“ಕೋಮು ಪ್ರಚೋದನೆ” ಮಾಡಲಾಗುತ್ತಿದೆ ಎಂದು ಹೇಳಲಾದ ವೃದ್ಧ ಮುಸ್ಲಿಂ ವ್ಯಕ್ತಿಯ ಮೇಲಿನ ಹಲ್ಲೆಗೆ ಸಂಬಂಧಿಸಿದ ಪೋಸ್ಟ್‌ಗಳ ಕುರಿತು ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಟ್ವಿಟರ್, ಪತ್ರಕರ್ತರು ಮತ್ತು ಕಾಂಗ್ರೆಸ್ ಮುಖಂಡರು ಸೇರಿದಂತೆ ಎಂಟು ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಇದಾಗಿ ಕೆಲವೇ ಗಂಟೆಗಳ ಅಂತರದಲ್ಲಿ, ಪ್ರಕರಣವು ಮತ್ತೆ ಹೊಸ ತಿರುವು ಕಂಡಿದೆ. ಹಲ್ಲೆಗೊಳಗಾದ ವೃದ್ಧ ಅಬ್ದುಲ್ ಸಮದ್ ಅವರು ತಾಯತಗಳನ್ನು ಮಾರಾಟ ಮಾಡುತ್ತಾರೆ ಎಂಬ ಪೊಲೀಸರ ಹೇಳಿಕೆಯನ್ನು ಅವರ ಕುಟುಂಬ ನಿರಾಕರಿಸಿದೆ.
ಸಂತ್ರಸ್ತ ವೃದ್ಧ ಅಬ್ದುಲ್ ಸಮದ್ ಎಂಬವರು ಪ್ರಾರ್ಥನೆ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಆಟೋದಲ್ಲಿ ಬಂದ ದುಷ್ಕರ್ಮಿಗಳು ಅವರನ್ನು ಕಾಡಿನೊಳಗೆ ಎಳೆದೊಯ್ದು ಚಿತ್ರ ಹಿಂಸೆ ನೀಡಿದ್ದರು ಎಂದು ಆರೋಪಿಸಲಾಗಿತ್ತು. ಚಾಕುವಿನಲ್ಲಿ ವೃದ್ದನ ಗಡ್ಡ ಕತ್ತರಿಸಿ, ಕೋಲಿನಿಂದ ಹಲ್ಲೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು.
ಘಟನೆಯ ಕುರಿತು ಟ್ವೀಟ್ ಮಾಡಿದ್ದ ಹಲವಾರು ಪತ್ರಕರ್ತರು ಮತ್ತು ಕಾಂಗ್ರೆಸ್ ನಾಯಕರು ಹಾಗೂ ಟ್ವಿಟರ್ ಸೇರಿದಂತೆ ಒಟ್ಟು 9 ಹೆಸರುಗಳ ಮೇಲೆ ಗಾಜಿಯಾಬಾದ್ ಪೊಲೀಸರು ಎಫ್‌ಐಆರ್ ದಾಖಲಿಸಿ ಕೋಮು ಪ್ರಚೋದನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.
ಇದನ್ನೂ ಓದಿ: ಯುಪಿ ಮುಸ್ಲಿಂ ವೃದ್ದನ ಮೇಲಿನ ದಾಳಿ ಪ್ರಕರಣ: ಟ್ವಿಟರ್, ಪತ್ರಕರ್ತರು, ರಾಜಕೀಯ ನಾಯಕರ ವಿರುದ್ದ FIR!
ಘಟನೆಯ ಬಗ್ಗೆ ಸ್ವತಃ ವೃದ್ದನೆ ಅಳುತ್ತಾ ವಿಡಿಯೊದಲ್ಲಿ ಮಾಹಿತಿ ನೀಡಿದ್ದರು. ಅದರಲ್ಲಿ, “ನನ್ನ ಹೆಸರು ಚೌದರಿ ಅಬ್ದುಲ್ ಸಮದ್ ಎಂದಾಗಿದ್ದು, ದೆಹಲಿ ಗಡಿಯ ಗಾಝಿಯಾಬಾದ್‌ನ ಲೋನಿಯಲ್ಲಿ ನನ್ನ ಮೇಲೆ ದಾಳಿ ನಡೆದಿದೆ. ಅಲ್ಲಿ ಇಬ್ಬರು ಆಟೋದವರು ನನ್ನ ಮುಖಕ್ಕೆ ರುಮಾಲನ್ನು ಮುಚ್ಚಿ ಕರೆದುಕೊಂಡು ಹೋದರು. ಬಳಿಕೆ ನನಗೆ ಹೊಡೆಯಲು ಪ್ರಾರಂಭಿಸಿದರು. ಅಲ್ಲಿಂದ ನನ್ನ ಕಾಡಿಗೆ ಕರೆದುಕೊಂಡುಹೋಗಿ ಒಂದು ಕೋಣೆಯಲ್ಲಿಟ್ಟರು. ಅವರು ಜೈಶ್ರೀರಾಮ್ ಘೋಷಣೆ ಕೂಗುವಂತೆ ಒತ್ತಾಯಿಸಿದ್ದರು, ನಾನು ಯಾ ಅಲ್ಲಾಹ್ ಎಂದು ಕೂಗಿದರೆ ಹೊಡೆಯುತ್ತಿದ್ದರು. ಪಿಸ್ತೂಲ್ ಹಣೆಗೆ ಇಟ್ಟಿದ್ದು, ನನ್ನ ಮೇಲೆ ಭೀಕರ ಹಲ್ಲೆ ನಡೆಸಿದ್ದು, ನಾವು ಮುಸ್ಲಿಮರಿಗೆ ಹಲ್ಲೆ ನಡೆಸಿದ್ದೇವೆ ಎಂದಿದ್ದಾರೆ… ಅವರು ನನ್ನ ಗಡ್ಡವನ್ನು ಕಿತ್ತರು ಎಂದು” ಎಂದು ಹೇಳುವುದನ್ನು ಕಾಣಬಹುದಾಗಿದೆ.
