ಪಶ್ಚಿಮ ಬಂಗಾಳ ಮೂಲದ ಮನೆ ಕೆಲಸದ ಮಹಿಳೆ ಮೇಲೆ ಬೆಂಗಳೂರಿನ ವರ್ತೂರು ಠಾಣೆ ಪೊಲೀಸರು ತೀವ್ರವಾಗಿ ಹಲ್ಲೆ ನಡೆಸಿರುವ ಕುರಿತು ವರದಿ ಕೇಳಿರುವುದಾಗಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ತಿಳಿಸಿದ್ದಾರೆ.
ಮಂಗಳವಾರ (ನ.4) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಪ್ರಕರಣ ನನ್ನ ಗಮನಕ್ಕೆ ಬಂದಿದೆ. ಮಹಿಳಾ ಪೊಲೀಸರು ಹೊಡೆದಿದ್ದಾರೆ ಎಂಬ ವಿಷಯ ಗೊತ್ತಾಗಿದೆ. ಈ ಬಗ್ಗೆ ವಿವರವಾದ ವರದಿ ಕೊಡುವಂತೆ ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದೇನೆ. ವರದಿ ಬಂದ ಬಳಿಕ ಮುಂದಿನ ಕ್ರಮದ ಬಗ್ಗೆ ತೀರ್ಮಾನಿಸುತ್ತೇವೆ” ಎಂದಿದ್ದಾರೆ.
ಏನಿದು ಪ್ರಕರಣ? ಬೆಂಗಳೂರಿನ ಬಳಗೆರೆಯ ಕಾರ್ಮಿಕರ ಶೆಡ್‌ನಲ್ಲಿ ವಾಸವಿದ್ದ ಪಶ್ಚಿಮ ಬಂಗಾಳ ಮೂಲದ ಮಹಿಳೆ ಸುಂದರಿ ಬೀಬಿ ಮತ್ತು ಆಕೆಯ ಪತಿ ಮೇಲೆ ಅಕ್ಟೋಬರ್ 30ರಂದು ವರ್ತೂರು ಪೊಲೀಸ್ ಠಾಣೆಯ ನಾಲ್ವರು ಪುರುಷ ಹಾಗೂ ಮೂವರು ಮಹಿಳಾ ಸಿಬ್ಬಂದಿ ಲಾಠಿಯಿಂದ ಮನಸೋ ಇಚ್ಚೆ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಅಕ್ಟೋಬರ್ 30ರಂದು ಬೆಳಿಗ್ಗೆ 9ಗಂಟೆಯ ಹೊತ್ತಿಗೆ ಮಹಿಳೆ ಮನೆ ಕೆಲಸ ಮಾಡುತ್ತಿದ್ದ ಶೋಭಾ ಫ್ಲ್ಯಾಟ್‌ನಿಂದ ವರ್ತೂರು ಠಾಣೆಯ ಪೊಲೀಸರು ಕರೆದೊಯ್ದಿದ್ದರು. ಫ್ಲ್ಯಾಟ್‌ನಲ್ಲಿ ವಾಸವಿರುವ ಟೆಕ್ಕಿ ದಂಪತಿ ಅವರ 5 ಲಕ್ಷ ರೂ ಬೆಲೆ ಬಾಳುವ ವಜ್ರದ ಉಂಗುರವನ್ನು ಸುಂದರಿ ಬೀಬಿ ಕದ್ದಿದ್ದಾರೆ ಎಂದು ಆರೋಪಿಸಿದ್ದರು. ಠಾಣೆಗೆ ಕರೆದೊಯ್ದ ಪೊಲೀಸರು ಅಮಾನವೀಯವಾಗಿ ಥಳಿಸಿದ್ದಾರೆ. ಈ ವಿಷಯ ತಿಳಿದು ಆಕೆಯ ಪತಿ ಸಹಾಯಕ್ಕೆ ಧಾವಿಸಿದ್ದರು. ಪೊಲೀಸರು ಅವರನ್ನೂ ಕೂಡಿ ಹಾಕಿ ಥಳಿಸಿದ್ದಾರೆ ಎಂದು ವರದಿಯಾಗಿದೆ.
ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಪೊಲೀಸರು ನಿರಂತರ ಹಲ್ಲೆ ಮಾಡಿದ್ದಾರೆ. ಸಂಜೆ ಕಲೀಮುಲ್ಲಾ ಎಂಬ ಸಾಮಾಜಿಕ ಕಾರ್ಯಕರ್ತ ಕರೆ ಮಾಡಿ ವಿಚಾರಿಸಿದ ಬಳಿಕ ಪೊಲೀಸರು ಹಲ್ಲೆ ನಿಲ್ಲಿಸಿ ಲಾಠಿ ಬಚ್ಚಿಟ್ಟಿದ್ದರು. ಬಳಿಕ ರಾತ್ರಿ 7 ಗಂಟೆಯವರೆಗೆ ಠಾಣೆಯಲ್ಲೇ ಕೂರಿಸಿಕೊಂಡು, ಹಲ್ಲೆಯ ವಿಚಾರವನ್ನು ಎಲ್ಲೂ ಹೇಳದಂತೆ ಬೆದರಿಸಿ ಕಳುಹಿಸಿದ್ದಾರೆ ಎಂದು ವರದಿ ತಿಳಿಸಿದೆ.
