Homeಅಂಕಣಗಳುಕಳೆದುಹೋದ ದಿನಗಳುಗಣಪಯ್ಯನವರ ಕೊನೆಯ ದಿನಗಳು ಮತ್ತು ಪಂಚಾಯತ್ ರಾಜ್ ಚುನಾವಣೆಗಳು

ಗಣಪಯ್ಯನವರ ಕೊನೆಯ ದಿನಗಳು ಮತ್ತು ಪಂಚಾಯತ್ ರಾಜ್ ಚುನಾವಣೆಗಳು

- Advertisement -
- Advertisement -

ಕಳೆದು ಹೋದ ದಿನಗಳು -30

ಗಣಪಯ್ಯ ಹಲವರೊಂದಿಗೆ ಸೇರಿ ಸ್ಥಾಪಿಸಿದ್ದ ಬೆಂಗಳೂರು ಎಜುಕೇಷನ್ ಟ್ರಸ್ಟ್‌ನ ಕೆಲಸಗಳಿದ್ದವು. ಅದಕ್ಕಾಗಿ ಗಣಪಯ್ಯನವರು ಹಲವಾರು ಬಾರಿ ಬೆಂಗಳೂರಿಗೆ ಹೋಗುತ್ತಿದ್ದರು. ರಾಜಾಜಿ ನೆನಪಿನ ಮಾಲಿಕೆಯ ಭಾಷಣಗಳು, ಪುಸ್ತಕ ಪ್ರಕಟಣೆ ನಡೆದಿತ್ತು.

ಊರಿನಲ್ಲಿದ್ದಾಗ ತೋಟಗಳಿಗೆ ಭೇಟಿ, ಸಭೆ ಸಮಾರಂಭಗಳು ಇದ್ದೇ ಇರುತ್ತಿದ್ದವು. ಅವುಗಳಲ್ಲಿ ಸಣ್ಣದು ದೊಡ್ಡದು ಎಂಬ ಭೇದವಿಲ್ಲ. ಮುಖ್ಯಮಂತ್ರಿಗಳೊಡನೆ ಭೇಟಿಯಿರಲಿ, ಗಣ್ಯರ ಕೂಟವಿರಲಿ ಅಥವಾ ಯುವಕ ಸಂಘ, ಮಹಿಳಾ ಸಮಾಜ, ರೈತರ ಸಭೆಗಳು, ಗಣಪತಿ ಉತ್ಸವ ಎಲ್ಲದಕ್ಕೂ ಒಂದೇ ರೀತಿಯ ಉತ್ಸಾಹದಿಂದ ಹೋಗುವರು. ಆದರೆ ಸಮಯ ಪಾಲನೆ ಮಾತ್ರ ‘ಬ್ರಿಟಿಷ್ ಸ್ಟಾಂಡರ್ಡ್ ಟೈಮ್’ ಆಗಿರುತ್ತಿತ್ತು. ಸರಿಯಾದ ಸಮಯಕ್ಕೆ ಬರುವರು. ಕಾರ್ಯಕ್ರಮ ನಿಗದಿತ ಸಮಯಕ್ಕೆ ಪ್ರಾರಂಭಿಸದಿದ್ದರೆ ಸಿಡಿಮಿಡಿಗೊಳ್ಳುವರು. ಇದು ಅನೇಕರಿಗೆ ಸಮಸ್ಯೆಯಾಗಿ ತೋರುತ್ತಿತ್ತು!

Bangalore education trust ನ ಪ್ರಕಟನೆ

ಇದರಿಂದಾಗಿ ಹಾರ್ಲೆಯಲ್ಲಿ ಕೆಲಸ ಮಾಡಿದ ಎಲ್ಲರಿಗೂ ಈ ರೀತಿಯ ಸಮಯಪಾಲನೆ ಒಂದು ಸಹಜ ಪ್ರವೃತ್ತಿಯಾಗಿ ಬೆಳೆದು ಬಂತು. ರವೀಂದ್ರನಾಥರ ಕಾಲದಲ್ಲಿಯೂ ಇದು ಹಾಗೆಯೇ ಮುಂದುವರೆಯಿತು. ಯಾವುದಾದರೂ ಕಾರ್ಯಕ್ರಮಕ್ಕೆ ಆಹ್ವಾನಿಸಲು ಬಂದವರಲ್ಲಿ ರವೀಂದ್ರ ನಾಥರು “ಎಷ್ಟು ಹೊತ್ತಿಗೆ ಬರಬೇಕು?” ಎಂದು ಕೇಳಿದರೆ.

