರ್ತಿ, ಅಗಲಟ್ಟಿ ಎಸ್ಟೇಟ್‌ನ ರಾಮನಾಥ ಪ್ರಭು, ಹಾದಿಗೆ ಶಾಂತಪ್ಪನವರು, ಸಕಲೇಶಪುರದ ಶಾಫ್ ಸಿದ್ದೇಗೌಡ ಕುಟುಂಬದವರು, ರವೂಫ್ ಸಾಹೇಬರು ಇವರೆಲ್ಲರಿಗೂ ಹಿಂದಿನ ಬ್ರಿಟಿಷ್ ಪ್ಲಾಂಟರುಗಳಾದ ಕರ್ನಲ್ ಕ್ರಾಫರ್ಡ್, ಯಂಗ್ಸ್ ಮಿಡ್ಲಟನ್ ಹೀಗೆ ಎಲ್ಲ ಪ್ಲಾಂಟರ್‌ಗಳೂ ಜನಪರರೂ ಜನಾನುರಾಗಿಗಳೇ ಆಗಿದ್ದರೇ ಎಂಬ ಭಾವನೆ ಬರಬಹುದು. ಇವರೆಲ್ಲರೂ ಕಾಫಿನಾಡಿನ ಓಯಸಿಸ್ ನಂತವರವರು ಆ ಕಾರಣಕ್ಕಾಗಿಯೇ ಜನಮಾನಸದಲ್ಲಿ ಉಳಿದಿದ್ದಾರೆ. ಉಳಿದಂತೆ ಕಾಫಿನಾಡು ಜನಸಾಮಾನ್ಯರ ಮತ್ತು ಕೂಲಿ ಕಾರ್ಮಿಕರ ಪಾಲಿಗೆ ಶಿವರಾಮಕಾರಂತರ ಚೋಮನದುಡಿಯ ಕಾಲದ ಘಟ್ಟದ ತೋಟಗಳಾಗಿಯೇ ಮುಂದುವರೆದಿತ್ತು.

ಹೆಚ್ಚಿನ ತೋಟಗಳಲ್ಲಿ ಪಾಳೇಗಾರಿ ಸಂಸ್ಕೃತಿಯೇ ಮುಂದುವರೆದಿತ್ತು. ದಬ್ಬಾಳಿಕೆ, ಕೂಲಿಯಲ್ಲಿ ವಂಚನೆ, ಹೊಡೆತ ಹಿಂಸೆಗಳು ಮೆರೆದಿದ್ದವು. ಎಷ್ಟೋ ತೋಟಗಳಲ್ಲಿ ಕಾರ್ಮಿಕರನ್ನು ಕೂಡಿಹಾಕಿ ಹೊಡೆಯಲೆಂದೇ ಕೊಠಡಿಗಳಿದ್ದವು. ಮಾಲಿಕರು ಕಣ್ಸನ್ನೆ ಮಾಡಿ ಕರೆದ ಹೆಣ್ಣು ಅವರಿಗೆ ಬಲಿಯಾಗಲೇಬೇಕಿತ್ತು. ತೋಟಕ್ಕೆ ಬರುವಾಗ ಚಾಟಿ ಹಿಡಿದೇ ಬರುವ ಮಾಲಿಕ, ರೈಟರ್, ಮೇಸ್ತ್ರಿಗಳೂ ಇದ್ದರು. ಹೇಳಿದಷ್ಟು ಕೆಲಸ ಮಾಡದಿದ್ದರೆ ಸಂಜೆಯಾದರೂ ಬಿಡದೆ ತೋಟದಲ್ಲಿ ಗ್ಯಾಸ್ ಲೈಟ್ ಇಟ್ಟು ಕೆಲಸ ಮಾಡಿಸುವ ಧಣಿಗಳಿದ್ದರು. ಕೂಲಿ ಸಂಬಳದಲ್ಲಿ ವಂಚನೆ ಎಲ್ಲೆಡೆ ಇತ್ತು. ಸೌಲಭ್ಯಗಳ ಸುದ್ದಿಯಂತೂ ಇಲ್ಲವೇ ಇಲ್ಲ. ದನದ ಕೊಟ್ಟಿಗೆಗೂ ಕಡೆಯಾದ ವಸತಿ ಸಾಮಾನ್ಯವಾಗಿತ್ತು. ಅರೆ ಹೊಟ್ಟೆಯ ದುಡಿಮೆಯೇ ವ್ಯಾಪಕವಾಗಿತ್ತು.

