Homeಅಂಕಣಗಳುಗೌರಿ ಕಾರ್ನರ್: ಪ್ರಜಾತಂತ್ರಕ್ಕಾಗಿ ಬೀದಿಗಿಳಿದ ಧರ್ಮ

ಗೌರಿ ಕಾರ್ನರ್: ಪ್ರಜಾತಂತ್ರಕ್ಕಾಗಿ ಬೀದಿಗಿಳಿದ ಧರ್ಮ

- Advertisement -
- Advertisement -

ನೆರೆಯ ಮ್ಯಾನ್ಮಾರ್ (ಬರ್ಮಾ) ದೇಶದಲ್ಲಿ ಯಾವುದೇ ಅಧಿಕಾರದ ದಾಹವಿಲ್ಲದೆ, ಲಾಭ-ಲೋಭದ ಆಶಯವಿಲ್ಲದೆ, ಕಿಂಚಿತ್ತೂ ಸ್ವಾರ್ಥವಿಲ್ಲದೆ ಲಕ್ಷಾಂತರ ಬೌದ್ಧ ಬಿಕ್ಕುಗಳು ಜನಪರವಾಗಿ ಪ್ರತಿಭಟಿಸುತ್ತಿದ್ದಾರೆ. ತಮ್ಮ ದೇಶದ ಜನರ ಆರ್ಥಿಕ ಬಿಕ್ಕಟ್ಟಿಗೆ ಪ್ರಜಾತಂತ್ರದ ದಮನಕ್ಕೆ ಕಾರಣವಾಗಿರುವ ’ಜನವೈರಿ’ ಮಿಲಿಟರಿ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವವರೆಗೂ ತಮ್ಮ ಹೋರಾಟವನ್ನು ಕೈಬಿಡುವುದಿಲ್ಲ ಎಂದು ಪಣ ತೊಟ್ಟಿದ್ದಾರೆ. ಅಷ್ಟೇ ಅಲ್ಲ, ಹೀಗೆ ಜನಪರವಾಗಿ ನಿಲ್ಲುವುದು ತಮ್ಮ ಧಾರ್ಮಿಕ ಕರ್ತವ್ಯ ಎಂದು ಭಾವಿಸಿದ್ದಾರೆ.

ನಮ್ಮ ದೇಶದಲ್ಲಿನ ರಾಮಭಕ್ತರಿಗೂ, ಮ್ಯಾನ್ಮಾರ್‌ನಲ್ಲಿರುವ ಬೌದ್ಧ ಧರ್ಮದ ಬಿಕ್ಕುಗಳಿಗೂ ಎಷ್ಟು ವ್ಯತ್ಯಾಸವಿದೆಯಲ್ಲವೇ? ಇಲ್ಲಿ ಸ್ವಾರ್ಥಕ್ಕಾಗಿ ರಾಮ, ಅಲ್ಲಿ ಜನರಿಗಾಗಿ ಧರ್ಮ. ಇದಕ್ಕೆ ಕಾರಣವಿದೆ. ಬಹಳಷ್ಟು ಧರ್ಮಗಳಲ್ಲಿ ಅನುಷ್ಠಾನದಲ್ಲಿದಿದ್ದರೂ ಆಶಯದಲ್ಲಾದರೂ ಮಾನವೀಯತೆಗೆ ಪ್ರಧಾನ ಸ್ಥಾನವಿದೆ. ಆದರೆ ’ಹಿಂದೂ’ ಎಂಬುದು ಒಂದು ಧರ್ಮವೇ ಅಲ್ಲದಿರುವುದರಿಂದ, ತಾರತಮ್ಯ ವ್ಯವಸ್ಥೆ ಅದಾಗಿರುವುದರಿಂದ ಅದರಿಂದ ಜನಪರವಾದ ನಿಲುವನ್ನಾಗಲಿ, ಮಾನವೀಯ ಕಾಳಜಿಯನ್ನಾಗಲೀ ನಿರೀಕ್ಷಿಸುವುದು ತಪ್ಪು.

