Homeಅಂಕಣಗಳುಯೆತ್ತಿನ ಹಳ್ಳ ಯೋಜನೆ 'ಎತ್ತಿನ ಹೊಳೆ'ಯಾಗಿ ಬದಲಾಗಿದ್ದು ಹೀಗೆ...

ಯೆತ್ತಿನ ಹಳ್ಳ ಯೋಜನೆ ‘ಎತ್ತಿನ ಹೊಳೆ’ಯಾಗಿ ಬದಲಾಗಿದ್ದು ಹೀಗೆ…

1975 ರಲ್ಲಿ ಸಕಲೇಶಪುರದಲ್ಲಿ ನಡೆದ ಒಂದು ಘಟನೆ ಮುಂದೆ ಎತ್ತಿನ ಹೊಳೆ ಯೋಜನೆಯೆಂಬ ಮಹಾ ಪರಿಸರ ನಾಶದ ಕಾರ್ಯಕ್ಕೆ ಬೀಜವಾಗಿಬಿಟ್ಟಿತ್ತು..

- Advertisement -
- Advertisement -

ಕಳೆದುಹೋದ ದಿನಗಳು -13

ನಾವು ಗಣಪಯ್ಯನವರ ಈ ಎಲ್ಲ ಜನಪರ ಕಾಳಜಿಯ ಕೆಲಸಗಳನ್ನು 60ರ ದಶಕದ ಮತ್ತು ಹಿಂದಿನ ಕಾಫಿತೋಟಗಳ ಪರಿಸ್ಥಿತಿಯನ್ನು ಗಮನಿಸಿ ತುಲನೆ ಮಾಡಬೇಕು.

ನಾನು ನನ್ನ ತಿಳುವಳಿಕೆ ಮತ್ತು ಅನುಕೂಲಕ್ಕೆ ತಕ್ಕಂತೆ ಅರವತ್ತರ ದಶಕವನ್ನು ಮಾನದಂಡವಾಗಿ ಇಟ್ಟುಕೊಂಡಿದ್ದೇನೆ.

ಅರವತ್ತರ ದಶಕದ ಆದಿಭಾಗದಲ್ಲಿ ಕಾಫಿ ತೋಟಗಳಲ್ಲಿ ಅಂದರೆ ದಿನಗೂಲಿ ಗಂಡಾಳಿಗೆ ಒಂದು ರುಪಾಯಿಯೂ, ಹೆಣ್ಣಾಳಿಗೆ ಎಂಬತ್ತು ಪೈಸೆಯೂ ಇತ್ತು.

ಅದರ ಹಿನ್ನೆಲೆಯಲ್ಲಿ ಇತರ ವಸ್ತುಗಳ ಬೆಲೆಗಳನ್ನು ಗಮನಿಸಿ.

ಒಂದು ಕಿಲೋ ಅಕ್ಕಿಗೆ ಎಂಬತ್ತು ಪೈಸೆ. ಹೋಟೆಲಿನಲ್ಲಿ ಒಂದು ಟೀ ಹತ್ತು ಪೈಸೆ, ಕಣ್ಣ ಟೀ ಆರು ಪೈಸೆ.

ಪುರಭವನ, ಸಕಲೇಶಪುರ

ರಕ್ಷಿದಿಯಿಂದ ಸಕಲೇಶಪುರಕ್ಕೆ ಹತ್ತು ಕಿ.ಮೀ ಗೇ ಬಸ್ ಚಾರ್ಜು ನಲುವತ್ತೈದು ಪೈಸೆ. ಹೋಗಿ ಬರಲು ತೊಂಬತ್ತು ಪೈಸೆ.