ಕೆಲವರು “ಒಂಬತ್ತು ಗಂಟೆ ಅಷ್ಟೊತ್ತಿಗೆ ಬನ್ನಿ” ಎನ್ನುವರು,

ಆಗ ರವೀಂದ್ರನಾಥರು, “ಅದೇನದು ಅಷ್ಟೊತ್ತಿಗೆ ಅಂದ್ರೆ, ಇಲ್ಲ ಒಂಬತ್ತು ಗಂಟೆಗೆ ಅನ್ನಿ, ಇಲ್ಲ ಒಂಬತ್ತು ವರೆಗೆ ಬನ್ನಿ ಅಂತ ನಿರ್ದಿಷ್ಟವಾಗಿ ಹೇಳಿ. ಈ ಅಷ್ಟೊತ್ತಿಗೆ, ಇಷ್ಟೊತ್ತಿಗೆ ಅನ್ನುವುದು ಸರಿಯಾದ್ದಲ್ಲ” ಎನ್ನುವರು.

ಗಣಪಯ್ಯ ಮನೆಯಿಂದ ಹೊರಟರೆಂದರೆ ಜೀಪಿನಲ್ಲಿ ಯಥಾಪ್ರಕಾರ ಎರಡು ನಾಯಿಗಳು ಮತ್ತು ಜೀಪಿನ ತುಂಬ ಮಕ್ಕಳು.

ಕೃಷಿಯಲ್ಲಿ ಅವರ ಜ್ಞಾನ ಅಗಾಧವಾದುದು. ಕಾಫಿಯಿರಲಿ, ಏಲಕ್ಕಿ ಬೆಳೆಯಿರಲಿ ಮಣ್ಣಿನ ರಚನೆ ಗಮನಿಸಿ ಕೈಯಲ್ಲಿ ಮುಟ್ಟಿ ನೋಡಿ ಯಾವ ಬೆಳೆಗೆ ಸೂಕ್ತ ಅಥವಾ ಇಲ್ಲಿ ಗಿಡಗಳು ಚೆನ್ನಾಗಿ ಬರಲು ಏನೇನು ಕ್ರಮಗಳನ್ನು ಮಾಡಬೇಕೆಂದು ಕರಾರುವಾಕ್ಕಾಗಿ ಹೇಳಬಲ್ಲವರಾಗಿದ್ದರು. ಕೊಡಗಿನಲ್ಲಿ ಇದ್ದಾಗಲೇ ಈ ಬಗ್ಗೆ ಅವರು ಅಪಾರ ಅನುಭವ ಗಳಿಸಿದ್ದರು. ಇದರಿಂದಾಗಿ ಅನೇಕ ರೈತ ಸಭೆಗಳು ಹಾರ್ಲೆಯಲ್ಲಿ ನಡೆಯುತ್ತಿದ್ದವು. ಕೃಷಿ ಮಾಹಿತಿಗಾಗಿ ಹಾರ್ಲೆಗೆ ಬರುವವರ ಸಂಖ್ಯೆಯೂ ದೊಡ್ಡದಿತ್ತು.

