ಬಿಹಾರ ರಾಜ್ಯದಲ್ಲಿ ಉಂಟಾದ ಪ್ರವಾಹದಿಂದಾಗಿ ಕನಿಷ್ಠ ಎಂಟು ಜಿಲ್ಲೆಗಳು ಹಾಗೂ ಸುಮಾರು 3 ಲಕ್ಷ ಜನರು ಪೀಡಿತರಾಗಿದ್ದಾರೆ. ಸರ್ಕಾರವು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ಪ್ರಾರಂಭಿಸಿದೆ.
ಉತ್ತರ ಬಿಹಾರ ಮತ್ತು ನೇಪಾಳದಲ್ಲಿ ಇನ್ನೂ ಭಾರಿ ಮಳೆಯಾಗುತ್ತಿರುವುದರಿಂದ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು ಎನ್ನಲಾಗಿದ್ದು, ಮುಂದಿನ 48 ಗಂಟೆಗಳ ಕಾಲ ಇದು ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದರ್ಬಂಗಾ ಹೆಚ್ಚು ಹಾನಿಗೊಳಗಾದ ಜಿಲ್ಲೆಯಾಗಿದ್ದು ಸುಮಾರು 1.58 ಲಕ್ಷ ಜನರ ಮೇಲೆ ಪರಣಾಮ ಬೀರಿದೆ. ಪೂರ್ವ ಚಂಪಾರಣ್, ಸೀತಮಾರ್ಹಿ, ಶಿಯೋಹರ್, ಸುಪಾಲ್, ಕಿಶಂಗಂಜ್, ಮುಜಫರ್ಪುರ್ ಮತ್ತು ಗೋಪಾಲ್ಗಂಜ್ ಇತರ ಪೀಡಿತ ಜಿಲ್ಲೆಗಳಾಗಿವೆ.
ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಸುಮಾರು 12,000 ಜನರನ್ನು ಸ್ಥಳಾಂತರಿಸಲಾಗಿದ್ದು, 2,300 ಜನರು ಪರಿಹಾರ ಶಿಬಿರಗಳಲ್ಲಿದ್ದಾರೆ ಎಂದು ವಿಪತ್ತು ನಿರ್ವಹಣಾ ಇಲಾಖೆ (ಡಿಎಂಡಿ) ಪ್ರವಾಹ ವರದಿಯಲ್ಲಿ ತಿಳಿಸಿದೆ.
ಕತಿಹಾರ್, ಸಹರ್ಸಾ, ಅರೇರಿಯಾ, ಮಧುಬನಿ ಮತ್ತು ಸಮಸ್ತಿಪುರದಂತಹ ಹಲವಾರು ಜಿಲ್ಲೆಗಳು ಸಹ ಪ್ರವಾಹದಿಂದ ಸ್ವಲ್ಪ ಮಟ್ಟಿಗೆ ಪೀಡಿತವಾಗಿದೆಯಾದರೂ, ರಾಜ್ಯ ಸರ್ಕಾರ ಇದನ್ನು ಇನ್ನೂ ಗುರುತಿಸಿಲ್ಲ ಎಂದು ದಿ ಟೆಲಿಗ್ರಾಫ್ ವರದಿ ಮಾಡಿದೆ. ಬಾಗಮತಿ ನದಿಯಿಂದ ಬರುವ ಪ್ರವಾಹದ ನೀರು ದರ್ಬಂಗ ಪಟ್ಟಣದ ಒಂದೆರಡು ತಗ್ಗು ಪ್ರದೇಶಗಳಿಗೆ ಪ್ರವೇಶಿಸಿದೆ.
“ದರ್ಬಂಗಾ ಜಿಲ್ಲೆಯ ತಗ್ಗು ಪ್ರದೇಶಗಳಲ್ಲಿ ಸುಮಾರು 30,000 ಕುಟುಂಬಗಳು ಪ್ರವಾಹ ಪೀಡಿತರಾಗಿದ್ದಾರೆ. ನಾವು 11 ಸಮುದಾಯ ಅಡಿಗೆಮನೆಗಳನ್ನು ಪ್ರಾರಂಭಿಸಿದ್ದೇವೆ, ಅದರಲ್ಲಿ 2175 ಜನರು ಭಾನುವಾರ ಆಹಾರವನ್ನು ಸೇವಿಸಿದ್ದಾರೆ. ಜನರನ್ನು ಪ್ರವಾಹ ಸ್ಥಳದಿಂದ ಕರೆತರಲು ನಾವು 150 ದೋಣಿಗಳನ್ನು ಓಡಿಸಲು ಪ್ರಾರಂಭಿಸಿದ್ದೇವೆ ”ಎಂದು ದರ್ಭಂಗಾ ಜಿಲ್ಲಾ ಮ್ಯಾಜಿಸ್ಟ್ರೇಟ್ ತ್ಯಾಗರಾಜನ್ ಎಸ್‌ಎಂ ತಿಳಿಸಿದರು.
ಓದಿ: ಅಸ್ಸಾಂ; ಪ್ರವಾಹ ಹಾಗೂ ಭೂಕುಸಿತದಿಂದ 70 ಜನರು ಮೃತ