ಕೂಲಿಯಾಳುಗಳ ಲೈನ್ ಮನೆಗಳು

ಆ ಕಾಲದಲ್ಲಿ ಮಾಲಿಕ ಮತ್ತು ಕೆಲಸಗಾರರ ಸಂಬಂಧಗಳನ್ನು ನಿರ್ಧರಿಸುತ್ತಿದ್ದ ಪ್ರಮುಖ ಅಂಶವೆಂದರೆ ಸಾಲ. ಕಾಯಿಲೆ, ಮದುವೆ ಅಥವಾ ಇನ್ಯಾವುದೇ ಸಂದರ್ಭಗಳಲ್ಲಿ ಕೆಲಸಗಾರರು ಸಾಲ ಪಡೆಯುತ್ತಿದ್ದರು. ಹೆಸರಿಗೆ ಇದು ಬಡ್ಡಿ ರಹಿತ ಸಾಲ. ಆದರೆ ಸಾಲ ಕೊಡುತ್ತಿದ್ದವರಲ್ಲಿ ಸಾಮಾನ್ಯವಾಗಿ ಕೂಲಿ ಮತ್ತು ಇತರ ಸೌಲಭ್ಯಗಳು ಕಡಿಮೆ ಇರುತ್ತಿದ್ದವು. ಯಾರಾದರೂ ಹೊರಗಿನವರು ಕೇಳಿದರೆ “ನಾವು ಸಾಲ ಕೊಟ್ಟಿದ್ದೇವಲ್ಲ” ಎಂದು ಮಾಲಿಕರು ಹೇಳುತ್ತಿದ್ದರು. ಒಮ್ಮೆ ಸಾಲ ಮಾಡಿದವನ ಸಾಲ ಮುಗಿಯುವುದು ಬಹಳ ಅಪರೂಪದ ವಿಷಯವಾಗಿತ್ತು. ಒಂದು ವೇಳೆ ಕೂಲಿ ಕಾರ್ಮಿಕನೊಬ್ಬ ತಾನು ಕೆಲಸ ಮಾಡುತ್ತಿದ್ದವನಿಂದ ಬಿಡುಗಡೆ ಪಡೆದು ಬೇರೆಡೆಗೆ ಹೋಗಬೇಕಾದರೆ ಸಾಲ ಬಾಕಿಯನ್ನು ತೀರಿಸಬೇಕಾಗುತ್ತಿತ್ತು. ಆತನಿಗೆ ಮಾಲಿಕ ಒಂದು ಬಾಕಿ ಚೀಟಿಯನ್ನು ಕೊಡುತ್ತಿದ್ದ. ಅದರಲ್ಲಿ ಸಾಲ ಕೊಟ್ಟ ಮಾಲಿಕನ ವಿಳಾಸ, ಮತ್ತು ಕೆಲಸಗಾರನಿಂದ ಬರಬೇಕಾದ ಬಾಕಿಯ ಲೆಕ್ಕ ಇರುತ್ತಿತ್ತು. ಕೆಲಸಗಾರ ಅದನ್ನು ಹಿಡಿದುಕೊಂಡು ಬೇರೆ ಬೇರೆ ತೋಟಗಳಿಗೆ ಸುತ್ತಿ ಈ ಬಾಕಿ ಹಣವನ್ನು ಕಟ್ಟಿ ತನ್ನನ್ನು ಕೆಲಸಕ್ಕೆ ನೇಮಿಸಿಕೊಳ್ಳುವವರನ್ನು ಹುಡುಕಬೇಕಿತ್ತು. ಅಥವಾ ಕೆಲವು ಸಲ ಮೊದಲೇ ಬೇರೆ ಧಣಿಯನ್ನು ಹುಡುಕಿ ಈ ವಿಚಾರ ನಿರ್ಧಾರವಾಗಿರುತ್ತಿತ್ತು. ನಂತರ ಸಾಲದ ಹಣವನ್ನು ಮೊದಲಿನ ಮಾಲಿಕನಿಗೆ ನೇರವಾಗಿ ಹೊಸ ಮಾಲಿಕ ಕಟ್ಟಿ ಕೆಲಸಗಾರರನ್ನು “ಬಿಡಿಸಿಕೊಂಡು” ತನ್ನಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳುತ್ತಿದ್ದ. ಇದು ಮುಂದೆ ಹಾಗೇ ಮುಂದುವರೆಯುತ್ತಿತ್ತು.

