ಒಂಬತ್ತು ತಿಂಗಳ ಗರ್ಭಿಣಿ ಹೆಣ್ಣು ಮಗಳನ್ನು ಬೆಂಕಿ ಹಚ್ಚಿ ಕೊಂದ ಪ್ರಕರಣದಲ್ಲಿ, ಆಕೆಯ ಕುಟುಂಬದ ಇಬ್ಬರಿಗೆ ಮರಣದಂಡನೆ ಮತ್ತು ಐವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದ ವಿಜಯಪುರ ಜಿಲ್ಲಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್‌ನ ಕಲಬುರಗಿ ಪೀಠ ಎತ್ತಿ ಹಿಡಿದಿದೆ.
ಮೃತ ಭಾನು ಬೇಗಂ ಅವರ ಸಹೋದರರಾದ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಗುಂಡಕಲ್ ಗ್ರಾಮದ ಇಬ್ರಾಹಿಂ ಸಾಬ್ ಮಹಮ್ಮದ್‌ಸಾಬ್ ಅತ್ತರ್ (31) ಮತ್ತು ಅಕ್ಬರ್ ಮಹಮ್ಮದ್‌ಸಾಬ್ ಅತ್ತರ್ (28) ಮರಣದಂಡನೆ ವಿಧಿಸಲ್ಪಟ್ಟವರು.
ಮೃತಳ ತಾಯಿ ರಂಜಾನ್‌ಬಿ ಅತ್ತರ್, ಸಂಬಂಧಿಕರಾದ ದಾವಲ್‌ಬಿ ಬಂದೇನವಾಝ್ ಜಮಾದಾರ್, ಅಜ್ಮಾ ಜೀಲಾನಿ ದಖನಿ, ಅಬ್ದುಲ್ ಖಾದರ್ ದಖನಿ ಮತ್ತು ದಾವಲ್‌ಬಿ ಸುಬ್ಹಾನ್ ದಣ್ಣೂರ್ ಜೀವಾವಧಿ ಶಿಕ್ಷೆಗೆ ಒಳಗಾದವರು.
2017ರಲ್ಲಿ ತನ್ನದೇ ಗ್ರಾಮದ ಪರಿಶಿಷ್ಟ ಪಂಗಡದ ಯುವಕ ಸಾಯಿಬಣ್ಣ ಅವರನ್ನು ಪ್ರೀತಿಸಿ ಬಾನು ಬೇಗಂ ಮದುವೆಯಾಗಿದ್ದರು. ಆಕೆ 9 ತಿಂಗಳ ಗರ್ಭಿಣಿ ಆಗಿದ್ದಾಗ ತಾಯಿ, ಸಹೋದರರು ಸಂಬಂಧಿಕರ ಜೊತೆಗೂಡಿ ಬೆಂಕಿ ಹಚ್ಚಿ ಕೊಂದಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಬಸವನಬಾಗೇವಾಡಿ ಪೊಲೀಸರು, ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ವಿಜಯಪುರ ಜಿಲ್ಲಾ ನ್ಯಾಯಾಲಯ, ಇಬ್ಬರು ಅಪರಾಧಿಗಳಿಗೆ ಮರಣದಂಡನೆ ಹಾಗೂ ಐವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ತೀರ್ಪು ಪ್ರಶ್ನಿಸಿ ಅಪರಾಧಿಗಳು ಹೈಕೋರ್ಟ್‌ನ ಕಲಬುರಗಿ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಹೆಚ್.ಪಿ ಸಂದೇಶ್ ಮತ್ತು ಟಿ.ಎಂ ನದಾಫ್ ಅವರ ದ್ವಿಸದಸ್ಯ ಪೀಠ, ವಿಜಯಪುರ ಜಿಲ್ಲಾ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿದೆ.