ಅಂದರೆ ಗಂಡ ಹೆಂಡತಿ ಇಬ್ಬರ ಒಂದು ದಿನದ ದುಡಿಮೆ ಎರಡು ಕಿಲೋ ಅಕ್ಕಿಗೆ ಸಮ. ಒಮ್ಮೆ ಸಕಲೇಶಪುರಕ್ಕೆ ಹೋಗಿ ಬಂದರೆ ಒಂದು ದಿನದ ಕೂಲಿಗೆ ಮುಗಿಯಿತು. ಹೀಗಾಗಿ ಬಸ್ ಹತ್ತುವವರು ಕಡಿಮೆ ಎಲ್ಲಿಗೂ ಕಾಲ್ನಡಿಗೆಯೇ. ಗಂಡಸು ಕುಡುಕನಾದರೆ ಮನೆ ಮಂದಿಗೆ ಒಂದೊತ್ತು ಊಟ ಮಾತ್ರ, ವರ್ಷದಲ್ಲಿ ನಾಲ್ಕು ತಿಂಗಳು ಹಲಸಿನ ಕಾಯಿ ಆಹಾರ.

ನಾನು ಶಾಲೆಗೆ ಹೋಗುತ್ತಿದ್ದ ಕಾಲದಲ್ಲಿ, ಪ್ರತಿ ಗುರುವಾರ ಅಪ್ಪ ತೋಟದ ಕೆಲಸಗಾರರೊಂದಿಗೆ ವಾರದ ಸಂತೆಗೆ ಸಕಲೇಶಪುರಕ್ಕೆ ನಡೆದೇ ಹೋಗುವರು. ಸಂತೆಯಲ್ಲಿ ಎಲ್ಲ ಸಾಮಾನುಗಳನ್ನು ಮೂಟೆಕಟ್ಟಿ ವಾಪಸ್ ಬರುವಾಗ ಮಾತ್ರ ಬಸ್ಸಿನಲ್ಲಿ ಬರುವರು. ಹೆಚ್ಚಿನ ಸಾಮಾನು ಇಲ್ಲದಿದ್ದರೆ ಮತ್ತೆ ನಡಿಗೆ. ಹೋಗಿ ಬರಲು ಇಪ್ಪತ್ತು ಕಿ.ಮೀ. ಎಲ್ಲರ ಕತೆಯೂ ಇದೇ. ವರ್ಷವಿಡೀ ಮದ್ಯಾಹ್ನ ಒಂದು ಹೊತ್ತು ಮಾತ್ರ ಅನ್ನ, ಮತ್ತೆರಡು ಹೊತ್ತು ಆಗ ಕಿಲೋಗೆ ನಲುವತ್ತು ಪೈಸೆಗೆ ಸಿಗುತ್ತಿದ್ದ ಅಗ್ಗದ ಜೋಳದ ತಿಂಡಿ. ನಮ್ಮ ಮನೆಯಲ್ಲೂ ಇದೇ ಊಟ.

ಆಗ ಎಲ್ಲರಿಗೂ ಇನ್ನೊಬ್ಬಳು ಅನ್ನದಾತೆಯೆಂದರೆ ವೃಕ್ಷಮಾತೆ ಹಲಸಿನ ಮರ. ನಂತರ ಇದ್ದರೆ ಸಾರಿನ ಬಾಳೆ ಕಾಯಿ.