ಜನರ ಹಿತಕ್ಕಾಗಿಯೇ ಧಾರ್ಮಿಕ ಗುರುಗಳು ಆಡಳಿತಾರೂಢ ಸರಕಾರಗಳ ವಿರುದ್ಧ ಪ್ರತಿಭಟನೆಗಿಳಿದಿರುವುದು ಇದೇ ಮೊದಲಲ್ಲ. ದಕ್ಷಿಣ ಆಫ್ರಿಕಾದಲ್ಲಿ ಧಾರ್ಮಿಕ ಗುರು ಡೆಸ್ಮೆಂಟ್ ಟುಟು, ಥೈಲ್ಯಾಂಡ್‌ನಲ್ಲಿ ಕಾರ್ಡಿನಲ್ ಸಿನ್, ದಕ್ಷಿಣ ಅಮೆರಿಕಾ ಖಂಡದಲ್ಲಿ ಹಲವಾರು ಹೋರಾಟಗಳಲ್ಲಿ ಫಾದರ್‌ಗಳು ಭಾಗವಹಿಸಿದ್ದಾರೆ. ಈಗ ಮ್ಯಾನ್ಮಾರ್‌ನ ಬೌದ್ಧ ಬಿಕ್ಕುಗಳ ಸರದಿಯಷ್ಟೇ. ಅಂದಹಾಗೆ ಅಲ್ಲಿ ಪ್ರಸ್ತುತ ಹೋರಾಟಕ್ಕೆ ಕಾರಣವಾಗಿದ್ದು ಯಾವ ಹೊಸ ಕಾನೂನೂ ಅಲ್ಲ. ಅಧಿಕಾರ ಹಿಡಿದಿರುವ ಸೈನ್ಯಾಧಿಕಾರಿಗಳ ಕೂಟದ ದೌರ್ಜನ್ಯವೂ ಅಲ್ಲ, ಬದಲಾಗಿ ಅಲ್ಲಿನ ಸರಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸಿದ್ದು ಮತ್ತು ಈ ಕ್ರಿಯೆಯಿಂದಾಗಿ ಬಸ್ ದರಗಳಿಂದ ಹಿಡಿದು ಎಲ್ಲಾ ಆಗತ್ಯವಸ್ತುಗಳ ಬೆಲೆಗಳು ಗಗನಕ್ಕೇರಿದ್ದು.

ಆಗಲೇ ಬಡತನದಲ್ಲಿ ಬೆಂದು ಬಸವಳಿದಿರುವ ಜನ ಈ ಬೆಲೆ ಏರಿಕೆಯಿಂದ ಕಂಗಾಲಾದರು. ಸೈನ್ಯಾಧಿಕಾರಿಗಳ ದಮನಕಾರಿ ಧೋರಣೆ ಗೊತ್ತಿದ್ದರೂ ಹಲವರು ಧೈರ್ಯ ಮಾಡಿ ಪ್ರತಿಭಟಿಸಿದರು. ಅವರೊಂದಿಗೆ ಕೆಲ ಬಿಕ್ಕುಗಳೂ ಕೈಜೋಡಿಸಿದರು. ಆದರೆ ಕಳೆದ 17 ವರ್ಷಗಳಿಂದ ಜನಸಾಮಾನ್ಯರು ತುಟಿಪಿಟಿಕ್ ಎನ್ನದಂತೆ ನೋಡಿಕೊಂಡಿರುವ ಸೈನ್ಯಾಧಿಕಾರಿಗಳಿಗೆ ಇದನ್ನು ಸಹಿಸಲಾಗಲಿಲ್ಲ. ಕೂಡಲೇ ಪ್ರತಿಭಟನಾಕಾರರನ್ನು ಮಟ್ಟ ಹಾಕಿದರಲ್ಲದೆ ಅವರೊಂದಿಗೆ ದನಿಗೂಡಿಸಿದ್ದ ಬಿಕ್ಕುಗಳನ್ನು ರಸ್ತೆ ಬದಿಯ ಕಂಬಗಳಿಗೆ ನಾಯಿಗಳನ್ನು ಕಟ್ಟಿಹಾಕುವಂತೆ ಬಿಗಿದು ಥಳಿಸಿದರು.