ಸುಂದರಿ ಬೀಬಿ ದಂಪತಿಗೆ ನಾಲ್ವರು ಮಕ್ಕಳಿದ್ದಾರೆ. ಅವರನ್ನು ಪಶ್ಚಿಮ ಬಂಗಾಳದಲ್ಲೇ ಬಿಟ್ಟು ಕೆಲಸ ಮಾಡಲು ಬೆಂಗಳೂರಿಗೆ ಬಂದಿದ್ದರು. ಗಂಡ ಬಿಬಿಎಂಪಿ ಕಸದ ಲಾರಿಯಲ್ಲಿ ಕೆಲಸ ಮಾಡುತ್ತಿದ್ದರೆ, ಹೆಂಡತಿ ಮನೆ ಕೆಲಸ ಮಾಡುತ್ತಿದ್ದರು. ಕಳೆದ 3 ತಿಂಗಳಿನಿಂದ ಸುಂದರಿ ಬೀಬಿ ವರ್ತೂರಿನ ಶೋಭಾ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ಗೆ ಕೆಲಸಕ್ಕೆ ಹೋಗುತ್ತಿದ್ದರು.
ಅಕ್ಟೋಬರ್ 30ರಂದು ಬೆಳಿಗ್ಗೆ ಸುಂದರಿ ಬಾಲ್ಕನಿಯಲ್ಲಿ ಕಸ ಗುಡಿಸುತ್ತಿದ್ದಾಗ, ಅಲ್ಲಿ ಬಿದ್ದಿದ್ದ 100 ರೂ. ನೋಟನ್ನು ತೆಗೆದುಕೊಂಡಿದ್ದರು. ಈ ವೇಳೆ ಅಲ್ಲಿಗೆ ಬಂದ ಫ್ಲ್ಯಾಟ್ ಮಾಲೀಕರು, ಸುಂದರಿಯ ಕೈ ಹಿಡಿದುಕೊಂಡು ಕಳ್ಳಿ ಎಂದು ನಿಂದಿಸಿದ್ದರು. ಅಲ್ಲದೆ, ಈ ಹಿಂದೆಯೂ ಫ್ಲ್ಯಾಟ್‌ನಲ್ಲಿ ವಜ್ರದ ಉಂಗುರ ಕದ್ದಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಕರೆದೊಯ್ದು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಸಂತ್ರಸ್ತೆ ನೀಡಿದ ದೂರು ಆಧರಿಸಿ ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಕೆ.ಪರಶುರಾಮ್ ನೇತೃತ್ವದಲ್ಲಿ ಪೊಲೀಸರ ಆಂತರಿಕ ತನಿಖೆ ಆರಂಭವಾಗಿದೆ. “ಮನೆಗೆಲಸದ ಮಹಿಳೆಯನ್ನು ಠಾಣೆಗೆ ಕರೆಸಿ ಹಲ್ಲೆ ನಡೆಸಿದ ಆರೋಪದ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಡಿಸಿಪಿಗೆ ಸೂಚಿಸಲಾಗಿದೆ. ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದು ಪಶ್ಚಿಮ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ತಿಳಿಸಿದ್ದಾರೆ.
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ವೈಟ್‌ಫೀಲ್ಡ್ ವಿಭಾಗದ ಡಿಸಿಪಿಗೆ ಪತ್ರ ಬರೆದಿದ್ದು, ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ ಎಂದು ವರದಿಯಾಗಿದೆ.
ಸುಂದರಿ ಬೀಬಿಯ ಪತಿಯು ವರ್ತೂರು ಪೊಲೀಸರ ದೌರ್ಜನ್ಯದ ಬಗ್ಗೆ ಪಶ್ಚಿಮ ಬಂಗಾಳ ವಲಸೆ ಕಾರ್ಮಿಕರ ಕ್ಷೇಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಸಮೀರುಲ್ಲಾ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದರು. ಈ ಮೂಲಕ ವಿಷಯ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಕಚೇರಿಗೂ ತಲುಪಿಸಿದೆ. ಅಲ್ಲಿನ ಅಧಿಕಾರಿಗಳು ಈ ಘಟನೆ ಸಂಬಂಧ ಬೆಂಗಳೂರು ಪೊಲೀಸರಿಂದ ಸ್ಪಷ್ಟೀಕರಣ ಕೋರಿದ್ದಾರೆ ವರದಿಗಳು ಹೇಳಿವೆ.
ಪೊಲೀಸರು ಮಹಿಳೆಯ ಖಾಸಗಿ ಅಂಗಕ್ಕೆ ಥಳಿಸಿ ಕ್ರೌರ್ಯ ಮೆರೆದಿದ್ದಾರೆ. ಇದರಿಂದ ಆಕೆ ಮೂತ್ರ ವಿಸರ್ಜನೆ ಮಾಡಲೂ ಆಗದೆ ನರಕಯಾತನೆ ಅನುಭವಿಸುತ್ತಿದ್ದಾರೆ. ಬೌರಿಂಗ್ ಆಸ್ಪತ್ರೆಯ ಎಂಎಲ್ಸಿ ರಿಪೋರ್ಟ್ನಲ್ಲಿ ಗಾಯದ ಭೀಕರತೆ ಬಗ್ಗೆ ಉಲ್ಲೇಖಿಸಲಾಗಿದೆ. ಸದ್ಯ ವೈದ್ಯರ ಚಿಕಿತ್ಸೆ ನಂತರ ಮಹಿಳೆ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.
‘ನಲಿ ಕಲಿ’ ಕಾರ್ಯಕ್ರಮ ಸ್ಥಗಿತಗೊಳಿಸಲು ಮುಂದಾದ ಸರ್ಕಾರ : ಶಿಕ್ಷಣ ತಜ್ಞರು ಏನಂದ್ರು?