ನಾವು ಮಕ್ಕಳಿಬ್ಬರು ಇದ್ದುದರಿಂದ ವರ್ಷಕ್ಕೆ ಎರಡು ಹಬ್ಬದ ಆಚರಣೆ ಮಾಡುತ್ತಿದ್ದರು. ಗೌರಿ ಹಬ್ಬ ಮತ್ತು ದೀಪಾವಳಿ, ಬೇರೆ ವಿಶೇಷ ಏನಿಲ್ಲ. ಗೌರಿ ಹಬ್ಬದಲ್ಲಿ ಕೊಟ್ಟೆ ಕಡಬು (ಇಡ್ಲಿ ಹಿಟ್ಟನ್ನು ಬಾಳೆ ಎಲೆ ತೊಟ್ಟೆಯಲ್ಲಿ ಬೇಯಿಸಿದ್ದು) ಒಂದು ಉದ್ದನೆಯ ಪಾಯಸ. ಗೌರಿ ಹಬ್ಬದಲ್ಲಿ, ಒಂದು ಕಡಲೆ ಹಿಟ್ಟು. ತೋಟದ ಕೆಲಸಗಾರರ ಪ್ರತಿಯೊಂದು ಮನೆಗೂ ಅವರ ಒಂದು ಹೊತ್ತು ಊಟಕ್ಕಾಗುವಷ್ಟು ಪ್ರತಿ ಮನೆಗೂ ಜನ ಲೆಕ್ಕ ಹಾಕಿ ಹಂಚುತ್ತಿದ್ದರು. ಅಮ್ಮನಿಗೆ ಅಡಿಗೆ ಮಾಡಿ ಸಾಕಾಗುವಾಗ ಅಪ್ಪನೊಡನೆ, ಪ್ರತಿವರ್ಷವೂ “ಈ ವರ್ಷಕ್ಕೆ ಮುಗ್ತು, ಇನ್ನು ನನ್ನಿಂದ ಸಾಧ್ಯ ಇಲ್ಲ ಮುಂದಿನ ಸಲ ನೀವೇ ಬೇಯಿಸಬೇಕು” ಎಂದು ತರಲೆ ತೆಗೆಯುವಳು, ಅಡಿಗೆಗೆ ಅಪ್ಪನೂ, ಅಕ್ಕನೂ ಸಹಾಯ ಮಾಡುವರು. ಊಟದಲ್ಲಿ ನಾನು ತುಂಬು ಸಹಕಾರ ನೀಡುತ್ತಿದ್ದೆ!

ಮಳೆಗಾಲದಲ್ಲಿ ಹೇಮಾವತಿ ನದಿ

ಆಗ ಅಪ್ಪ ಹೇಳಿದ್ದರು “ಅವರಿಗೆ ಯಾರಿಗೂ ತಿಂಡಿ ಮಾಡಿ ತಿನ್ನಲು ಶಕ್ತಿ ಇಲ್ಲ. ಪಾಪ ಅವರ ಮನೆ ಮಕ್ಕಳು ಆಸೆಯಿಂದ ಇರುವಾಗ ನಾನು ಇಲ್ಲಿ ಹೇಗೆ ಕೂತು ಊಟ ಮಾಡದು” ಎಂದು.

ನಮಗೆ ಅಪ್ಪನಾಗಲೀ, ಅಮ್ಮನಾಗಲೀ ಯಾರ ಮನೆಗೆ ಹೋಗಬೇಕು, ಯಾರ ಮನೆಗೆ ಹೋಗಬಾರದು ಎಂದು ಎಂದೂ ಹೇಳಿದವರೇ ಅಲ್ಲ. ಹಾಗಾಗಿ ನನಗೆ ಆರನೇ ತರಗತಿಗೆ ಬರುವವವರೆಗೆ ಅಸ್ಪೃಶ್ಯತೆ ಎನ್ನುವುದಿದೆ ಎಂದು ತಿಳಿದೇ ಇರಲಿಲ್ಲ. ಅದರ ಅನುಭವ ಸ್ವತಃ ನನಗೇ ಒಂದು ವಿಚಿತ್ರವಾದ ಸನ್ನಿವೇಶದಲ್ಲಿ ಶಾಲೆಯಲ್ಲಿ ಆಯಿತು.

ಕೂಲಿ ಕಾರ್ಮಿಕರ ಮಕ್ಕಳಲ್ಲಿ ಪೋಷಕಾಂಶದ ಕೊರತೆಗೆ ಬೇರೆ ಕಾರಣ ಬೇಕೆ. ಇದು ಎಸ್ಟೇಟುಗಳೆಂದು ಕರೆಯಲಾಗುವ ದೊಡ್ಡ ಕಾಫಿ ತೋಟಗಳ ಕತೆಯಾದರೆ ಸಣ್ಣ ಪುಟ್ಟ ತೋಟಗಳಲ್ಲಿ ಮಜೂರಿ ಇನ್ನೂ ಕಡಿಮೆಯೇ.