ಸೈನ್ಯದ ಈ ಕ್ರಮವನ್ನು ವಿರೋಧಿಸಲೆಂದು ಹಲವು ಬಿಕ್ಕುಗಳು ಕೆಲ ಸರಕಾರಿ ನೌಕರರನ್ನು ತಮ್ಮ ಮಠದಲ್ಲಿ ಬಂಧಿಸಿದರು; ಸರಕಾರ ಕ್ಷಮೆ ಕೇಳಿದರೆ ಮಾತ್ರ ಅವರನ್ನು ಬಿಡುಗಡೆಗೊಳಿಸುವುದಾಗಿ ಹೇಳಿದರು. ಬಿಕ್ಕುಗಳು ಸರಕಾರಕ್ಕೆ ನೀಡಿದ್ದ ಕಾಲಾವಧಿ ಅಂತ್ಯಗೊಂಡರೂ ಸರಕಾರ ಕ್ಷಮೆಯಾಚಿಸಲಿಲ್ಲ. ತಮ್ಮ ತೋಳ್ಪಲದ ಮುಂದೆ ಕೆಲ ಬಿಕ್ಕುಗಳದ್ದೇನೂ ನಡೆಯುವುದಿಲ್ಲ ಎಂಬ ಧೋರಣೆ ಅಧಿಕಾರದಲ್ಲಿರುವವರದಾಗಿತ್ತು. ಕೊನೆಗೆ ಅಪಹರಣಕ್ಕೊಳಗಾಗಿದ್ದವರನ್ನು ಬಿಕ್ಕುಗಳು ಬಿಡುಗಡೆ ಮಾಡಿದರು. ಆದರೆ ಜನಪರವಾದ ಹೋರಾಟವನ್ನು ಮುಂದುವರಿಸಬೇಕೆಂಬ ಅವರ ನಿರ್ಧಾರ ಇನ್ನೂ ಗಟ್ಟಿಯಾಗಿತ್ತು.

ಮಾರನೆ ದಿನದಿಂದ ನೂರಾರು, ಸಾವಿರಾರು ಬಿಕ್ಕುಗಳು ಬೀದಿಗಿಳಿದು ಪ್ರತಿಭಟಿಸಲಾರಂಭಿಸಿದ್ದಲ್ಲದೆ, ಸೈನ್ಯದಲ್ಲಿರುವವರಿಗೆ ಮತ್ತು ಅವರ ಕುಟುಂಬಗಳಿಗೆ ಧಾರ್ಮಿಕ ಸಂಸ್ಕಾರಗಳನ್ನು ನಿರಾಕರಿಸಿದರು. ಅವರೆಲ್ಲರಿಂದ ಭಿಕ್ಷೆಯನ್ನು ಸ್ವೀಕರಿಸುವುದಿಲ್ಲ ಎಂದು ಘೋಷಿಸಿದರು. ಬೌದ್ಧ ಧರ್ಮಿಯರೇ ಹೆಚ್ಚಿನ ಸಂಖ್ಯೆಯಲ್ಲಿರುವ ಮ್ಯಾನ್ಮಾರ್‌ನಲ್ಲಿ ಬಿಕ್ಕುಗಳಿಗೆ ಭಿಕ್ಷೆ ನೀಡುವುದು ಒಂದು ಶ್ರದ್ಧೆ ಮತ್ತು ದೈನಂದಿನ ಕರ್ತವ್ಯ. ಅಂತಹ ಸನ್ನಿವೇಶದಲ್ಲಿ ಸೈನ್ಯದಲ್ಲಿರುವವರಿಂದ ಭಿಕ್ಷೆ ಸ್ವೀಕರಿಸುವುದಿಲ್ಲ, ಅವರಿಗೆ ಧಾರ್ಮಿಕ ಸಂಸ್ಕಾರಗಳನ್ನು ನೀಡುವುದಿಲ್ಲ ಎಂದು ಹೇಳುವುದೆಂದರೆ ಅದು ಸಾಮಾಜಿಕ ಬಹಿಷ್ಕಾರಕ್ಕೆ ಸಮ.