ಕೃಷಿ ಮತ್ತಿತರ ವಿಷಯಗಳಲ್ಲಿ ಗಣಪಯ್ಯ ಎಷ್ಟು ಕರಾರುವಾಕ್ಕಾದ ಲೆಕ್ಕಾಚಾರದ ಮನುಷ್ಯರಾಗಿದ್ದರೋ ಆರ್ಥಿಕ ವಿಚಾರಗಳಲ್ಲಿ ಅವರು ಅಷ್ಟೊಂದು ವ್ಯಾವಹಾರಿಕರು ಅಲ್ಲವೆಂದೇ ನನ್ನ ವೈಯಕ್ತಿಕ ಅನಿಸಿಕೆ. ಅಥವಾ ಅದು ಅವರ ಆಯ್ಕೆಯೂ ಆಗಿರಬಹುದು. ತಮ್ಮ ಕಾಫಿ ತೋಟಗಳನ್ನು ಕೂಡಾ ಅಷ್ಟೇ ಒಂದು ಹಂತ ತಲುಪಿದ ನಂತರ ಇನ್ನು ಸಾಕು ಎಂಬಂತೆ ವಿಸ್ತರಣೆ ಮಾಡುವುದನ್ನು ನಿಲ್ಲಿಸಿದ್ದರು. ಬೇರೆ ಹಲವರು ಕಾಫಿ ಬೆಳೆಗಾರರು, ನಗರ ಆಸ್ತಿಗಳನ್ನು ಕೊಂಡು ಸಂಪತ್ತು ವೃದ್ದಿ ಮಾಡಿಕೊಳ್ಳುತ್ತಿದ್ದರೆ, ಗಣಪಯ್ಯ ತಾವು ಬೆಂಗಳೂರಿಗೆ ಹೋದಾಗ ಉಳಿದುಕೊಳ್ಳಲು, ಮತ್ತು ಮೊಮ್ಮಕ್ಕಳ ವಿದ್ಯೆಗಾಗಿ ಒಂದು ಸಾಮಾನ್ಯ ಮದ್ಯಮವರ್ಗದ ಮನೆಯನ್ನು ಕೊಂಡಿದ್ದರು ಹೊರತು ಬೇರೆ ಯಾವುದೇ ನಗರಾಸ್ತಿ ಮಾಡಿದ್ದು ಇಲ್ಲ.

ಹಾರ್ಲೆ ತೋಟದ ಒಂದು ದೃಶ್ಯ

ಇತ್ತ ತೋಟದಲ್ಲಿ ಬಂದ ಉತ್ಪನ್ನದ ಬಹುಪಾಲು ಸಾಮಾಜಿಕ ಕೆಲಸಗಳಿಗೆ ಬಳಕೆಯಾಗುತ್ತಿತ್ತು. ಹಣದ ಅವಶ್ಯಕತೆಗಳಿಗೆ ಮೈಸೂರು ಬ್ಯಾಂಕ್ ಇತ್ತು. ಅವರು ಸಕಲೇಶಪುರದ ಮೈಸೂರು ಬ್ಯಾಂಕ್ ಶಾಖೆಯ ಖಾಯಂ ಗ್ರಾಹಕರಾಗಿದ್ದರು.

ಸ್ವತಂತ್ರ ಪಾರ್ಟಿ, ಲೋಕದಳದಲ್ಲಿ ವಿಲೀನವಾಗಿ, ನಂತರ ಜನತಾಪಕ್ಷದಲ್ಲಿ ಸೇರಿಕೊಂಡಿತ್ತು. ಮುಂದಿನ ದಿನಗಳ ರಾಜಕೀಯ ಕಚ್ಚಾಟಗಳು, ಮಾತ್ರವಲ್ಲ ಗಣಪಯ್ಯನವರು ಬೆಳೆಸಿದ ಅನೇಕ ರಾಜಕಾರಣಿಗಳು ಬೇರೆ ದಾರಿ ಹಿಡಿದಿದ್ದರು. ಹೆಚ್ಚಿನವರು ಕಾಂಗ್ರೆಸ್ಸಿಗೆ ಹೋಗಿದ್ದರು. ಇದೆಲ್ಲದರಿಂದ ಇನ್ನು ರಾಜಕಾರಣ ಸಾಕು ಎಂಬ ತೀರ್ಮಾನಕ್ಕೂ ಬಂದಿರಬಹುದು. 1977ರ ತುರ್ತುಪರಿಸ್ಥಿತಿಯಲ್ಲಿ ಯುವಕರಾಗಿದ್ದ ವೈ.ಎಸ್.ವಿ ದತ್ತ ಕೂಡಾ ಗಣಪಯ್ಯನವರ ಜೊತೆ ಬೆಂಗಳೂರು ಜೈಲಿನಲ್ಲಿ ಇದ್ದರು. ದತ್ತ ಅವರ ಬಗ್ಗೆ ಗಣಪಯ್ಯ “ಈ ವಯಸ್ಸಿಗೇ ತುಂಬ ತಿಳುವಳಿಕೆ ಹೊಂದಿರುವ ಚುರುಕಾದ ಹುಡುಗ ಎಂದು” ಹಲವು ಬಾರಿ ಹೇಳಿದ್ದುಂಟು. ದತ್ತ ಅವರು ಆಗ ಗಣಪಯ್ಯನವರಿಗೆ ಪತ್ರಗಳನ್ನು ಬರೆಯುತ್ತಿದ್ದರು.