ಪ್ಲಾಂಟೇಷನ್ ಲೇಬರ್ ಆಕ್ಟ್ ಬಂದಿದ್ದರೂ ಜಾರಿಯಾಗುತ್ತಿದ್ದು ಕೆಲವೇ ಕೆಲವು ತೋಟಗಳಲ್ಲಿ. ಸಕಲೇಶಪುರ ಸುತ್ತಮುತ್ತಲಿನ ಕೆಲವು ಕಂಪೆನಿ ತೋಟಗಳು ಬಿಟ್ಟರೆ ಬೇರೆಲ್ಲೂ ಇದರ ಸುಳಿವೇ ಇರಲಿಲ್ಲ. ಆ ಕಾಲದಲ್ಲಿ ಹಾರ್ಲೆ ತೋಟಗಳಲ್ಲಿ ಕನಿಷ್ಟ ವೇತನ, ರಜೆ ಸೌಲಭ್ಯಗಳು, ಭವಿಷ್ಯನಿಧಿ, ಗ್ರಾಚ್ಯುಟಿ ಮುಂತಾದ ಕಾನೂನು ಬದ್ಧ ಸೌಲಭ್ಯಗಳು ಪ್ರಾರಂಭವಾದವು. ನಂತರ ಇತರ ಹಲವು ತೋಟಗಳು ಅನಿವಾರ್ಯವಾಗಿ ಇವರನ್ನು ಅನುಸರಿಸಬೇಕಾಯಿತು.

1975 ದೇವರಾಜ ಅರಸರು ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಕಾಲದಲ್ಲಿ ಸಕಲೇಶಪುರದಲ್ಲಿ ನಡೆದ ಒಂದು ಘಟನೆ ಮುಂದೆ ಎತ್ತಿನ ಹೊಳೆ ಯೋಜನೆಯೆಂಬ ಮಹಾ ಪರಿಸರ ನಾಶದ ಕಾರ್ಯಕ್ಕೆ ಬೀಜವಾಗಿಬಿಟ್ಟಿತ್ತು ಎನ್ನುವುದು ತುಂಬ ಜನರಿಗೆ ತಿಳಿದಿರಲಾರದು.

ಆಗ ಜೆ.ಡಿ. ಸೋಮಪ್ಪನವರು ಸಕಲೇಶಪುರದ ಪುರಸಭಾಧ್ಯಕ್ಷರು, ಅವರು ಕಾಂಗ್ರೆಸ್ ಪಕ್ಷದವರು, ಮುಂದೆ ಎರಡು ಬಾರಿ ಶಾಸಕರೂ ಆದರು. ಜೆ.ಡಿ.ಸೋಮಪ್ಪನವರಿಗೆ ಹಾರ್ಲೆಯ ಪಕ್ಕದಲ್ಲೇ ತೋಟವಿದ್ದು ಗಣಪಯ್ಯನವರ ನೆರೆಯವರಾಗಿದ್ದರು.