ಈ ಸೂಕ್ಷ್ಮತೆಯನ್ನರಿತ ಜನಸಾಮಾನ್ಯರು ಬಿಕ್ಕುಗಳ ಹೋರಾಟದೊಂದಿಗೆ ಸ್ಪಂದಿಸಲಾರಂಭಿಸಿದರು. ಮೊದಮೊದಲು ಮೆರವಣಿಗೆಯಲ್ಲಿ ಸಾಗುತ್ತಿದ್ದ ಬಿಕ್ಕುಗಳ ಮೇಲೆ ಪೊಲೀಸರಾಗಲಿ, ಸೈನ್ಯದವರಾಗಲಿ ದಾಳಿ ನಡೆಸದಂತೆ ಮಾನವ ಸರಪಳಿಯನ್ನು ನಿರ್ಮಿಸಿದ ಜನರು ದಿನಗಳು ಕಳೆದಂತೆ ಅಪಾರ ಸಂಖ್ಯೆಯಲ್ಲಿ ಬಿಕ್ಕುಗಳ ಪ್ರತಿಭಟನೆಗಳಲ್ಲಿ ಭಾಗವಹಿಸಲಾರಂಭಿಸಿದರು.

ಆಂಗ್ ಸ್ಯಾನ್ ಸೂಕಿ

ಕಳೆದ ವಾರ ಬಿಕ್ಕುಗಳ ಹೋರಾಟಕ್ಕೆ ಒಂದು ರಾಜಕೀಯ ತಿರುವೂ ಸಿಕ್ಕಿತು. ಕಳೆದ ಎರಡು ದಶಕಗಳಿಂದ ಮ್ಯಾನ್ಮಾರ್‌ನಲ್ಲಿ ಪ್ರಜಾತಂತ್ರ ವ್ಯವಸ್ಥೆ ಬರಲೆಂದು ಹೋರಾಡುತ್ತಿರುವ, ಆದ್ದರಿಂದಲೇ 12 ವರ್ಷಗಳಿಂದ ಗೃಹಬಂಧನದಲ್ಲಿರುವ ಆಂಗ್ ಸ್ಯಾನ್ ಸೂಕಿಯವರ ಮನೆ ಮುಂದೆ ವಿಧಿಸಿರುವ ನಿರ್ಬಂಧಗಳನ್ನು ಮುರಿದು ಪ್ರತಿಭಟನಾನಿರತ ಹಲವರು ಮೆರವಣಿಗೆಯಲ್ಲಿ ಸಾಗಿದರು. ಅವರನ್ನು ಕಂಡು ಹೊರಬಂದ ಸೂಕಿಯವರು ಕೆಲಕ್ಷಣ ಗೇಟ್ ಹತ್ತಿರ ನಿಂತರು. ಬೌದ್ಧ ಧರ್ಮದ ವಾಕ್ಯಗಳನ್ನು ಪಠಿಸುತ್ತಾ ಸಾಗುತ್ತಿದ್ದ ಜನರನ್ನು ಕಂಡು ಸೂಕಿ ಕಣ್ಣೀರಿಟ್ಟರು.

ಆಕೆಯ ಕಣ್ಣೀರಿನಲ್ಲಿ ಮ್ಯಾನ್ಮಾರ್ ಜನರ ಸಂಕಷ್ಟಗಳು, ಹೋರಾಟದ ಛಲ. ಎಲ್ಲವೂ ಬೆರೆತಿದ್ದವು.
ಇವತ್ತು ಜಗತ್ತಿನಾದ್ಯಂತ ಎಲ್ಲಿ ಪ್ರಜಾತಾಂತ್ರಿಕವಾದಿಗಳ ಗಮನ ಮ್ಯಾನ್ಮಾರ್ ಮೇಲಿರುವಾಗ, ಆ ದೇಶದ ಸಾಕ್ಷಿಪ್ರಜ್ಞೆಯಂತಿರುವ ನಾಯಕಿ ಸೂಕಿ ಮಾತ್ರ ಇನ್ನೂ ಗೃಹಬಂಧನದಲ್ಲಿದ್ದಾರೆ. ಈಕೆಗೆ ನೊಬೆಲ್ ಶಾಂತಿ ಪ್ರಶಸ್ತಿ ದೊರಕಿದಾಗ ಅಪ್ಪ ಬರೆದಿದ್ದ ಲೇಖನವನ್ನು ಯಾರೂ ಮರೆತಿಲ್ಲ. ಆ ಲೇಖನಕ್ಕಿಂತಲೂ ಆಕೆಯ ವ್ಯಕ್ತಿತ್ವದ ಬಗ್ಗೆ, ಆಕೆಯ ಹೋರಾಟದ ಬಗ್ಗೆ ಹೇಳಲು ಹೆಚ್ಚೇನಿಲ್ಲ, ಆದರೂ ಹಲವು ಅಂಶಗಳನ್ನು ಇಲ್ಲಿ ದಾಖಲಿಸಬಹುದು.