ಕೆಲಸಗಾರರರು ಸಾಲ ತೀರಿಸಲಾರದೆ ಕದ್ದು ಓಡುವುದೂ ಇತ್ತು. ಆದರೆ ಹಾಗೆ ಓಡಿದವನು ಹತ್ತಿರದಲ್ಲೆಲ್ಲೂ ಕೆಲಸ ಮಾಡುವುದು ಕಷ್ಟವಾಗುತ್ತಿತ್ತು. ಸಾಮಾನ್ಯವಾಗಿ ಹೊಸಬರನ್ನು ಕೆಲಸಕ್ಕೆ ತೆಗೆದುಕೊಳ್ಳುವಾಗ ಪ್ರತಿಯೊಬ್ಬರೂ ಸಾಲ ಇಲ್ಲದಿದ್ದರೂ ಮೊದಲಿನ ಮಾಲಿಕನಿಂದ “ಯಾವುದೇ ಬಾಕಿ ಇಲ್ಲ” ಎಂದು ಪತ್ರ ತರಬೇಕಾಗುತ್ತಿತ್ತು. ಕೆಲವು ಸಲ ದೂರ ದೂರದ ಊರುಗಳಲ್ಲಿ ಕೆಲವರು ಮಾಲಿಕರು ತಾವು ಸಾಲ ಕೊಡಬೇಕಾಗುವುದಿಲ್ಲ ಎಂದು ಇಂತವರನ್ನು ಕೆಲಸಕ್ಕೆ ತೆಗೆದುಕೊಳ್ಳುವುದಿತ್ತು. ಆಗೆಲ್ಲ ತಮ್ಮನ್ನು ಪತ್ತೆ ಮಾಡಬಾರದೆಂದು ಕೆಲಸಗಾರರು ಹೊಸ ಹೆಸರನ್ನು ಇಟ್ಟುಕೊಳ್ಳುತ್ತಿದ್ದರು.

ಇಂತವರನ್ನು ತಪ್ಪಿಸಿಕೊಂಡವರೆಂದು ಪತ್ರಿಕೆಗಳಲ್ಲಿ ಜಾಹೀರಾತು ನೀಡುವ ಪದ್ದತಿ ಸ್ವಾತಂತ್ರ್ಯ ಪೂರ್ವದಲ್ಲಿ ಅನೇಕ ಕಡೆಗಳಲ್ಲಿ ಜಾರಿಯಲ್ಲಿತ್ತು. ಪತ್ತೆಯಾದ ಕೆಲಸಗಾರರನ್ನು ಹಳೆಯ ಮಾಲಿಕ ಪೋಲಿಸರ ಇಲ್ಲವೇ ತಮ್ಮದೇ ಬಲದಿಂದ ವಾಪಸ್ ಕರೆದುಕೊಂಡು ಹೋಗುತ್ತಿದ್ದ.

ಸ್ವಾತಂತ್ರ್ಯದ ನಂತರ ಪತ್ರಿಕಾ ಜಾಹೀರಾತು ಇತ್ಯಾದಿಗಳು ನಿಂತುಹೋಗಿದ್ದರೂ, ಬಾಕಿ ಚೀಟಿ ಪದ್ಧತಿ ಬೇರೆ ಬೇರೆ ರೂಪಗಳಲ್ಲಿ ಇತ್ತೀಚಿನವರೆಗೂ ಜಾರಿಯಲ್ಲಿತ್ತು.