ಎತ್ತಿನ ಹಳ್ಳ. ಇಂದು

ಸಕಲೇಶಪುರ ನಗರಕ್ಕೆ ಪಕ್ಕದಲ್ಲೇ ಹರಿಯುವ ಹೇಮಾವತಿ ನದಿ ನೀರು ಸರಬರಾಜಾಗುವುದು. ಅಂದಿಗೂ ಅದೇ ನೀರು. ಇಂದೂ ಅದೇ ನೀರು. ಇಂದು ಚಂಪಕ ನಗರವೆಂದು ಕರೆಯಲಾಗುವ ದಿಬ್ಬದ ಮೇಲೆ ನೀರು ಸಂಸ್ಕರಣ ಕೇಂದ್ರ, ಆ ಕಾಲದಲ್ಲಿ ಈ ಪ್ರದೇಶಕ್ಕೆ ‘ನೀರುಗೋಡು ಬಾರೆ’ ಎಂದೇ ಹೆಸರು. ಹೇಮಾವತಿ ನೀರು ಈಗಿನಷ್ಟು ಕೆಟ್ಟಿರಲಿಲ್ಲ. ಹೇಮಾವತಿ ಮಳೆಗಾಲದಲ್ಲಿ ಮಳೆಗಾಲದಲ್ಲಿ ಉಕ್ಕಿ ಹರಿಯುವ ನದಿ ಸುಮಾರು ಮೂರು ತಿಂಗಳು ಕಲಕು ನೀರು. ಇದರಿಂದಾಗಿ ನಗರಕ್ಕೆ ನೀರು ಸರಬರಾಜಿಗೆ ತೊಂದರೆಯಾಗುತ್ತಿತ್ತು. ತುಂಬಾ ಕಲಕು ನೀರು ಬರುತ್ತಿದ್ದುದರಿಂದ ಸಂಸ್ಕರಣಾ ಘಟಕ ಪದೇ ಪದೇ ಕೆಟ್ಟು ನಿರ್ವಹಣೆ ಕಷ್ಟವಾಗುತ್ತಿತ್ತು.

ಇದಕ್ಕೆ ಪರಿಹಾರವನ್ನು ಹುಡುಕಲು ಜೆ.ಡಿ.ಸೋಮಪ್ಪನವರು ಸಾರ್ವಜನಿಕರ ಸಭೆಯೊಂದನ್ನು ಕರೆದರು. ಆ ಸಭೆಯಲ್ಲಿ ಸಹಜವಾಗಿಯೇ ಹಾರ್ಲೆ ಗಣಪಯ್ಯ, ದೇವರಾಜ ಅರಸರ ಆತ್ಮೀಯರೂ ಆಗಿದ್ದ ಸಕಲೇಶಪುರದ ಇನ್ನೊಬ್ಬ ಕಾಂಗ್ರೆಸ್ ನಾಯಕ ಅನ್ವರ್ ಸಾಬರೆಂದೇ ಖ್ಯಾತರಾಗಿದ್ದ ಸೈಯದ್ ಹಫೀಝ್ ಇದ್ದರು. ಇನ್ನೂ ಅನೇಕ ಗಣ್ಯರು ಭಾಗವಸಿದ್ದರು.

ಹೇಮಾವತಿ ನೀರಿನ ಜೊತೆಗೇ ಬೇರೆ ಬದಲಿ ನೀರಿನ ಮೂಲಗಳೇನಾದರೂ ಇದೆಯೇ ಎಂಬ ಚರ್ಚೆ ನಡೆಯುತ್ತಿತ್ತು ಅದು ಮಳೆಗಾಲದಲ್ಲೂ ಶುದ್ಧನೀರು ದೊರೆಯುವಂತಿರಬೇಕಿತ್ತು.