ಸೂಕಿ ತನ್ನ ಲೇಖನವೊಂದನ್ನು ಪ್ರಾರಂಭಿಸುವುದು ಈ ಮಾತುಗಳೊಂದಿಗೆ; “ಅಧಿಕಾರಕ್ಕಿಂತಲೂ ಜನರನ್ನು ಭ್ರಷ್ಟಗೊಳಿಸುವುದು ಭೀತಿ”. ಈ ಮಾತುಗಳನ್ನು ಆಕೆ ಮ್ಯಾನ್ಮಾರ್‌ನ ಸರ್ವಾಧಿಕಾರಿಗಳನ್ನು ಉದ್ದೇಶಿಸಿ ಹೇಳಿದ್ದಾರಲ್ಲದೆ, ಜನರ ಬಗೆಗಿನ ಭೀತಿಯಿಂದಾಗಿಯೇ ಅವರು ಭ್ರಷ್ಟರಾಗಿದ್ದಾರೆ ಎಂದು ಸಾಬೀತುಪಡಿಸಿದ್ದಾರೆ. ಆಕೆಯ ಮಾತು ನೂರಕ್ಕೆ ನೂರು ನಿಜ. 1988ರಲ್ಲಿ ಸೂಕಿ ನೇತೃತ್ವದಲ್ಲಿ ಭುಗಿಲೆದ್ದ ಜನಪ್ರತಿಭಟನೆಗಳನ್ನು ತನ್ನ ಸೈನ್ಯದ ಬಲದಿಂದಲೇ ಹತ್ತಿಕ್ಕಿದ ಸರ್ಕಾರ ಆನಂತರ ಜನರ ಆಕ್ರೋಶಕ್ಕೆ ಎಷ್ಟು ಹೆದರಿತೆಂದರೆ ರಾಜಧಾನಿ ರಂಗೂನ್‌ನನ್ನೇ ತೊರದು ಅಲ್ಲಿಂದ ಮುನ್ನೂರು ಕಿಲೋಮೀಟರ್ ದೂರದಲ್ಲಿ ಹೊಸ ರಾಜಧಾನಿಯನ್ನೇ ನಿರ್ಮಿಸಿತು. ಬಂಜರು ಭೂಮಿಯಲ್ಲಿ ತಲೆಯೆತ್ತಿದ ಈ ನಗರಕ್ಕೆ ’ರಾಜಾಧಿರಾಜರ ಬೀಡು’ ಎಂಬ ಅರ್ಥ ಬರುವ ಹೆಸರನ್ನಿಟ್ಟಿತು.