ಇತ್ತೀಚಿನ ವರ್ಷಗಳಲ್ಲಿ ಸಂಪೂರ್ಣವಾಗಿ ಅಲ್ಲದಿದ್ದರೂ ಬಹಳಷ್ಟು ಬದಲಾವಣೆ  ಖಂಡಿತ ಆಗಿದೆ. ಈ ಬದಲಾವಣೆಗೆ ಈ ಕಾರ್ಮಿಕ ಹೋರಾಟಗಳ ಜೊತೆಯಲ್ಲಿ ಮೇಲೆ ಹೇಳಿದಂತಹ ಹಲವಾರು ಮಹನೀಯರುಗಳು ಕೂಡಾ ಕಾರಣರಾಗಿದ್ದಾರೆ.

ಗಣಪಯ್ಯನವರ ಮಗ ರವೀಂದ್ರನಾಥರು ವೈದ್ಯವೃತ್ತಿ ಪ್ರಾರಂಭ ಮಾಡಿದ್ದು ಬೀದರ್ ನಲ್ಲಿ. ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲವಾಗುವಂತೆ ಕೆಲಸ ಮಾಡಬೇಕೆಂದು ಅವರ ಆಸೆಯಾಗಿತ್ತು. ಆದರೆ ಅವರ ವಿದ್ಯಾಭ್ಯಾಸವೆಲ್ಲ ಹರಿದ್ವಾರದ ಗುರುಕುಲದಲ್ಲಿ ಆದ್ದರಿಂದ ರವೀಂದ್ರನಾಥರಿಗೆ ಕನ್ನಡವೇ ಬಾರದು. ಆ ಕಾರಣಕ್ಕಾಗಿಯೇ ದಖ್ಖನಿ ಭಾಷೆ ಪ್ರಚಲಿತವಿರುವ ಬೀದರ್ ಜಿಲ್ಲೆಯಲ್ಲಿ ಅವರು ತಮ್ಮ ವೈದ್ಯಕೀಯ ವೃತ್ತಿಯನ್ನು ಪ್ರಾರಂಭಿಸಿದರು. ಬೀದರ್‌ನ ವಕೀಲ ಗೆಳೆಯರೊಬ್ಬರ ಮನೆಯಲ್ಲಿ ವಾಸ್ತವ್ಯ.

ಆ ವೇಳೆಗಾಗಲೇ ಗಣಪಯ್ಯ ತಮ್ಮ ಹೆಣ್ಣು ಮಕ್ಕಳಿಗೆ ಮದುವೆ ಮಾಡಿದ್ದರು.

ರವೀಂದ್ರನಾಥರು ಬೀದರ್ ಜಿಲ್ಲೆಯಲ್ಲಿ ವೈದ್ಯಕೀಯ ವೃತ್ತಿ ಪ್ರಾರಂಭಿಸಿ ಎರಡು ವರ್ಷಗಳು ಕಳೆದಿತ್ತು. ಪ್ರಾರಂಭದಲ್ಲಿ ಗಣಪಯ್ಯನವರು ಒಂದಿಷ್ಟು ಆದಾಯ ಬರುವ ತನಕ ಮನೆಯಿಂದಲೇ ಅವರಿಗೆ ಹಣಕಾಸಿನ ವ್ಯವಸ್ಥೆ ಮಾಡಿಕೊಟ್ಟಿದ್ದರು. ಆದರೆ ದಿನಕಳೆದಂತೆ ಮಗನ ಆದಾಯ ಹೆಚ್ಚುವ ಲಕ್ಷಣಗಳೇ ಕಾಣದಿದ್ದಾಗ, ಬಹುಶಃ ಅಲ್ಲಿ ಮಗನಿಗೆ ಪ್ರಾಕ್ಟೀಸ್ ಹೆಚ್ಚೇನೂ ಆಗುತ್ತಿಲ್ಲವೇನೋ ಎಂದು ಮಗನನ್ನು ನೋಡಿಕೊಂಡು ಬರಲು ಗಣಪಯ್ಯ ಬೀದರ್‌ಗೆ ಹೋದರು.