ಆಗ ಗಣಪಯ್ಯನವರು ಒಂದು ಸಲಹೆ ನೀಡಿದರು. ಹಾರ್ಲೆಯ ಪಕ್ಕದಲ್ಲೇ ಯೆತ್ನಳ್ಳ ಹರಿಯುತ್ತಿದೆ. ಅಲ್ಲಿ ಸಣ್ಣ ಕಟ್ಟೆಯೊಂದನ್ನು ಕಟ್ಟಿ, ಅಲ್ಲಿಂದ  ಸಕಲೇಶಪುರ ನಗರದ ವರೆಗೆ ಸುಮಾರು ಆರು ಕಿ.ಮೀ ದೂರ ಬರಿಯ ಪೈಪ್ ಲೈನ್ ಹಾಕಿದರೆ ಸಾಕು ಸಕಲೇಶಪುರಕ್ಕೆ ಗ್ರಾವಿಟಿಯಲ್ಲೇ ನೀರು ಬಂದು ಬೀಳುತ್ತದೆ ಎಂದು. ಯೆತ್ನಳ್ಳದ ಹರಿವಿನ ಪ್ರದೇಶದಲ್ಲಿ ಆಗ ಜನವಸತಿ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆಯಿದ್ದು. ಹರಿವಿನುದ್ದಕ್ಕೂ ಎರಡೂ ಕಡೆಗಳಲ್ಲಿ ವಾಟೆ ಮೆಳೆಗಳಿಂದ ತುಂಬಿ ಇಡೀ ವರ್ಷ ನೀರು ತಂಪಾಗಿ ಕನ್ನಡಿಯಷ್ಟು ಶುಭ್ರವಾಗಿ ಹರಿಯುತ್ತಿತ್ತು. ಗಣಪಯ್ಯ ಇದಕ್ಕಾಗಿ ಸಣ್ಣ ಕಟ್ಟೆ ಕಟ್ಟಲು ಸೂಚಿಸಿದ ಸ್ಥಳ  ಹಾರ್ಲೆ ಎಸ್ಟೇಟ್ ಮತ್ತು ರಕ್ಷಿದಿ ಎಸ್ಟೇಟ್‌ಗಳ ಗಡಿಯಲ್ಲಿದ್ದು. ಅಲ್ಲಿಗೆ ಯೆತ್ನಳ್ಳದ ಜೊತೆಗೆ ಅಂತದ್ದೇ ಆದ ಇನ್ನೊಂದು ತೊರೆ, ಅಬ್ಬಿ ಹಳ್ಳವೂ ಬಂದು ಸೇರುತ್ತಿತ್ತು. ಈ ಸ್ಥಳದಿಂದ ಕೆಳಗೆ ಗಣಪಯ್ಯನವರ ಮತ್ತು ಒಂದಿಬ್ಬರ ತೋಟಗಳು ಬಿಟ್ಟರೆ ಬೇರೆ ಯಾವ ತೋಟಗಳೂ ಆಗ ಇರಲಿಲ್ಲ.

ಈ ಸ್ಥಳ ಜೆ.ಡಿ. ಸೋಮಪ್ಪನವರ ತೋಟದಿಂದ ಅನತಿ ದೂರದಲ್ಲೇ ಇದ್ದು ಅವರಿಗೂ ಪರಿಚಿತ ಸ್ಥಳವಾಗಿತ್ತು.

ಇದೆಲ್ಲ ಕಾರಣಗಳಿಂದ  ಗಣಪಯ್ಯನವರ ಸಲಹೆ ಅಂದು ಸರ್ವ ಸಮ್ಮತಿ ಪಡೆಯಿತು. ನಂತರ ಅದು ಒಂದು ಯೋಜನೆಯ ರೂಪು ಪಡೆದು ಪುರಸಭೆಯ ಮೂಲಕ ಸರ್ಕಾರಕ್ಕೆ ತಲುಪಿತು.

ಅಬ್ಬಿ ಹಳ್ಳ

ಆಗ ಹಾಸನ ಜಿಲ್ಲೆಯ ಹೆಚ್.ಸಿ.ಶ್ರೀಕಂಠಯ್ಯನವರು ಅರಸು ಸಂಪುಟದಲ್ಲಿ ಸಚಿವರು. ಈ ಯೋಜನೆ ಅವರೂ ಸೇರಿದಂತೆ ಬಯಲು ಸೀಮೆಯ ಹಲವು ರಾಜಕಾರಣಿಗಳಲ್ಲಿ ಬೇರೆ ನಾನಾ ತರದ ಯೋಚನೆ ಮತ್ತು ಯೋಜನೆಗಳನ್ನು ಹುಟ್ಟುಹಾಕಿತು.

