ಗುಜರಾತ್‌ನ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಆರೋಗ್ಯ ಸಿಬ್ಬಂದಿಯನ್ನು ಆಸ್ಪತ್ರೆ ಆಡಳಿತ ಏಕಾಏಕಿ ಕೆಲಸದಿಂದ ತೆಗೆದುಹಾಕಿದೆ. ಗುಜರಾತ್‌ನ ಜಾಮ್‌ನಗರದಲ್ಲಿಈ ಘಟನೆ ನಡೆದಿದೆ. ಲೈಂಗಿಕವಾಗಿ ಸಹಕರಿಸಲು ನಿರಾಕರಿಸಿದ್ದಕ್ಕೆ ತನ್ನನ್ನು ಕೆಲಸದಿಂದ ತೆಗೆದುಹಾಕಲಾಗಿದೆ ಎಂದು ಅಮಾನತುಗೊಂಡ ಮಹಿಳಾ ಸಿಬ್ಬಂದಿ ಆಸ್ಪತ್ರೆ ವಿರುದ್ಧ ಆರೋಪಿಸಿದ್ದಾರೆ. ಈ ಕುರಿತು ತನಿಖೆ ನಡೆಸಿ ತನಗೆ ನ್ಯಾಯ ಒದಗಿಸಬೇಕೆಂದು ಮಹಿಳಾ ಸಿಬ್ಬಂದಿಯು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರಲ್ಲಿ ಮನವಿಯನ್ನೂ ಮಾಡಿದ್ದಾರೆ.
ಆರೋಗ್ಯ ಮಂತ್ರಿ ಪ್ರದೀಪ್ ಸಿನ್ಹ ಜಡೇಜ ಈ ಕುರಿತು ತನಿಖೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.
ಜಾಮ್‌ನಗರದ ಗುರು ಗೋವಿಂದ್ ಸಿಂಗ್ ಆಸ್ಪತ್ರೆಯ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡ ಮಹಿಳಾ ಅಟೆಂಡೆಂಟ್ ಗಳು ತಮ್ಮ ಸುಪರ್ ವೈಸರ್ ಗಳು ತಮಗೆ ಲೈಂಗಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಇಂದು ಬೆಳಿಗ್ಗೆ ಆರೋಪ ಮಾಡಿದ್ದಾರೆ.
ವಾರ್ಡ್ ಬಾಯ್ ಗಳ ಮೂಲಕ ಮೇಲ್ವಿಚಾರಕರು ತಮಗೆ ಫ್ರೆಂಡ್ ಶಿಪ್ ಸಂದೇಶಗಳನ್ನು ಕಳುಹಿಸುತ್ತಿದ್ದರು. ತಾವು ಆ ಸಂದೇಶಗಳನ್ನು ಸ್ವೀಕರಿಸಿಲ್ಲ. ಅವರೊಂದಿಗೆ ಸಹಕರಿಸಲು ಒಪ್ಪದ ಅಟೆಂಡೆಂಟ್ ಗಳನ್ನು ಕೆಲಸದಿಂದ ತೆಗೆದು ಹಾಕಲಾಗಿದೆ ಎಂದು ಹೆಸರು ಹೇಳಲಿಚ್ಚಿಸದ ಮಹಿಳಾ ಅಟೆಂಡೆಂಟ್ ಒಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ :ಕೊರೊನಾ ಪರಿಹಾರ ನಿಧಿಗೆ ಚಿನ್ನದ ಸರ ನೀಡಿದ್ದ ಯುವತಿಗೆ ಉದ್ಯೋಗ ನೀಡಿದ ತಮಿಳುನಾಡು ಸಿಎಂ