ಅಲ್ಲಿ ನೋಡಿದರೆ ಕ್ಲಿನಿಕ್‌ನ ಮುಂದೆ ಜನರ ಸಾಲೇ ನಿಂತಿತ್ತಂತೆ. ಬರುವ ರೋಗಿಗಳಲ್ಲಿ ಹೆಚ್ಚಿನವರು ತೀರ ಬಡವರು. ರವೀಂದ್ರನಾಥರು ಅವರಲ್ಲಿ ಹಣ ಕೇಳಲು ಬಾಯಿಬರದೆ, ಒಂದಷ್ಟು ಔಷಧಿಯನ್ನೂ ಸಹ ಉಚಿತವಾಗಿ ಕೊಟ್ಟು ಕಳುಹಿಸುತ್ತಿದ್ದರಂತೆ! ಇದರಿಂದ ವೈದ್ಯರ ಕೀರ್ತಿ ಹೆಚ್ಚಿ ರೋಗಿಗಳ ಸರತಿಯ ಸಾಲೇನೋ ದೊಡ್ದದಾಯಿತು. ಆದರೆ ವೈದ್ಯರೇ ಬಡವರಾಗುವ ಸ್ಥಿತಿ ಬಂತು.

ಗಣಪಯ್ಯನವರು, ಈ ಕೆಲಸವನ್ನು ನೀನು ನಮ್ಮಲ್ಲೇ ಮಾಡಬಹುದು ಬಾ ಎಂದು ಹಾರ್ಲೆಗೆ ಕರೆದುಕೊಂಡು ಬಂದರು. ಆ ವೇಳೆಗಾಗಲೇ ಈ ವೈದ್ಯರಿಗೆ ಸ್ವಲ್ಪ ಕನ್ನಡವೂ ಭಾಷೆಯೂ ಅಭ್ಯಾಸವಾಗಿರಬೇಕು.

ಹೀಗೆ ಹಾರ್ಲೆಗೆ ಬಂದ ರವೀಂದ್ರನಾಥರು ತೋಟದ ಜನಗಳಿಗೆ ಚಿಕಿತ್ಸೆ ನೀಡಲು ಪ್ರಾರಂಭಿಸಿದರು. ಆಗ ಅವರಿಗೆ ಕಣ್ಣಿಗೆ ಬಿದ್ದುದು ಕೂಲಿ ಕಾರ್ಮಿಕರ ಮಕ್ಕಳು. ಹೆಚ್ಚಿನ ಮಕ್ಕಳು ಪೋಷಕಾಂಶದ ಕೊರತೆಯಿಂದ ನರಳುತ್ತಿದ್ದು, ಹೊಟ್ಟೆ ದಪ್ಪವಾಗಿ ಕೈಕಾಲು ಸಣ್ಣದಾಗಿ ಇದ್ದವು.

ಇದಕ್ಕೆ ಪರಿಹಾರ ಹುಡುಕಿ ರವೀಂದ್ರನಾಥರು ಹೋದದ್ದು ಮೈಸೂರಿನಲ್ಲಿ ಪ್ರಾರಂಭವಾಗಿದ್ದ ಆಹಾರ ಸಂಶೋಧನಾ ಕೇಂದ್ರಕ್ಕೆ. ಅಲ್ಲಿ ಅವರು ಅತಿ ಕಡಿಮೆ ಖರ್ಚಿನಲ್ಲಿ ಅತ್ಯಂತ ಸತ್ವಭರಿತ ಆಹಾರವನ್ನು ಮಕ್ಕಳಿಗೆ ಕೊಡುವುದು ಹೇಗೆ ಎಂದು ವಿಚಾರಿಸಿದರು.

ನೆಲಗಡಲೆ ಬೀಜದೊಂದಿಗೆ ಬೆಲ್ಲವನ್ನು ಸೇರಿ ಕೊಡಿ ಅದು ಕಡಿಮೆ ಖರ್ಚಿನ ಉತ್ತಮ ಸತ್ವಭರಿತ ಆಹಾರ ಎಂದು ಅಲ್ಲಿನ ವಿಜ್ಞಾನಿಗಳು ಸಲಹೆಯಿತ್ತರು.