ಆದರೆ ಘಟನೆಯಲ್ಲಿ ಯಾವುದೇ “ಕೋಮು ಆಯಾಮ” ಇಲ್ಲ ಎಂದು ಪೊಲೀಸರು ಹೇಳಿದ್ದು, “ಅಬ್ದುಲ್ ಸಮದ್ ತಾಯತ ವ್ಯಾಪಾರಿಯಾಗಿದ್ದು, ಅದನ್ನು ಕೊಂಡುಕೊಂಡವರು ಅದು ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿ ಹಲ್ಲೆ ನಡೆಸಿದ್ದರು. ಹಲ್ಲೆ ನಡೆಸಿದವರಲ್ಲಿ ಹಿಂದೂ-ಮುಸ್ಲಿಂ ಎರಡೂ ಧರ್ಮಿಯರೂ ಇದ್ದು, ಮೂವರನ್ನು ಬಂಧಿಸಿದ್ದೇವೆ” ಎಂದು ಹೇಳಿದ್ದರು.
ಆದರೆ, ಇದೀಗ ಅಬ್ದುಲ್ ಸಮದ್ ಅವರ ಮಗ ಬಬ್ಲೂ ಸೈಫಿ ಪೊಲೀಸರ ಪ್ರತಿಪಾದನೆಯನ್ನು ನಿರಾಕರಿಸಿದ್ದು, “ನನ್ನ ತಂದೆ ತಾಯತಗಳನ್ನು ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಪ್ಪಾಗಿ ಹೇಳಿದ್ದಾರೆ. ನಾವು ಬಡಗಿಗಳಾಗಿದ್ದು, ನಮ್ಮ ಕುಟುಂಬದಲ್ಲಿ ಯಾರೂ ತಾಯತದ ವ್ಯವಹಾರವನ್ನು ಮಾಡುವುದಿಲ್ಲ. ಪೊಲೀಸರು ಸಳ್ಳು ಹೇಳುತ್ತದ್ದಾರೆ. ಅವರು ತನಿಖೆ ನಡೆಸಿ ಅದನ್ನು ಸಾಬೀತುಪಡಿಸಲಿ” ಎಂದು ತಿಳಿಸಿದ್ದಾರೆ.
ಟ್ವಿಟರ್ ಮತ್ತು ಇತರ ಎಂಟು ಜನರ ವಿರುದ್ಧ ಐಪಿಸಿ ಸೆಕ್ಷನ್ 153 (ಗಲಭೆಗೆ ಪ್ರಚೋದನೆ), 153 ಎ (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 295 ಎ (ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ), 505 (ಕಿಡಿಗೇಡಿತನ), 120 ಬಿ (ಕ್ರಿಮಿನಲ್ ಪಿತೂರಿ) ಮತ್ತು 34 (ಸಾಮಾನ್ಯ ಉದ್ದೇಶ) ಮುಂತಾದ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: 85 ವರ್ಷದ RSSನ ವೃದ್ದರೊಬ್ಬರು ಕೊರೊನಾ ಪೀಡಿತ ಯುವಕನಿಗಾಗಿ ತನ್ನ ಬೆಡ್ ಬಿಟ್ಟು ಕೊಟ್ಟಿದ್ದು ನಿಜವೇ?
ಯು.ಪಿ.ಯಲ್ಲಿ ಮನುವಾದಿಗಳು ಅಲ್ಪಸಂಖ್ಯಾತರ ಸಾಂವಿಧಾನಿಕ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿರುವುದು ಕಂಡನಾರ್ಹ.