ಕೆಲವೇ ಸಮಯದಲ್ಲಿ, ಪತ್ರಿಕೆಗಳಲ್ಲಿ “ಹೇಗೂ ಸುಮ್ಮನೆ ಅರಬ್ಬೀ ಸಮುದ್ರ ಸೇರುವ ಯೆತ್ನಳ್ಳವನ್ನು ತಿರುಗಿಸಿ ಹೇಮಾವತಿಗೆ ಸೇರಿಸುವ” ಮಾತು ಕೇಳಿಬರತೊಡಗಿತು. ನಂತರ ಅದನ್ನು ಮಾಡುತ್ತೇವೆಂದು ಸಚಿವರು ಹೇಳಿಕೆಯನ್ನೂ ಕೊಟ್ಟರು.

ಆಗ ಗಣಪಯ್ಯ ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿದರು. ಸಕಲೇಶಪುರದ ಕುಡಿಯುವ ನೀರಿನ ಯೋಜನೆಗೆ ನಾವು ಯಾರೂ ಅಡ್ಡಿ ಮಾಡುವುದಿಲ್ಲ ಅದರೆ ನದಿ ತಿರುವು ಯೋಜನೆಗೆ ನನ್ನ ಸಂಪೂರ್ಣ ವಿರೋಧವಿದೆ ಎಂದರು.

ಆಗ ಕೆಲವರು, ಮೊದಲು ತಾವೇ ಹೇಳಿ ಒಪ್ಪಿಸಿದ ಗಣಪಯ್ಯ, ಈಗ ತಮ್ಮ ತೋಟ ಮುಳುಗುತ್ತದೆಂದು ವಿರೋಧಮಾಡುತ್ತಿದ್ದಾರೆ ಎಂದು ದೂರಿದರು. ವಾಸ್ತವದಲ್ಲಿ ಹೊಸ ಯೋಜನೆಯಂತೆ ಬರಿಯ ಯೆತ್ನಳ್ಳ ತಿರುವು ಯೋಜನೆ ಮಾತ್ರ ಮಾಡಿದ್ದರೆ ಗಣಪಯ್ಯನವರ ತೋಟ ಹೆಚ್ಚೆಂದರೆ ಹಳ್ಳದ ಬದಿಯಲ್ಲಿ ಮೂರು ನಾಲ್ಕು ಎಕರೆ ಮಾತ್ರ ಮುಳುಗುತ್ತಿತ್ತು. ಪಕ್ಕದ ರಕ್ಷಿದಿ ಎಸ್ಟೇಟ್‌ನ ಒಂದು ಭಾಗದಲ್ಲಿ ಸುಮಾರು ನಲುವತ್ತು ಎಕರೆಗಳಷ್ಟು ಮುಳುಗುವ ಸಂಭವ ಇತ್ತು. ಆದರೆ ನದಿಯನ್ನು ತಿರುಗಿಸುವ ಯೋಜನೆಗೇ ಅವರು ವಿರುದ್ಧವಾಗಿದ್ದರು.

ಆದರೆ ಈ ಯೋಜನೆಗೆ ತಾಂತ್ರಿಕ ಅಡಚಣೆ ಬಂದು ಅದು ಮುಂದುವರಿಯಲಿಲ್ಲ. ಯಾಕೆಂದರೆ ಯೆತ್ನಳ್ಳದ ನೀರನ್ನು ಹೇಮಾವತಿಗೆ ಸೇರಿಸಿದರೆ ಅದು ಮುಂದೆ ಕಾವೇರಿ ನೀರಾಗಿ ಕಾನೂನಾತ್ಮಕವಾಗಿಯೇ, ತಮಿಳುನಾಡಿಗೂ ಅದರಲ್ಲಿ ಪಾಲು ಕೊಡಬೇಕಾಗುತ್ತದೆ ಎಂದು ಅರಿವಾದ್ದರಿಂದ ಅದನ್ನು ಅಂದಿಗೆ ಕೈಬಿಟ್ಟರು.