ರಾಜಾಧಿರಾಜರ ಈ ಬೀಡಿನಲ್ಲಿ ಸೈನ್ಯಾಧಿಕಾರಿಗಳು ಮತ್ತವರ ಕುಟುಂಬಗಳು ಮಾತ್ರ ವಾಸಿಸುತ್ತಿದ್ದು ದೇಶದ ಸಾಮಾನ್ಯ ಜನರಿಗೆ ಲಭ್ಯವಿರದ ಸವಲತ್ತುಗಳು ಅವರೆಲ್ಲರಿಗೆ ಕೈಗೆಟುಕುವಂತೆ ಮಾಡಲಾಗಿದೆ. ವಿಶೇಷ ಶಾಲೆಗಳು ಮತ್ತು ಆಸ್ಪತ್ರೆಗಳನ್ನು ನಿರ್ಮಿಸಲಾಗಿದೆಯಲ್ಲದೆ ಟ್ರೇನ್ ಮತ್ತು ವಿಮಾನಗಳಲ್ಲಿ ಅವರಿಗೆಲ್ಲ ಮೊದಲು ಆದ್ಯತೆ ನೀಡಲಾಗುತ್ತದೆ. ಮನೆ ಬಾಡಿಗೆಯಿಂದ ಹಿಡಿದು ಪ್ರತಿಯೊಂದಕ್ಕೂ ಸಬ್ಸಿಡಿ ಪಡೆಯುವ ಸೈನ್ಯದ ಸದಸ್ಯರು ಮ್ಯಾನ್ಮಾರ್‌ನ ಇತರೆ ಜನರೊಂದಿಗೆ ಬೆರೆಯದೇ ಪ್ರತ್ಯೇಕ ಪ್ರದೇಶಗಳಲ್ಲಿ ವಾಸಿಸುತ್ತಾರೆ. ಹೀಗೆ ದೇಶದ ಎಲ್ಲಾ ಸವಲತ್ತುಗಳನ್ನು ತಮ್ಮದಾಗಿಸಿಕೊಳ್ಳುತ್ತಲೇ ಏಷ್ಯಾ ಖಂಡದ ಇತರ ದೇಶಗಳಿಗೆ ಹೋಲಿಸಿದರೆ ಸಾರ್ವಜನಿಕ ವಿದ್ಯೆ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಕನಿಷ್ಠ ವೆಚ್ಚವನ್ನು ಮಾಡಿರುವ ದಾಖಲೆ ಹೊಂದಿದ್ದಾರೆ ಅಲ್ಲಿನ ಸೈನ್ಯಾಧಿಕಾರಿಗಳು.

ಇದು ನಿನ್ನೆ ಮೊನ್ನೆಯ ಪರಿಸ್ಥಿತಿಯಲ್ಲ. ಬದಲಾಗಿ 1962ರಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಸೈನ್ಯಾಧಿಕಾರಿಗಳು ಖಾಸಗಿ ಆಸ್ತಿಗಳನ್ನು ಜಪ್ತಿ ಮಾಡಿ ಅವನ್ನೆಲ್ಲ ಸೈನ್ಯಾಧಿಕಾರಿಗಳು ನಡೆಸುವ ಸಂಸ್ಥೆಗಳಿಗೆ ನೀಡಿದರು. ಅವರ ಯಾವುದೇ ಕ್ರಮವನ್ನು ಟೀಕಿಸಿದವರ ಮೇಲೆ ಹೇಗೆ ಮುಗಿಬಿದ್ದರೆಂದರೆ ಅದೆಷ್ಟೋ ಬುದ್ಧಿಜೀವಿಗಳು ಮ್ಯಾನ್ಮಾರ್‌ಅನ್ನು ತೊರೆದು ಹೊರದೇಶಗಳಿಗೆ ವಲಸೆ ಹೋದರು. 1962ಕ್ಕಿಂತ ಮುನ್ನ ಆಗ್ನೇಯ ಏಷ್ಯಾದಲ್ಲೇ ಅತಿ ಉತ್ತಮ ಜೀವನ ಮಟ್ಟವನ್ನು, ಸಾಕ್ಷರತೆಯನ್ನು ಹೊಂದಿದ್ದ ಮ್ಯಾನ್ಮಾರ್ ಇವತ್ತು ಈ ಪ್ರದೇಶದಲ್ಲಿ ಅತಿ ಬಡತನವನ್ನು ಅನುಭವಿಸುತ್ತಿರುವ ದೇಶವಾಗಿ ಪರಿವರ್ತಿತವಾಗಿದೆ.