ರಾಮಕೃಷ್ಣ ಹೆಗಡೆಯವರ ಸರ್ಕಾರ ಇದ್ದಾಗ ಗಣಪಯ್ಯ ಒಂದೆರಡು ಸಾರ್ವಜನಿಕ ಕೆಲಸಗಳಿಗಾಗಿ ಅವರನ್ನು ಭೇಟಿಯಾದದ್ದು ಹೊರತು ಮತ್ತೆ ಹೋಗಲಿಲ್ಲ.

ಕರ್ನಾಟಕದಲ್ಲಿ ನಜೀರ್ ಸಾಬರ ಪಂಚಾಯತ್ ರಾಜ್ ಮಸೂದೆ ಜಾರಿಗೆ ಬಂದಿತ್ತು. ಆ ಕಾಲಕ್ಕೆ ಅದೊಂದು ಕ್ರಾಂತಿಕಾರಕ ನಡೆಯೆಂದು ಹೇಳಲಾಗಿತ್ತು. ಅಂದಿನ ಪ್ರಧಾನಿ ರಾಜೀವಗಾಂಧಿ ಕೂಡಾ ಈ ಮಸೂದೆಯ ಬಗ್ಗೆ ಆಸಕ್ತಿ ಹೊಂದಿದ್ದರು. ಅದರಿಂದ ಗ್ರಾಮೀಣ ಪಾಳೇಗಾರೀ ಶಕ್ತಿಗಳು ಮತ್ತಷ್ಟು ಬಲಶಾಲಿಯಾಗಬಹುದೆಂಬ ಅನುಮಾನಗಳು ಇದ್ದರೂ, ಅದೊಂದು ಅಧಿಕಾರ ವಿಕೇಂದ್ರೀಕರಣದ ಮಹತ್ತರ ಹೆಜ್ಜೆಯಾಗಿತ್ತು. ಆ ಕಾರಣಕ್ಕಾಗಿಯೇ ತಮ್ಮ ಅಧಿಕಾರ ಮೊಟಕಾಗುತ್ತದೆಂಬ ಅಸಮಧಾನವೂ ಹಲವಾರು ಶಾಸಕರಲ್ಲಿ ಇತ್ತು.

ಮಸೂದೆ ಜಾರಿಯಾದ ಕೆಲವು ತಿಂಗಳ ನಂತರ ಪಂಚಾಯತ್ ರಾಜ್ ಚುನಾವಣೆಗಳು ನಡೆದವು. ಆಗ ಜಿಲ್ಲಾ ಪರಿಷತ್ ಎಂದೇ ಹೆಸರು ಇತ್ತು. ಮುಂದಿನ ಚುನಾವಣೆಗಳಲ್ಲಿ ಅದು ಜಿಲ್ಲಾಪಂಚಾಯತ್ ಆಗಿ ಪರಿವರ್ತನೆಯಾಯಿತು. ನಮ್ಮ ಹಾನುಬಾಳು ಕ್ಷೇತ್ರ ಮೀಸಲು ಕ್ಷೇತ್ರವಾಗಿತ್ತು. ನಾವೆಲ್ಲರೂ ಸೇರಿ ವಯಸ್ಕರ ಶಿಕ್ಷಣ ತರಗತಿಯಲ್ಲಿ ಗಾಣದಹೊಳೆಯ ರಾತ್ರಿ ಶಾಲೆಯ ಶಿಕ್ಷಕರಾಗಿ ದುಡಿದಿದ್ದ ಕಾಳಿಪ್ರಸಾದರನ್ನು ಜನತಾ ಪಕ್ಷದ ಅಭ್ಯರ್ಥಿಯಾಗಿ ಆರಿಸಿದ್ದೆವು.

