ವಿಧಾನಸಭೆ ಕಲಾಪದಲ್ಲಿ ಇಂದು (ಮಾ.20) ಸಚಿವರು, ಶಾಸಕರು ಸೇರಿದಂತೆ ಜನಪ್ರತಿನಿಧಿಗಳನ್ನು ಹನಿಟ್ರ್ಯಾಪ್‌ಗೆ ಬೀಳಿಸಿ ಬ್ಲ್ಯಾಕ್ ಮೇಲ್ ಮಾಡುತ್ತಿರುವ ಪ್ರಕರಣಗಳ ಬಗ್ಗೆ ಕೆಲಕಾಲ ಚರ್ಚೆ ನಡೆಯಿತು.
ಬಜೆಟ್ ಮೇಲಿನ ಚರ್ಚೆಯ ವೇಳೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಈ ವಿಷಯ ಪ್ರಸ್ತಾಪಿ, “ರಾಜಕೀಯ ವಿರೋಧಿಗಳನ್ನು ಬ್ಲಾಕ್ ಮೇಲ್ ಮಾಡುವ ಮೂಲಕ ಅವರ ಜೀವನ ಹಾಳು ಮಾಡುವ ಪ್ರವೃತ್ತಿ ಶುರುವಾಗಿದೆ. ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರನ್ನು ಹನಿಟ್ರ್ಯಾಪ್ ಮಾಡಲಾಗಿದೆ” ಎಂದು ಆರೋಪಿಸಿದರು.
ನೀತಿ ಮತ್ತು ಸಿದ್ಧಾಂತಗಳ ಮೇಲೆ ವಿರೋಧಿಗಳನ್ನು ಸೋಲಿಸಲು ಸಾಧ್ಯವಾಗದವರು ತಮ್ಮ ರಾಜಕೀಯ ಗುರಿಗಳನ್ನು ಸಾಧಿಸಲು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಸುನೀಲ್ ಕುಮಾರ್ ಟೀಕಿಸಿದರು. ಅತ್ಯಾಚಾರ ಪ್ರಕರಣದಲ್ಲಿ ನನ್ನನ್ನು ಸಿಲುಕಿಸಲಾಗಿದ್ದು, ನನ್ನ ಮೇಲಿನ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಶಾಸಕ ಮುನಿರತ್ನ ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ರಾಜಣ್ಣ, “ಯತ್ನಾಳ್ ಅವರು ನನ್ನ ಹೆಸರು ಪ್ರಸ್ತಾಪ ಮಾಡಿದ್ದರಿಂದ ಇದಕ್ಕೆ ಸ್ಪಷ್ಟನೆ ನೀಡುತ್ತಿದ್ದೇನೆ. ಕರ್ನಾಟಕ ರಾಜ್ಯ ಸಿಡಿ, ಪೆನ್ ಡ್ರೈವ್ ಕಾರ್ಖಾನೆಯಾಗಿದೆ ಎಂದು ಹಲವು ಜನ ಹೇಳ್ತಾರೆ. ಇದು ಗುರುತರ ಆರೋಪವಾಗಿದೆ. ತುಮಕೂರಿನ ಪ್ರಭಾವಿ ಸಚಿವರು ಹನಿಟ್ರ್ಯಾಪ್‌ನಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ತುಮಕೂರಿವರು ನಾನು ಮತ್ತು ಡಾ.ಪರಮೇಶ್ವರ್ ಮಾತ್ರ” ಎಂದರು.
ಮುಂದುವರಿದು, “48 ಜನರ ಮೇಲೆ ಹನಿಟ್ರ್ಯಾಪ್ ಮಾಡಲಾಗಿದೆ. ಇದರಲ್ಲಿ ಸಿಲುಕಿದವರು ಎರಡು ಪಕ್ಷದಲ್ಲಿ ಇದ್ದಾರೆ. ಇದು ನಮ್ಮ ರಾಜ್ಯಕ್ಕೆ ಸೀಮಿತವಾಗಿಲ್ಲ. ರಾಷ್ಟ್ರ ಮಟ್ಟದ ವಿವಿಧ ಪಕ್ಷಗಳ ಮುಖಂಡರ ಹನಿಟ್ರ್ಯಾಪ್ ಪೆನ್ ಡ್ರೈವ್ ಇದೆ. ನನ್ನ ಮೇಲೆ ಆರೋಪಕ್ಕೆ ಇಲ್ಲಿ ಉತ್ತರ ಕೊಡಲ್ಲ. ನಾನು ಈ ಬಗ್ಗೆ ಗೃಹ ಸಚಿವರಿಗೆ ಲಿಖಿತ ದೂರು ಕೊಡುತ್ತೇವೆ. ಇದನ್ನು ತನಿಖೆ ಮಾಡಬೇಕು. ಯಾರು ನಿರ್ಮಾಪಕರು, ನಿರ್ದೇಶಕಕರು ಇದ್ದಾರೆ ಇವೆಲ್ಲವೂ ಹೊರಗಡೆ ಬರಲಿ. ಜನರಿಗೆ ಗೊತ್ತಾಗಲಿ” ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವ ಡಾ.ಜಿ ಪರಮೇಶ್ವರ್, “ಯತ್ನಾಳ್ ಅವರು ಬಹಳ ಗಂಭೀರ ಪ್ರಶ್ನೆ ಎತ್ತಿದ್ದಾರೆ. ಸುನಿಲ್ ಕುಮಾರ್, ಮುನಿರತ್ನ ಅವರೂ ಬಹಳ ಆವೇಶದಿಂದ ಮಾತನಾಡಿದ್ದಾರೆ. ಇದು ಬಹುಷ ಈ ಸದನದ ಪ್ರತಿಯೊಬ್ಬ ಸದಸ್ಯನ ಪ್ರಶ್ನೆ. ಇದಕ್ಕೆ ಒಂದು ಇತಿಶ್ರಿ ಹಾಡಬೇಕು. ಕರ್ನಾಟಕದ ವಿಧಾನಮಂಡಲ ಇಡೀ ದೇಶದಲ್ಲಿ ಗೌರವ ಸಂಪಾದನೆ ಮಾಡಿದೆ. ಹೀಗಿರುವಾಗ, ಈ ಸದನದ ಮರ್ಯಾದೆ ಕಾಪಾಡಬೇಕಾದ್ರೆ, ಸದಸ್ಯರ ಮರ್ಯಾದೆ ಕಾಪಾಡಬೇಕಾದ್ರೆ ಇದಕ್ಕೆ ಇತಿಶ್ರಿ ಹಾಡಲೇಬೇಕು ಎಂದರು.
ರಾಜಣ್ಣ ವಿಷಯ ಪ್ರಸ್ತಾಪ ಮಾಡಿದ್ದಾರೆ. ಅವರು ಮನವಿ ಕೊಡುತ್ತೇನೆ ಹೇಳಿದ್ದಾರೆ. ಆ ಆಧಾರದ ಮೇಲೆ ಉನ್ನತ ಮಟ್ಟದ ತನಿಖೆಗೆ ಆದೇಶಿಸುತ್ತೇನೆ. ಇದರ ಸತ್ಯಾಸತ್ಯತೆ ತಿಳಿಯಬೇಕಿದೆ. ಅದಕ್ಕಾಗಿ ಉನ್ನತ ಮಟ್ಟದ ತನಿಖೆಗೆ ಆದೇಶಿಸುತ್ತೇನೆ ಎಂದು ಹೇಳಿದರು.