ಈ ಎಲ್ಲ ಬೆಳವಣಿಗೆಗಳ ನಡುವೆಯೂ ದಿಟ್ಟವಾಗಿ ನಿಂತಿರುವವರು ಸೂಕಿ. ಅಪ್ಪ ತನ್ನ ಲೇಖನದ ಅಂತ್ಯದಲ್ಲಿ ಹೇಳಿದ್ದಂತೆ “ದುರಂತಮಯ ಮನೋಹರ ಬರ್ಮಾ ದೇಶಕ್ಕೆ ಈಗ ಉಳಿದಿರುವುದು ಸೂಕಿಯ ಅನರ್ಘ್ಯ ವ್ಯಕ್ತಿಚಾರಿತ್ರ್ಯ ಮತ್ತು ಅಲೌಕಿಕ ಸೌಂದರ್ಯ ಮಾತ್ರ. ಆ ಮಾತು ಇವತ್ತಿಗೂ ಅನ್ವಯಿಸುತ್ತದೆ.

ಸೂಕಿ ತಮ್ಮ ಇನ್ನೊಂದು ಬರಹದಲ್ಲಿ ಹೀಗೆ ಹೇಳಿದ್ದಾರೆ: “ಇತಿಹಾಸ ಮುಖ್ಯ. ಆದರೆ ನೀವು ಯಾವ ಪರಂಪರೆಗೆ ಸೇರಿದವರು ಎಂದು ಆಯ್ಕೆ ಮಾಡುವಲ್ಲೇ ನಿಮ್ಮ ಇತಿಹಾಸವೂ ನಿರ್ಧರಿತವಾಗುತ್ತದೆ”. ಇವತ್ತು ಮಾನ್ಮಾರ್‌ನ ಬಿಕ್ಕುಗಳು, ಮತ್ತವರ ಜೊತೆ ನಿಂತಿರುವ ಸಾರ್ವಜನಿಕರು ತಮ್ಮ ಪರಂಪರೆಯ ಆಯ್ಕೆ ಮಾಡಿಕೊಳ್ಳುವ ಮೂಲಕ ತಮ್ಮ ದೇಶದ ಇತಿಹಾಸವನ್ನೇ ಬದಲಿಸಲು ಹೋರಾಟ ನಡೆಸುತ್ತಿದ್ದಾರೆ.

ಎಲ್ಲಾ ಪ್ರಜ್ಞಾವಂತರ ಬೆಂಬಲ ಅವರಿಗಿರಲಿ ಎಂಬ ಆಶಯ ನಮ್ಮದು….

(ಅಕ್ಟೋಬರ್ 10, 2007ರಂದು ಗೌರಿಯವರು ಬರೆದ ಕಂಡಹಾಗೆ ಅಂಕಣದ ಸಂಗ್ರಹ ಭಾಗ ಇದು)


ಇದನ್ನೂ ಓದಿ: ಗೌರಿ ಕಾರ್ನರ್: ಜಾಗತಿಕ ತಾಪಮಾನ ಏರಿಕೆಗೆ ಮನುಷ್ಯನ ಪ್ರತಿಕ್ರಿಯೆ; ನಿಧಾನಕ್ಕೆ ಕುದಿಯುತ್ತಿರುವ ಬಿಸಿ ನೀರಿನೊಳಗಿನ ಕಪ್ಪೆಯಂತೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನೀಟ್ ಕೃಪಾಂಕ ರದ್ದು ಹಗರಣ ಮುಚ್ಚಿ ಹಾಕುವ ಪ್ರಯತ್ನ : ಎಂ.ಕೆ ಸ್ಟಾಲಿನ್

0
ನೀಟ್ ವಿದ್ಯಾರ್ಥಿಗಳ ಕೃಪಾಂಕ ರದ್ದುಗೊಳಿಸಿ ಮರು ಪರೀಕ್ಷೆಗೆ ಮುಂದಾಗಿರುವುದು ಹಗರಣವನ್ನು ಮುಚ್ಚಿ ಹಾಕುವ ಪ್ರಯತ್ನ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಹೇಳಿದ್ದಾರೆ. ನೀಟ್ ಪರೀಕ್ಷೆಯಲ್ಲಿ ಹಗರಣದ ಆರೋಪ ಕೇಳಿ ಬಂದ ಬೆನ್ನಲ್ಲೇ 1,563...