ಅಂತರ್ಜಾತಿ ವಿವಾಹವಾಗಿದ್ದ 25 ವರ್ಷದ ದಲಿತ ವ್ಯಕ್ತಿಯನ್ನು ಆತನ ಪ್ರಬಲಜಾತಿ ಪತ್ನಿಯ ಸಂಬಂಧಿಕರು ಥಳಿಸಿ ಕೊಂದಿರುವ ಘಟನೆ ಮಧ್ಯಪ್ರದೇಶದ ಶಿವಪುರಿಯಲ್ಲಿ ಬೆಳಕಿಗೆ ಬಂದಿದೆ. ಸಂಬಂಧಿಕರ ಇಚ್ಛೆಗೆ ವಿರುದ್ಧವಾಗಿ ಅನ್ಯಜಾತಿ ಯುವತಿಯನ್ನು ಮದುವೆಯಾದ ಕಾರಣ ಅವರನ್ನು ಮನೆಯಿಂದ ಹೊರಗೆ ಎಳೆದುಕೊಂಡು ಹೋಗಿ ದೊಣ್ಣೆ ಮತ್ತು ರಾಡ್‌ಗಳಿಂದ ಥಳಿಸಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಮದುವೆ ಬಳಿಕ ಊರಿಗೆ ಹಿಂದಿರುಗಿ ಬರಬಾರದು ಎಂದು ಪತ್ನಿಯ ಕುಟುಂಬವು ಮೊದಲೇ ಎಚ್ಚರಿಸಿದ್ದರೂ, ತಿಂಗಳುಗಳ ನಂತರ ದಂಪತಿ ತಮ್ಮ ಗ್ರಾಮಕ್ಕೆ ಮರಳಿದ್ದರು. ಬಳಿಕ ಯುವಕನಿಗೆ ಥಳಿಸಲಾಗಿದೆ ಎಂದು ಎಂದು ಪೊಲೀಸರು ತಿಳಿಸಿದ್ದಾರೆ.
ಓಂ ಪ್ರಕಾಶ್ ದಾಬ್ರಾ ಪಟ್ಟಣದಲ್ಲಿ ತಿಂಗಳುಗಟ್ಟಲೆ ವಾಸಿಸಿದ ನಂತರ ತನ್ನ ಹೆತ್ತವರನ್ನು ಭೇಟಿ ಮಾಡಲು ತನ್ನ ಗ್ರಾಮಕ್ಕೆ ಹಿಂತಿರುಗಿದ್ದ. ಶಿವಾನಿಯ ತಂದೆ ದ್ವಾರಕಾ ಪ್ರಸಾದ್ ಝಾ, ಸಂಬಂಧಿಕರಾದ ರಾಜೇಶ್ ಅಲಿಯಾಸ್ ರಾಜು ಝಾ, ಉಮಾ ಓಜಾ ಮತ್ತು ಸಂದೀಪ್ ಶರ್ಮಾ ಅವರೊಂದಿಗೆ ಯುವಕನ ಮನೆಗೆ ನುಗ್ಗಿ, ಹೊರಗೆ ಎಳೆದುಕೊಂಡು ಹೋಗಿ ದೊಣ್ಣೆ ಮತ್ತು ರಾಡ್‌ಗಳಿಂದ ಹೊಡೆದಿದ್ದಾರೆ ಎಂದು ವರದಿಯಾಗಿದೆ.
ಓಂ ಪ್ರಕಾಶ್ ಅವರನ್ನು ಗ್ವಾಲಿಯರ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರು ದಿನಗಳ ಕಾಲ ಅಲ್ಲಿಯೇ ಕಷ್ಟಪಟ್ಟು ಭಾನುವಾರ ಸಂಜೆ ಸಾವನ್ನಪ್ಪಿದರು.
ಕುಟುಂಬದೊಂದಿಗೆ ರಕ್ಷಾ ಬಂಧನ ಆಚರಿಸಲು ಅವರು ಮನೆಗೆ ಬಂದಿದ್ದರು ಎಂದು ಯುವಕನ ತಾಯಿ ಹೇಳಿದ್ದಾರೆ. ಜನವರಿಯಲ್ಲಿ ನ್ಯಾಯಾಲಯದ ವಿವಾಹದ ಮೂಲಕ ಶಿವಾನಿಯ ಒಪ್ಪಿಗೆಯೊಂದಿಗೆ ದಂಪತಿಗಳು ಕಾನೂನುಬದ್ಧವಾಗಿ ವಿವಾಹವಾಗಿದ್ದಾರೆ ಎಂದು ಅವರು ಹೇಳಿದರು.
2023 ರಲ್ಲಿ ಮೊದಲ ಬಾರಿಗೆ ಓಡಿಹೋದಾಗಿನಿಂದ ಶಿವಾನಿಯ ಕುಟುಂಬದಿಂದ ದಂಪತಿಗಳು ವಿರೋಧವನ್ನು ಎದುರಿಸಿದ್ದರು. ಹರ್ಸಿ ಗ್ರಾಮ ಪಂಚಾಯತ್ ಓಂ ಪ್ರಕಾಶ್ ಅವರ ಜಾತಿಯ ಹೊರಗಿನವರನ್ನು ವಿವಾಹವಾಗಿದ್ದಕ್ಕಾಗಿ 51,000 ರೂ. ದಂಡ ವಿಧಿಸಿದೆ. ಗ್ರಾಮಸ್ಥರು ಅವರ ಕುಟುಂಬವನ್ನು ಬಹಿಷ್ಕರಿಸುವಂತೆ ಆದೇಶಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಿವಾನಿಯ ಸಂಬಂಧಿಕರು ಸೇರಿದಂತೆ 12 ಜನರ ವಿರುದ್ಧ ಈಗ ಕೊಲೆ ಪ್ರಕರಣ ದಾಖಲಾಗಿದೆ. ಪ್ರಮುಖ ಆರೋಪಿ ದ್ವಾರಕಾ ಪ್ರಸಾದ್ ಝಾ ಪ್ರಸ್ತುತ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೂರು ವರ್ಷಗಳಲ್ಲಿ ರಾಜ್ಯದಲ್ಲಿ 6635 ಎಸ್‌ಸಿ, ಎಸ್‌ಟಿ ದೌರ್ಜನ್ಯ ಪ್ರಕರಣ: ಸಿಎಂ ಸಿದ್ದರಾಮಯ್ಯ