ನಮಗೇ ಆಶ್ಚರ್ಯವಾಗುವಂತೆ ಆ ಚುನಾವಣೆಯಲ್ಲಿ ಕಾಳಿಪ್ರಸಾದ್ ಪರ ಚುನಾವಣಾ ಪ್ರಚಾರಕ್ಕೆ ಗಣಪಯ್ಯನವರು ಬಂದರು. ಹಾನುಬಾಳಿನಲ್ಲಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ಸಭೆ ಏರ್ಪಾಡಾಗಿತ್ತು. ಆರು ಗಂಟೆಗೆ ನಿಗದಿಯಾಗಿದ್ದ ಸಭೆಗೆ ಹೆಗಡೆಯವರು ಬರುವಾಗ ರಾತ್ರಿ ಒಂಬತ್ತಾಗಿತ್ತು. ಆರು ಗಂಟೆಗೇ ಬಂದು ಕುಳಿತಿದ್ದ ಗಣಪಯ್ಯ ಎಲ್ಲರನ್ನೂ ಮಾತಾಡಿಸುತ್ತ ಓಡಾಡುತ್ತ ಇದ್ದರು. ಅಲ್ಲಿಯೂ ಮಕ್ಕಳನ್ನು ಗುಂಪು ಸೇರಿಸಿ ಪಕ್ಕದ ಶಾಲೆಯ ಜಗುಲಿಯಲ್ಲಿ ಕುಳಿತು ಒಂದೆರಡು ಭಜನೆಯ ಹಾಡುಗಳನ್ನು ಹೇಳಿಕೊಟ್ಟರು!

ಅಂದು ರಾತ್ರಿ ಒಂಬತ್ತರವರೆಗೂ ಕಾದು ರಾಮಕೃಷ್ಣ ಹೆಗಡೆಯವರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಅದು ಅವರ ಕೊನೆಯ ರಾಜಕೀಯ ಭಾಷಣವಾಗಿತ್ತು ಎಂದು ನನ್ನ ನೆನಪು.

ಕಾಳಿ ಪ್ರಸಾದ್ ಕೊನೆಯ ದಿನಗಳಲ್ಲಿ

1977ರ ತುರ್ತುಪರಿಸ್ಥಿತಿಯಲ್ಲಿ ರಾಮಕೃಷ್ಣ ಹೆಗಡೆಯವರು ಬೆಂಗಳೂರು ಜೈಲಿನಲ್ಲಿ ಗಣಪಯ್ಯನವರ ಜೊತೆ ಇದ್ದವರೇ. ಆಗ ಗಣಪಯ್ಯನವರು ತಮ್ಮಮನೆಯಿಂದ ತಿಂಡಿ ಮಾಡಿಸಿ ತರಿಸಿ ಜೈಲಿನಲ್ಲಿ ಇದ್ದವರಿಗೆ ಹಂಚುತ್ತಿದ್ದರಂತೆ. ಇದನ್ನೂ ರಾಮಕೃಷ್ಣಹೆಗಡೆಯವರು ಅಂದಿನ ಭಾಷಣದಲ್ಲಿ ಪ್ರಸ್ತಾಪಿಸಿದರು.

ಕಾಳಿಪ್ರಸಾದ್ ಆ ಚುನಾವಣೆಯಲ್ಲಿ ಜಯಗಳಿಸಿದರು.

ಕೆಲವೇ ದಿನಗಳ ಅಂತರದಲ್ಲಿ ಮಂಡಲ ಪಂಚಾಯತ್ ಚುನಾವಣೆಗಳು ನಡೆದವು. ಹೆಚ್ಚೂ ಕಡಿಮೆ ರಾಜ್ಯಾದ್ಯಂತ ಜನತಾ ಪಕ್ಷ ಜಯಗಳಿಸಿತ್ತು. ನಮ್ಮ ಕ್ಯಾಮನಹಳ್ಳಿ ಮಂಡಲ ಪಂಚಾಯತ್‌ನಲ್ಲಿ ಹಾದಿಗೆ ಶಾಂತಪ್ಪನವರ ಮಗ ಸಂಪತ್ ಅವರ ನೇತೃತ್ವದಲ್ಲಿ ಯುವಕರ ತಂಡ ಭಾರೀ ಬಹುಮತದೊಂದಿಗೆ ಅಧಿಕಾರ ಪಡೆಯಿತು.