ವಾಪಸ್ ಬಂದ ನಂತರ ರವೀಂದ್ರನಾಥರು, ಕ್ವಿಂಟಲ್ ಗಟ್ಟಲೆ ಬೆಲ್ಲ ಮತ್ತು ಶೇಂಗಾ ಬೀಜ ತರಿಸಿ ಹುರಿದು ಬೆಲ್ಲದೊಂದಿಗೆ ಉಂಡೆಮಾಡಿ ಪ್ರತಿದಿನ ತೋಟದ ಎಲ್ಲಾ ಮಕ್ಕಳಿಗೂ ಒಂದೊಂದು ದೊಡ್ಡ ಉಂಡೆಯನ್ನು ಕೊಡುವ ವ್ಯವಸ್ಥೆ ಮಾಡಿದರು. ಒಂದು ವರ್ಷವಾಗುವಷ್ಟರಲ್ಲಿ ಎಲ್ಲ ಮಕ್ಕಳು ಆರೋಗ್ಯವಂತರಾದರು. ಈ ಕ್ರಮ ಹಲವು ವರ್ಷ ಮುಂದುವರೆಯಿತು. ಮುಂದೆ ಇವರೇ ಡೈರಿ ಫಾರಂ ಸ್ಥಾಪಿಸಿದಾಗ ಮದ್ಯಾಹ್ನ ಸಣ್ಣ ಮಕ್ಕಳಿಗೆ ಉಚಿತ ಹಾಲು ನೀಡುವ ವ್ಯವಸ್ಥೆಯೂ ಬಂತು.

ದೇಶಕ್ಕೆ ಸ್ವಾತಂತ್ರ್ಯ ಬಂದು ದಶಕ ಕಳೆದಿತ್ತು. ಆಗಲೇ ಕೆಲವರಲ್ಲಿ ದೇಶದ ಆಡಳಿತದ ಬಗ್ಗೆ ಅತೃಪ್ತಿ ಕಾಡತೊಡಗಿತ್ತು. ಇವರಲ್ಲಿಯೂ ಹಲವು ವಿಭಿನ್ನ ವಿಚಾರಧಾರೆಗಳಿದ್ದವು. ರಾಷ್ಟ್ರವಾದವನ್ನಿಟ್ಟುಕೊಂಡ ಜನಸಂಘದವರ, ನೆಹರೂ ಎಡಪಂಥೀಯ ರಾಜಕಾರಣ ಮಾಡುತ್ತಿದ್ದಾರೆ, ಇದು ರಾಷ್ಟ್ರದ ಹಿತಕ್ಕೇ ಮಾರಕ ಎನ್ನುವ ವಾದ ಒಂದು ಕಡೆಯಾದರೆ, ಎಡ – ಸಮಾಜವಾದಿ ಪಕ್ಷಗಳು ನೆಹರೂ ಮಧ್ಯಮ ಪಂಥವನ್ನು ಅನುಸರಿಸುತ್ತಿದ್ದಾರೆ ಇದರಿಂದ ಬಂಡವಾಳಶಾಹಿಗಳಿಗೆ ಅನುಕೂಲವಾಗುತ್ತಿದೆ ಎಂದು ದೂರುತ್ತಿದ್ದವು.

ಆದರೆ ನಿಧಾನವಾಗಿ ಅಧಿಕಾರ ಶಾಹಿಯ ದುರಾಡಳಿತ ಹಾಗೂ ವೇಗವಾಗಿ ತಲೆಯೆತ್ತಿ ಬೆಳೆಯುತ್ತಿದ್ದ ಭ್ರಷ್ಟಾಚಾರ ಹಲವರನ್ನು ಚಿಂತೆಗೀಡು ಮಾಡಿತ್ತು.

