ರಾಜಸ್ಥಾನ ಸರ್ಕಾರವನ್ನು ಉರುಳಿಸಲು ಸಂಚು ರೂಪಿಸಿದ ಆರೋಪದ ಮೇಲೆ ತನಿಖೆಯ ವಿಚಾರಣೆಗೆ ಹಾಜರಾಗುವಂತೆ ಕೇಂದ್ರ ಸಚಿವ, ಬಿಜೆಪಿ ಮುಖಂಡ ಗಜೇಂದ್ರ ಸಿಂಗ್ ಶೇಖಾವತ್‌ಗೆ ನೋಟಿಸ್ ನೀಡಲಾಗಿದೆ.
ಶೇಖಾವತ್‌ರವರ ವೈಯಕ್ತಿಕ ಕಾರ್ಯದರ್ಶಿ ಮೂಲಕ ನೋಟಿಸ್ ನೀಡಲಾಗಿದೆ ಎಂದು ರಾಜಸ್ಥಾನದ ಎಸ್‌ಒಜಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಪಿ) ಅಶೋಕ್ ರಾಥೋಡ್ ಹೇಳಿದ್ದಾರೆ.
ಕೇಂದ್ರ ಸಚಿವ ಗಜೇಂದ್ರ ಸಿಂಗ್‌ರವರು ಸಚಿನ್ ಪೈಲಟ್ ಜೊತೆಗಿರುವ ಕಾಂಗ್ರೆಸ್ ಶಾಸಕರು ಪಕ್ಷ ತೊರೆದು ಬಿಜೆಪಿ ಸೇರಲು ಹಣದ ಆಮಿಷ ಒಡ್ಡಿದ್ದಾರೆ ಎಂಬ ಆಡಿಯೋ ಕ್ಲಿಪ್ ವೈರಲ್ ಆಗಿತ್ತು. ಇದು ಅಶೋಕ್ ಗೆಹ್ಲೋಟ್ ಸರ್ಕಾರ ಬೀಳಿಸಲು ಬಿಜೆಪಿಯು ಸಂಚು ಹೂಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿ ದೂರು ಸಲ್ಲಿಸಿತ್ತು. ದೂರಿನ ಆಧಾರದಲ್ಲಿ ಎಫ್‌ಐಆರ್ ದಾಖಲಿಸಿದ ಪೊಲೀಸರು ಒಂದರಲ್ಲಿ ಶೇಖಾವತ್‌ರವರ ಹೆಸರನ್ನು ಉಲ್ಲೇಖಿಸಿದ್ದರು.
ಆಡಿಯೋದಲ್ಲಿ ಕೇಂದ್ರ ಸಚಿವ ಶೇಖಾವತ್ ಮತ್ತು ಕಾಂಗ್ರೆಸ್ ಬಂಡಾಯ ಶಾಸಕ ಭನ್ವರ್ ಲಾಲ್ ಶರ್ಮಾ ಅವರ ಧ್ವನಿಗಳಿವೆ ಎಂದು ಹೇಳಲಾಗಿತ್ತು.
“ಆಡಿಯೋದಲ್ಲಿರುವುದು ನನ್ನ ಧ್ವನಿಯಲ್ಲ. ನಾನು ಯಾವುದೇ ತನಿಖೆಯನ್ನು ಎದುರಿಸಲು ಸಿದ್ಧನಿದ್ದೇನೆ. ನನ್ನನ್ನು ಪ್ರಶ್ನಿಸಲು ಕರೆದರೆ ನಾನು ಖಂಡಿತವಾಗಿಯೂ ಹೋಗುತ್ತೇನೆ” ಎಂದು ಕೇಂದ್ರ ಜಲ ಸಚಿವ ಶೇಖಾವತ್ ಹೇಳಿದ್ದರು.
ಎಫ್‌ಐಆರ್‌ನಲ್ಲಿ ಆರೋಪಿಸಲಾಗಿರುವ ಸಂಜಯ್ ಜೈನ್ ಎಂಬ ಉದ್ಯಮಿಯನ್ನು ಶುಕ್ರವಾರ ಬಂಧಿಸಲಾಗಿದೆ.
ಕಾಂಗ್ರೆಸ್ ಪಕ್ಷವು ಬಿಜೆಪಿ ನಾಯಕರನ್ನು ಎಳೆದುತರುತ್ತಿದೆ. ತನ್ನ ಬಿಕ್ಕಟ್ಟಿಗೆ ಬಿಜೆಪಿಯನ್ನು ಹೊಣೆ ಮಾಡುತ್ತಿದೆ. ಆಡಿಯೋ ಕ್ಲಿಪ್ ನಕಲಿಯಾಗಿದೆ. ಅಲ್ಲದೇ ಫೋನ್ ಕದ್ದಾಲಿಕೆ ನಡೆದಿದೆ, ಈ ಕುರಿತು ಸಿಬಿಐ ತನಿಖೆ ನಡೆಯಬೇಕೆಂದು ಬಿಜೆಪಿ ಒತ್ತಾಯಿಸಿತ್ತು.
ಇದನ್ನೂ ಓದಿ: ರಾಜ್ಯಪಾಲರನ್ನು ಭೇಟಿಯಾದ ಅಶೋಕ್ ಗೆಹ್ಲೋಟ್: ಮುಂದಿನ ವಾರ ವಿಶ್ವಾಸಮತ ಯಾಚನೆ?