ಜಿಲ್ಲಾ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದ ಕಾಳಿ ಪ್ರಸಾದ್ ಹಲವಾರು ಸ್ಥಾಯೀ ಸಮಿತಿಗಳ ಅಧ್ಯಕ್ಷರಾಗಿ, ಸದಸ್ಯರಾಗಿ ಪ್ರಾಮಾಣಿಕತೆಯಿಂದ ದುಡಿದರು. ಹೆಸರು ಕೆಡಿಸಿಕೊಳ್ಳದೆ ಅನೇಕ ಕೆಲಸಗಳನ್ನು ಮಾಡಿದರು. ಗಣಪಯ್ಯನವರು ಮಂಜೂರು ಮಾಡಿಸಿಕೊಟ್ಟಿದ್ದ ಎರಡೂವರೆ ಎಕರೆ ಜಮೀನು ಮತ್ತು ಮನೆ ಅವರು ಜಿಲ್ಲಾ ಪರಿಷತ್ ಸದಸ್ಯರಾಗುವ ಮೊದಲೂ ಇತ್ತು. ಐದು ವರ್ಷಗಳ ಅವಧಿ ಮುಗಿದ ನಂತರವೂ ಅದು  ಮಾತ್ರವೇ ಇತ್ತು. ಆ ಜಮೀನು ಕೂಡಾ ಕೃಷಿಯಾಗಿರಲಿಲ್ಲ. ಮೊದಲಿನಿಂದ ಕೂಲಿ ಕಾರ್ಮಿಕರಾಗಿದ್ದ ಕಾಳಿಪ್ರಸಾದ್ ನಂತರ ಕೊನೆಯವರೆಗೂ ಕಾರ್ಮಿಕರಾಗಿಯೇ ಇದ್ದರು.

ಇದೇ ರೀತಿಯಲ್ಲಿ ಬದುಕಿದ ದ.ಕ ಜಿಲ್ಲೆಯ ಸುಳ್ಯದ ಶಾಸಕರಾಗಿದ್ದ ಬಾಕಿಲ ಹುಕ್ರಪ್ಪನವರಂತೆ ಕಾಳಿಪ್ರಸಾದ್ ಕೂಡಾ ಬದುಕಿದರು.

ರಾಜಕಾರಣದ ಪಡಸಾಲೆಯಲ್ಲಿ ಇಂತವರ ಸಂಖ್ಯೆ ವಿರಳವಾಗುತ್ತಿದೆ.

  • ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ: ಕಳೆದುಹೋದ ದಿನಗಳು -22: ದಲಿತರಿಗೆ ಭೂಮಿ ಮತ್ತು ರೈತ ಸಂಘದ ಹುಟ್ಟು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಂತರ್ಜಾತಿ ವಿವಾಹ; ಹೈದರಾಬಾದ್‌ನಲ್ಲಿ ಮತ್ತೊಬ್ಬ ಯುವಕನ ಕೊಲೆ | Naanu Gauri

ಅಂತರ್ಜಾತಿ ವಿವಾಹ; ಹೈದರಾಬಾದ್‌ನಲ್ಲಿ ಮತ್ತೊಬ್ಬ ಯುವಕನ ಕೊಲೆ

0
ಹೈದರಾಬಾದ್‌ನ ಜನನಿಬಿಡ ಬೇಗಂ ಬಜಾರ್ ಪ್ರದೇಶದಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳು 21 ವರ್ಷದ ಯುವಕನನ್ನು ಅಂತರ್ಜಾತಿ ವಿವಾಹವಾದ ಕಾರಣಕ್ಕಾಗಿ ಇರಿದು ಕೊಂದಿರುವ ಘಟನೆ ಮೇ 20ರ ಶುಕ್ರವಾರದ ಸಂಜೆ ನಡೆದಿದೆ ಎಂದು ನ್ಯೂಸ್ ಮಿನಿಟ್...