ಈ ಸಂದರ್ಭದಲ್ಲಿ ಹುಟ್ಟಿದ್ದು ನಿಜವಾದ ಅರ್ಥದ  ಶುದ್ಧ ಬಲಪಂಥೀಯ ಆರ್ಥಿಕ ಸಿದ್ಧಾಂತವುಳ್ಳ ರಾಜಾಜಿ, ಮಿನೂ ಮಸಾನಿ, ಪಿಲೂ ಮೋದಿ ಮುಂತಾದವರ ಸ್ವತಂತ್ರ ಪಾರ್ಟಿ. ಸಮಾಜದಲ್ಲಿ ವ್ಯಕ್ತಿಯೇ ಮುಖ್ಯ, ಪ್ರತಿಯೊಬ್ಬ ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿಯೇ ನಿಜವಾದ ಸಮಾಜದ ಅಭಿವೃದ್ಧಿ. ಅದಕ್ಕಾಗಿ ವ್ಯಕ್ತಿ ಸ್ವಾತಂತ್ರದ ಎಲ್ಲ ಅಡೆ ತಡೆಗಳನ್ನು ನಿವಾರಿಸಬೇಕು. ಲೈಸನ್ಸ್ ಪರ್ಮಿಟ್ ರಾಜ್ ಕೊನೆಯಾಗಬೇಕು, ಎಲ್ಲದರಲ್ಲಿ ಸರ್ಕಾರದ ನಿಯಂತ್ರಣ ಕನಿಷ್ಟವಾಗಬೇಕು. ಕೃಷಿಗೆ ಪ್ರಥಮ ಆಧ್ಯತೆ ನೀಡಬೇಕು. ಸಂವಿಧಾನದ ಅಡಿಯಲ್ಲೇ ಯಾವುದೇ ಜಾತಿ ಧರ್ಮಗಳಿಗೆ ಸೀಮಿತವಾಗದೆ ಉದಾರವಾದಿ ತಳಹದಿಯಲ್ಲಿ ಕೆಲಸಗಳು ನಡೆಯಬೇಕು, ಇವೆಲ್ಲ ಸ್ಥೂಲವಾಗಿ ಸ್ವತಂತ್ರ ಪಾರ್ಟಿಯ ನೀತಿಯಾಗಿದ್ದವು.

ಒಂದು ರೀತಿಯಲ್ಲಿ ಇವೆಲ್ಲವೂ ಗಾಂಧೀಜಿಯ ಟ್ರಸ್ಟಿಶಿಪ್ ಸಮಾಜವಾದದ ಕಲ್ಪನೆ ಹತ್ತಿರವಿದ್ದಂತೆ ಭಾಸವಾಗುತ್ತಿತ್ತು. ಇದರಿಂದಾಗಿ ಆಗ ಗಾಂಧಿಯವರು ಗ್ರಾಮ ಸ್ವರಾಜ್ಯದ ಸಮರ್ಥಕರು ಅನೇಕರು ಸ್ವತಂತ್ರ ಪಾರ್ಟಿಯ ಜೊತೆಗೂಡಿದರು. ಆ ಕಾಲದ ಬಲಪಂಥೀಯ ಲಿಬರಲ್ ರಾಜಕಾರಣಿಗಳಿಗೆ ಸ್ವತಂತ್ರ ಪಾರ್ಟಿ ಮೆಚ್ಚಿನದ್ದಾಯಿತು. ಅದರಿಂದಾಗಿಯೇ ಶಿವರಾಮ  ಕಾರಂತರಂತವರೂ ಇದರ ಬೆಂಬಲಿಗರಾದರು. ಸಹಜವಾಗಿಯೇ ಗಣಪಯ್ಯ ಸ್ವತಂತ್ರ ಪಾರ್ಟಿಯತ್ತ ಆಕರ್ಷಿತರಾದರು.

ಸ್ವತಂತ್ರ ಪಾರ್ಟಿ ಸೇರಿದ ನಂತರ ಗಣಪಯ್ಯ ಪಕ್ಷ ಸಂಘಟನೆಯಲ್ಲಿ ಸಂಪೂರ್ಣವಾಗಿ ತೊಡಗಿಕೊಂಡು ರಾಜಾಜಿಯವರಿಗೆ ನಿಕಟವರ್ತಿಗಳಾದರು.

  • ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ: ಕಳೆದು ಹೋದ ದಿನಗಳು -5: ಗಣಪಯ್ಯ ಎಂಬ ಅನ್ನದಾತ, ಉದ್ಯೋಗದಾತ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...