ಆದರೆ ಹಲವರು ರಾಜಕಾರಣಿಗಳು ಇದರಿಂದ ತಮ್ಮ ರಾಜಕೀಯ ಲಾಭಗಳನ್ನು ಕಂಡುಕೊಂಡದ್ದರಿಂದ ಮುಂದೆ ಎಲ್ಲ ತಾಂತ್ರಿಕ ಅಡಚಣೆಗಳನ್ನು ನಿವಾರಿಸಿಕೊಂಡು ನೀರನ್ನು ಹೇಮಾವತಿಗೆ ಸುರಿಯದೆ ಕೊಳವೆಗಳ ಮೂಲಕ ನೇರವಾಗಿ ಬಯಲು ಸೀಮೆಗೆ ಹರಿಸುವ ಯೋಜನೆ ತಯಾರಾಯಿತು. ವೀರಪ್ಪ ಮೊಯಿಲಿಯವರ ಕಾಲದಲ್ಲಿ ಯೆತ್ನಳ್ಳದ ಬದಲಿಗೆ ನೇತ್ರಾವತಿಯನ್ನೇ ತಿರುಗಿಸುವ ಯೋಜನೆ ಹುಟ್ಟಿತು. ಅದಕ್ಕೆ ದೊಡ್ಡ ಪ್ರಮಾಣದಲ್ಲಿ ವಿರೋಧ ಬರುತ್ತಿರುವುದನ್ನು ಕಂಡು ಯೆತ್ತಿನ ಹಳ್ಳಕ್ಕೆ “ಎತ್ತಿನ ಹೊಳೆ” ನಾಮಕರಣ ಮಾಡಿ ಯೋಜನೆಯನ್ನು ಪ್ರಾರಂಭಿಸಿದರು. ಯಾಕೆಂದರೆ ಹಳ್ಳ ಎಂದರೆ ಸಣ್ಣದು. ಇದರಿಂದ ನೀರು ಕೊಡುತ್ತೇವೆಂದರೆ ಬಯಲು ನಾಡಿನ ಜನರು ನಂಬುವ ಸಾಧ್ಯತೆ ಕಡಿಮೆ. ಅದಕ್ಕಾಗಿ ಹಳ್ಳ ಹೊಳೆಯಾಯಿತು. ಮುಂದಿನ ಘಟನೆಗಳ ವಿವರಗಳು ನಮ್ಮ ಕಣ್ಣಮುಂದೆಯೇ ಇದೆ.

  • ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ: ಕಳೆದು ಹೋದ ದಿನಗಳು  -8: ಕರ್ನಾಟಕದಲ್ಲಿ ಸ್ವತಂತ್ರ ಪಾರ್ಟಿ ಕಟ್ಟಿ ಬೆಳೆಸಿದ್ದ ಗಣಪಯ್ಯನವರು..

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚರ್ಚ್‌ಗಳಲ್ಲಿ ‘ದಿ ಕೇರಳ ಸ್ಟೋರಿ’ ಪ್ರದರ್ಶನ: ಕೋಮು ಅಜೆಂಡಾ ಬಗ್ಗೆ ಎಚ್ಚರಿಸಿದ ತಲಶ್ಶೇರಿ ಬಿಷಪ್

0
ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಕೇರಳದ ಕೆಲ ಚರ್ಚ್‌ಗಳಲ್ಲಿ ವಿವಾದಿತ 'ದಿ ಕೇರಳ ಸ್ಟೋರಿ' ಸಿನಿಮಾ ಪ್ರದರ್ಶನ ಮಾಡಲಾಗಿತ್ತು. ಮುಸ್ಲಿಮರ ಬಗ್ಗೆ ಸುಳ್ಳು ಪ್ರತಿಪಾದಿತ ಈ ಸಿನಿಮಾ ಪ್ರದರ್ಶನದ ಮೂಲಕ ಮುಸ್ಲಿಮರ ಬಗ್ಗೆ ಕ್ರಿಶ್ಚಿಯನ್ನರಲ್ಲಿ...